ಪುತ್ತೂರು: ನಗರದ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮಾ 24 ರಂದು ಸ್ಮಾರ್ಟ್ ಬೋರ್ಡ್ ಅನಾವರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನ ಮಾಜಿ ಶಾಸಕಿ ಶ್ರಿಮತಿ ಶಕುಂತಳಾ ಟಿ ಶೆಟ್ಟಿ ದೀಪ ಬೆಳಗಿಸಿ ಸ್ಮಾರ್ಟ್ ಬೋರ್ಡ್ ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು ಪ್ರಸಕ್ತ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಅತೀವವಾದ ಪೈಪೋಟಿಯಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆಗೆ ಹೊಸ ಹೊಸ ತಂತ್ರಜ್ಞಾನ ದ ಬಳಕೆಯ ಬಗ್ಗೆಯೂ ಅರಿವನ್ನು ಹೊಂದಿದ್ದರೆ ಮುಂದಿನ ದಾರಿ ಸುಗಮವಾಗುತ್ತದೆ ಎಂದರು.
ಅಂಬಿಕಾ ವಿದ್ಯಾಸಂಸ್ಥೆ ಎಲ್ಲದರಲ್ಲಿಯೂ ಮೇಲುಗೈಯನ್ನು ಸಾಧಿಸುತ್ತಾ ಬಂದಿದೆ. ದೇಶಪ್ರೇಮದ ಮೂಲಕವಾಗಿ ತ್ಯಾಗ ಬಲಿದಾನ ನೀಡಿದ ವೀರಯೋಧರ ಸಂಸ್ಮರಣೆಯನ್ನು ಮಾಡುತ್ತಿದೆ, ಹಾಗಾಗಿ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಪುಣ್ಯಾತ್ಮರು. ಮುಂದಿನ ದಿನಗಳಲ್ಲಿ ಪತಿಯೊಬ್ಬ ವಿದ್ಯಾರ್ಥಿಯೂ ದೇಶವನ್ನು ತಮ್ಮ ಹೆತ್ತವರನ್ನು ಶಾಶ್ವತವಾಗಿ ಪ್ರೀತಿಸುವ ಮಕ್ಕಳಾಗಿ, ಜೊತೆಗೆ ವಿದ್ಯಾವಂತರಾಗಿ ಅತೀ ಎತ್ತರಕ್ಕೆ ಬೆಳೆದು ತಮ್ಮ ಹೆಸರನ್ನು ಅಜರಾಮರರಾಗಿ ಉಳಿಸುವಂತೆ ಮಾಡಿ ಎಂದು ಶುಭಹಾರೈಸಿದರು.
ದೇಶವನ್ನು ರಾತ್ರಿ ಹಗಲೆನ್ನದೆ ಕಾಯುತ್ತಿರುವ ಯೋಧರನ್ನು ನಾವು ಸ್ಮರಿಸಬೇಕಾದುದು ನಮ್ಮ ಧರ್ಮ. ಅವರೆಲ್ಲರೂ ದೇಶದ ಗಡಿಯನ್ನು ಕಾಯುತ್ತಾ ತಮ್ಮ ಬದುಕನ್ನು ಸವೆಸುತ್ತಿದ್ದಾರೆ ಅಂತಹಾ ಸೈನಿಕರಲ್ಲಿ ಮೊನ್ನೆ ತಾನೇ ಜಮ್ಮು ಕಾಶ್ಮೀರದ ಪೂಂಚ್‍ನಲ್ಲಿನಡೆದ ಧಾಳಿಯಲ್ಲಿ ನಮ್ಮದೇಶದ ಐದು ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅವರ ತ್ಯಾಗಕ್ಕೆ ಬಲಿದಾನಕ್ಕೆ ಕಂಬನಿ ಮಿಡಿಯುವುದು ಈ ಮಣ್ಣಿನ ಮಕ್ಕಳಾದ ನಮ್ಮ ಧರ್ಮವಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಸಂಸ್ಥೆಗೆ ನೂರರಷ್ಟು ಫಲಿತಾಂಶವನ್ನು ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಅವರು ಶುಭಕೋರಿದರು.
ಸಾಧಕರಿಗೆ ಗೌರವ: ಅಂಬಿಕಾ ವಿದ್ಯಾಸಂಸ್ಥೆಯ ಮೇಲೆ ಸದಾ ಪ್ರೀತಿಯಿಟ್ಟು ವಿದ್ಯಾಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಶೈಕ್ಷಣಿಕ ವರ್ಷ 2022-23 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಯ ವಿದ್ಯಾರ್ಥಿಗಳು ನೂರು ಶೇಕಡಾ ಫಲಿತಾಂಶ ತಂದಿದ್ದಾರೆ. ಫಲಿತಾಂಶದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಶ್ರದ್ಧಾಂಜಲಿ:
ಇತ್ತೀಚಿಗೆ ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದ ಧಾಳಿಯಲ್ಲಿ ವೀರ ಮರಣವನ್ನು ಹೊಂದಿದ ಐವರು ಯೋಧರಿಗೆ ನುಡಿನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಶ್ರೀಮತಿ ರಾಜಶ್ರೀ ನಟ್ಟೋಜ , ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ ಪ್ರಾಂಶುಪಾಲರಾದ ಶ್ರೀಮತಿ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಿಧಾತ್ರಿ, ಶರಧಿ, ವೈಷ್ಣವಿ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಪ.ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ