ಪುತ್ತೂರಿನಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ವಿನೂತನ ಪರಿಕಲ್ಪನೆ; ಸಂಸ್ಥೆಯಿಂದ ಮತ್ತೊಂದು ಮಹತ್ತರ ಹೆಜ್ಜೆ
ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್‍ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಗತಿ ಆರಂಭಿಸುವ ನಿರ್ಣಯ ಕೈಗೊಂಡಿದ್ದು ನಗರದಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾಲಯವೊಂದರಲ್ಲಿ ಇಂತಹದ್ದೊಂದು ಕಲಿಕೆ ಆರಂಭಿಸಿದ ಕೀರ್ತಿ ಪಡೆಯಲಿದೆ.
ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ದಶಕದ ಹಿಂದಿನಿಂದಲೇ ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಮುಂದಿನ ದಿನಗಳಲ್ಲಿ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ, ತನ್ಮೂಲಕ ವೈಜ್ಞಾನಿಕ ರಂಗದಲ್ಲಿ ತನ್ನ ಛಾಪನ್ನೊತ್ತುವ ನೆಲೆಯಲ್ಲಿ ಈ ನೂತನ ಕಾರ್ಯಯೋಜನೆ ಹಮ್ಮಿಕೊಂಡಿದೆ.
ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿದ ಈ ಸಂಸ್ಥೆ ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ತೊಡಗಿಕೊಂಡಿದೆ. ಹಾಗಾಗಿ ಇಲ್ಲಿ ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ ಮಾಡಿಕೊಳ್ಳುತ್ತಾನೆ ಎಂಬುದು ವಿಶೇಷ.
ವಿದ್ಯಾರ್ಥಿಗಳಿಗೆ ಏನು ಲಾಭ?
ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಸಾಕಷ್ಟು ಪ್ರವರ್ಧಮಾನಕ್ಕೆ ಬರುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಈ ಎರಡು ಸಂಗತಿಗಳ ನೆಲೆಯಲ್ಲಿಯೇ ಬೆಳೆದುಬರಲಿದೆ. ಈಗಾಗಲೇ ಇಂಜಿನಿಯರಿಂಗ್‍ನಂತಹ ಕಾಲೇಜುಗಳಲ್ಲಿ ಈ ವಿಷಯದಲ್ಲೇ ಪದವಿ ಶಿಕ್ಷಣ ಕೈಗೆತ್ತಿಕೊಳ್ಳಲಾಗಿದ್ದು ಅನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅಪಾರ ಬೇಡಿಕೆ ಈ ಕ್ಷೇತ್ರಕ್ಕಿದೆ.
ಜತೆಗೆ, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಕಂಪ್ಯೂಟರ್ ಚಿಪ್ ಗಳ ತಯಾರಿ, ರೋಬೋಟ್ ನಿರ್ಮಾಣದಂತಹ ಕಾರ್ಯಗಳನ್ನು ಈವರೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಸಂದರ್ಭವಿದ್ದರೆ ಇನ್ನು ಮುಂದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಹ ಮಾರ್ಗದರ್ಶನ, ಪ್ರೇರಣೆ ದೊರಕಲಿದೆ. ಮನೆಯಲ್ಲಿಯೇ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕಲೆ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ. ಇದರಿಂದಾಗಿ ವಿಜ್ಞಾನ ಕ್ಷೇತ್ರಕ್ಕೆ ಅಂಬಿಕಾ ವಿದ್ಯಾಲಯ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯ ಈ ತರಬೇತಿಯಿಂದ ನಡೆಯಲಿದೆ.
ಇದಲ್ಲದೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಷಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ಸುಲಭವಾಗಲಿದೆ. ಅಂಬಿಕಾ ವಿದ್ಯಾಲಯದಲ್ಲಿ ಈ ತರಬೇತಿಯನ್ನು ಪಡೆದಿರುವುದು ಅವರ ಭವಿಷ್ಯಕ್ಕೆ ಬಹುದೊಡ್ಡ ಪ್ರಯೋಜನವನ್ನೊದಗಿಸಲಿದೆ.
ದೇಶಕ್ಕೂ ಇದೆ ಪ್ರಯೋಜನ
ಇಂದು ನ್ಯಾನೋ ತಂತ್ರಜ್ಞಾನದಲ್ಲಿ ಚೀನಾ ಇಡಿಯ ಪ್ರಪಂಚದಲ್ಲೇ ಪ್ರಭುತ್ವವನ್ನು ಸಾಧಿಸಲು ಹೊರಟಿದೆ. ಯಾವುದೇ ವಸ್ತುಗಳ ತಯಾರಿಕೆ, ಅದರ ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಎನಿಸುತ್ತಿದೆ. ಈ ವಿಚಾರವನ್ನು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಚೀನಾದ ತಾಂತ್ರಿಕ ದಾಸ್ಯಕ್ಕೆ ಪ್ರಪಂಚವೇ ಒಳಗಾಗಬೇಕಾದ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಸಡ್ಡು ಹೊಡೆಯುವ ಬುದ್ಧಿಮತ್ತೆ ಮತ್ತು ಸಾಧ್ಯತೆ ಭಾರತಕ್ಕಷ್ಟೇ ಇದೆ ಎಂಬುದು ಜಗತ್ತಿಗೇ ತಿಳಿದಿದೆ ಹಾಗೂ ಭಾರತದಿಂದ ನಿರೀಕ್ಷೆ ಸಾಕಷ್ಟಿದೆ. ಹಾಗಾಗಿ ನಮ್ಮ ಮಕ್ಕಳನ್ನು ಎಳವೆಯಿಂದಲೇ ರೂಪಿಸಲು ಅಂಬಿಕಾ ವಿದ್ಯಾಲಯ ಸಜ್ಜಾಗಿದೆ. ದೇಶ ಮೊದಲು ಎಂಬ ಕಲ್ಪನೆಯಡಿ ಶಿಕ್ಷಣದ ಪ್ರಸರಣದಲ್ಲಿ ತೊಡಗಿರುವ ಅಂಬಿಕಾ ವಿದ್ಯಾಲಯ ಇದೀಗ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದೊಂದಿಗೆ ಅದಕ್ಕೆ ಪೂರಕವಾದ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ.
ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್
ವಿದ್ಯಾರ್ಥಿಗಳ ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂಟರ್ಯಾಕ್ಟಿವ್ ಸ್ಮಾರ್ಟ್ ಬೋಡ್‍ಗಳನ್ನು ಅಳವಡಿಸಲಾಗುತ್ತಿದೆ. ಇಂತಹ ಒಂದು ಸ್ಮಾಟ್ ಬೋರ್ಡ್‍ಗೆ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 3 ಡಿ ತಂತ್ರಜ್ಞಾನ, 4 ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರಾಕ್ಟಿವ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ