ಒಳಗೊಳಗೆ ಅಳುವ ನಗುಮೊಗದ ಸರದಾರರು

Upayuktha
0

ಜೀವನದ ಏಳುಬೀಳಿನ ಪಯಣದಿ ಕಷ್ಟ ಸುಖ ಎಂಬುದು ಸರ್ವೇಸಾಮಾನ್ಯ. ಹಾಗಂತ ಕಷ್ಟ ಬಂದಾಗ ಕುಗ್ಗುವುದು ಸುಖ ಎಂದ ತಕ್ಷಣ ಹಿಗ್ಗಿ ಮೆರೆಯುವುದು ತರವಲ್ಲ. ಕೆಲವೊಬ್ಬರನ್ನು ನಾವು ಗಮನಿಸಿದರೆ ಇವರಿಗೆ ಕಷ್ಟವೇ ಇಲ್ಲವೇನೋ ಎಂದೆನಿಸುತ್ತದೆ. ಯಾಕೆಂದರೆ ನಮಗೆ ಅಲ್ಲಿ ಅವರುಗಳ ಕಷ್ಟವೂ ಕಾಣಸಿಗುವುದಿಲ್ಲ. ಎಲ್ಲವನ್ನು ಕೂಡ ತಮ್ಮೊಳಗೆ ಹುದುಗಿಸಿಟ್ಟುಕೊಂಡಿರುತ್ತಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂದರೆ ಹುಡುಗರು.


ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳೆ ಬರಲಿ, ಕಷ್ಟ ನೋವುಗಳು ಬೆಟ್ಟದಷ್ಟಿದ್ದರೂ ಕೂಡ ಯಾವುದೇ ರೀತಿಯ ಬೇಸರ ತೋರ್ಪಡಿಸಿಕೊಳ್ಳದೆ ನೋವುಗಳನ್ನು ತಮ್ಮೊಳಗೆ ನುಂಗಿ ಬಾಳುವವರು ಎಂದರೆ ಅದು ಗಂಡು ಮಕ್ಕಳು. ಹೆಣ್ಣೊಬ್ಬಳು ಅತ್ತು ಮನಸು ಹಗುರಾಗಿಸಿಕೊಳ್ಳಬಹುದು. ಆದರೆ ಹುಡುಗರ ಪರಿಸ್ಥಿತಿ ಹಾಗಲ್ಲವಲ್ಲ. ಒಂದು ವೇಳೆ ಆತ ಯಾವುದೋ ಒಂದು ಸಂದರ್ಭದಲ್ಲಿ ಕಣ್ಣೀರು ಹಾಕಿದಾನೆಂದರೆ ಆಗ ಆತನನ್ನು ಸಮಾಜವು ಗುರುತಿಸುವ ರೀತಿಯೇ ಬೇರೆ. ಅಂಜುಬುರುಕ, ಹೇಡಿ ಎಂದೆಲ್ಲಾ ಚುಚ್ಚಿ ಮಾತನಾಡಲು ಶುರು ಮಾಡುತ್ತಾರೆ.


ಹಾಗಾದರೆ ಹುಡುಗರಿಗೂ ಮನಸೆಂಬುವುದಿಲ್ಲವೇ, ಅವರ ಭಾವನೆಗಳಿಗೆ ಬೆಲೆಯೇ ಇಲ್ಲವೇ. ಒಮ್ಮೊಮ್ಮೆ ಅವರುಗಳ ಜೀವನದ ಕುರಿತು ಯೋಚಿಸುವಾಗ ಅವರ ಬಗೆಗೆ ನಿಜಕ್ಕೂ ಹೆಮ್ಮೆ ಎಂದೆನಿಸುವುದು ತಪ್ಪಲ್ಲ. ನಮ್ಮ ಮನೆಯಲ್ಲಿ  ನಮ್ಮ ತಂದೆಯನ್ನೇ ಗಮನಿಸಿ ನೋಡಿ ತನ್ನಲ್ಲಿ ಸಮಸ್ಯೆ, ಸಾಲಗಳು ಬೆಟ್ಟದಷ್ಟಿದ್ದರೂ ಕುಟುಂಬದ ಹಿತವ ಪೊರೆಯುವ ಕಾವಾಲುಗರಾನಾತ. ಮನೆಯಲ್ಲಿ ಮಕ್ಕಳು ಯಾವುದೇ ತಿಂಡಿ-ತಿನಿಸುಗಳಿಗೆ ಆಸೆ ಪಡಲಿ ಆ ಸಂದರ್ಭದಲ್ಲಿ ಇಲ್ಲವೆಂದು ನಿರಾಕರಿಸದೆ ಕ್ಷಣದಲ್ಲಿ ತಂದೊಪ್ಪಿಸುತ್ತಾರೆ. ಹಣದ ಕೊರತೆ ಇದ್ದರೂ ಕೂಡ ತನ್ನ ಮಗ ಅಥವಾ ಮಗಳು ಜೀವನದಲ್ಲಿ ಒಂದೊಳ್ಳೆ ಸ್ಥಾನದಲ್ಲಿ ನಿಂತು ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ತನ್ನ ಸಂಪಾದನೆಯನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗಾಗಿ ಸುರಿಯುತ್ತಾರೆ. ತನಗೆ ಸಿಗಲಾರದ್ದನ್ನು ತನ್ನ ಮಕ್ಕಳಾದರೂ ಅನುಭವಿಸಲಿ ಎಂಬ ನಿಸ್ವಾರ್ಥ ನಿರೀಕ್ಷೆಯಿಂದ ಕುಟುಂಬದ ಪೋಷಣೆಯಲ್ಲಿ ಒಬ್ಬ ಗಂಡು ಅಥವಾ ಒಬ್ಬ ಹುಡುಗ ತನ್ನವರನ್ನು ಪೋಷಿಸುವ ಭರದಲ್ಲಿ ತನ್ನನ್ನು ತಾನು ನಿರ್ಲಕ್ಷಿಸಿಕೊಳ್ಳುತ್ತಾನೆ. ಆತನ ಎಲ್ಲ ರೀತಿಯಾದಂತಹ ಆಸೆ ಆಕಾಂಕ್ಷೆಗಳು ಮನದಲ್ಲಿ ಮಡುಗಟ್ಟಿರುತ್ತದೆ.


ಒಂದು ಹೆಣ್ಣಾದವಳಿಗೆ ಬದುಕಿನಲ್ಲಿ ಯಾವೆಲ್ಲ ರೀತಿಯ ಆಕಾಂಕ್ಷೆಗಳಿರುತ್ತದೆಯೋ ಹಾಗೆ ಗಂಡಿಗೂ ಬಯಕೆಗಳು ಸಹಜ. ಕುಟುಂಬದಲ್ಲಿ ಹೆಣ್ಣೊಬ್ಬಳು ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ಯಾವೆಲ್ಲ ರೀತಿಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೋ ಹಾಗೆಯೇ ಗಂಡಾದವನು ಕೂಡ ತಂದೆ ಎಂಬ ಕಾವಲುಗಾರನಾಗಿ, ಸಂಗಾತಿಯಾಗಿ, ಸಹೋದರನೆಂಬ ರಕ್ಷಣಾ ಕವಚವಾಗಿ ಜೀವನದ ಪ್ರತಿ ಹಂತದಲ್ಲೂ ಕೂಡ ಒಂದಲ್ಲ ಒಂದು ರೀತಿಯ ಪಾತ್ರವನ್ನು ನಿರ್ವಹಿಸಿಕೊಂಡು ಸಾಗುತ್ತಾನೆ. ವಿಪರ್ಯಾಸವೆಂದರೆ ಗಂಡು ಎಂದರೆ ಭಾವನೆಗಳಿಲ್ಲದ ಕಲ್ಲು ಬಂಡೆ ಎಂದು ಪರಿಗಣಿಸುವವರೆ ಹೆಚ್ಚು. ಅದರಲ್ಲೂ ಮಧ್ಯಮ ವರ್ಗದ ಗಂಡು ಮಕ್ಕಳ ಆಸೆ ಕನಸುಗಳು ಒಂದು ರೀತಿಯಲ್ಲಿ ಕೈಗೆಟುಕದ ನಕ್ಷತ್ರದ ರೀತಿ. ನೋಡಿ ಅನುಭವಿಸಲು ಮಾತ್ರ ಚಂದ. ಮನದೊಳಗಡೆ ಸಾವಿರ ನೋವಿದ್ದರೂ, ಜೀವನದಲ್ಲಿ ನೂರೆಂಟು ಸಮಸ್ಯೆಗಳು ಇದ್ದರೂ ಕೂಡ ಅದನ್ನೆಲ್ಲ ಮನಸ್ಸಲ್ಲೇ ಮುಚ್ಚಿಟ್ಟು ನಗುವಿನ ಸೊಗುದರಿಸಿ ಜೀವನ ಸಾಗಿಸಲು ಹುಡುಗರಿಂದ ಮಾತ್ರ ಸಾಧ್ಯ ಎಂದು ಒಂದೊಂದು ಸಾರಿ ಮನವು ಹೇಳುತ್ತದೆ.



- ಪ್ರಸಾದಿನಿ.ಕೆ ತಿಂಗಳಾಡಿ

ಪ್ರಥಮ ಪತ್ರಿಕೋದ್ಯಮ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top