ಕಾಲೇಜು ಲೈಫ್ ಈಸ್ ಗೋಲ್ಡನ್ ಲೈಫ್ ಎಂಬುದು ಒಂದು ಜನಪ್ರಿಯ ಲೋಕೋಕ್ತಿ : ವಿದ್ಯಾರ್ಥಿ ಜೀವನವೆಂಬುದು ಅಷ್ಟೊಂದು ಆಕರ್ಷಣೀಯವೇ? ನನ್ನ ನೆಲೆಯಲ್ಲಿ ಹೇಳುವುದಾದರೆ ಅಲ್ಲ ಎಂಬುವುದೇ ಇದಕ್ಕೆ ನನ್ನ ಪ್ರತಿಕ್ರಿಯೆ ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಕಾಲೇಜಿಗೆ ಹೋದ ಮೇಲೆ ಮಜಾ ಉಡಾಯಿಸುವುದು. ಆಮೇಲೆ ಮಜಾನೇ ಮಜಾ ...... ಇಂಥ ಮಾತುಗಳು ಕಿವಿಗೆ ಬೀಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು.ಇನ್ನು ಮಜಾ ಎಂಬುದರ ಸರಿಯಾದ ಅರ್ಥ ಏನು -ಎತ್ತ ಎಂಬುದು ಪ್ರತ್ಯೇಕ ವಿಚಾರ. ಆದರೆ ಒಮ್ಮೆ ಕಾಲೇಜು ಮೆಟ್ಟಿಲು ಹತ್ತಿದೇನು, ಬುದ್ದನಿಗೆ ಬೋಧಿವೃಕ್ಷದಡಿಗಾದಂತೆ ಜ್ಞಾನೋದಯವಾಯಿತು! ಕಾಲೇಜು ಲೈಫಿಗಿಂತ ಹೈಸ್ಕೂಲ್ ಲೈಫೇ ಎಷ್ಟೋ ವಾಸಿ ಎನ್ನುವ ಪರಮ ಸತ್ಯ ಹೊಳೆದೇ ಬಿಟ್ಟಿತು! ಯಾಕೆನ್ನುವಿರಾ? ಶಾಲೆಯಲ್ಲಿ ಇರಬೇಕಾದರೆ ರಜೆ ಹಾಕುವುದು ಉಸಿರಾಡಿದಷ್ಟೇ ಸಲೀಸು ಇನ್ನೂ ಶಾಲೆಯ ಒಳಗಿನ ಹೊರಗಿನ ಸಂಭ್ರಮಗಳಿಗೆ ಸಾಕ್ಷಿಯಾಗುವುದು ಪ್ರವಾಸ ಹೋಗುವುದು ಇತ್ಯಾದಿ ಚಟುವಟಿಕೆಗಳಿಗೆ ಶಾಲಾ ದಿನಗಳಲ್ಲಿ ಹೇರಳ ಅವಕಾಶವಿರುತ್ತಿತ್ತು. ಎಲ್ಲೋ ಒಂದು ಕಡೆ ಹುಡುಗಾಟ ತುಸು ಮೀರಿದರೂ ಎಷ್ಟಾದರೂ ಮಕ್ಕಳಲ್ಲವೇ ಎಂಬ ಪ್ರೀತಿ ತುಂಬಿದ ಪ್ರೀತಿ ಬೇರೆ ! ಅದೇ ಕಾಲೇಜಿಗೆ ಬಂದ ಮೇಲೆ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ನಮ್ಮ ಉಪಸ್ಥಿತಿ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಸಂಬಂಧಿಕರ ಮನೆಗಳ ದರ್ಶನ ಅಪರೂಪವಾಗಿದೆ. ಕಾಲೇಜು ಲೈಫಲ್ಲಿ ಜವಾಬ್ದಾರಿ ಜಾಸ್ತಿ ಅತ್ತೆ ಸಂವೇದಶೀಲತೆಯು ಹೆಚ್ಚು ಹರಿತವಾಗುತ್ತದೆ.
ಉದಾಹರಣೆಗೆ, ಚಿಕ್ಕಪುಟ್ಟ ತಪ್ಪುಗಳಿಗೆ ಶಾಲೆಯಲ್ಲಿ ಆದರೆ ಇವತ್ತು ಜೋರು ಮಾಡಿದರೆ ನಾಳಿಗದು ಮರೆತು ಹೋಗುತ್ತಿತ್ತು . ಆದರೆ ಕಾಲೇಜಿನಲ್ಲಿ ಸಣ್ಣ ಬೈಗುಳವು ಮನಸ್ಸಿಗೆ ನೋವುಂಟು ಮಾಡಿ ನಿಂತುಬಿಡುತ್ತದೆ. ಕಾಲೇಜಿಗೆ ಒಂದು ದಿನ ರಜೆ ಮಾಡಿ ಹೊರಗಿದ್ದರೂ ಮನಸ್ಸು ಕಾಲೇಜಿನಲ್ಲೇ ಸುಳಿದಾಡುತ್ತಿರುತ್ತದೆ. ಒಟ್ಟಿನಲ್ಲಿ ಅದೊಂದು ಇಷ್ಟವಿಲ್ಲದಿದ್ದರೂ ಇಷ್ಟ ಪಡಲೇಬೇಕಾದ ಅನಿವಾರ್ಯ. ಇನ್ನು ಸ್ವಲ್ಪ ಹೆದರಿಕೆ ಸಂಕೋಚ ಸ್ವಭಾವದವಳಾದ ನನಗೆ ಹಾದಿಯಲ್ಲಿ ಉಪನ್ಯಾಸಕರಾದರೂ ಸಿಕ್ಕಿದರೆ ಅವರನ್ನು ಮಾತನಾಡಿಸಬೇಕಾ ಬಿಡಬೇಕಾ ಅನ್ನುವ ದ್ವಂದ್ವ; ಹೇಗೆ ಮಾತನಾಡಲಿ ಎಂಬ ಆತಂಕ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅನಿವಾರ್ಯವಾಗಿ ಮನೆಯಿಂದ ದೂರವಿರುವ ನನಗೆ ಮನೆವರಲ್ಲೊಮ್ಮೆ ನೋಡಬೇಕೆಂಬ ಹಂಬಲವಿರುವುದು ಸ್ವಾಭಾವಿಕ. ಹಾಗೊಂದು ಸಂದರ್ಭ ಬಂದು ರಜೆ ಮಾಡಬೇಕಾಗಿ ಬಂದರಂತೂ ಇನ್ನಿಲ್ಲದ ಆತಂಕ. ಮನೆಯಲ್ಲಿ ಇರಬೇಕಾದರೆ ಅಪ್ಪನನ್ನು ಅಮ್ಮನನ್ನು ಹೇಳಿ ಸಮಾಧಾನ ಹೊಂದಬಹುದಾದ ಮನಸ್ಸಿನ ವಿಷಯಗಳನ್ನು ಇಲ್ಲಿ ನನ್ನೊಳಗೆ ಬಚ್ಚಿಟ್ಟುಕೊಳ್ಳಬೇಕಷ್ಟೇ. ಹೇಳಿಕೇಳಿ ನಾನು ಒಂದು ಗ್ರಾಮೀಣ ಪ್ರದೇಶದಿಂದ ಬಂದವಳು ಹುಟ್ಟಿನಿಂದ ಇಂದಿನವರೆಗೆ ಹೆತ್ತವರನ್ನು ಅಗಲಿ ಇರದವಳು. ಎಂದ ಮೇಲೆ ಮನೆಗೊಮ್ಮೆ ಬರಬೇಕು ಮನೆವರಲ್ಲಿ ಮಾತನಾಡಬೇಕು ಎಂಬ ತುಡಿತ ಸಹಜವೇ. ಅದೂ ಮನೆಯಲ್ಲಿ ಏನಾದರೂ ವಿಶೇಷ ಸಮಾರಂಭಗಳು ಜರಗುತ್ತ ಇತರೆ ಸಹೋದರ ಸಹೋದರಿಯರು ಒಟ್ಟಿಗೆ ಸೇರಬೇಕಾದರೆ ಕಣ್ಣಿಗೆ ಇದು ಹೊಡೆಯುವ ನನ್ನ ಅನುಪ ಸ್ಥಿತಿಯ ಬಗ್ಗೆ ಚಿಂತಿಸುವಾಗಿಲ್ಲ ಮನಸ್ಸು ತೀರ ಕುಗ್ಗಿ ಹೋಗುತ್ತದೆ. ಆದರೆ ನನ್ನ ಈ ಎಲ್ಲಾ ದೂರುಗಳ ಹೊರತಾಗಿಯೂ ಮರೆಯಲಾಗದ ಮಾತೊಂದಿದೆ ಕಾಲೇಜಿನ ದಿನಗಳ ಈ ಕಾಲಾವಧಿಯು ನಿಸ್ಸಂದೇಹವಾಗಿ ಅಮೂಲ್ಯ ಮುಂದೊಂದು ದಿನ ಇಲ್ಲಿನ ಅವಿಸ್ಮರಣೀಯ ಅನುಭವಗಳು ಬೇಕೆಂದರೂ ಸಿಗಲಾರದು.
-ಮಾಧವಿ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ