ಆಳ್ವಾಸ್ ಪುನರ್ಜನ್ಮ ಸಂಸ್ಥೆಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್
ವಿದ್ಯಾಗಿರಿ: ಉತ್ತಮ ಬದುಕಿಗಾಗಿ 5ಡಿ ಅಳವಡಿಸಿಕೊಳ್ಳಿ ಎಂದು ಆಳ್ವಾಸ್ ಪುನರ್ಜನ್ಮ ಸಂಸ್ಥೆಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ‘ಮಾದಕ ವ್ಯಸನ ಮತ್ತು ಮೊಬೈಲ್ ಗೀಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಸೈಯರ್ (ಆಸೆ), ಡೆಡಿಕೇಷನ್ (ಬದ್ಧತೆ), ಡಿಸಿಪ್ಲಿನ್ (ಶಿಸ್ತು), ಡಿಟರ್‍ಮಿನೇಷನ್ (ದೃಢತೆ), ಡಿವೈನ್ ಇಂಟರ್‍ವೆನ್ಶನ್ (ದೈವಿಕ ಪ್ರವೇಶ) ವಿಚಾರಗಳನ್ನು ಸಕಾರಾತ್ಮಕವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದರು.
ಜೀವನದಲ್ಲಿ ವೈಜ್ಞಾನಿಕ, ವೈಚಾರಿಕ ಹಾಗೂ ತಾರ್ಕಿಕ ಚಿಂತನೆ ಇರಬೇಕು. ನಂಬಿಕೆ ಮತ್ತು ಮೌಢ್ಯದ ನಡುವಿನ ಸ್ಪಷ್ಟತೆ ಇರಬೇಕು ಎಂದ ಅವರು, ಯಾವುದೇ ವಿಷಯಗಳನ್ನು ವಿಚಾರ ಮಾಡಿ ಅರ್ಥೈಸಿಕೊಂಡು ಸ್ಪಂದಿಸಬೇಕು ಎಂದು ಅವರು ಸಲಹೆ ನೀಡಿದರು.
ವೈಜ್ಞಾನಿಕ-ವೈಚಾರಿಕ ಆಧಾರಗಳಿಲ್ಲದೇ ನೀಡುವ ಸಲಹೆ, ಮಾಹಿತಿಯನ್ನು ಸ್ವೀಕರಿಸಬೇಡಿ. ವಿಶ್ಲೇಷಿಸಿ ನೋಡುವ ದೃಷ್ಟಿಕೋನ ಇರಬೇಕು ಎಂದರು.
ಬದುಕಿನಲ್ಲಿ ನಂಬಿಕೆ ಸಹಜ. ಜನರ ನಂಬಿಕೆಯೇ ವ್ಯವಹಾರವಾದಾಗ ವಂಚನೆ ಆಗುತ್ತದೆ. ಪ್ರತಿ ವಿಚಾರಗಳಿಗೂ ಮಾನಸಿಕ, ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಗಳು ಇರುತ್ತವೆ ಎಂದರು.
ಅತಿ ಮೊಬೈಲ್ ಬಳಕೆಯೇ ಮಾನಸಿಕ ಕಾಯಿಲೆ ಎಂದ ಅವರು, ಮೊಬೈಲ್ ಮತ್ತು ಮಾದಕ ವ್ಯಸನದಿಂದ ಸಂಬಂಧಗಳಲ್ಲಿ ಬಿರುಕು ಬೀಳುತ್ತಿವೆ. ಖಿನ್ನತೆ, ಹಿಂಜರಿಕೆ, ಕೀಳರಿಮೆಗೆ ವ್ಯಸನವು ಕಾರಣ. ಇಂದಿನ ಯುವಜನತೆ ಒತ್ತಡ, ಖಿನ್ನತೆ, ನಿದ್ರಾಹೀನತೆ, ಏಕಾಗ್ರತೆ ಕೊರತೆ, ಗೀಳಿಗೆ ತುತ್ತಾಗುತ್ತಿದೆ. ವ್ಯಸನಗಳಿಂದ ದೂರವಿದ್ದರೆ ಮಾತ್ರ ಮಾನಸಿಕ ಆರೋಗ್ಯ ಸಾಧ್ಯ ಎಂದರು.
ಮೂಢನಂಬಿಕೆಯಿಂದಾಗಿ ಮಾನಸಿಕ ಕಾಯಿಲೆಗಳನ್ನು ಗುರುತಿಸುವಲ್ಲಿ ಜನ ವಿಫಲರಾಗುತ್ತಿದ್ದಾರೆ. ನಂಬಿಕೆ ಇರಲಿ, ಮೂಢನಂಬಿಕೆ ಅಲ್ಲ ಎಂದರು.
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ವೈಜ್ಞಾನಿಕ-ವೈಚಾರಿಕ ಚಿಂತನ-ಮಂಥನವು ಸಮಾಜದಲ್ಲಿ ಇಂದು ಅವಶ್ಯವಾಗಿದೆ ಎಂದರು.
ವಿದ್ಯಾರ್ಥಿ ಸಂಯೋಜಕಿ ದಿಶಾ ಇದ್ದರು. ವಿದ್ಯಾರ್ಥಿ ಪವಿತ್ರಾ ನಿರೂಪಿಸಿ, ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ