ಉಡುಪಿ ಜಿಲ್ಲೆ: ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಸಾಧನೆ

Upayuktha
0

ಉಡುಪಿ: ಯಾವುದೇ ಗ್ರಾಮ ಅಥವಾ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಲು ಕೇವಲ ಮನೆಗಳಷ್ಟೇ ಶೌಚಾಲಯ ಹೊಂದಿದ್ದರೆ ಸಾಲದು. ಬದಲಿಗೆ ಆ ಗ್ರಾಮ ಅಥವಾ ಜಿಲ್ಲೆಯಲ್ಲಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸಮುದಾಯ ಶೌಚಾಲಯದ ವ್ಯವಸ್ಥೆಯಿರಬೇಕು. ಆಗ ಮಾತ್ರ ಸಮುದಾಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಬಹಿರ್ದೆಸೆ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಿ, ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಉದ್ದೇಶ ಕೂಡಾ ಇದೇ ಆಗಿದೆ.


ಬಯಲು ಶೌಚಾಲಯಕ್ಕೆ ಹೋಗುವುದರಿಂದ ಯಾವ ದುಷ್ಪರಿಣಾಮಗಳು ಉಂಟಾಗುತ್ತದೆ ಎನ್ನುವ ಬಗ್ಗೆ ಅರಿವು ಇದ್ದರೂ ಸಹ ಕೆಲವೊಂದು ಗ್ರಾಮೀಣ ಭಾಗದಲ್ಲಿ ಇನ್ನೂ ಕೂಡ ಬಯಲೇ ಶೌಚಾಲಯವಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ವಿದಾಯ ಹೇಳುವ ಮೂಲಕ ಸ್ವಚ್ಛ, ಸುಂದರ ಗ್ರಾಮಗಳನ್ನು ರೂಪಿಸುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದುವರಿದು ಈ ಯೋಜನೆಯ ಲಾಭ ಪಡೆದು, ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ಅಂದರೆ ಹೆಚ್ಚಾಗಿ ಜನ ಸೇರುವ ಕಡೆ, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ದೇವಸ್ಥಾನದಂತಹ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.


ಉಡುಪಿ ಜಿಲ್ಲೆ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಆಗಿರುವುದಾಗಿ ಘೋಷಣೆ ಮಾಡಲಾಗಿದೆ. ಬಹುತೇಕ ಗ್ರಾಮೀಣ ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯ ಸೌಲಭ್ಯವನ್ನು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನಿರ್ಮಿಸಿಕೊಡಲಾಗಿದೆ. ಗೃಹ ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಅಭಾವಿರುವ ಕುಟುಂಬಗಳಿಗೆ ಹಾಗೂ ಹೆಚ್ಚು ಜನಸಂದಣೆ ಸೇರುವ ಸ್ಥಳಗಳು, ಸಂತೆ, ಜಾತ್ರೆ ನಡೆಯುವ ಸ್ಥಳಗಳು, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ನಿಯಮಿತವಾಗಿ ಸೇರುವ ಜನಸಂದಣಿ, ವಲಸೆ ಹಾಗೂ ಇತರೆ ಕಾರಣಗಳಿಂದ ಉಂಟಾಗುವ ಜನಸಂದಣಿ, ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯತೆ ಇದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಇಂತಹ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.


ಜಿಲ್ಲೆಯಲ್ಲಿ ಇದುವರೆಗೂ ರೂ.123 ಲಕ್ಷ ಅನುದಾನದಲ್ಲಿ 41 ಸಮುದಾಯ ಶೌಚಾಲಯವನ್ನು ನಿರ್ಮಿಣ ಕಾರ್ಯ ಕೈಗೊಂಡಿದ್ದು, 38 ಕಾಮಗಾರಿಗಳು ಮುಕ್ತಾಯಗೊಂಡು ಬಳಕೆಗೆ ಸಿದ್ದವಾಗಿದ್ದು , ಇನ್ನೂ 3 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪ್ರತೀ ಶೌಚಾಲಯಕ್ಕೆ 3 ಲಕ್ಷ ರೂ ಅನುದಾನ ನೀಡಲಾಗುತ್ತದೆ. ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸೂಕ್ತ ಜಾಗ ಲಭ್ಯವಿರಬೇಕು ಹಾಗೂ ಜಾಗ ಪಂಚಾಯತ್ ನ ಹೆಸರಲ್ಲಿರತಕ್ಕದ್ದು, ಒಂದು ವೇಳೆ ಖಾಸಗಿ ಒಡೆತನದ ಜಾಗವಾಗಿದ್ದರೆ, ಖಾಸಗಿ ಒಡೆತನದವರ ಒಪ್ಪಿಗೆ ಪತ್ರ ಬೇಕಾಗುತ್ತದೆ. ಶೌಚಾಲಯದ ಸ್ವಚ್ಛತೆಯ ಜವಾಬ್ದಾರಿಯನ್ನು ನಿರ್ಮಿಸಿಕೊಂಡವರೇ ಮಾಡಿಕೊಳ್ಳುವ ದೃಢೀಕರಣ ಪತ್ರವನ್ನು ಜಿಲ್ಲಾ ಪಂಚಾಯತ್ ನಿಂದ ಪಡೆಯಲಾಗಿದೆ. 


ಜಿಲ್ಲೆಯಲ್ಲಿ ಈ ಯೋಜನೆಯಡಿ ಈಗಾಗಲೇ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ, ಉಡುಪಿ ತಾಲೂಕು-3, ಬೈಂದೂರು-8, ಕಾಪು-5, ಕುಂದಾಪುರ -10, ಬ್ರಹ್ಮಾವರ-3, ಕಾರ್ಕಳ-8, ಹೆಬ್ರಿ ಯಲ್ಲಿ 4 ಸಮುದಾಯ ಶೌಚಾಲಯ ನಿರ್ಮಾಣ ಕೈಗೊಳ್ಳಲಾಗಿದೆ. ಇಲ್ಲಿನ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಅವುಗಳ ಸಮರ್ಪಕ ಬಳಕೆ ಮತ್ತು ಸೂಕ್ತ ನಿರ್ವಹಣೆಯೂ ಆಗುತ್ತಿದೆ. ಪ್ರತಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ 2.10 ಲಕ್ಷ ಹಾಗೂ ಉಳಿದ ಮೊತ್ತ 90,000.00 ಗಳನ್ನು ಸಂಬಂಧಪಟ್ಟ ಪಂಚಾಯತ್ ಗಳ 15 ನೇ ಹಣಕಾಸು ಯೋಜನೆಯಡಿ ಭರಿಸಲಾಗುತ್ತಿದೆ.


ಗೃಹ ಶೌಚಾಲಯ ನಿರ್ಮಾಣ ಮತ್ತು ಬಳಕೆಯ ಜೊತೆಗೆ ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಯಿಂದ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವೆಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಶೌಚಾಲಯ ನಿರ್ಮಾಣಕ್ಕೆ ಎಷ್ಟೇ ಪ್ರಸ್ತಾವನೆಗಳು ಸಲ್ಲಿಕೆಯಾದರೂ, ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ಇದರಿಂದ ಹೆಚ್ಚು ಜನಸಂದಣಿ ಸೇರುವ ಜಾಗದಲ್ಲಿ ಶೌಚಾಲಯದ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವ ಜೊತೆಗೆ ಪರಿಸರದ ಸ್ವಚ್ಛತೆಯೂ ಸಾಧ್ಯವಾಗಲಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top