ನಾವೆಲ್ಲರೂ ಕ್ಯಾನ್ಸರ್ ಅಂದರೆ ಸಾಕು ಜೀವನವೇ ಮುಗಿದು ಹೋಯಿತು, ಇನ್ನು ಸಾವೇ ಗತಿ ಅಂದುಕೊಳ್ಳುತ್ತೇವೆ, ಆದರೆ ಮೂಡುಬಿದರೆಯ ವ್ಯಕ್ತಿಯೋರ್ವರು ಕೃಷಿ ಮಾಡುತ್ತಾ ಕ್ಯಾನ್ಸರನ್ನು ಗೆದ್ದು ನಿಂತಿದ್ದಾರೆ. ಕ್ಯಾನ್ಸರ್ ನಿಂದ ಹೆದರಿ ಕಂಗಾಲದ ಜನರಿಗೆ ಸ್ಪೂರ್ತಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ, ಪೊಚ್ಚೆಮೊಗರು ಗ್ರಾಮದ ನಿವಾಸಿಯಾದ, ಥಾಮಸ್ ಗ್ರೆಗೊರಿ ರೆಬೆಲ್ಲೊ, ಹುಟ್ಟಿನಿಂದ ಕೃಷಿಕರಲ್ಲ. ತಮ್ಮ ಪತ್ನಿ ಮಕ್ಕಳೊಂದಿಗೆ ಸಂತೋಷದಿಂದ ದಿನ ಕಳೆಯಬೇಕು ಎಂದು, ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲೇ ಸೆಟಲ್ ಆಗುವ ಉದ್ದೇಶವನ್ನು ಹೊಂದಿದ್ದರು.
ಆದರೆ ವಿಧಿಯ ಆಟವೇ ಬೇರೆ. ಕ್ಯಾನ್ಸರ್ ಇವರನ್ನು ಆಕ್ರಮಿಸಿಕೊಂಡಿತು. ಸತ್ತರೆ ಜನ್ಮ ಭೂಮಿಯಲ್ಲೇ ಸಾಯುತ್ತೇನೆ ಎಂದು ಊರಿಗೆ ಮರಳಿದ ಇವರು, ಒಂಟಿತನವನ್ನು ದೂರ ಮಾಡಲು ಕೃಷಿಯತ್ತ ತಮ್ಮನ್ನು ತಾವು ಪ್ರೇರೇಪಿಸಿಕೊಂಡರು. ಕತ್ತರಿಸಲ್ಪಟ್ಟ ಗಂಟಲ ಭಾಗ, ದೇಹದ ಒಳಗೆ ಹರಡುತ್ತಿರುವ ಕ್ಯಾನ್ಸರ್‌ನಿಂದ ,ಇವರಲ್ಲಿರುವ ಆತ್ಮಸ್ಥೈರ್ಯವನ್ನು ಕಿಂಚಿತ್ತು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಸುಮಾರು ಒಂದುವರೆ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲು ಪ್ರಾರಂಭಿಸಿದ ಇವರಲ್ಲಿ ಕ್ರಮೇಣವಾಗಿ ಅಚ್ಚರಿಯ ಬದಲಾವಣೆಗಳು ಕಂಡು ಬಂದವು. ಕ್ಯಾನ್ಸರ್ ಒಂದಿಗೆ ಸಕ್ಕರೆ ಕಾಯಿಲೆಯನ್ನು ಹೊಂದಿದ್ದ ಇವರಿಗೆ ಕೃಷಿ ಮಾಡುತ್ತ ಸಕ್ಕರೆ ಕಾಯಿಲೆಯು ಮಾಯವಾದದ್ದು ವಿಚಿತ್ರವೆನ್ನಬಹುದು. ನೀರಿಲ್ಲದಿದ್ದರೂ ಕೃಷಿಗಾಗಿ ಬೇರೆ ಮೂಲದಿಂದ ನೀರನ್ನು ತಂದು ಅದನ್ನು ಸಂಗ್ರಹಿಸಿ ತಮ್ಮ ತೋಟಕ್ಕಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮೀನನ್ನು ಪೋಷಿಸುತ್ತಾರೆ.
ಕೃಷಿ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ 12 ವರ್ಷ ಕಳೆದು ಹೋಗಿವೆ. ಇಂದಿಗೂ ಅವರ ಕೃಷಿ ಆಸಕ್ತಿ ಕಡಿಮೆಯಾಗಿಲ್ಲ, ಇವರ ಒಂದುವರೆ ಏಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ಗಿಡ ಮುಂತಾದವುಗಳೊಂದಿಗೆ ವಿವಿಧ ತರಕಾರಿಗಳು ಹಾಗೂ ಸುಮಾರು 32 ಬಗೆಯ ಹಣ್ಣಿನ ಗಿಡಗಳೂ ಇವೆ. ಪ್ರಾಣಿಗಳೆಂದರೆ ಪಂಚಪ್ರಾಣ ಎನ್ನುವ ಇವರು ಮನೆಯಲ್ಲಿ ದನ-ಕರುಗಳನ್ನು, ನಾಯಿಯನ್ನು ಸಾಕುತ್ತಿದ್ದಾರೆ. ಅವುಗಳೊಂದಿಗೆ ಮಾತನಾಡುತ್ತಾ ತಮ್ಮ ಸಮಯವನ್ನು ಕಳೆಯುತ್ತಾರೆ.
ಕ್ಯಾನ್ಸರ್ ಎಂದರೆ ಹೆದರುವ ಅಗತ್ಯವಿಲ್ಲ ತಮಗೆ ಯಾವುದು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅದರಲ್ಲಿ ತಮ್ಮನ ತೊಡಗಿಸಿಕೊಳ್ಳಿ. ಆದರೆ ಕೃಷಿಯು ಉತ್ತಮ ಆಯ್ಕೆ ಎನ್ನುತ್ತಾರೆ ಇವರು.
ಸ್ವೀಡಲ್ ಬಳಕುಂಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ