ಅವಳೆಂದರೆ ನನಗೊಂದು ಸುಂದರ ಜಗತ್ತು. ನೋಡಲು ತುಂಬಾನೇ ಆಕರ್ಷಕ. ಯಾರಿಗೂ ಮರುಳಾಗದ ನಾನು ಅವಳ ಸೌಂದರ್ಯಕ್ಕೆ ಮರುಳಾದೆ. ನನ್ನ ಜೀವನಕ್ಕೆ ಸ್ಪೂರ್ತಿ ತುಂಬಿಸಿ, ನೋವಲ್ಲೂ ನಗೆಯ ಬೀರುವುದನ್ನು ಕಲಿಸಿದಳು.
ಬೇಸರದ ಛಾಯೆ ನನ್ನೊಳಗೆ ಅವರಿಸಿದಾಗ ನಾನು ಅವಳ ಬಳಿ ಹೋಗಿ ನನ್ನೆಲ್ಲ ದುಃಖವನ್ನು ಹೇಳಿಕೊಳ್ಳುವುದು ನನ್ನ ದಿನಚರಿ ಅಂತಾನೇ ಹೇಳಬಹುದು.ಅವಳು ಮೌನದಿಂದ ತಲೆದೂಗಿದಾಗ ನನ್ನ ನೋವಿಗೆ ಸ್ಪಂದನೆ ನೀಡುತ್ತಿದ್ದವಳಂತೆ ನನಗನಿಸುತಿತ್ತು. ಅವಳಿಗೆ ಬಣ್ಣ ಬಣ್ಣದ ರಂಗಿನ ಉಡುಪು ತೊಟ್ಟ ಗೆಳತಿಯರು ಅವಳ ಬಳಿ ಬಂದು ಗುಂಪಲ್ಲಿ ಮುತ್ತಿಟ್ಟಾಗ, ಆಗ ಅವಳು ಅವರನ್ನು ಮುತ್ತಿಟ್ಟು ಅಪ್ಪಿಕೊಳ್ಳುತ್ತಿದ್ದಳು. ಆ ಧೃಶ್ಯವನ್ನು ನೋಡಿದಾಗ ನನ್ನ ಕಣ್ಣುಗಳಿಗೆ ತಂಪಾದ ಅನುಭವ. ಸೌಂದರ್ಯವನ್ನೇ ಮರಳು ಮಾಡುವಂತೆ ಅರಳಿ ನಗುವಳು, ಎಷ್ಟೇ ನೋವಿದ್ದರೂ ಮೊಗದಲ್ಲಿ ಮರೆಯಾಗದ ಆ ಮುಗುಳು ನಗು ಇತ್ತು.
ಅವಳೆಂದರೆ ನನಗೆ ಏನೋ ತುಂಬಾ ಆಕರ್ಷಣೆ ಹಾಗೂ ಪ್ರೀತಿ. ಎಲ್ಲ ಕಡೆ ಸಹಾಯಹಸ್ತ ಎಂಬಂತೆ ಸತ್ಕಾರಕ್ಕೆ ಅವಳ ಉಪಸ್ಥಿತಿ ಇದ್ದೇ ಇರುತ್ತದೆ. ಇಷ್ಟೊಂದು ನನ್ನನ್ನು ಅವಳತ್ತ ಸೆಳೆಯುವ ನನ್ನ ಗೆಳತಿಯ ಪರಿಚಯ ನಿಮಗೂ ಇರುತ್ತದೆ.
ಮುಂಜಾನೆಯ ಹೊಂಬಿಸಿಲಿಗೆ ಕಿರಣಗಳ ಸ್ಪರ್ಶಕ್ಕೆ ತಲೆಯೇತ್ತಿ ನಿಲ್ಲುವಳು ಮಳೆಯ ಸಮಯ ದಲ್ಲಿ ಅವಳ ಮೇಲೆ ಬೀಳುವ ಮಳೆ ಹನಿ, ಚಳಿಗಾಲ ದಲ್ಲಿ ಮಂಜಿನ ಹನಿಗಳ ಚುಂಬನಕೆ ಸೂರ್ಯನ ಹೊಂಗಿರಣವು ಅವಳ ಮೈಗೆ ಬಿದ್ದಾಗ ಆಭರಣದಿಂದ ಶೃಂಗಾರಸಿದ ರೂಪವತಿಯಂತೆ ಕಂಗೊಳಿಸುತ್ತಿದ್ದಳು.ದುಂಬಿಗಳ ಬಳಗವನ್ನು ತನ್ನತ್ತ ಸೆಳೆಯುತ್ತ ನಗು ಮೊಗವ ತೋರುತ ಅರಳಿ ನಿಲ್ಲುವವಳು ಅವಳು ಬೇರೆ ಯಾರೂ ಅಲ್ಲ ನಮ್ಮೆಲ್ಲರ ಮೆಚ್ಚಿನ ಗುಲಾಬಿ. ಎಲ್ಲರನ್ನು ಬಹು ಬೇಗನೆ ತನ್ನತ್ತ ಸೆಳೆಯುತ್ತದೆ. ಹೂವುಗಳ ರಾಣಿ ಎಂತಲೂ ಅದರ ಸ್ಥಾನ ಎಂದಿಗೂ ಎತ್ತರದಲ್ಲಿದೆ. ಹೂ ಮಾರುಕಟ್ಟೆಯಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತದೆ.ಇಂತಹ ಆಕರ್ಷಕ ಸೌಂದರ್ಯ ಹೊಂದಿರುವುದು ಒಂದು ಕ್ಷಣ ಮಾತ್ರ, ಸಂಜೆಯ ಹೊತ್ತಿಗೆ ಪ್ರಕಾಶವಾಗಿ ಹೊಳೆಯುವ ಸೂರ್ಯನನಿಗೆ ಕಾರ್ಮೋಡ ಸರಿಯುತಿರುವಂತೆ ಬಾಡಿ ಹೋಗುತ್ತದೆ. ಪ್ರತಿ ಮನೆಯ ಮುಂದೆ ಅರಳಿ ನಿಲ್ಲುವ ಅದರ ಸೌಂದರ್ಯಕ್ಕೆ ಯಾರು ತಾನೇ ಸೋತು ಹೋಗದವರು.
ಅಲ್ಪ ಸಮಯವಿದ್ದರೂ ಅರಳಿ ಇನ್ನೊಬ್ಬರ ಮುಗುಳು ನಗೆಗೆ ಕಾರಣವಾಗುತ್ತದೆ. ನಾಳಿನ ಭರವಸೆಗೆ ಮುನ್ನಡೆಯಾಗುವಂತೆ ಮತ್ತೆ ಮರುದಿನ ಅರಳಿ ನಗುತ್ತಿರುತ್ತದೆ. ಸಾವಿರ ಮುಳ್ಳುಗಳ ನಡುವೆ ನೀಲ್ಡಳಗಳನ್ನು ಮೆಲ್ಲಗೆ ಚಾಚಿ ಚಿಟ್ಟೆಗಳ ಬಳಗವನ್ನು ತನ್ನತ್ತ ಸೆಳೆಯುತ್ತದೆ. ಆ ದೃಶ್ಯವು ಪ್ರಕೃತಿ ತಲೆಬಾಗುವಂತೆ ಕಣ್ಮನ ಸೆಳೆಯುತ್ತದೆ. ಹೆಣ್ಣು ಮಕ್ಕಳನ್ನು ಬಹುಬೇಗನೆ ತನ್ನತ್ತ ಸೆಳೆಯುವ ಗುಲಾಬಿ ಹೂ ಅದೆಷ್ಟೋ ಜೀವನದ ಪಾಠವನ್ನು ಕಲಿಸುತ್ತದೆ. ಒಂದು ಹೂ ಅರಳಬೇಕಾದರೆ ಕೀಟ ಹಾಗೂ ಅನೇಕ ತೊಂದರೆಗಳನ್ನು ಮೆಟ್ಟಿ ನಿಂತು ಅರಳಿ ನಿಲ್ಲುತ್ತದೆ.ನಾವು ನಮ್ಮ ಜೀವನದಲ್ಲಿ ಹಾಗೇ ಬದುಕಬೇಕು. ಸಮಾಜದಲ್ಲಿ ಎಷ್ಟೇ ಅಡೆ ತಡೆ ಇದ್ದರು ಅವುಗಳನ್ನು ಮೆಟ್ಟಿ ನಿಂತು ನಮ್ಮ ಸಾಧನೆಯ ಕಡೆಗೆ ನಡೆಯಬೇಕು.
ಇರುವಷ್ಟು ದಿನ ಎಲ್ಲರನ್ನು ಸಂತೋಷ ಪಡಿಸುತ್ತ ನಮ್ಮವರು ತನ್ನವರು ಎಂದು ಜೀವನದಲ್ಲೂ ದ್ವೇಷ, ಅಸೂಯೆ ಇರದೇ ಎಲ್ಲರನ್ನು ಪ್ರೀತಿಸ ಬೇಕು. ಇನ್ನೊಬ್ಬರಿಗೆ ಕೇಡು ಬಯಸದೆ ಗುಲಾಬಿಯಂತೆ ಇರಬೇಕು ತನ್ನದೇ ಮುಳ್ಳು ತನಗೆ ಚುಚ್ಚಿದರು, ಅದು ತನ್ನವರಿಗಾಗಿ ಅರಳುತ್ತದೆ. ಕಷ್ಟವಿದ್ದರೂ ಕುಗ್ಗದೆ ನಡೆಯುದನ್ನು ಗುಲಾಬಿ ಹೂವನ್ನು ನೋಡಿಯೇ ಕಲಿಯಬೇಕು. ಮುಸ್ಸಂಜೆ ಯಾದಾಗ ಬಾಡಿ ಹೋದರೂ ಮುಂಜಾನೆ ಹೊಸ ಚೈತನ್ಯದೊಂದಿಗೆ ಅರಳಿ ನಗುತ್ತಿರುವ ಹೂವಿನಂತೆ ಬಾಡಿ ಹೋಗುವ ವಿಚಾರಗಳು ನಮ್ಮ ಜೀವನದಲ್ಲಿ ನಡೆದಿದ್ದರೆ ಅದನ್ನೆಲ್ಲ ಮರೆತು ಒಳ್ಳೆಯ ಕ್ಷಣಗಳ ಬುಟ್ಟಿಯನ್ನು ಹೆಣೆಯಬೇಕು. ಎಷ್ಟೇ ದುಃಖ, ದುಮ್ಮಾನಗಳಿದ್ದರೂ ಅದನ್ನೆಲ್ಲ ಮರೆತು ಎಲ್ಲರ ಜೊತೆಯಲ್ಲೂ ಬೆರೆತು ಬಾಳಬೇಕು. ಬಡವ ಶ್ರೀಮಂತ ಎಂದು ನೋಡದೆ ಪ್ರೀತಿಯಿಂದ ಒಳ್ಳೆಯ ಸಂಬಂಧವನ್ನು ಬೆಸೆಯಬೇಕು. ಇರುವಷ್ಟು ದಿನ ಇನ್ನೊಬ್ಬರ ಸಂತೋಷಕ್ಕೆ ಕಾರಣವಾಗಬೇಕು ವಿನ: ಅವರ ದುಃಖಕ್ಕಲ್ಲ. ತಾನು ಬಾಡಿ ಹೋದರೂ ಅಲ್ಪ ಕ್ಷಣದಲ್ಲಿ ತನ್ನವರನ್ನು ಸಂತೋಷ ಪಡಿಸುವ ಗುಲಾಬಿ ಹೂವಿನಂತೆ.
- ನಿಖಿತಾ ಎಸ್.ಸೇರ್ತಾಜೆ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ.
ವಿವೇಕಾನಂದ ಮಹಾವಿದ್ಯಾಲಯ ನಗರ.
ಪುತ್ತೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


