ಮಂಗಳೂರು: ಮೇ 3ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶಕ್ಕೆ ಸಿದ್ಧತೆ ಭರದಿಂದ ನಡೆದಿದೆ. ಮೂಲ್ಕಿಯಲ್ಲಿ ವಿಶಾಲವಾದ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಮೋದಿಯವರ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕರಾವಳಿ ಜಿಲ್ಲೆಗಳ ವಿವಿಧ ಪ್ರದೇಶಗಳಿಂದ ಆಗಮಿಸುವ ವಾಹನಗಳ ನಿಲುಗಡೆಗೆ ವಿಶಾಲವಾದ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಿರು ಬಿಸಿಲಿನ ಸಮಯವಾಗಿರುವುದರಿಂದ ಸಮಾವೇಶಕ್ಕೆ ಆಗಮಿಸುವ ಜನರ ದಾಹ ತಣಿಸಲು ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ಮೂಲ್ಕಿ-ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯ ಮೂಲ್ಕಿ ಕೊಲ್ನಾಡಿನ ಗುಂಡಾಲು ಪ್ರದೇಶದಲ್ಲಿ 25 ಎಕರೆಗೂ ಅಧಿಕ ವಿಸ್ತಾರದ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮೇ 3ರಂದು ಬೆಳಗ್ಗೆ 10ರಿಂದ 10.30ರ ಸಮಯದಲ್ಲಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಮೂಲ್ಕಿಗೆ ಬಂದಿಳಿಯಲಿದ್ದಾರೆ. ಈ ಹಿಂದೆ ಕೃಷಿ ಮೇಳ ನಡೆದಿರುವ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮೋದಿಯವರು ಆಗಮಿಸಿದ ಕೂಡಲೇ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.
ಈ ಸಮಾವೇಶಕ್ಕೆ ನಾನಾ ಕಡೆಗಳಿಂದ ಸುಮಾರು 2-3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಬೆಳಗ್ಗೆ 9 ಗಂಟೆಯೊಳಗೆ ಜನರು ಇಲ್ಲಿ ಬಂದು ಸೇರಬೇಕಾಗಿದೆ. ಉಡುಪಿ, ಮಂಗಳೂರು, ಮೂಡುಬಿದಿರೆ ಕಡೆಗಳಿಂದ ಆಗಮಿಸುವ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗೆ ಕಾರ್ಯಸೂಚಿ ಹಮ್ಮಿಕೊಳ್ಳಲಾಗಿದೆ.
3 ಲಕ್ಷ ಜನರಿಗೆ ವ್ಯವಸ್ಥೆ
ಸಭಾಂಗಣದ ಸಮಗ್ರ ನಿರ್ವಹಣೆ ಹೊಣೆಯನ್ನು ಬೆಂಗಳೂರಿನ ಅಫ್ಲುಯೆನ್ಸ್ ಇವೆಂಟ್ಸ್ ಸಂಸ್ಥೆಗೆ ವಹಿಸಲಾಗಿದೆ. ಸಭಾಂಗಣದಲ್ಲಿ ಸುಮಾರು ಒಂದೂವರೆ ಲಕ್ಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಟ್ಟು 3 ಲಕ್ಷ ಜನರಿಗೆ ಬೇಕಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದೀಜಿ ಮಾತನಾಡಲಿರುವ ವೇದಿಕೆಯನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಜರ್ಮನ್ ಪೆಂಡಾಲ್, ಹ್ಯಾಂಗರ್ ಮೂಲಕ ವೇದಿಕೆ ನಿರ್ಮಾಣವಾಗುತ್ತಿದೆ.
ಪ್ರಧಾನಿ ಮೋದಿ ಭೇಟಿಗೆ ಕರಾವಳಿ ಕಾತರ
ಜಗತ್ತೇ ಕೊಂಡಾಡುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಆಲಿಸಲು ಕರಾವಳಿಯ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಪ್ರಧಾನಿಯವರ ಅತ್ಯಂತ ಸ್ಫೂರ್ತಿದಾಯಕ ಮಾತುಗಳು ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಲಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 13 ಕ್ಷೇತ್ರಗಳಲ್ಲೂ ಬಿಜೆಪಿಯ ಭರ್ಜರಿ ಗೆಲುವು ನಿಶ್ಚಿತ. ಪ್ರಧಾನಿಯವರ ಸಾರ್ವಜನಿಕ ಸಮಾವೇಶಕ್ಕೆ ಮೂಲ್ಕಿಯ ಸಮೀಪದ ವಿಶಾಲ ಮೈದಾನದಲ್ಲಿ ಸುಸಜ್ಜಿತ ಪೆಂಡಾಲ್ ಮತ್ತು ವೇದಿಕೆ ನಿರ್ಮಾಣವಾಗುತ್ತಿದೆ. ಲಕ್ಷಾಂತರ ಜನರು ಈ ಐತಿಹಾಸಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಡೆಯಿಂದ ಆಗಮಿಸುವ ಕಾರ್ಯಕರ್ತರು, ಬೆಂಬಲಿಗರ ವಾಹನಗಳ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
-ಸುದರ್ಶನ್ ಮೂಡಬಿದಿರೆ,
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ