ವಿನೂತನ ರಂಗಪ್ರಯೋಗ – ಜಾನಾಮಿ ಜಾನಕಿ

Upayuktha
0


ಅದೊಂದು ವಿನೂತನ ರಂಗಪ್ರಯೋಗ. ಏಕವ್ಯಕ್ತಿ-ಬಹುಪಾತ್ರ ಪರಿಕಲ್ಪನೆ. ಶಾಸ್ತ್ರೀಯ ನೃತ್ಯ ಮತ್ತು ನಾಟಕಗಳ ಸಮ್ಮಿಲನ. ಶೀರ್ಷಿಕೆ, ಜಾನಾಮಿ ಜಾನಕಿ. ವಾಲ್ಮೀಕಿಯ ಮೂಲ ರಾಮಾಯಣದ ಶ್ಲೋಕಗಳನ್ನೇ ಬಳಿಸಿಕೊಂಡು ಜಾನಕಿಯ ಪಾತ್ರವನ್ನು ಕಂಡುಕೊಳ್ಳುವ ಪ್ರಯತ್ನ. ಜಾನಕಿಯ ಪಾತ್ರದ ವಾಲ್ಮೀಕಿಯ ಗ್ರಹಿಕೆ, ಪ್ರದರ್ಶನ ಕಲಾವಿದೆಯ ಗ್ರಹಿಕೆ, ನಿರ್ದೇಶಕನ ಗ್ರಹಿಕೆ – ಇವುಗಳ ಆಧಾರದಲ್ಲಿ ಪ್ರೇಕ್ಷಕನಿಗೂ ತನ್ನ ಗ್ರಹಿಕೆಯ ಜಾನಕಿಯನ್ನು ಕಂಡುಕೊಳ್ಳುವ ಒಂದು ವಿಭಿನ್ನ ಪ್ರಯೋಗ. 


ಈ ರೂಪಕವನ್ನು ಪರಿಕಲ್ಪಿಸಿ ನಿರ್ದೇಶಿಸಿದವರು ಬಹುಮುಖಿ ಪ್ರತಿಭೆಯ ಕಲಾವಿದ ಕೆ.ಸುಚೇಂದ್ರ ಪ್ರಸಾದ್. ಅಭಿನಯಿಸಿದವರು ಹೆಸರಾಂತ ಭರತನಾಟ್ಯ ಕಲಾವಿದೆ ಶ್ರೀಮತಿ ವೀಣಾ ಸಿ ಶೇಷಾದ್ರಿ. ಕಲಾವಿದೆಯ ನರ್ತನ ಪ್ರತಿಭೆಯನ್ನು ಗಮನದಲ್ಲಿಟ್ಟುಕೊಂಡು, ಅವರಿಂದ ರಂಗಭೂಮಿಯ ವ್ಯಾಕರಣವನ್ನು ಸಮರ್ಥವಾಗಿ ಹೊರಗೆ ತಂದ ಶ್ರೇಯಸ್ಸು ನಿರ್ದೇಶಕರಿಗೆ ಸಲ್ಲಲೇ ಬೇಕು. ಬಹುಶಃ ನೃತ್ಯಾಭಿನಯದ ಸೂಕ್ಷ್ಮತೆ ಮೈಗೂಡಿಸಿಕೊಂಡದ್ದರಿಂದ, ಪಾತ್ರಗಳ ಭಾವಗಳನ್ನು ಸರಿಯಾಗಿ ಅಭಿವ್ಯಕ್ತಿಸಲು ವೀಣಾ ಅವರಿಗೆ ಸಾಧ್ಯವಾಗಿರಬಹುದು. ಆದರೂ ನೃತ್ಯದ stylised ಅಭಿನಯವನ್ನು ಗೌಣವಾಗಿಸಿಕೊಂಡು, ರಂಗಭೂಮಿಯ ಅಪೇಕ್ಷೆಯನ್ನು ವೀಣಾ ಬಹುಸೂಕ್ತವಾಗಿ ಅಭಿವ್ಯಕ್ತಿಸಿದರು. 


ರೂಪಕದ ಶೀರ್ಷಿಕೆ ಜಾನಾಮಿ ಜಾನಕಿಯಾದರೂ, ಆ ಪಾತ್ರದ ಸುತ್ತಲಿನ ಇತರ ಪ್ರಮುಖ ಪಾತ್ರಗಳನ್ನೂ ಕಾಣಲು ಪ್ರೇಕ್ಷಕನಿಗೆ ಸಾಧ್ಯವಾಯಿತು ಎನ್ನುವುದು ಈ ಪ್ರಯೋಗದ ಯಶಸ್ಸು. 


ಸೀತಾಪಹರಣದ ಸಂದರ್ಭದಲ್ಲಿ, ಜಾನಕಿಯ ಪಾತ್ರದ ಪ್ರತಿಕ್ರಿಯೆಯಲ್ಲಿ ರಾವಣನ ಆರ್ಭಟವನ್ನು ಕಾಣಲು ಸಾಧ್ಯವಾಯಿತು. ಶೂರ್ಪನಖಿಯ ಪಾತ್ರವೂ ಹಾಗೇ ಅನುಭವಕ್ಕೆ ದಕ್ಕಿತು. ಇಲ್ಲಿ ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ್ದು, ಹಿನ್ನೆಲೆ ಸಂಗೀತ (ವಾದ್ಯ, ಧ್ವನಿ – ಮುಂತಾಗಿ). ಆರ್ಭಟ, ನರಳಾಟ, ದುಃಖ, ರೋಷ – ಈ ಎಲ್ಲ ಭಾವಗಳೂ ಧ್ವನಿಮುದ್ರಣದಲ್ಲಿ ಸೂಕ್ತವಾಗಿ ಧ್ವನಿಸಿ, ರೂಪಕದ ವಿಸ್ತಾರವನ್ನು ಹೆಚ್ಚಿಸಿದವು. 


ನೋಡಲು ಸರಳವೆನಿಸುತ್ತಿದ್ದ ರಂಗಸಜ್ಜಿಕೆ, ನಟಿಯ ಚಲನೆಯ ಭಾಗವಾಗಿ ಗಮನಸೆಳೆಯಿತು. ಕಲಾವಿದೆಯ ಆಹಾರ್ಯವೂ ಜಾನಕಿಯ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಸಹಕಾರಿಯಾಯಿತು. 


ವೀಣಾ ಶೇಷಾದ್ರಿಯವರದು ಸಮತೋಲನದ ಅಭಿನಯ. ಭಾವಾಭಿವ್ಯಕ್ತಿ ಈ ರೂಪಕದ ಮೂಲ ಸೆಲೆ ಎನ್ನುವಂತಿತ್ತು ಅವರ ಅಭಿನಯ. ನಿಗಧಿತ ರಂಗಸಜ್ಜಿಕೆಯ ವ್ಯಾಪ್ತಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆಯನ್ನು ವೀಣಾ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ತೆರೆಯ ಮೇಲೆ ಮೂಡುತ್ತಿದ್ದ ಸಂದರ್ಭಗಳಿಗೆ ಪೂರಕವಾದ ರೇಖಾಚಿತ್ತಗಳು ರೂಪಕದ ಆಶಯಕ್ಕೆ ಪೂರಕವಾಗಿದ್ದವು. ಬೆಳಕು ಸಂಯೋಜನೆಯಂತೂ (ಮಹದೇವಸ್ವಾಮಿ) ಬಹಳ ಉತ್ಕೃಷ್ಟಮಟ್ಟದಲ್ಲಿತ್ತು. 


ಒಬ್ಬ ನಿರ್ದೇಶಕನಾಗಿ ಸುಚೇಂದ್ರ ಪ್ರಸಾದ್ ಅವರ ಬದ್ಧತೆಯನ್ನು ಇಲ್ಲಿ ನಾವು ಗಮನಿಸಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅಪಾರ ಶ್ರದ್ಧೆ ಗೌರವ ಇರಿಸಿಕೊಂಡಿರುವ ಸುಚೇಂದ್ರರು, ಅಂಥದ್ದೇ ವ್ಯಕ್ತಿತ್ವವದ ನರ್ತಕಿ ವೀಣಾ ಅವರನ್ನು ರಂಗಕಲಾವಿದೆಯಾಗಿ ರೂಪಿಸಿರುವುದು ಬಹಳ ಶ್ಲಾಘನೀಯವಾದುದು. ಕಲಾಪ್ರಕಾರಗಳ ಸಮ್ಮಿಲನವಾದಾಗ, ಅದು ಬದ್ದತೆಯಿರುವ ಕಲಾವಿದರಿಂದ ಆದಾಗ, ಇಂತಹ ಅಪರೂಪದ ರೂಪಕಗಳು ರಸಿಕರಿಗೆ ದೊರೆಯುತ್ತವೆ ಎಂಬುದು  ಮತ್ತೊಮ್ಮೆ ಸಾಬೀತಾಯಿತು. 

-ಸುಗ್ಗನಹಳ್ಳಿ ಷಡಕ್ಷರಿ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top