ಯತ್ರ ಯೋಗೇಶ್ವರಹ ಕೃಷ್ಣ:
ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀ ರ್ವಿಜಯೋ ಭೂತಿಃ
ಧ್ರುವಾ ನೀತಿರ್ಮತಿರ್ಮಮ ||18- 78||
ಗೀತೆಯ ಉಪದೇಶದ ಮತ್ತು ಭಗವಂತನ ಅದ್ಭುತ ರೂಪದ ಸ್ಮೃತಿಯ ಮಹತ್ವವನ್ನು ಸಂಜಯನು ಧೃತರಾಷ್ಟ್ರನಲ್ಲಿ ಪಾಂಡವರ ವಿಜಯವು ನಿಶ್ಚಿತವಾಗಿ ಆಗುವುದೆಂದು ವ್ಯಕ್ತಪಡಿಸುತ್ತಾ ಈ ಅಧ್ಯಾಯದ ಉಪಸಂಹಾರ ಮಾಡುತ್ತಾನೆ. ಎಲ್ಲಿ ಯೋಗೇಶ್ವರ ನಾದ ಕೃಷ್ಣನಿರುವನೋ, ಧನುರ್ಧಾರಿಯಾದ ಪಾರ್ಥನಿರುವನೋ ಅಲ್ಲಿ ನಿತ್ಯವೂ ಶ್ರೀ, ವಿಜಯ, ವಿಭೂತಿ ಮತ್ತು ಅಚಲವಾದ ನೀತಿಯು ನೆಲೆಸಿರುವುವೆಂದು ನನ್ನ ಮತ. ಹಾಗಾಗಿ ಈಗಲೂ ಒಂದು ವೇಳೆ ನೀನು ನಿನ್ನ ಶ್ರೇಯಸ್ಸನ್ನು ಬಯಸುವೆಯಾದರೆ ನಿನ್ನ ಪುತ್ರರಿಗೆ ಬುದ್ಧಿ ಹೇಳಿ, ಪಾಂಡವರೂಡನೆ ಸಂದಿ ಮಾಡಿಕೋ ಎನ್ನುತ್ತಾನೆ.
ಬದುಕಿನಲ್ಲಿ ಹೂವಾಗಬೇಕು ಅಂದುಕೊಂಡಾಗ ಮುಳ್ಳುಗಳೆಲ್ಲ ಕಾಣಿಸಿಕೊಳ್ಳಲಾರಂಭಿಸುತ್ತಿರುತ್ತವೆ . ಆದರೆ ಅದೇ ಮುಳ್ಳುಗಳು ಹೂವಿಗೆ ರಕ್ಷಣೆಯನ್ನು ಒದಗಿಸುತ್ತವೆ. ಈ ರಕ್ಷಣೆಯ ಹೊರೆ ಕೂಡ ಒಂದು ಜವಾಬ್ದಾರಿಯೇ ಆಗಿರುತ್ತದೆ. ಕೊಲ್ಲುವವ ಇದ್ದರೂ ಕಾಯುವವ ಮೇಲೊಬ್ಬ ಇರುವಂತೆ. ಆ ಕಾಯುವ ಪ್ರಕ್ರಿಯೆ ದಿನವೂ ಸಾಗುತ್ತಿರುತ್ತದೆ. ನಾವು ಜಪದಿಂದ ಕರೆಯುವುದು ಜತನದಿಂದ ಕಾಯುವಂತೆ ಮಾಡುತ್ತದೆ. ಆದರೆ ಗುಲಾಬಿ ಹೂವು ಮುಳ್ಳುಗಳಿಂದ ಕೂಡಿರುವುದರಿಂದಲೇ ತುಂಬಾ ಹೆಸರುವಾಸಿಯಾಗಿದ್ದು ರಕ್ಷಣಾವಲಯದೊಳಗಿರುತ್ತದೆ. ಹೂವು - ಮುಳ್ಳು ಯಾವತ್ತಿಗೂ ಜೋಡಿಯಾಗಿಯೇ ಇರುತ್ತದೆ. ಒಂದು ವೇಳೆ ಮುಳ್ಳುಗಳಿರದೇ ಇರುತ್ತಿದ್ದರೆ ಗುಲಾಬಿಗೆ ಅಷ್ಟೊಂದು ಸ್ಥಾನಮಾನ ಸಿಗುತ್ತಿರಲಿಲ್ಲವೇನೋ!
ಅದೇ ರೀತಿ ಮನುಷ್ಯರಿಗೆ ಬೆಲೆ ಬರುವುದು. ಕಷ್ಟಗಳನ್ನು ಅನುಭವಿಸಿ ನಂತರ ದೊರಕುವ ಹಿತವಿದೆಯಲ್ಲ ಅದು ಅಮೃತ ಸಮಾನವಾಗಿರುತ್ತದೆ. ಯಾವುದೇ ಅಭ್ಯಾಸ ಮಾಡದೇ ಉನ್ನತ ಫಲಿತಾಂಶ ದೊರಕಿದರೆ ಅದು ಅಷ್ಟೊಂದು ಮನಸ್ಸಿಗೆ ಪ್ರಭಾವಶಾಲಿ ಎನಿಸಿಕೊಳ್ಳುವುದಿಲ್ಲ . ಬದುಕೆಂಬ ಲತೆಯು ಒಂದು ಆಧಾರವನ್ನು ಅವಲಂಬಿಸಿರುತ್ತದೆ. ಆ ಆಧಾರವು ಪೋಷಕ ಸ್ಥಾನವನ್ನು ಪಡೆಯುತ್ತದೆ. ಯಾವುದನ್ನೂ ನಾವು ಅತಿಯಾಸೆಯಿಂದ ಪಡೆದುಕೊಳ್ಳಲು ಹೋಗಬಾರದು.
ನಿಲ್ದಾಣಗಳು ನಮಗೆ ತಾತ್ಕಾಲಿಕ ನಿಲುವನ್ನು ನೀಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತ ಮಾಡುತ್ತವೆ. ಹಾಗೆಂದು ದಿನವಿಡೀ ನಿಲ್ದಾಣದಲ್ಲಿಯೇ ನಿಲ್ಲುವವರು ತೀರಾ ವಿರಳ. ತಾವು ಹೋಗುವ ಕಾರ್ಯ ನಿಮಿತ್ತ ಹೊತ್ತಿಗೆ ಅರ್ಧ ಅಥವಾ ಒಂದು ತಾಸು ಮೊದಲು ಬಂದು ವಿರಮಿಸುತ್ತಾರೆ. ಕೆಲವೊಮ್ಮೆ ಆ ಹೊತ್ತಿಗಾಗುವಾಗಲೇ ಬಂದು ಪಯಣಿಸುತ್ತಾರೆ. ಈ ಪ್ರಪಂಚವೇ ಒಂದು ನಿಲ್ದಾಣ. ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗುವುದಷ್ಟೇ ನಮ್ಮ ಕೆಲಸ. ಸುಮ್ಮನೆ ಕುಳಿತರೆ ತುಕ್ಕು ಹಿಡಿದ ಕಬ್ಬಿಣದಂತೆ ವ್ಯರ್ಥ. ಸಮರ್ಪಕವಾಗಿ ದುಡಿದರೆ ಬೆಳಗುವ ವಜ್ರ ವೈಡೂರ್ಯಗಳಂತೆ ಶೋಭಾಯಮಾನ.
ಈ ಶರೀರವನ್ನು ದುಡಿಯಲೆಂದು ಆ ಪರಮಾತ್ಮ ಈ ಭೂಮಿಗೆ ತಂದು ನಿಲ್ಲಿಸಿದ್ದಾನೆ. ಅವಕಾಶ ಕೊಟ್ಟಿದ್ದಾನೆ. ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. ಈ ಶರೀರವು ಬಾಹ್ಯದಿಂದ ಯಾವುದೇ ವ್ಯತ್ಯಾಸಗಳಿರದಂತೆ ಇದ್ದರೂ ಸೂಕ್ಷ್ಮವಾಗಿ ಅವಲೋಕಿಸಿದಾಗ ವ್ಯತ್ಯಾಸ ಗೋಚರವಾಗುವುದಿದೆ. ಬಾಹ್ಯಕಾಯದಂತೆ ಎಲ್ಲರೊಳಗೂ ಒಂದು ಮನಸ್ಸು ಇದ್ದೇ ಇದೆ. ಆದರೆ ಮನಸ್ಸನ್ನು ಬಲ್ಲವರು ಯಾರೂ ಇಲ್ಲ. ಅದರ ಆಳ ಅಗಲ ಪರಿಧಿಯ ಅರಿವೂ ತಿಳಿಯದಾಗಿದೆ. ಅದು ಪರಮಾತ್ಮನ ಅರಿವಿಗೆ ಮಾತ್ರ ನಿಲುಕುವಂತಹುದು. ಒಬ್ಬರ ಮನಸ್ಸನ್ನು ಅಳೆದು ತೂಗಿ ಹೀಗೆಯೇ ಎಂದು ತಿಳಿಯುವ ಮಾಪನಗಳು ಇನ್ನೂ ಬಂದಿಲ್ಲ.
ಈ ಮನಸ್ಸೆಂಬುದು ಒಂದು ಆನೆಯಂತೆ ದೊಡ್ಡಗಾತ್ರದ್ದಾಗಿರಬಹುದು ಅಥವಾ ಇರುವೆಯಂತೆ ಚಿಕ್ಕದೂ ಆಗಿರಬಹುದು. ಆದರೆ ಅದರದರದೇ ಆದ ಶಕ್ತಿ ಸಾಮರ್ಥ್ಯವಂತೂ ಇದ್ದೇ ಇರುತ್ತವೆ. ಹಾಗೆಯೇ ಮನಸ್ಸು ಬಲು ದೊಡ್ಡ ವಿಚಾರವನ್ನು ಗ್ರಹಿಸಿ ಅದನ್ನು ನಿರ್ವಹಿಸುವ ಚಾಕ ಚಕ್ಯತೆಯನ್ನು ಹೊಂದಿದೆ. ಆದರೆ ಕೆಲವೊಮ್ಮೆ ಪರಿಣಾಮವು ಆನೆಯಷ್ಟು ತೂಕದ್ದಾಗಿರಲೂ ಬಹುದು ಅಥವಾ ಇರುವೆಯಷ್ಟು ಗುಲಗಂಜಿಯದ್ದಾಗಿರಬಹುದು. ಅದನ್ನು ನಿರ್ವಹಿಸುವ ರೀತಿ, ಒಳಿತಿನ ಮಾಹಿತಿ ಇವೆಲ್ಲವೂ ಗಣನೆಗೆ ಬರುವಂತಹದ್ದಾಗಿರುತ್ತದೆ.
ಆತ್ಮ ಪರಮಾತ್ಮನಲ್ಲಿ ದಿನವೂ ಬೇಡಿಕೊಳ್ಳಬೇಕು. ಕಲ್ಪನೆಯನ್ನು, ಯೋಗ್ಯತೆಯನ್ನು ಮೀರಿದ ಜೀವನವನ್ನು ಒದಗಿಸಿದ್ದೀಯಾ ಆರೋಗ್ಯಯುಕ್ತ ಆನಂದಮಯ ಬದುಕನ್ನು ನೀಡಿದ್ದೀಯ. ಮನಸ್ಸಿನ ಮೂಲಕ ಬೇರೆಯವರಿಗೆ ಆನಂದವನ್ನು ಹಂಚುವಂತಹ ಅವಕಾಶವನ್ನು ಒದಗಿಸಿದ್ದೀಯಾ. ಈ ಸುಂದರವಾದ ದೇಹ, ಆರೋಗ್ಯಯುತ ದೇಹವೂ ಸೇರುತ್ತದೆ. ಪ್ರಶಾಂತವಾದ ಮನಸ್ಸು ದೇವರ ಪಾದದಲ್ಲಿ ಹಾಗೂ ದೇವರಲ್ಲಿ ನೆಟ್ಟಿರುವಂತಹ ಮನಸ್ಸು ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಬೇಕು. ಎರಡು ದಡಕ್ಕೆ ಸೇತುವೆ ಹೇಗೆ ಮುಖ್ಯವೋ ಅದೇ ರೀತಿ ಬೇರೆಯವರಿಗೆ ಸಹಾಯ ಮಾಡಲು ಈ ಮನಸ್ಸು ಸೇತುವೆಯಂತೆ ಪರಿವರ್ತಿತವಾಗಬೇಕು. ಎಷ್ಟು ಹೇಳಿಕೊಂಡರೂ ಅಷ್ಟೇನೂ ದೊರಕದ ಸಾಮಿಪ್ಯ ಅನುಭವದಿಂದ ಮಾತ್ರ ದೊರಕುವುದು. ಹಾಗಾಗಿ ಮನದೊಳಗೆ ಅನುಭವಿಸಿಕೊಳ್ಳುತ್ತಾ ಭಗವಂತನೊಂದಿಗೆ ಸಲಿಗೆ ಇರಿಸಿಕೊಳ್ಳಬೇಕು. ಅದೇನೇ ಕಷ್ಟವಿದ್ದರೂ ಭಗವಂತನೊಂದಿಗೆ ಇರುವ ಕನಸು ಕಟ್ಟಿರಬೇಕು. ನಾವು ನಮ್ಮನ್ನು ಇತರರೊಂದಿಗೆ ಹೋಲಿಸದೆ ನಮ್ಮೊಳಗಿನ ಪರಿಧಿಗೆ ತಕ್ಕನಾಗಿ ಚೆನ್ನಾಗಿ ಬದುಕಬೇಕು. ಏನು ಸಿಕ್ಕಿದೆಯೋ ಅದಕ್ಕೆ ದಿನವೂ ಆ ದೇವರಿಗೆ ಧನ್ಯವಾದ ಹೇಳುತ್ತಿರಬೇಕು. ಹಾಗಾದಾಗ ದೇವರಿಗೆ ನಮ್ಮ ಬಗ್ಗೆ ಆತ್ಮೀಯ ಭಾವ ಬಂದುಬಿಡುವುದು. ಆ ಭಾವವೇ ಎಲ್ಲರ ಒಳಿತಿಗೂ ಕಾರಣವಾಗುವುದು.
-ಮಲ್ಲಿಕಾ ಜೆ ರೈ ಗುಂಡ್ಯಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ