ಮಂಗಳೂರು ವಿವಿಯಲ್ಲಿ ದಶಮಾನೋತ್ಸವ, ಯಕ್ಷ ಮಂಗಳ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ನೀತಿ ಬಿಡುಗಡೆ

ಮಂಗಳೂರು: ವಿಜ್ಞಾನದಂತೆಯೇ ಸಾಂಸ್ಕೃತಿಕ ಬದುಕಿನಲ್ಲಿ ಸತ್ಯವಿದೆ. ಆದರೀಗ ಕಲೆಗಳ ಡೊಂಬರಾಟವಾಗುತ್ತಿದೆ. ವ್ಯಾವಹಾರಿಕತೆಯದ್ದೇ ಮೇಲಾಟವಾಗಿದೆ. ಕಲಾವಿದರಲ್ಲಿ, ಪ್ರೇಕ್ಷಕವರ್ಗದಲ್ಲೂ ಭ್ರಷ್ಟಾಚಾರ ನುಸುಳಿದೆ. ಇದು ನಿಂತು ಕಲೆ- ಸಂಸ್ಕೃತಿಯಲ್ಲಿರುವ ಸತ್ಯ ಉಳಿಯಬೇಕು ಎಂದು ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತನ್ನದೇ ಆದ ಕ್ರೀಡೆ ಹಾಗೂ ಸಾಂಸ್ಕೃತಿಕ ನೀತಿಯನ್ನು ಹೊಂದಿರುವುದು ಮಂಗಳೂರು ವಿಶ್ವವಿದ್ಯಾನಿಲಯದ ಹೆಮ್ಮೆ. ಇವೆರಡು ಸಂಸ್ಥೆಯ ಕಣ್ಣುಗಳಿದ್ದಂತೆ ಎಂದರು.
“ದೇಶದಲ್ಲಿ ಸುಮಾರು ಹನ್ನೊಂದು ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರೆಲ್ಲರನ್ನು ನಮ್ಮ ಕಲಾ ಸಂಪತ್ತಾಗಿ ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾದರೆ ಮಾತ್ರ ಕಲೆ ಭವಿಷ್ಯಕ್ಕೆ ಉಳಿಯಬಲ್ಲುದು” ಎಂದು ಅವರು ಹೇಳಿದರು.
ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಸ್ವಾಮೀಜಿ, “ಶಿಕ್ಷಣ ಸಂಸ್ಥೆಗಳು ಕಲೆ ಸಂಸ್ಕೃತಿಗೆ ಬೆಂಬಲ ನೀಡಿದರಷ್ಟೇ ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬಹುದು. ಇದಕ್ಕಾಗಿ ಸಾಂಸ್ಕೃತಿಕ ನೀತಿ ರೂಪಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಇತರ ಸಂಸ್ಥೆಗಳಿಗೆ ಮಾದರಿ” ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತನ್ನು ನೀಡುವುದರ ಜೊತೆಗೆ, ಯಕ್ಷಗಾನ ಯಾವತ್ತಿಗೂ ಪ್ರಸ್ತುತ ಎಂಬ ಸಂದೇಶವನ್ನು ಯುವಜನತೆಗೆ ತಲುಪಿಸುವಲ್ಲಿ ಯಕ್ಷಗಾನ ಕೇಂದ್ರ ಮಹತ್ತರ ಕೆಲಸ ಮಾಡುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಯೊಬ್ಬನಿಂದ ದೇಶದ ರಕ್ಷಣೆ ಸಾಧ್ಯ ಎನ್ನುತ್ತದೆ. ಇದನ್ನು ಸಾಧಿಸಲು ಸಾಂಸ್ಕೃತಿಕ ನೀತಿ ಸಹಕಾರಿಯಾಗಲಿದೆ ಎಂದರು. ನಿವೃತ್ತ ಆಂಗ್ಲ ಪ್ರಾಧ್ಯಾಪಕ, ಹಾಗೂ ಸಾಂಸ್ಕೃತಿಕ ನೀತಿ ರೂಪಿಸಿದ ಸಮಿತಿಯ ಸದಸ್ಯರಾಗಿದ್ದ ಪ್ರೊ. ರವಿಶಂಕರ್, ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸಾಧನೆಯಿಂದ ಪ್ರೇರಿತವಾಗಿ ನೀತಿ ಮೂಡಿ ಬಂದಿದೆ ಎಂದರು.
ಪ್ರಶಸ್ತಿ ಪುನಸ್ಕಾರ
ಹಿರಿಯ ಯಕ್ಷಗಾನ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಡಿತ್ತಾಯ, ಅರುವ ಕೊರಗಪ್ಪ ಶೆಟ್ಟಿ, ಶಿವರಾಮ ಜೋಗಿ, ಕುಂಬ್ಳೆ ಶ್ರೀದರ ರಾವ್, ಆರ್ಗೋಡು ಮೋಹನ್ ದಾಸ ಶೆಣೈ, ಪೇತ್ರಿ ಮಾಧವ ನಾಯ್ಕ, ಬಳ್ಕೂರು ಕೃಷ್ಣ ಯಾಜಿ, ಮುಖ್ಯಪ್ರಾಣ ಕಿನ್ನಿಗೋಳಿ, ಉಬರಡ್ಕ ಉಮೇಶ್ ಶೆಟ್ಟಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಡಾ.ಉಪ್ಪಂಗಳ ಶಂಕರನಾರಾಯಣ ಭಟ್, ಡಾ.ಚಂದ್ರಶೇಖರ ದಾಮ್ಲೆ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಸ್ವೀಕರಿಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ 2021- 22 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಪುಂಡರೀಕಾಕ್ಷ ಉಪಾಧ್ಯಾಯ ಹಾಗೂ ದಯಾನಂದ ನಾಗೂರು ಸ್ವೀಕರಿಸಿದರು. ತಮ್ಮ 'ಶ್ರೀಕೃಷ್ಣ ಚರಿತ ' ಯಕ್ಷಗಾನ ಮಹಾಕಾವ್ಯಕ್ಕಾಗಿ ಲೇಖಕ ಡಾ.ಡಿ.ಸದಾಶಿವ ಭಟ್ಟ ಯಕ್ಷಮಂಗಳ ಕೃತಿ ಪ್ರಶಸ್ತಿ ಪಡೆದುಕೊಂಡರು.
ಯಕ್ಷಗಾನ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಡಾ.ಗಣರಾಜ ಕುಂಬ್ಳೆ ತಮ್ಮ ಆಕರ್ಷಕ ಅಭಿನಂದನಾ ನುಡಿಗಳ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ದಯಾನಂದ ನಾಗೂರು, ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕೇಂದ್ರದ ಪ್ರಾಯೋಜಕರಾದ ಡಾ.ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಸಹೋದರರನ್ನು ಶ್ಲಾಘಿಸಿದರು. ಇದೇ ವೇಳೆ ಪ್ರೊ.ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ. ಎಂ.ಎಲ್. ಸಾಮಗ ಹಾಗೂ ಡಾ. ಧನಂಜಯ ಕುಂಬ್ಳೆ ಅವರನ್ನೂ ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಯಕ್ಷಮಂಗಳ ತಂಡದ ಹಿರಿಯ ಕಲಾವಿದರಿಂದ 'ಮಹಿಷವಧೆʼ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 13 ವರ್ಷಗಳಲ್ಲಿ ಸುಮಾರು 13 ಪುಸ್ತಕಗಳ ಮುದ್ರಣ, 100 ಕ್ಕೂ ಹೆಚ್ಚು ಪ್ರಚಾರೋಪಾನ್ಯಾಸಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸಾಕಷ್ಟು ನಾಟ್ಯ, ಬಣ್ಣ, ಮಾತುಗಾರಿಕೆ, ಕಾರ್ಯಾಗಾರ, ವಿಮರ್ಶಾಗೋಷ್ಠಿಗಳನ್ನು ನಡೆಸಲಾಗಿದೆ. ಸುಮಾರು 8 ವರ್ಷಗಳ ಕಾಲ ನಿರ್ದೇಶಕರಾಗಿದ್ದ ಡಾ. ಚಿನ್ನಪ್ಪ ಗೌಡರ ಅವಧಿಯಲ್ಲಿ ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಯಕ್ಷಗಾನ ವಸ್ತುಸಂಗ್ರಹಾಲಯ ಈಗ ವಿದ್ಯಾರ್ಥಿಗಳ ಕಲಿಕಾ ಶಾಲೆಯಾಗಿದೆ. ಎಲ್ಲವೂ ವಿವಿಯ ಕಾರ್ಯಚಟುವಟಿಕೆಯ ಭಾಗವಾಗಿದೆ ಎಂದರು. ಮಂಗಳೂರು ವಿವಿ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ ಕೆ ಧನ್ಯವಾದ ಸಮರ್ಪಿಸಿದರು. ಡಾ. ಧನಂಜಯ ಕುಂಬ್ಳೆ ಹಾಗೂ ಎಂ.ಕಾಂ ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
ಶಿಲಾನ್ಯಾಸ, ಕೃತಿಗಳ ಲೋಕಾರ್ಪಣೆ
ಕಾರ್ಯಕ್ರಮ ಉದ್ಘಾಟಿಸಿದ ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯದ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ನೀತಿಯನ್ನೂ ಬಿಡುಗಡೆಗೊಳಿಸಿದರು. ಇದೇ ವೇಳೆ ಅವರು ಯಕ್ಷಗಾನ ರಂಗಸ್ಥಳಕ್ಕೆ ಶಿಲಾನ್ಯಾಸ ನೆರವೇರಿಸಿದರು. ಜೊತೆಗೆ ಪ್ರೊ. ಶ್ರೀಪತಿ ಕಲ್ಲೂರಾಯ ಅವರ ಸಂಪಾದಕತ್ವ ಹಾಗೂ ಡಾ. ಧನಂಜಯ ಕುಂಬ್ಳೆ, ಸತೀಶ್ ಕೊಣಾಜೆ ಸಹ ಸಂಪಾದಕತ್ವದ 'ಯಕ್ಷಹಾಸ್ಯʼ ಹಾಗೂ ಶೇಡಿಗುಪ್ಪೆ ವಾಸುದೇವ ಭಟ್ ಅವರ 'ಲಾವಣ್ಯ ಲಕ್ಷ್ಮೀ ಮಂಥರೋಪಾಖ್ಯಾನʼ ಕೃತಿಗಳ ಲೋಕಾರ್ಪಣೆ ಮಾಡಿದರು.
ಯಕ್ಷಮಂಗಳ ವಿದ್ಯಾರ್ಥಿಗಳ ಪೂರ್ವರಂಗದ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.