ಪುತ್ತೂರು: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆ ಶನಿವಾರ ಪುತ್ತೂರಿನ ತೆಂಕಿಲದ ಚುಂಚಶ್ರೀ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಅಶೋಕ ಕಿನಿಲ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ, ಚುನಾವಣೆಯ ಹೊತ್ತಿನಲ್ಲಿ ಕೃಷಿಕರ ಕೋವಿ ಡಿಪಾಸಿಟ್ ಇಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಯಿತು.
ಚುನಾವಣೆಯ ಸಂದರ್ಭ ಕೃಷಿಕರ ಕೋವಿಯನ್ನು ಡಿಪಾಸಿಟ್ ಇಡಲು ಇಲಾಖೆಗಳಿಂದ ಸೂಚನೆ ಬರುತ್ತಿದೆ. ಕೃಷಿ ರಕ್ಷಣೆಗೆ ನೀಡುವ ಕೋವಿಯನ್ನು ಚುನಾವಣೆಯ ಹೊತ್ತಿನಲ್ಲಿ ಡಿಪಾಸಿಟ್ ಇಡುವುದು ಸೂಕ್ತವಲ್ಲ. ಅದೂ ಅಲ್ಲದೆ ಇಲಾಖೆಗಳಿಗೂ ಇದೊಂದು ಹೊರೆಯಾಗಿದೆ. ಕೃಷಿ ರಕ್ಷಣೆಯ ಉದ್ದೇಶದಿಂದ ಬಳಕೆಯಾಗುವ ಕೋವಿಯ ಮೂಲಕ ಚುನಾವಣೆಯ ಸಮಯದಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಒಂದು ವೇಳೆ ಯಾವುದಾದರೂ ಅನಾಹುತಗಳು ನಡೆದರೆ ಅಂತಹ ವ್ಯಕ್ತಿಗಳ ಕೋವಿ ಲೈಸನ್ಸ್ ರದ್ದು ಮಾಡಲು ಅವಕಾಶ ಇದೆ. ಈಗ ಚುನಾವಣೆಯ ಸಮಯದಲ್ಲಿ ಕೋವಿ ಡಿಪಾಸಿಟ್ ಕೃಷಿಕರಿಗೂ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಕೋವಿ ಡಿಪಾಸಿಟ್ ಗೆ ವಿನಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಅಡಿಕೆ ಬೆಳೆಗಾರರ ಸಂಘದಿಂದಲೂ ಬೆಂಬಲ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ದಯಾನಂದ ಕೋಟೆ ಹಾಗೂ ಬಿ ಟಿ ನಾರಾಯಣ ಭಟ್ ಅವರನ್ನು ಗೌರವಿಸಲಾಯಿತು. ಅಡಿಕೆ ಬೆಳೆಗಾರರ ಸಂಘದ ಪರವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಹಾಗೂ ಕೃಷಿಕ ಎ ಪಿ ಸದಾಶಿವ ಗೌರವಿಸಿದರು. ಸಂಘದ ವರದಿ ಹಾಗೂ ಲೆಕ್ಕಪತ್ರವನ್ನು ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಎಂ. ಜಿ. ಸತ್ಯನಾರಾಯಣ ಅಡಿಕೆ ಬೆಳೆಗಾರರ ಸಂಘದ ಬೈಲಾ ತಿದ್ದುಪಡಿ ಬಗ್ಗೆ ಮಾತನಾಡಿದರು. ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ