ಕಾರ್ಮಿಕರೊಂದಿಗೆ ಶಾಸಕರ ಸಂಧಾನ: ಒಳಚರಂಡಿ ವ್ಯವಸ್ಥೆ ಪುನರ್ ಆರಂಭ

Upayuktha
0

ಮಂಗಳೂರು: ನಗರದಲ್ಲಿ ಒಳಚರಂಡಿ ನಿರ್ವಹಣೆ ಕಾರ್ಮಿಕರು ಧರಣಿ ನಿರತ ಅಳಕೆ ಪ್ರದೇಶಕ್ಕೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಶುಕ್ರವಾರ ಭೇಟಿ ನೀಡಿ, ಕಾರ್ಮಿಕರ ಜತೆ ಸಂಧಾನ ಮಾತುಕತೆ ನಡೆಸಿದರು. ಬಳಿಕ ಶಾಸಕರು ನೀಡಿದ ಭರವಸೆ ಹಿನ್ನಲೆಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಪುನರ್ ಆರಂಭಿಸಲು ಕಾರ್ಮಿಕರು ನಿರ್ಧರಿಸಿದರು. ಇದರಿಂದ ನಗರದಲ್ಲಿ ಕಳೆದ ಕೆಲವು ದಿನಗಳಿಂದ  ಬಿಗಡಾಯಿಸಿದ ಒಳಚರಂಡಿ ನಿರ್ವಹಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.


ಮಾ.13ರಿಂದ ಆರಂಭವಾದ ಹೊರಗುತ್ತಿಗೆ ನೌಕರರ ನೇರ ನೇಮಕಾತಿ/ ನೇರ ಪಾವತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಧರಣಿ ಆರಂಭವಾಗಿದ್ದು, ರಾಜ್ಯದ ಪ್ರಮುಖ ನಗರ ಸೇರಿದಂತೆ ಮಂಗಳೂರು ಭಾಗದಲ್ಲೂ ಒಳಚರಂಡಿ ನಿರ್ವಹಣೆಯ ಕಾರ್ಮಿಕರು ಕಳೆದ 5 ದಿನಗಳಿಂದ ಪ್ರತಿಭಟನೆ ನಿರತರಾಗಿದ್ದರು. ಇದರಿಂದ ಮಂಗಳೂರು ನಗರದಲ್ಲಿ ಒಳಚರಂಡಿ ಸಮಸ್ಯೆ ಶುಕ್ರವಾರದ ವೇಳೆಗೆ ಬಿಗಡಾಯಿಸಿತ್ತು. ಈ ಹಿನ್ನಲೆಯಲ್ಲಿ  ಶಾಸಕ ವೇದವ್ಯಾಸ್ ಕಾಮತ್ ಅವರು ಮೇಯರ್, ಕಮಿಷನರ್ ಜತೆಗೂಡಿ ಕಾರ್ಮಿಕರೊಂದಿಗೆ ಸಭೆ ನಡೆಸಿದರು.


ಸಭೆಯ ಬಳಿಕ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯಾದ್ಯಂತ ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಕಾರ್ಮಿಕರು ನ್ಯಾಯಯುತವಾಗಿಯೇ ಹೋರಾಟ ಮಾಡುತ್ತಿದ್ದಾರೆ. ಅರ್ಹವಾಗಿಯೇ ಅವರಿಗೆ ಸವಲತ್ತುಗಳು ಸಿಗಬೇಕಾಗಿದೆ. ಆದರೆ ಇದರಿಂದ ಮಂಗಳೂರು ಜನರು ಭಾರೀ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕಾರ್ಮಿಕರಿಗೆ ಮನವರಿಕೆ ಮಾಡಲಾಗಿದೆ. ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಭರವಸೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಕೂಡಲೇ ಕೊನೆಗೊಳಿಸಿ ಒಳಚರಂಡಿ ವ್ಯವಸ್ಥೆಯನ್ನು ಆರಂಭಿಸುವುದಾಗಿ ಕಾರ್ಮಿಕರು ಭರವಸೆ ನೀಡಿದ್ದಾರೆ ಎಂದರು.


ಮಂಗಳೂರು ನಗರ ಆಯುಕ್ತರಾದ ಚನ್ನಬಸಪ್ಪ ಮಾತನಾಡಿ, ಒಳಚರಂಡಿ ಕಾರ್ಮಿಕರ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ಇದರಿಂದ ಸಾರ್ವಜನಿಕರ ಮೂಲ ಸೌಕರ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಹಕಾರ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.


ಸಭೆಯಲ್ಲಿ  ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕೀಲಾ ಕಾವ, ಮಾಜಿ ಮೇಯರ್ ದಿವಾಕರ್, ಕಾರ್ಪೊರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಜಯಶ್ರೀ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.


ಕಾರ್ಮಿಕರಿಂದ ಸೂಕ್ತ ಸ್ಪಂದನೆ: ಸಭೆಯ ಬಳಿಕ ಧರಣಿ ಕುಳಿತ ಕಾರ್ಮಿಕರು ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಅವರು ನಮ್ಮ ಸಮಸ್ಯೆಗಳನ್ನು ಆಲಿಸಿ, ಪ್ರಾಮಾಣಿಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಪ್ರಮುಖವಾಗಿ ಮೂರು ಆಶ್ವಾಸನೆಗಳನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಒಳಚರಂಡಿ ನಿರ್ವಹಣಾ ಕಾಮಗಾರಿಯನ್ನು ಆರಂಭಿಸಲು ನಿರ್ಧರಿಸಿದ್ದೇವೆ. ರಾಜ್ಯಮಟ್ಟದಲ್ಲಿ ನಡೆಯುವ ಹೋರಾಟಕ್ಕೆ ನ್ಯಾಯ ಸಿಗುವ ತನಕ ನಮ್ಮ ಬೆಂಬಲ ಮುಂದುವರಿಯಲಿದೆ ಎಂದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top