ಖಗೋಳ ವಿಸ್ಮಯ: ನಾಳೆ (ಮಾರ್ಚ್ 21) ವಸಂತ ವಿಷುವ - ವಿಷುವತ್ ಸಂಕ್ರಾಂತಿ- 2023

Upayuktha
0


ಗೋಳ ವಿದ್ಯಮಾನಗಳು ಎಂದ ತಕ್ಷಣ ಅದು ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ, ಕೆಲವೊಂದು ವಿದ್ಯಮಾನಗಳನ್ನು ಹಗಲಿನ ಸಮಯದಲ್ಲಿ ಕೂಡ ನೋಡಿ ಆನಂದಿಸಬಹುದು. ಅಂತಹ ಒಂದು ವಿಶೇಷ ವಿದ್ಯಮಾನ ವಸಂತ ವಿಷುವ ಅಥವಾ ವಿಷುವತ್ ಸಂಕ್ರಾಂತಿ. ಪ್ರತಿ ವರ್ಷ ನಡೆಯುವ, ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ ಈ ವರ್ಷ ಮಾರ್ಚ್ 21 ರಂದು ಸಂಭವಿಸಲಿದೆ.


ವಿಷುವತ್ ಸಂಕ್ರಾಂತಿಯು ಒಂದು ವಿಶೇಷ ಖಗೋಳ ವಿದ್ಯಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ- ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನವು ಸಂಭವಿಸುತ್ತದೆ. ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ. ವಸಂತ ವಿಷುವತ್ ಸಂಕ್ರಾಂತಿಯ ದಿನದಂದು ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ. ಅಲ್ಲದೆ, ಈ ದಿನ ಸೂರ್ಯನ ಕೇಂದ್ರ ಬಿಂದು ದಿಗಂತದ ಮೇಲೆ 12 ಗಂಟೆಗಳ ಕಾಲ ಮತ್ತು ದಿಗಂತದ ಕೆಳಗೆ 12 ಗಂಟೆಗಳ ಕಾಲ ಇರುತ್ತದೆ. ಆದರೆ ವಿಷುವತ್ ಸಂಕ್ರಾತಿಯ ದಿನದಂದು ಸಮಭಾಜಕ ವೃತ್ತದಲ್ಲಿ ಹಗಲು ಹಾಗೂ ರಾತ್ರಿಯ ಸಮಯವು ಸಮಾನವಾಗಿರುವುದಿಲ್ಲ. ಹಗಲಿನ ಅವಧಿಯು ರಾತ್ರಿಯ ಸಮಯಕ್ಕಿಂತ ಸ್ವಲ್ಪ ದೀರ್ಘವಾಗಿರುತ್ತದೆ. ಏಕೆಂದರೆ, ದಿನದ ಅವಧಿಯು ಸೂರ್ಯನ ವೃತ್ತದ ಮೇಲ್ತುದಿಯ ಉದಯ ಹಾಗೂ ಅಸ್ತದ ನಡುವಿನ ಅವಧಿಯಾಗಿರುತ್ತದೆ.


ವಿಷುವದ ದಿನದಂದು, ನಾವಿರುವ ಸ್ಥಳದ ಅಕ್ಷಾಂಶವನ್ನು (ಲ್ಯಾಟಿಟ್ಯೂಡ್ – Latitude) ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು  ಸುಲಭವಾಗಿ ಮಾಡಬಹುದಾಗಿದೆ.

ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರವನ್ನು ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ, ಆ ವಸ್ತುವಿನ (ಉದಾ: ಮೇಣದ ಬತ್ತಿ/ಕೋಲು) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು. ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ (right angled triangle)ವಸ್ತುವು ತ್ರಿಭುಜದ ಅಡಿಪಾಯ (adjacent side)ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ (opposite side)ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು (angle) ಸ್ಥಳದ ಅಕ್ಷಾಂಶವನ್ನು ನೀಡುತ್ತದೆ.


ಖಗೋಳ ಸಮಭಾಜಕವೃತ್ತವನ್ನು (ವಿಷುವದ್ವೃತ್ತ – Celestial Equator), ಕ್ರಾಂತಿವೃತ್ತವು (ಎಕ್ಲಿಪ್ಟಿಕ್ – Ecliptic) ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಸೂರ್ಯನು ಈ ಬಿಂದುವನ್ನು  ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದು ನೋಡಬಹುದು (ಉತ್ತರ ಅಯನ). ವಿಶ್ವಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಮಾರ್ಚ್ ಈಕ್ವಿನಾಕ್ಸ್ (March Equinox) ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ವರ್ನಲ್ ಈಕ್ವಿನಾಕ್ಸ್ (Vernal Equinox) ಎಂದು ಕೂಡ ಕರೆಯುತ್ತಾರೆ.


ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು, ಸರ್ವರಿಗೂ ಶುಭ್ರ ಆಕಾಶದೊಂದಿಗೆ ಈ ವಿದ್ಯಾಮಾನದ ಪ್ರಯೋಗವನ್ನು ಮಾಡಿ, ಆನಂದಿಸುವ ಅವಕಾಶ ಸಿಗಲಿ ಎಂದು ಆಶಿಸುತ್ತದೆ.


ಅತುಲ್ ಭಟ್

ಸಹಾಯಕ ಪ್ರಾಧ್ಯಾಪಕ, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ

(ಸಂಯೋಜಕ, ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳಶಾಸ್ತ್ರಜ್ಞರ ಕ್ಲಬ್)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top