ಅಂತೂ ಇಂತೂ ಬಂದೇಬಿಟ್ಟಿತು ಹೊಸ ವರುಷ. ಹೊಸ ಹರುಷ ಹೊತ್ತು ತರುವ ಯುಗಾದಿ ಹಬ್ಬ ಬಂತೆಂದರೆ ಸಾಕು ಮನೆ ಮನದಲ್ಲೂ ಉತ್ಸಾಹ ಹುಮ್ಮಸ್ಸು ಮನೆಮಾಡಿರುತ್ತದೆ. ನಮ್ಮ ಕಾಸರಗೋಡು ಭಾಗದಲ್ಲಿ ಎರಡು ಯುಗಾದಿ ಹಬ್ಬಗಳನ್ನು ಆಚರಿಸುತ್ತಾರೆ. ಅದನ್ನು ಚಾಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಕರೆಯುತ್ತಾರೆ.
ನಮ್ಮ ಮೂಲ ಕರ್ನಾಟಕವಾದ ಕಾರಣ ನಾವುಗಳು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತೇವೆ. ಸೌರಮಾನ ಯುಗಾದಿಯನ್ನು ಕೇರಳದ ಎಲ್ಲಾ ಭಾಗದಲ್ಲೂ, ಕರ್ನಾಟಕದ ಕರಾವಳಿ ಭಾಗದಲ್ಲೂ ಆಚರಿಸುವ ಪದ್ಧತಿ ಇದೆ. ಇದನ್ನು ವಿಶು ಎಂದು ಮಲಯಾಳದಲ್ಲೂ ಬಿಸು ಎಂದು ತುಳುವಿನಲ್ಲೂ ಕರೆಯುತ್ತಾರೆ. ಕಾಸರಗೋಡು ಜಿಲ್ಲೆಯಲ್ಲಿ ಎರಡೂ ಯುಗಾದಿಗಳನ್ನು ಆಚರಿಸುವ ಮನೆಗಳಿವೆ.
ನಾನಂತೂ ಬಾಲ್ಯದಿಂದಲೂ ನವ ಸಂವತ್ಸರದ ಮೊದಲ ಹಬ್ಬವನ್ನು ಆಚರಿಸಲು ತುದಿಗಾಲಿನಲ್ಲಿ ನಿಂತಿರುತ್ತಿದ್ದೆ. ಅಪ್ಪ ತಂದ ಹೊಸ ಉಡುಪನ್ನು ತೊಟ್ಟು ದೇವಾಲಯಕ್ಕೆ ಹೋಗುವುದೆಂದರೆ ಮಹದಾನಂದ. ಸೂರ್ಯನಿಗೆ ಮುತ್ತಿಡುವ ಹೂವುಗಳನ್ನು ಕೊಯ್ದು, ಅಮ್ಮ ಗೇರು ಬೀಜವನ್ನು ಕೆಂಡದಲ್ಲಿ ಸುಟ್ಟು ನಂತರ ಕಹಿಬೇವನ್ನು ಚೆನ್ನಾಗಿ ಅರೆದು ಗೇರುಬೀಜವನ್ನು ಬೆಲ್ಲವನ್ನು ಪುಡಿ ಮಾಡಿ ಆ ಮಿಶ್ರಣಕ್ಕೆ ಹಾಕುತ್ತಿದ್ದರು. ಬೆಲ್ಲವನ್ನು ನೋಡಿ ಬಾಯಲ್ಲಿ ನೀರೂರಿದರೂ ಬೇವನ್ನು ತಿನ್ನಲು ನಾಲಿಗೆ ಹಿಂಜರಿಯುತ್ತಿತ್ತು!
ಆ ದಿನ ದೇವರಕೋಣೆ ತುಂಬಾ ದೀಪವನ್ನು ಬೆಳಗಿಸುವುದು, ಮನಸಾರೆ ದೇವರನ್ನು ಸ್ಮರಿಸುವುದು ವಾಡಿಕೆ. ಮನೆಯ ಹಿರಿಯರು ಕಿರಿಯರಿಗೆ ಬೇವು-ಬೆಲ್ಲವನ್ನು ಸವಿಯಲು ನೀಡುತ್ತಾರೆ. ಆ ಸಮಯದಲ್ಲಿ ಮನೆಯ ಹಿರಿಯರು ಇದರ ಹಿಂದಿನ ಮಹತ್ವವನ್ನು ತಿಳಿಸುತ್ತಾರೆ. ಬದುಕಿನಲ್ಲಿ ಎದುರಾಗುವ ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಗೆದ್ದಾಗ ಮನ ಹಿಗ್ಗದಿರಲಿ ಸೋತಾಗ ಕುಗ್ಗದಿರಲಿ ಎನ್ನುತ್ತಾ ಹಬ್ಬದ ನಿಜಾಂಶವನ್ನು ತಿಳಿಸುವರು. ಅಂದಿನ ಮುಖ್ಯ ಕೇಂದ್ರ ಬಿಂದು ಬೇವುಬೆಲ್ಲದ ಜೊತೆ ಏರ್ಪಡಿಸುತ್ತಿದ್ದ ಔತಣಕೂಟ, ಅದರಲ್ಲಿರುತ್ತಿದ್ದ ಬಗೆಬಗೆಯ ಪದಾರ್ಥ. ಅದರಲ್ಲಂತೂ ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ, ಬೇಳೆ ಪಾಯಸದ್ದೇ ದರ್ಬಾರ್!
ಯುಗಾದಿ ಕೂಟದ ಹಿಂದೂ ಒಂದು ಕಥೆಯಿದೆ. ಹಿಂದೆ ಬಡತನ ಹೇರಳವಾಗಿತ್ತು, ದಿನದ ಊಟಕ್ಕೂ ಪರದಾಟ. ಅಲ್ಪಸ್ವಲ್ಪ ಉಂಡು ದಿನವನ್ನು ದೂಡುತ್ತಿದ್ದ ಕಾಲವದು. ಆ ಸಮಯದಲ್ಲಿ ಯುಗಾದಿ ಹಬ್ಬದ ದಿನ ಹೊಟ್ಟೆ ತುಂಬಾ ಊಟ ಮಾಡುತ್ತಾರೆ ಎಂದು ಕೇಳಿದ್ದೆ. ಅದು ನಿಜವೂ ಕೂಡ.
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಹೌದು, ಯುಗಾದಿ ಎಲ್ಲರ ಬಾಳಲ್ಲಿ ಸುಖ ಸಮೃದ್ಧಿ ನೆಮ್ಮದಿಯನ್ನು ಕರುಣಿಸಲಿ.
-ಗಿರೀಶ್ ಪಿ.ಎಂ
ಪ್ರಥಮ ಎಂ.ಎ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿಶ್ವವಿದ್ಯಾಲಯ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ