ಹದಿ ಹರೆಯದವರಿಗೆ, ಸಾಯುವ ವಯಸ್ಸಾಗಿರದಿದ್ದರೂ ಮರಣ. ಚಟಗಳಿಲ್ಲದಿದ್ದರೂ ಪಿತ್ತಕೋಶ, ಶ್ವಾಸಕೋಶ, ಮೂತ್ರ ಪಿಂಡ ಹೀಗೆ ದೇಹದ ಅಂಗಾಂಗಗಳು,ಕಾರಣಗಳು ಇಲ್ಲದೆ ಹಾಳಾಗುತ್ತಿರುವುದಕ್ಕೆ ಈ ಹಾಳು ಮನಸ್ಸೂ ಕಾರಣ.
ಹೊಟ್ಟೆ ಕಿಚ್ಚು ,ಕ್ರೋಧ, ಹಣ ಗಳಿಸುವ ಹಪಾಹಪಿ, ಅಸಮಾಧಾನ-ಅಸಹನೆ-ಸಮಸ್ಯೆ ಹಾಗೂ ಇತರ ಇತರ ಕಾರಣಗಳು ನೆಮ್ಮದಿಯನ್ನು ಹಾಳು ಮಾಡುವುದನ್ನು ಮಾತ್ರವಲ್ಲ ,ಆರೋಗ್ಯವನ್ನೂ ಇನ್ನಿಲ್ಲದಂತೆ ಕೆಡಿಸಿ ಬಿಡುತ್ತವೆ.
ಸಾರ್ವಜನಿಕ ಜೀವನ ಎಂದ ಕೂಡಲೇ, ಅದು ಜನ ಪ್ರತಿನಿಧಿಗಳಿಗೆ ಮಾತ್ರ ಮೀಸಲು ಎಂದಲ್ಲ. ಎರದ್ದೂ ಸಾರ್ವಜನಿಕ ಜೀವನವೇ. ಸಾರ್ವಜನಿಕ ಜೀವನದಲ್ಲಿ ಏರು-ಪೇರುಗಳು ಸಹಜ. ಆದರೆ ಅದು ಜೀವಿಸುವ ಸ್ವಾತಂತ್ರ್ಯಕ್ಕೆ ಅಡ್ಡಿ ಬರಬಾರದು.
ವ್ಯಹಹಾರ-ಉದ್ಯಮ-ವೃತ್ತಿ , ಗೆಳೆತನ-ಸಂಬಂಧ-ಸಂಸಾರ ಹಾಗೂ ಇಂತಹ ಇತರ ಕಡೆ ಭಿನ್ನಾಭಿಪ್ರಾಯ ಸಹಜ. ಹಾಗಂತ ಜೀವನ ಪರ್ಯಂತ ಅದರಲ್ಲೇ ಮುಳುಗಿರಬಾರದು. ಈ ಮಾತು ಎಲ್ಲರಿಗೂ ಅನ್ವಯವಾಗುತ್ತದೆ.
ಮನುಷ್ಯ ಅಸ್ತಿ ಮಾಡಲು, ಅದನ್ನು ಉಳಿಸಿ ಕೊಳ್ಳಲು ಕಸರತ್ತು ಮಾಡುತ್ತಲೇ ಒಂಟಿಯಾಗಿ ಬಿಡುತ್ತಾನೆ. ಸಮಾಜಿಕ ಚಿಂತನೆ, ಒಡನಾಟ ದೂರವಾದಂತೆ ಸಾವಿಗೆ ಹತ್ತಿರವಾಗುತ್ತಾನೆ. ದುಡಿಯಬೇಕು, ಧಣಿಯಬೇಕು, ಮನಸ್ಸಿನ ತೃಪ್ತಿಗಾಗಿ ಒಂದಿಷ್ಟು ಖರ್ಚು ಮಾಡಬೇಕು. ಮನ ಬಿಚ್ಚಿ ಮಾತನಾಡಿ, ಮುಕ್ತವಾಗಿ ಸೇರಿ, ಸಮಸ್ಯೆಗಳನ್ನು ಹಂಚಿಕೊಂಡು ಖುಷಿಯಾಗಿರಬೇಕು. ಜೀವನವನ್ನು ಆಸ್ವಾದಿಸಿ, ಮರಣವನ್ನು ಮುಂದೂಡಬೇಕು.
ಮನುಷ್ಯ ಸಮಾಜ ಮುಖಿಯಾಗಿದ್ದರೆ, ಅದರ ಉಲ್ಲಾಸವೇ ಬೇರೆ. ಎಷ್ಟು ಮೌನವಾಗಿರುತ್ತೀರೋ, ಎಷ್ಟು ದೂರ ಇರುತ್ತೀರೋ, ಅದೇ ರೀತಿಯಲ್ಲಿ ಸಾವಿಗೆ ಹತ್ತಿರವಾಗುತ್ತೀರಿ ! ನಿಮ್ಮ ಮತ್ತು ನಿಮ್ಮವರ ಆರೋಗ್ಯದ ಕಾಳಜಿ ಇರಲಿ. ಬದುಕಿದ್ದೂ, ಜನ ಮಾನಸದಲ್ಲಿ ಮರೆಯಾಗುವುದು ಬೇಡ. ಸತ್ತ ಮೇಲೆಯೂ ಮರೆಯಬಾರದು ಎಂದರೆ ಪರಸ್ಪರ ಅನ್ಯೋನ್ಯತೆಯಿಂದಿರಿ.
ಸಾವು ಬಂದೇ ಬರುತ್ತದೆ, ಆದರೇ ಅದನ್ನು ನಾವೇ ಆಹ್ವಾನಿಸಬಾರದು. ಸಿಗರೇಟ್, ಗುಟ್ಕಾ, ಅಲ್ಕೋಹಾಲ್ ಆರೋಗ್ಯವನ್ನು ಹಾಳು ಮಾಡುತ್ತವೆ ಎಂದು ಗೊತ್ತಿದ್ದರೂ ಚಟಗಳನ್ನು ಬಿಡಲು ಯಾರೂ ಒಪ್ಪುವುದಿಲ್ಲ.
ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ, ಬಳಸುವ ರಾಸಾಯನಿಕ ಗೊಬ್ಬರ, ಕಲ ಬೆರಕೆಯ ಆಹಾರ, ಅನವಶ್ಯಕವಾಗಿ ಸೇವಿಸುವ ಔಷಧಗಳು, ಅಡುಗೆ ಎಣ್ಣೆ, ಪ್ಲಾಸ್ಟಿಕ್ ಮಯ ಜೀವನ. ಹೀಗೆ ಒಂದಿಲ್ಲೊಂದು ಕಾರಣಗಳಿಗಾಗಿ ಜೀವಗಳು ಜರ್ಝರಿತವಾಗುತ್ತಿವೆ.
ಡೈಕ್ಲೊಫ಼ೇನಾಕ್ ನೋವಿನ ಇಂಜೆಕ್ಷನ್ ಪಡೆದ, ಮರಣ ಹೊಂದಿದ ಪ್ರಾಣಿಗಳನ್ನು ತಿಂದು, ರಣ ಹದ್ದುಗಳು ಸಾವಿಗೀಡಾಗುತ್ತಿರುವ ಕಾರಣಕ್ಕಾಗಿ ಪಶು ಬಳಕೆಯ ಡೈಕ್ಲೊಫ಼ೇನಾಕ್ ಔಷಧವನ್ನು ಬ್ಯಾನ್ ಮಾಡಲಾಗಿದೆ. ಆದರೆ ಮನುಷ್ಯರಿಗೆ ಬಳಸುವ ಈ ಔಷಧವನ್ನು ಬ್ಯಾನ್ ಮಾಡಲಾಗಿಲ್ಲ.
ನಕಲಿ ವೈದ್ಯರು, ಆಯುಷ್ ವೈದ್ಯರಿಂದ ಮಾತ್ರವಲ್ಲ ಅಲೋಪತಿ ವೈದ್ಯರಿಂದಲೂ ಪೇನ್ ಕಿಲ್ಲರ್, ಆ೦ಟಿಬಯೋಟಿಕ್ ದುರ್ಬಳಕೆ ಆಗುತ್ತಿವೆ. ಇದನ್ನು ತಡೆಯಬೇಕಾದ ಫಾರ್ಮಸಿಸ್ಟ್‌ಗಳು ಅಸಹಾಯಕ ರಾಗಿದ್ದಾರೆ. ಔಷಧ ನಿಯಂತ್ರಣ ಇಲಾಖೆ ಫ಼ಾರ್ಮಸಿಸ್ಟಗಳನ್ನು ನಿರ್ಲಕ್ಷಿಸಿ, ಅವರ ಭವಿಷ್ಯವನ್ನು ಕೊಲೆ ಮಾಡುತ್ತಿದೆ.
ತೊಡುವ ಚಪ್ಪಲಿ, ಉಡುವ ಬಟ್ಟೆಗಳೂ ಕೆಮಿಕಲ್ ನಿಂದ ಹೊರತಾಗಿಲ್ಲ. ಭೂಮಿ, ಗಾಳಿ, ನೀರು ಎಲ್ಲವೂ ವಿಷಮಯ. ಹೀಗಿದ್ದಾಗ್ಯೂ ಮನುಷ್ಯ ಕೆಟ್ಟ ಚಟಗಳನ್ನು ಬಿಡುತ್ತಿಲ್ಲ. ನಿಸರ್ಗವನ್ನು ಕೆಡಿಸುವ ಮಾನವ, ಪ್ರಾಣಿ-ಪಕ್ಷಿಗಳ ಜೀವಕ್ಕೂ ಮಾರಕವಾಗುತ್ತಿದ್ದಾನೆ.
ನೆಮ್ಮದಿ ಸುಮ್ಮನೆ ಸಿಗುವುದಿಲ್ಲ.ಅದನ್ನು ಗಳಿಸಿಕೊಳ್ಳಬೇಕು. ಪರಸ್ಪರ ಸಹಾಯಮಾಡಿ, ಸಹಕಾರ ನೀಡಿ, ನೆಮ್ಮದಿಯ ಜೀವನ ನಡೆಸಬೇಕು.
-ಅಶೋಕಸ್ವಾಮಿ ಹೇರೂರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ