ಹಿರಿಯ ಜಾನಪದ ವಿದ್ವಾಂಸ ಮಾಚಾರು ಗೋಪಾಲ ನಾಯ್ಕ ನಿಧನ: ವೀರೇಂದ್ರ ಹೆಗ್ಗಡೆ ಶ್ರದ್ಧಾಂಜಲಿ

Upayuktha
0

 


ಧರ್ಮಸ್ಥಳ: ಹಿರಿಯ ಜಾನಪದ ವಿದ್ವಾಂಸರಾದ ಮಾಚಾರು ಗೋಪಾಲ ನಾಯ್ಕರ ನಿಧನದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.


ತುಳುನಾಡಿನ ಆಚಾರ-ವಿಚಾರಗಳು, ನಂಬಿಕೆ-ನಡವಳಿಕೆಗಳು, ಕೃಷಿಕ್ಷೇತ್ರ, ಆರಾಧನಾ ಪದ್ಧತಿಗಳನ್ನು ಮಾಚಾರು ಗೋಪಾಲ ನಾಯ್ಕರು ಸಂಧಿ-ಪಾಡ್ದನಗಳ ಮೂಲಕ ಸುಶ್ರಾವ್ಯವಾಗಿ ಹಾಡಿ ವಿವರಿಸುತ್ತಿದ್ದರು. ಕಾವ್ಯ ಕಟ್ಟುವ ಕಲೆ ಅವರಿಗೆ ಸಿದ್ಧಿಸಿತ್ತು. ಸಿರಿ, ಕುಮಾರ, ಸೊನ್ನೆ, ಅಬ್ಬಗ-ದಾರಗ , ಕಾಂತುಪೂಂಜ ಮೊದಲಾದ ಪಾತ್ರಗಳ ನೈಜ ಚಿತ್ರಣ ಅವರ ಸಂಧಿಗಳಲ್ಲಿ ಅಡಕವಾಗಿದೆ. ಬಾಯ್ದೆರೆಯಾಗಿ ಸಾವಿರಾರು ಸಂಧಿ-ಪಾಡ್ದನಗಳನ್ನು ಹಾಡುವುದು ಅವರ ವಿಶೇಷತೆಯಾಗಿತ್ತು ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಬಣ್ಣಿಸಿದ್ದಾರೆ.


ಫಿನ್ಲೇಂಡ್‍ನ ಖ್ಯಾತ ಜಾನಪದ ವಿದ್ವಾಂಸರಾದ  ಲೌರಿಹೋಂಕೊ ಮತ್ತು ಅನ್ನೆಲಿ ಹೋಂಕೊ 1990ರಲ್ಲಿ ಧರ್ಮಸ್ಥಳಕ್ಕೆ ಬಂದವರು ಆಸಕ್ತಿಯಿಂದ ಗೋಪಾಲ ನಾಯ್ಕರ ಸಂಧಿ-ಪಾಡ್ದನಗಳ ಬಗ್ಯೆ ಮಾಹಿತಿ ಕಲೆ ಹಾಕಿದರು. ಪ್ರೊ. ಬಿ.ಎ. ವಿವೇಕ ರೈ, ಡಾ. ಕೆ. ಚಿನ್ನಪ್ಪ ಗೌಡ ಸಿರಿ ಕಾವ್ಯ ಯೋಜನೆಯಲ್ಲಿ ಸಹಕರಿಸಿದರು. ಸುಮಾರು ಎಂಟು ವರ್ಷಗಳ ಅಧ್ಯಯನ ಮತ್ತು ದಾಖಲೀಕರಣದ ಬಳಿಕ ಗೋಪಾಲ ನಾಯ್ಕರಿಂದ ಸಿರಿ ಸಂಧಿಗಳನ್ನು ಹಾಡಿಸಿ ದೀರ್ಘವಾದ ಪಠ್ಯವನ್ನು ಅವರು ದಾಖಲಿಸಿಕೊಂಡರು. ಸಿರಿಕಾವ್ಯ ಪಠ್ಯದ ಎರಡು ಸಂಪುಟಗಳು ಇಂಗ್ಲೀಷ್‍ಗೆ ಭಾಷಾಂತರಗೊಂಡಿವೆ. ಈ ವಿಶಿಷ್ಟ ಯೋಜನೆಗೆ ಧರ್ಮಸ್ಥಳದ ವತಿಯಿಂದ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ನೀಡಲಾಗಿದ್ದು ವಿಶ್ವದ ಜಾನಪದ ಲೋಕಕ್ಕೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.


ಸಂಧಿ-ಪಾಡ್ದನಗಳ ಕಣಜ ಮಾಚಾರು ಗೋಪಾಲ ನಾಯ್ಕ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top