ಮಾರ್ಚ್ 16: ರಾಷ್ಟ್ರೀಯ ಲಸಿಕೆ ದಿನ- ರೋಗ ಪ್ರಸರಣದ ಅಂಕುಶ ಲಸಿಕೆ

Upayuktha
0

ಲಸಿಕೆಯೊಂದು ನೀಡುವ ಸುರಕ್ಷಿತ ಭಾವನೆಗೆ ಸಾಟಿಯಿಲ್ಲ


- ಡಾ.ಎ.ಜಯ ಕುಮಾರ ಶೆಟ್ಟಿ

ಸಮಾಜವನ್ನು ಕಂಗೆಡಿಸುವ ಹಲವಾರು ರೋಗಗಳಿಗೆ ಲಸಿಕೆಯ ಮೂಲಕವೇ ಅಂಕುಶ ಹಾಕಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಲಸಿಕೆಗಳು ಪ್ರತಿವರ್ಷ 20-30 ಲಕ್ಷ ಜನರನ್ನು ರಕ್ಷಿಸುತ್ತವೆ. ನವಜಾತ ಶಿಶುವಿದ್ದಾಗಿನಿಂದ ನಿಯಮಿತವಾಗಿ ಲಸಿಕೆ ನೀಡುವ ಮೂಲಕ ದಡಾರ, ಧನುರ್ವಾತ, ಪೋಲಿಯೋ, ಸಿಡುಬು, ಕ್ಷಯದಂತಹ ಅನೇಕ ರೋಗಗಳಿಂದ ಲಕ್ಷಾಂತರ ಮಕ್ಕಳನ್ನು ರಕ್ಷಿಸಲಾಗಿದೆ. ಮಾರಣಾಂತಿಕ ಹಾಗೂ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಲಸಿಕೆ ಜೀವ ಹಾಗೂ ಜೀವನೋಪಾಯ ಸಂರಕ್ಷಿಸುವಲ್ಲಿ ಪರಣಾಮಕಾರಿ ಅನ್ವೇಶಣೆಯಾಗದೆ. 


’ಲಸಿಕೆ ಬಂತು, ಇನ್ನು ಆರಾಮವಾಗಿರಬಹುದು’

ಬೆಂಬಿಡದ ಕೊರೋನಾದಿಂದ ಭಯಭೀತರಾಗಿದ್ದ ಜನತೆಯಲ್ಲಿ ಲಸಿಕೆ ಬಂದಾಗಲಂತೂ ’ಲಸಿಕೆ ಬಂತು, ಇನ್ನು ಆರಾಮವಾಗಿರಬಹುದು’ ಎನ್ನುವ ಭಾವನೆ ಮೂಡಿಸಿರುವುದಂತೂ ಸತ್ಯ. ಲಸಿಕೆಯೊಂದು ನೀಡುವ ಸುರಕ್ಷಿತ ಭಾವನೆಗೆ ಸಾಟಿಯಿಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತನ್ನ ಆವಶ್ಯಕತೆಯನ್ನು ಪೂರೈಸಿಕೊಂಡು 17ಕೋಟಿಗೂ ಹೆಚ್ಚು ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಭಾರತ 100 ಕ್ಕೂ ಅಧಿಕ ರಾಷ್ಟ್ರಗಳಗೆ ಸಹಾಯ ಹಸ್ತ ಚಾಚಿದೆ. ಜಾಗತಿಕ ಲಸಿಕಾ ಕೊರತೆಯನ್ನು ನೀಗಿಸುವ ಮೂಲಕ ಭಾರತ ಜಗತ್ತಿನ ಅತೀ ದೊಡ್ಡ ಔಷಧಾಲಯವಾಗಿ ಹೊರಹೊಮ್ಮಿದೆ. 


ಕೊರೊನಾ ಲಸಿಕೆ ವಿತರಣೆಗೆ ನಾಲ್ಕು ಮುಖ್ಯವಾದ ಸವಾಲುಗಳಿತ್ತು. ಲಸಿಕೆ ಹಿಂಜರಿಕೆ ನಿವಾರಿಸುವುದು, ಉಚಿತ ಲಸಿಕೆ ಒದಗಿಸುವುದು, ಸೂಕ್ತ ಹಂಚಿಕೆ ಹಾಗೂ ಗ್ರಾಮೀಣ ಭಾಗಗಳಿಗೆ ತಲುಪಿಸುವುದು. ಈ ಎಲ್ಲಾ ಸವಾಲುಗಳನ್ನು ಸೂಕ್ತವಾಗಿ ಎದುರಿಸಿದ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯಕ್ರಮದಡಿಯಲ್ಲಿ, ಜನವರಿ 2023ರ ತನಕ 220 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಪ್ರಮಾಣಗಳನ್ನು ನೀಡಲಾಗಿದೆ. ಭಾರತ ಲಸಿಕಾ ಕಾರ್ಯಕ್ರಮದಲ್ಲಿ ದಿಗ್ಗಜ ಎಂಬುದಕ್ಕೆ ಇದುವೇ ಸಾಕ್ಷಿ.


34 ಲಕ್ಷ ಜೀವ ಉಳಿಸಿ 18.3 ಶತಕೋಟಿ ಡಾಲರ್ ನಷ್ಟ ತಡೆಗಟ್ಟಿದ ಕೋವಿಡ್ ಲಸಿಕೆ: ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿ ಕೈಗೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ 34 ಲಕ್ಷಕ್ಕೂ ಅಧಿಕ ಮಂದಿ ಜೀವ ಉಳಿಸಲಾಗಿದೆ ಎಂದು ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ’ಹೀಲಿಂಗ್ ದಿ ಎಕಾನಮಿ: ಎಸ್ಟಿಮೇಟಿಂಗ್ ದ ಎಕನಾಮಿಕ್ ಇಂಪ್ಯಾಕ್ಟ್ ಆನ್ ಇಂಡಿಯಾಸ್ ವ್ಯಾಕ್ಸಿನೇಷನ್ ಅಂಡ್ ರಿಲೇಟೆಡ್ ಇಶ್ಯೂಸ್’ ಎಂಬ ಶೀರ್ಷಿಕೆಯ ಕೃತಿ (Healing the Economy: Estimating the Economic Impact on India’s Vaccination and Related Issues) ಯಲ್ಲಿ ಈ ಅಂಶವನ್ನು  ತಿಳಿಸಲಾಗಿದೆ. ಲಸಿಕಾ ಅಭಿಯಾನದಲ್ಲಿ 18.3 ಶತಕೋಟಿ ಡಾಲರ್ ನಷ್ಟವನ್ನು ತಡೆಗಟ್ಟುವ ಮೂಲಕ ಧನಾತ್ಮಕ ಆರ್ಥಿಕ ಪರಿಣಾಮಕ್ಕೆ ಸಹಕಾರಿಯಾಗಿದೆ ಎಂದು ಅಂದಾಜಿಸಲಾಗಿದೆ. ಲಸಿಕಾ ಅಭಿಯಾನದ ವೆಚ್ಚವನ್ನು ಗಣನಗೆ ತೆಗೆದುಕೊಂಡ ನಂತರ ರಾಷ್ಟ್ರಕ್ಕೆ 15.42 ಶತಕೋಟಿ ಡಾಲರ್ ನಿವ್ವಳ ಲಾಭ ಆಗಿದೆ ಎಂದು ಅಂದಾಜಿಸಲಾಗಿದೆ. ಲಸಿಕೆಯು ಜೀವವನ್ನು ಉಳಿಸುವುದರೊಂದಿಗೆ ಜೀವನೋಪಾಯವನ್ನೂ ಉಳಿಸಿದೆ ಎನ್ನುವ ಅಂಶ ಮಹತ್ವಪೂರ್ಣವಾದದ್ದು.  


ರಾಷ್ಟ್ರೀಯ ಲಸಿಕೆ ದಿನ

ಮನಕುಲವನ್ನು ಹಲವಾರು ಮಾರಣಾಂತಿಕ ರೋಗಗಳಿಂದ ರಕ್ಷಿಸುವಲ್ಲಿ ಲಸಿಕೆಯ ಪಾತ್ರ ಮಹತ್ವದ್ದು. ಲಸಿಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಪ್ರತಿವರ್ಷ ಮಾರ್ಚ್ 16 ಅನ್ನು ರಾಷ್ಟ್ರೀಯ ಲಸಿಕೆ ದಿನ ಎಂದು ಆಚರಿಸಲಾಗುತ್ತದೆ. ಸಮಯೋಚಿತವಾಗಿ ಲಸಿಕೆ ಪಡೆಯುವುದರ ಮಹತ್ವ ಹಾಗೂ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ.


ದೇಶದಲ್ಲಿ ಮೊದಲ ಲಸಿಕೆ ದಿನಾಚರಣೆ ನಡೆದದ್ದು 1995ರ ಮಾರ್ಚ್ 16ರಂದು. ಅಂದು ದೇಶದಲ್ಲಿ ಪೋಲಿಯೊ ಹನಿ ಹಾಕುವ 'ಪಲ್ಸ್‌ ಪೋಲಿಯೊ' ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎರಡು ದಶಕಗಳ ಬಳಿಕ ದೇಶದಲ್ಲಿ ಕ್ರಮೇಣ ಪೋಲಿಯೊ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ, 2014ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಲಾಯಿತು.


ಸಕಾಲದಲ್ಲಿ ಲಸಿಕೆ ಹಾಕಿಸುವುದರಿಂದ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾವಿನಿಂದ ಪಾರಾಗುತ್ತಿದ್ದಾರೆ. 20-30 ಲಕ್ಷ ಮಕ್ಕಳ ಜೀವ ಜಾಗತಿಕವಾಗಿ ಪ್ರತಿವರ್ಷ ಉಳಿಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಲಸಿಕೆಗಳು ನಮ್ಮಲ್ಲಿರುವ ಅತ್ಯಂತ ಯಶಸ್ವಿ ಸಾರ್ವಜನಿಕ ಆರೋಗ್ಯ ಹಸ್ತಕ್ಷೇಪಗಳಲ್ಲಿ ಒಂದಾಗಿದೆ.


ಲಸಿಕೆ ಅಥವಾ ವ್ಯಾಕ್ಸಿನೇಷನ್‌ ಎಂದರೇನು?

ಲಸಿಕೆ ಎಂದರೇ ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದಾದ ಅಪಾಯಕಾರಿ ಅಥವಾ ಮಾರಕ ರೋಗಗಳ ಸೋಂಕುಗಳನ್ನು ತಡೆಯುವ ಸಲುವಾಗಿ ಹಾಗೂ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸಲು ನೀಡುವ ಅಥವಾ ಕೊಡುವ ಚುಚ್ಚುಮದ್ದು /ಹನಿಯನ್ನು ಲಸಿಕೆ ಎನ್ನುತ್ತಾರೆ.

ಲಸಿಕೆ ತೆಗೆದುಕೊಂಡಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ, ಸೋಂಕಿನ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆ ಸೃಷ್ಟಿಯಾಗುತ್ತದೆ. ಆಂಟಿ ಬ್ಯಾಕ್ಟೀರಿಯಾ/ ಆಂಟಿವೈರಸ್/ ಪ್ರತಿಕಾಯಗಳು, ಸಂಬಂಧಿತ ರೋಗದ ವಿರುದ್ಧ ಹೋರಾಡಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ.


ಯಾವುದೇ ಒಂದು ರೋಗಕ್ಕೆ ಪ್ರತಿರೋಧಕ (ಇಮ್ಯುನಿಟಿ) ಶಕ್ತಿಯನ್ನು ಉತ್ಪಾದಿಸುವ ಪ್ರತಿಜನಕ (ಆಂಟಿಜೆನಿಕ್‌) ವಸ್ತುವನ್ನು ನೀಡುವ ಪ್ರಕ್ರಿಯೆಗೆ  ಲಸಿಕೆಯನ್ನು ಹಾಕುವುದು (ವ್ಯಾಕ್ಸಿನೇಷನ್‌) ಎಂದು ಕರೆಯಲಾಗುತ್ತದೆ.


ಹುಟ್ಟಿದ ಮಕ್ಕಳಲ್ಲಿ ಸ್ವಲ್ಪ ರೋಗ ನಿರೋಧಕ ಶಕ್ತಿ ತಾಯಿಯ ಹಾಲಿನಿಂದ ಶಿಶುವಿಗೆ ಲಭ್ಯವಿರುತ್ತದೆ. ಆದರೆ ಇದು ಕ್ರಮೇಣ ಕಡಿಮೆಯಾಗುತ್ತದೆ. ಆಗ ರೋಗ ಉಂಟಾಗಲು ಸಾಧ್ಯ. ಆದ್ದರಿಂದ ರೋಗ ತಡೆಗಟ್ಟಲು ಲಸಿಕೆಗಳು ಅಗತ್ಯ. ರೋಗದಿಂದ ಮುಕ್ತಿ ಪಡೆಯಲು ಲಸಿಕೆಗಳು ಅಗ್ಗದ ವಿಧಾನವಾಗಿವೆ. ಜೀವಂತ ಅಥವಾ ನಿಶ್ಯಕ್ತಿಗೊಳಿಸಿದ ರೋಗಾಣುವನ್ನು ದೇಹದಲ್ಲಿ ಸೇರಿಸಿದಾಗ, ದೇಹದಲ್ಲಿ ಆ ರೋಗಾಣುವಿನ ವಿರುದ್ದ ಆಂಟಿ ಬಾಡೀಸ್ ಉತ್ಪತ್ತಿಯಾಗಿ ರೋಗಾನುವಿನೊಂದಿಗೆ ಹೋರಾಡಿ, ರೋಗ ಬಾರದಂತೆ ತಡೆಗಟ್ಟುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಜಾಗೃತಗೊಳಿಸಲು ಎರಡು ವಿಧಾನಗಳಿವೆ. ಒಂದು, ವ್ಯಕ್ತಿಗೆ ಆ ರೋಗ ಬಂದು ಗುಣಮುಖವಾಗಬೇಕು. ಇಲ್ಲವೇ ನಿಶಕ್ತಿಗೊಳಿಸಿದ ವೈರಾಣುವನ್ನು ಲಸಿಕೆ ರೂಪದಲ್ಲಿ ಕೊಟ್ಟು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಮೊದಲನೇ ವರ್ಗದ ಜನರು ರೋಗದಿಂದ ಆರ್ಥಿಕ ಮತ್ತು ದೈಹಿಕ ನಷ್ಟಗಳನ್ನು ಅನುಭವಿಸಿ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಈ ವಿಧಾನದಲ್ಲಿ ಅವರು ಸಾವನ್ನಪ್ಪಲೂ ಬಹುದು. ಎರಡನೇ ವಧಾನದಲ್ಲಿ ಲಸಿಕೆ ಪಡೆದ ಜನರು ರೋಗನಿರೋಧಕ ಶಕ್ತಿಯನ್ನು ಯಾವುದೇ ಕಷ್ಟ ನಷ್ಟಗಳಿಲ್ಲದೇ ಪಡೆದುಕೊಳ್ಳುತ್ತಾರೆ. ಲಸಿಕೆ ಹಾಕುವ ಪ್ರಕ್ರಿಯೆಯು ಸಾಮಾನ್ಯವಾಗಿ ರೋಗವನ್ನು ತಡೆಗಟ್ಟ ಬಹುದಾದ ಅತಿ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ.


ಲಸಿಕೆಯ ಮಹತ್ವ

ಲಸಿಕೆಯು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿ ಮಾಡಿ ಸಾಂಕ್ರಾಮಿಕ ವಿರುದ್ಧ ಆತನ ದೇಹ ಹೋರಾಡುವಂತೆ ಮಾಡುತ್ತದೆ. ಸಾಂಕ್ರಾಮಿಕ ರೋಗಗಳಿಂದ ಮನುಷ್ಯನನ್ನು ರಕ್ಷಿಸುವಲ್ಲಿ ಲಸಿಕೆಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಲಸಿಕೆ ಎಂದರೆ ವೈರಸ್ ಅಥವಾ ಬ್ಯಾಕ್ಟೀರಿಯಾದ ಕೊಲ್ಲಲ್ಪಟ್ಟ ಅಥವಾ ದುರ್ಬಲ ಅಂಶವಾಗಿದ್ದು, ಇದು ಯಾವುದೇ ಕಾಯಿಲೆಯನ್ನು ಉತ್ಪತ್ತಿ ಮಾಡುವುದಿಲ್ಲ ಬದಲಿಗೆ ರೋಗನಿರೋಧಕತೆಯನ್ನು ಕಾಪಾಡಿ ಮನುಷ್ಯನ ದೇಹಕ್ಕೆ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಲಸಿಕೆಗಳು ಜೀವ ಉಳಿಸುವುದು ಮಾತ್ರವಲ್ಲ, ಆರೋಗ್ಯ ಹಾಗೂ ಜೀವನ ಮಟ್ಟವನ್ನು ಸುಧಾರಿಸುತ್ತವೆ.


ಮಿಷನ್ ಇಂದ್ರಧನುಷ್

ನಿಯಮಿತ ಲಸಿಕೆಗಳಿಂದ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ರೋಗಗಳ ವಿರುದ್ಧ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಡಿಯಲ್ಲಿ 2014 ರಿಂದ ದೇಶದಲ್ಲಿ ’ಮಿಷನ್ ಇಂದ್ರಧನುಷ್’ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಈ ಮೂಲಕ 2030 ರ ವೇಳೆಗೆ ’ತಡೆಗಟ್ಟಬಹುದಾದ ಮಕ್ಕಳ ಸಾವು’ ಇಲ್ಲದಂತೆ ಮಾಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.


ಸಾಂಕ್ರಾಮಿಕದ ವಿರುದ್ಧ ಜಾಗೃತಿ ಮೂಡಿಸೋಣ 

ಭಾರತದಲ್ಲಿ ರಾಷ್ಟ್ರೀಯ ಲಸಿಕಾ ದಿನವು ಜನರ ಸುರಕ್ಷತೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರತಿರಕ್ಷಣೆಯು ನಿರ್ಣಾಯಕವಾಗಿದೆ ಎಂಬುದನ್ನು ನೆನಪಿಸುತ್ತದೆ. ಮಾರಣಾಂತಿಕ, ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಲಸಿಕೆ ಪರಿಣಾಮಕಾರಿ. ಕಾಲಕಾಲಕ್ಕೆ ಹಾಕಿಸಬೇಕಾದ ಲಸಿಕೆಗಳ ಪ್ರಾಮುಖ್ಯತೆ ಕುರಿತು ಜನರಿಗೆ ಅರಿವು ಮೂಡಿಸೋಣ. ವೈರಸ್‌ ವಿರುದ್ಧ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸುವುದು ಈಗ ಹೆಚ್ಚು ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕನನ್ನೂ ಸಾಂಕ್ರಾಮಿಕದ ವಿರುದ್ಧ ಲಸಿಕೆ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯವೂ ಹೌದು. ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವವರಲ್ಲಿ ಧೈರ್ಯ ತುಂಬಬೇಕಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top