|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಂಗ ಸಂಘಟಕ ಪ್ರಕಾಶ್ ನೊರೋನ್ಹರವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ- 2023

ರಂಗ ಸಂಘಟಕ ಪ್ರಕಾಶ್ ನೊರೋನ್ಹರವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ- 2023




ಪಾಂಬೂರು ಎಂದಾಕ್ಷಣ ನೆನಪಿಗೆ ಬರುವುದು ಪರಿಚಯ ಸಂಸ್ಥೆ. ಪರಿಚಯ ಎಂದಾಕ್ಷಣ ನೆನಪಿಗೆ ಬರುವ ಮೊದಲ ಮುಖ ಪ್ರಕಾಶ್ ನೊರೋನ್ಹ. ಈ ಮೂರನ್ನೂ ಒಂದಾಗಿಸಿದ ಪ್ರಕ್ರಿಯೆ-ರಂಗಭೂಮಿ. 


ಉಡುಪಿ ಜಿಲ್ಲೆಯ ಶಿರ್ವ ಪಡುಬೆಳ್ಳೆಯ ನಡುವೆ ಇರುವ ಪ್ರಕೃತಿಯ ಮಡಿಲು ಪಾಂಬೂರು. ಅದು ಇದೀಗ ರಂಗಕಲೆಗಳ ತವರೂರು. ಪಾಂಬೂರು ಎಂಬ ಹಳ್ಳಿಯ ಜನರಿಗೆ- ಕಲಾ ಪ್ರಿಯರಿಗೆ ರಂಗ ಕಲೆಯನ್ನು ಪರಿಚಯಿಸಲು, ರಂಗಾಸಕ್ತಿಯನ್ನು ತುಂಬಲು ಶ್ರಮಿಸಿದ ಒಬ್ಬ ಕನಸುಗಾರ. ಒಳ್ಳೆಯ ಸಂಘಟಕ ಪ್ರಕಾಶ್ ನೊರೋನ್ಹಾ. 


ಮೇರಿ ನೊರೋನ್ಹಾ ಹಾಗೂ ದಿವಂಗತ ಉರ್ಬನ್ ನೊರೋನ್ಹಾ ದಂಪತಿಗಳ ಮೂರು ಮಕ್ಕಳಲ್ಲಿ ಜೇಷ್ಟ ಕುಮಾರ. ಪ್ರಕಾಶ್ ನೊರೋನ್ಹಾ. ಇವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಇಲ್ಲೇ ಈ ಪುಟ್ಟ ಹಳ್ಳಿ ಪಾಂಬೂರಿನಲ್ಲಿಯೇ. 


ಶಿಕ್ಷಣವನ್ನು ಪಡೆದದ್ದು ಬೆಳ್ಳೆಯ ಸೈಂಟ್ ಲೊರೆನ್ಸ್ ಹೈಸ್ಕೂಲ್ ಹಾಗೂ ಶಿರ್ವದ ಸೈಂಟ್ ಮೇರೀಸ್ ಜ್ಯೂನಿಯರ್ ಕಾಲೇಜಲ್ಲಿ. ಆ ನಂತರ ಯಾರ ಕೈಕೆಳಗೂ ಕೆಲಸ ಮಾಡಲು ಒಲ್ಲದ ಮನ ಸ್ವಂತ ಉದ್ಯೋಗ ಒಂದಕ್ಕೆ ಮೊರೆ ಹೊಕ್ಕಿತು. ಹೀಗೆ ಜೀವನಕ್ಕೆ ಸುಖದ ದಾರಿ ತೋರಿಸಿ ಕೊಟ್ಟದ್ದು ಮತ್ತು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಿದ್ದು ತಂದೆ ಮಗಳ ಹೆಸರಿನ ಶ್ರುತಿ ಪ್ರಕಾಶನ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ. 30 ವರ್ಷದ ದೀರ್ಘ ಸುಂದರ ಇತಿಹಾಸದ ನಂತರ 2020ರಲ್ಲಿ ಕೊವಿಡ್ ನ ಕಪ್ಪು ಛಾಯೆ ಈ ಸಂಸ್ಥೆಯನ್ನು ಆವರಿಸಿ ಮುಚ್ಚಿ ಬಿಟ್ಟಿತು. ಇದರ ಜೊತೆ ಕಳೆದ 22 ವರ್ಷದಿಂದ ನಡೆದುಕೊಂಡು ಬರುತ್ತಿದ್ದ ವಿಮೆ ಮತ್ತು ಆರ್ಥಿಕ ಸಲಹೆ ನೀಡುವ ಕಾಯಕ ಕೈ ಹಿಡಿದು ಪ್ರಸ್ತುತ ಶಿರ್ವ ಪಟ್ಟಣದಲ್ಲಿ "ಪ್ರಕಾಶ್ ಕನ್ಸಲ್ಟೆನ್ಸಿ ಸರ್ವಿಸಸ್ ಎಂಬ ನಾಮಫಲಕದ ಮೂಲಕ ಜೀವನ ಚಕ್ರಕ್ಕೆ ಚಾಲನೆ ನೀಡಿದೆ.


ಶಾಲಾ ದಿನಗಳಿಂದಲೂ ನಾಟಕ, ಸಂಗೀತ ಇತ್ಯಾದಿ ರಂಗ ಕಲೆಗಳ ಮೇಲೆ ನೊರೋನ್ನಾ ರವರಿಗೆ ಅತ್ಯಂತ ವ್ಯಾಮೋಹ. ಯಾವುದೇ ನಾಟಕ' ಆಟ ಇರಲಿ ರಂಗದ ಮುಂಬಾಗದಲ್ಲಿ ಅಂದರೆ ಮುಂದಿನ ಸಾಲಿನಲ್ಲಿ ಬಂದು ಕುಳಿತು ಗೆಳೆಯರೊಡನೆ ಹರಟೆ ಹೊಡೆಯುತ್ತ ನಗುತ್ತ ಅದನ್ನು ನೋಡುವುದೇ ಒಂದು ಚೆಂದ. ಆದರೆ ತನಗೂ ಈ ಎಲ್ಲ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂಬ ಬಯಕೆ ಇದ್ದರೂ ಆಗ ಅದು ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಇವರ ತುಡಿತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶ್ರೀಧರಮೂರ್ತಿ ಎಂಬ ಗುರುಗಳೊಬ್ಬರು ಶಿಷ್ಯನನ್ನು ಎಲ್ಲ ರಂಗ ಚಟುವಟಿಕೆಗಳಲ್ಲಿ ಬಾಗಿಯಾಗುವಲ್ಲಿ ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದ್ದರು. ಅಂದು ಮೊಳೆತ ಆ ಬಯಕೆಗಳು ಹವ್ಯಾಸಗಳು ಇಂದು ವೈವಿದ್ಯತೆಯ ರೂಪ ಪಡೆದು ಸಾಕಾರಗೊಂಡಿದೆ. 


ಪ್ರಕಾಶ್ ಒಬ್ಬ ಒಳ್ಳೆಯ ಹಾಡುಗಾರ ಸಂಗೀತ ಪ್ರಿಯ. ನಾಟಕಗಳಲ್ಲಿ ಅಭಿನಯಕ್ಕಿಂತಲೂ ಹೆಚ್ಚು ಸಂಗೀತ, ರಾಗ ಸಂಯೋಜನೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದವರು. ಹಾಗಂತ ಹಲವು ನಾಟಕಗಳಲ್ಲಿಯೂ ನಟನಾಗಿ ಸೈ ಎನಿಸಿಕೊಂಡಿದ್ದಾರೆ.

ಪ್ರಕಾಶ್ ಒಬ್ಬ ಒಳ್ಳೆಯ ಬರಹಗಾರರೂ ಹೌದು. ಕೆಲವೊಂದು ಕೊಂಕಣಿ ಪತ್ರಿಕೆಗಳಿಗೆ ಅಂಕಣಕಾರರಾಗಿ, ಹಲವಾರು ಲೇಖನಗಳನ್ನು ಬರೆದದ್ದಿದೆ. ಒಳ್ಳೆಯ ವಿಮರ್ಶಕರೂ ಹೌದು. 


ತನ್ನೂರು ಪಾಂಬೂರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊರತೆ ಅನುಭವಿಸುತ್ತಿರುವುದನ್ನು ಮನಗಂಡು ಏನಾದರೂ ಹೊಸತನ್ನು ತಮ್ಮೂರಿಗೆ ಕೂಡ ಬೇಕೆಂಬ ಆಶಯ ದಿನೇ ದಿನೇ ವೃದ್ದಿಸಿ ಕೊನೆಗೆ ಸಮಾನ ಮನಸ್ಕ ತನ್ನ ಬಾಲ್ಯದ ಗೆಳೆಯರನ್ನು ಹಾಗೂ ಹಿತೈಷಿಗಳನ್ನು ಒಗ್ಗೂಡಿಸಿ ಎಲ್ಲರನ್ನೂ ಎಲ್ಲವನ್ನೂ ಪರಿಚಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಸಾತ್ವಿಕ ಸಾಂಸ್ಕೃತಿಕ ಸಂಘಟನೆಯೊಂದನ್ನು ಕಟ್ಟಿದರು. ಅದೇ ಇಂದು ಒಳ್ಳೆಯ ಹೆಸರು ಹಾಗೂ ಕಲಾಕ್ಷೇತ್ರದಲ್ಲಿ ಹಸಿರು ಮೂಡಿಸಿದ ಪರಿಚಯ ಪ್ರತಿಷ್ಟಾನ (ರಿ) ಪಾಂಬೂರು ಎಂಬ ಕಲಾ ಸಂಸ್ಥೆ. ಹೀಗೆ ತನ್ನ ಬದುಕಿನ ಸುಂದರ ಕಲ್ಪನೆಗಳನ್ನು ಈ ಸಂಸ್ಥೆಯ ಮೂಲಕ ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು ಪ್ರಕಾಶ್. ಯಾವುದೇ ಜಾತಿ, ಧರ್ಮಗಳ ಭೇದ ಇಲ್ಲದೆ, ಭಾಷೆ, ರಾಜಕೀಯಗಳಿಗೆ ಎಡೆಕೊಡದೆ ಅನಗತ್ಯ ಕಟ್ಟುಪಾಡುಗಳನ್ನು ಬದಿಗಿರಿಸಿ ಸದೃಧವಾಗಿ ನಿಂತು ಜ್ಞಾನಾಭಿವೃದ್ಧಿ ಮೌಲ್ಯಾಧಾರಿತ ಮನರಂಜನೆಗಳಿಗೆ ಒತ್ತುಕೊಟ್ಟು ವಿವಿಧ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಆದರ್ಶ ಸಂಸ್ಥೆಯಾಗಿ ಗುರುತಿಸಿಕೊಂಡಿತು.


ಅಲ್ಲದೆ ಸುತ್ತಮುತ್ತಲಿನ ಜನರಲ್ಲಿ ರಂಗಾಸಕ್ತಿ ಮೂಡಿಸಿ ಎಲ್ಲ ಚಟುವಟಿಕೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿ ಸಂವಾದ ಚರ್ಚೆಗಳ ಮೂಲಕ ಮೌಲ್ಯಯುತ ವಿಷಯಗಳ ಮಂಥನ ಮಾಡುವ ಒಂದೊಳ್ಳೆಯ ಪ್ರೇಕ್ಷಕ ವರ್ಗವನ್ನು ಹುಟ್ಟು ಹಾಕುವಲ್ಲಿ ಪ್ರಕಾಶ್ ತನ್ನ ಗೆಳೆಯರ ಬಳಗದೊಂದಿಗೆ ಸಫಲರಾದರು. ಅದಕ್ಕೆ ಹಲವು ವರ್ಷಗಳಿಂದ ನಡೆದು ಬರುತ್ತಿರುವ ನಾಟಕ ಸಪ್ತಾಹ ಸಾಕ್ಷಿ. ಈ ವರೆಗೆ 60 ವಿವಿಧ ಭಾಷೆಯ ನಾಟಕಗಳು, ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಕಲಾವಿದರು ಮತ್ತಿತರ ರಂಗ ಕರ್ಮಿಗಳೊಡನೆ ಮುಖಾಮುಖಿ, ಶ್ರೇಷ್ಟ ಸಂಗೀತಗಾರರ ಸ್ವರ ಸಂಜೆ ಇತ್ಯಾದಿ ಕಾರ್ಯಕ್ರಮಗಳನ್ನು ಪರಿಚಯ ವೇದಿಕೆ ಪ್ರಸ್ತುತ ಪಡಿಸುತ್ತಿದೆ. ಈ ಎಲ್ಲ ಕಾರ್ಯ ಸಾಧನೆಗಳ ರುವಾರಿ ಪ್ರಕಾಶ್ ರ ಕನಸುಗಳು ಸಾಕ್ಷಾತ್ಕಾರಗೊಳ್ಳುವಲ್ಲಿ ಅವರ ಗೆಳೆಯರ ಜೊತೆ ಮನೆಯವರ ಪಾಲೂ ಇದೆ.


ಪಾಂಬೂರಿನ ಸುಂದರ ಪ್ರಕೃತಿಯ ನಡುವೆ ಒಂದು ಸುಂದರ ಸುಸಜ್ಜಿತ ಬಯಲು ರಂಗಮಂದಿರವನ್ನು ಕಟ್ಟುವ ಪ್ರಕಾಶ್ ರ ಬಯಕೆಗೆ ಅವರ ತಾಯಿ ಮೇರಿ ನೊರೋನ್ಹಾರವರು ಸ್ಪಂದಿಸಿ ಆ ದಿವ್ಯ ಸಂಕಲ್ಪಕ್ಕೆ ಅಗತ್ಯವಿರುವ ಸ್ಥಳವನ್ನು ಉಚಿತವಾಗಿ ಒದಗಿಸಿದ್ದು ರಂಗ ಕಲೆಯ ಬಗೆಗಿನ ಇವರ ಈ ನಿಷ್ಕಲ್ಮಶ ಪ್ರೇಮ ಎಲ್ಲರ ಮನ ಗೆದ್ದಿದೆ. ಈ ವಿಶೇಷ ಸುಂದರ ಬಯಲು ಮಂದಿರದ ವಿನ್ಯಾಸ, ವಿಧಾನ, ಇತ್ಯಾದಿ ವಿಶೇಷ ಕಾಮಗಾರಿಯ ಜವಾಬ್ದಾರಿಯನ್ನು ಅಂತರ್ ರಾಷ್ಟ್ರೀಯ ಖ್ಯಾತಿಯ ಚಿತ್ರಕಾರ ವಿಲ್ಸನ್ ಕಯ್ಯಾರ ರವರಿಗೆ ವಹಿಸಿಕೊಟ್ಟಿದ್ದು ಈ ಅಂಗಣ ಬಹಳ ಸುಂದರವಾಗಿ ರೂಪುಗೊಂಡಿದ್ದು ರಂಗಾಸಕ್ತರಿಗೆ  ಪ್ರೇಕ್ಷಣೀಯ ಸ್ಥಳದಂತೆ ಭಾಸವಾಗುತ್ತಿದೆ. ಹಾಗಾಗಿ ಪ್ರಕೃತಿ ಸೊಬಗಿನ ನಡುವೆ ಇರುವ ಈ ಸುಂದರ ಕಲ್ಪನೆಯ ಸಾಕಾರ ಮೂರ್ತಿ ಪ್ರಕಾಶ್ ನೊರೋನ್ಹಾರವರಿಗೆ ಜೈ ಎನ್ನಲೇಬೇಕು. 


ಇದೆಲ್ಲ ಸಾಧ್ಯವಾಗಲು ಜೊತೆಗೆ ಇವರೆಲ್ಲ ಕನಸುಗಳಿಗೆ ಸದಾ ಪುಷ್ಟಿ ನೀಡುತ್ತ ಕೈಗೆ ಕೈಗೂಡಿಸಿ ಸವ೯ ವಿಧದಲ್ಲಿ ಸಹಕರಿಸುತ್ತಿರುವವರು ಇವರ ಪತ್ನಿ ಜೆನಿತ್ ಆಳ್ವಾ ಹಾಗೂ ಉನ್ನತ ವಿದ್ಯಾಭ್ಯಾಸದ ಹಳಿಯಲ್ಲಿ ಸಾಗುತ್ತಿರುವ ಇಬ್ಬರು ಮಕ್ಕಳು ಪ್ರಿಯಾಂಕಾ ಶ್ರುತಿ ಹಾಗೂ ಪ್ರೀಮಲ್ ಕೀರ್ತಿ ನೊರೋನ್ಹಾ ಪ್ರಕಾಶ್ ರ ಜೀವನ ಶ್ರುತಿಗೆ ದನಿಗೂಡಿಸಿ ಕೀರ್ತಿ ಪಥದತ್ತ ಸಾಗುವಲ್ಲಿ ಕೈ ಜೋಡಿಸುತ್ತಿದ್ದಾರೆ.


ಹೀಗೆ ಒಬ್ಬ ಸಂಘಟಕನಾಗಿ ಒಂದು ಹಳ್ಳಿಯನ್ನು ರಂಗಾಸಕ್ತಿಯ ಕೇಂದ್ರ ವನ್ನಾಗಿ ಸಿದ ಪ್ರಕಾಶ್ ನೊರೋನ್ಹಾರವರಿಗೆ ಸಂಸ್ಕೃತಿ ವಿಶ್ವಪ್ರತಿಷ್ಠಾನ (ರಿ). ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ- 2023ನ್ನು ಕೊಟ್ಟು ಗೌರವಿಸುತ್ತಿದ್ದೇವೆ.

-ರಾಜೇಶ್ ಭಟ್ ಪಣಿಯಾಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم