ಮೀನುಗಾರಿಕೆ ಆದ್ಯತಾ ವಲಯವಾಗಿ ಅಭಿವೃದ್ದಿ: ಕೇಂದ್ರ ಸಚಿವ ಪರಷೋತ್ತಮ ರೂಪಾಲ

Upayuktha
0

 


ಉಡುಪಿ: ದೇಶದಲ್ಲಿ ಮೀನುಗಾರಿಕಾ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ, ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಹೇಳಿದರು.


ಅವರು ಇಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಸಾಗರ ಪರಿಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮೀನುಗಾರರ ಸಮಸ್ಯೆಗಳನ್ನು ಅರಿಯಲು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ಆರಂಭಿಸಲಾಗಿದ್ದು, ಮೀನುಗಾರಿಕೆ ವಲಯದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ 20,050 ಕೋಟಿಗಳ ವೆಚ್ಚದಲ್ಲಿ ಮೀನಿನ ಉತ್ಪಾದಕತೆ ಹೆಚ್ಚಳ, ಮೀನುಗಾರರು, ಮೀನು ಕೃಷಿಕರ ಅನುಕೂಲಕ್ಕಾಗಿ ಮೀನುಗಾರರ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು ಮೀನುಗಾರರರು ವಿವಿಧ ಚಟುವಟಿಕೆಗಳ ಮೂಲಕ ತಮ್ಮಆದಾಯವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.


ಸಾಗರ ಪರಿಕ್ರಮ ಯೋಜನೆಯ ಮೂಲಕ ದೇಶದ 8000 ಕಿ.ಮೀ ಕರಾವಳಿ ವ್ಯಾಪ್ತಿಯಲ್ಲಿನ ಎಲ್ಲಾ ಮೀನುಗಾರಿಕಾ ಬಂದರುಗಳಲ್ಲಿ ಆ  ಭಾಗದ ಮೀನುಗಾರರನ್ನು ಭೇಟಿ ಮಾಡಿ ಕೇಂದ್ರದ ಮೀನುಗಾರಿಕಾ ಯೋಜನೆಗಳ ಬಗ್ಗೆ ಅವರಿಗೆ  ವ್ಯಾಪಕ ಅರಿವು ಮೂಡಿಸುವುದರ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಿ, ಅವರುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಯ ಸಂಪೂರ್ಣ ಪ್ರಯಾಣದ ನಂತರ  ಮೀನುಗಾರರ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದ್ದು, ಈ ಸಮಸ್ಯೆಗಳ ನಿವಾರಣೆಗೆ ಕೇಂದ್ರದಿಂದ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ ಎಂದರು.


ರಾಜ್ಯದಲ್ಲಿ ಈಗಾಗಲೇ ಕಾರವಾರ ಬಂದರಿಗೆ ಭೇಟಿ ನೀಡಿ, ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಆಲಿಸಲಾಗಿದ್ದು, ಉಡುಪಿ ಜಿಲ್ಲೆಯ ಮೀನುಗಾರರ ಸಲ್ಲಿಸುವ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಮೀನುಗಾರರು ಕಿಸಾನ್‍ ಕ್ರೆಡಿಟ್‍ ಕಾರ್ಡ್ ನ ಪ್ರಯೋಜನ ಪಡೆಯುವಂತೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸರ್ಕಾರದ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಬಾಲಾಜಿ, ಸಾಗರ ಪರಿಕ್ರಮ ಯೋಜನೆಯ ಅಂಗವಾಗಿ ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಡಯು ಮತ್ತು ಡಾಮನ್ ಗೆ ಭೇಟಿ ನೀಡಲಾಗಿದೆ. 4 ಹಂತವಾಗಿ ಕರ್ನಾಟಕಕ್ಕೆ ಆಗಮಿಸಲಾಗಿದೆ.ಮೀನುಗಾರಿಕಾ ಉತ್ಪಾದನೆಯಲ್ಲಿ ಕರ್ನಾಟಕವು ಕಳೆದ ಸಾಲಿನಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಈ ವರ್ಷವೂ ಸಹ ಉತ್ತಮ ಪ್ರಗತಿಯಲ್ಲಿದೆ. ಕೇಂದ್ರದ ಮೀನುಗಾರಿಕಾ ಯೋಜನೆಗಳ ಅನುಷ್ಠಾನವು ಸಹ ಅತ್ಯುತ್ತಮವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.


ಉಡುಪಿ ಶಾಸಕ ರಘುಪತಿ ಭಟ್, ಕಾಪು ಲಾಲಾಜಿ ಆರ್ ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ಸ್  ಇಂಡಸ್ಟ್ರೀಸ್ ನಿಯಮಿತದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮೀನು ಮಾರಾಟ ಫೆಡರೇಷನ್‍ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್‍ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್‌ಗಾರ್ಡ್ ಡಿ.ಐ.ಜಿ. ಪಿ.ಕೆ.ಮಿಶ್ರಾ, ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ,ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ ಮತ್ತಿತರರು ಇದ್ದರು.


ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಸ್ವಾಗತಿಸಿದರು.


ಮೀನುಗಾರರಿಂದ ಕೇಂದ್ರ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಕೆ


ಜಿಲ್ಲೆಯ ಮೀನುಗಾರರು ತಮ್ಮ ವಿವಿಧ ಬೇಡಿಕೆಗಳ ಬಗ್ಗೆ  ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಅವರಿಗೆ ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಂಘದಲ್ಲಿ ಮನವಿಗಳನ್ನು ಸಲ್ಲಿಸಿದರು.


ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ನೀಡಲು ಬಿ.ಪಿಎಲ್.ಕಾರ್ಡ್ ಪರಿಗಣನೆ ಮಾಡದ ಬಗ್ಗೆ, ಬೋಟ್ ಗಳಿಗೆ ರೋಡ್ ಸೆಸ್ ವಿಧಿಸುವುದನ್ನು ತೆಗೆಯುವ ಬಗ್ಗೆ,ಅಂತರರಾಜ್ಯ ಸಮನ್ವಯ ಸಮಿತಿ ರಚನೆ ಬಗ್ಗೆ, ಅನಿಯಮಿತ ಸೀಮೆಎಣ್ಣೆ ಸರಬರಾಜು ಬಗ್ಗೆ, ಮಲ್ಪೆಯಲ್ಲಿ  ಹೊರ ಬಂದರು ನಿರ್ಮಾಣ ಬಗ್ಗೆ, ಈಗಿರುವ ಬಂದರನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ಮೀನುಗಾರಿಕ ಕೈಗಾರಿಕ ವಲಯ ಆರಂಭಿಸುವ ಬಗ್ಗೆ,ಹಳೆಯ ಬೋಟು ಗಳ  ಪುರ್ನ ನಿರ್ಮಾಣಕ್ಕೆ ಸಹಾಯಧನ ನೀಡುವ ಬಗ್ಗೆ ಮತ್ತಿತರ ಬೇಡಿಕೆಗಳ ಬಗ್ಗೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮನವಿ ಸಲ್ಲಿಸಿದರು.


ಹಿರಿಯ ಮೀನುಗಾರರಿಗೆ ಪಿಂಚಣಿ ನೀಡುವ ಬಗ್ಗೆ, ನಾಡದೋಣಿ ಮೀನುಗಾರರಿಗೆ ಪರ್ಯಯ ಇಂಧನ ಒದಗಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳ ಬಗ್ಗೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ ಮನವಿ ಸಲ್ಲಿಸಿದರು.


ಪ್ರಸ್ತುತ ಮೀನುಗಾರರ ಎಲ್ಲಾ ಮನವಿಗಳ ಬಗ್ಗೆ ಪರಿಶೀಲಿಸಿ, ಮೀನುಗಾರರಿಗೆ ಗರಿಷ್ಠ ಪ್ರಯೋಜನ ದೊರೆಯುವಂತೆ ಪ್ರಸ್ತುತ ಇರುವ ಯೋಜನೆಗಳಲ್ಲಿ ಬದಲಾವಣೆ ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top