ಮನ್ಯಸೇ ಯದಿ ತಚ್ಛಕ್ಯಮ್
ಮಯಾ ದ್ರಷ್ಟು ಮಿತಿ ಪ್ರಭೋ |
ಯೋಗೇಶ್ವರ ತತೋ ಮೇ ತ್ವಮ್
ದರ್ಶಯಾತ್ಮಾನಮವ್ಯಯಮ್ ||11-4||
ಭಗವಂತನ ಆ ಆಲೌಕಿಕ ಸ್ವರೂಪವನ್ನು ಅರ್ಜುನ ಮೊದಲು ಎಂದೂ ನೋಡಿರಲಿಲ್ಲ. ಹಾಗಾಗಿ ಅವನ ಮನದಲ್ಲಿ ಅದನ್ನು ನೋಡುವ ಇಚ್ಛೆ ಜಾಗೃತವಾಗುತ್ತದೆ ಮತ್ತು ಅದನ್ನು ಪ್ರಕಟಪಡಿಸಿದಾಗ ಅದರಲ್ಲಿ ಅವನ ವಿಶ್ವಾಸ ಕಡಿಮೆಯಿತ್ತು ಎಂದು ತಿಳಿಯಲ್ಪಡುವುದಿಲ್ಲ. ವಿಶ್ವಾಸವಿದ್ದುದರಿಂದಲೇ ನೋಡುವ ಇಚ್ಛೆಯನ್ನು ಪ್ರಕಟಪಡಿಸುತ್ತಾ "ಹೇ ಪ್ರಭುವೇ ಒಂದು ವೇಳೆ ನನ್ನ ಮೂಲಕ ನಿನ್ನ ಆ ರೂಪವನ್ನು ನೋಡಲು ಶಕ್ಯವಾದುದು ಎಂದು ನೀನು ಭಾವಿಸುವೆಯಾದರೆ, ಆಗ ಹೇ ಯೋಗೀಶ್ವರನೇ! ನೀನು ನಿನ್ನ ಅವಿನಾಶಿಯಾದ ಸ್ವರೂಪದ ದರ್ಶನವನ್ನು ನನಗೆ ಮಾಡಿಸು" ಎನ್ನುತ್ತಾನೆ.
ಮನಸ್ಸು ಈಗ ಒಂದು ರೀತಿ ಮತ್ತೆ ಒಂದು ರೀತಿಯಾಗುತ್ತದೆ. ಅದು ಹೇಗೆ ಎಂದಿಗೂ ಕಾಣಲಸಾಧ್ಯವೋ ಅಥವಾ ಒಳಗಣ್ಣಿನ ಹಿಡಿತಕ್ಕೆ ಸಿಲುಕುವುದೋ ಅದೇ ರೀತಿ ಸಿದ್ಧಿಸಿದವನಿಗೆ ತನ್ನ ಮುಷ್ಟಿಯಲ್ಲಿಡಲು ಅಥವಾ ಅಂಕೆಯಲ್ಲಿಡಲು ಸಾಧ್ಯವಾಗುತ್ತದೆ. ಬದುಕು ನಡೆಸಲು ಚಿತ್ರವಿಚಿತ್ರ ಸಂಗತಿಗಳು ಇದ್ದರೂ ಅವುಗಳ ಅಲಭ್ಯತೆಯಿಂದಲೂ ಬದುಕಿನ ದಾರಿ ಹಿತವೇ ಆಗುವುದುಂಟು. "ಸಾಕು" ಅಥವಾ "ನಾನೇ" ಇಲ್ಲ ಎಂದು ಬಿಟ್ಟರೆ ಎಲ್ಲವೂ "ಆತನಿಗೇ" ಸೇರಲ್ಪಡುತ್ತದೆ.
ಮಣ್ಣೊಳಗಿನ ಕಣಗಳು ಯಾವುದೂ ಗಮನಕ್ಕೆ ಬರುವುದಿಲ್ಲ. ಆದರೂ ಮಣ್ಣೊಳಗೆ ಬ್ರಹ್ಮಾಂಡವೇ ಇದೆಯೆಂದು ತೋರಿಸಿಬಿಟ್ಟ ಆ ಕೃಷ್ಣ ಪರಮಾತ್ಮ. ಹಾಗೆಯೇ ನಮ್ಮೊಳಗೆ ಬ್ರಹ್ಮಾಂಡವನ್ನೇ ತುಂಬಿಸಿದ್ದಾನೆ ಅದನ್ನು ನಡೆ, ನುಡಿ, ವಿನಯ ಬದುಕಿನ ರೀತಿ ನೀತಿಗಳಲ್ಲಿ ತೋರಿಸಲ್ಪಡುತ್ತಾನೆ .
ಸೊಬಗು ಎಲ್ಲಾ ಕಡೆ ಇರುತ್ತದೆ, ನೋಡುವ ಕಣ್ಣುಗಳಿರಬೇಕು. ಬೆಳಗೆದ್ದು ಯಾರ್ಯಾರ ನೆನೆಯಲಿ ಎಂದು ಹಿಂದೆ ಹಾಡುತ್ತಿದ್ದ ಹಾಡು ನೆನಪಾಗುವುದು ಸಹಜ. ಆದರೆ ದೇವರನ್ನೇ ನೆನೆದು ಆಚೆ ಈಚೆ ನೋಡಲು ಪ್ರತ್ಯಕ್ಷಗೊಳ್ಳದೇ ಹೋದರೆ ಮನಸ್ಸು ತಳಮಳಗೊಳ್ಳುವುದು ಸಹಜ. ಯಾರೋ ಎತ್ತಿಟ್ಟಿದ್ದಾರೆ ಎಂಬ ಗುಮಾನಿ ಒಂದು ಕಡೆ ಇಲ್ಲವೆಂದರೂ ತಪ್ಪಾದೀತು. ಹೌದೆಂದರೂ ಸರಿಯಾದೀತು . ಆದರೆ ಅದಿಲ್ಲದೆ ಈಗ ದಿನಗಳು ಮುಂದಕ್ಕೆ ಹೋಗೋದೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವಲಂಬಿಸಿರುವುದು ಯೋಚಿಸಬೇಕಾಗಿದೆ . ಆದರೆ ಒಳಿತಿಗಾಗಿನ ಹಾದಿಯಲ್ಲಿ ಅದು ಅನಿವಾರ್ಯವೇ ಆಗಿರುವುದಂತೂ ನಿಜ. ಈಗೀಗ ತರಗತಿಗಳು ಅದರಲ್ಲೂ ಆನ್ಲೈನ್ ತರಗತಿಗಳೂ ಕೂಡ ಬಲು ಬೇಗ ಬ್ರಾಹ್ಮೀ ಮುಹೂರ್ತದಲ್ಲಿ ಇರುವುದು ಸಹಜ. ಎಷ್ಟು ಜನ ಇದಕ್ಕೆ ಪರಿಪಕ್ವವಾಗಿ ಸಾಗುತ್ತಿದ್ದಾರೆ ಎಂಬುದೂ ಕೂಡ ಅಷ್ಟೇ ಕುತೂಹಲವೂ ಆಗಿದೆ. ಆದರೆ ಎದ್ದು ಇನ್ನೇನು ತರಗತಿಯನ್ನು ತೆರೆಯಲು ಸಾವಕಾಶವಾಗಿ ಬೆರಳೊತ್ತಿದರೆ ಸಾಗುವುದು ತಿಳಿಯುತ್ತಿಲ್ಲ. ತಿರುಗುವ ಚಿತ್ರಣ ಕಾಣಬಂದರೂ ಪ್ರತಿಕ್ರಿಯೆ ನೀರಸವೇ ಆಗುವುದು. ನೆಟ್ವರ್ಕ್ ಸರಿ ಇರುವುದಿಲ್ಲ ಎಂದು ಭಾವಿಸಿದರೆ ಅದಕ್ಕೆ ಜೀವ ನೀಡುವ ಕರೆನ್ಸಿಯನ್ನು ಹಾಕದಿರುವುದು ನೆನಪಾಗುತ್ತದೆ. ಬೆಳ್ಳಂಬೆಳಿಗ್ಗೆ ಏನು ಮಾಡುವುದು ಎಂದು ಛಲ ಬಿಡದ ತ್ರಿವಿಕ್ರಮನಂತೆ ಇನ್ನೊಂದು ಫೋನಾದರೂ ಆಸರೆಯಾಗುವುದು ಎಂಬ ತುಡಿತದಿಂದ ಹುಡುಕಾಡುತ್ತೇವೆ. ಆದರೆ ಸುಳಿವೇ ಸಿಗದಾಗುತ್ತದೆ. ಬೆಳಕು ಹಾಕಿ ವೀಕ್ಷಿಸಿದಾಗ ಗೋಚರಿಸಲ್ಪಡುತ್ತದೆ. ಹೇಗೆಂದರೆ ದಟ್ಟ ಕಾನನದಲ್ಲಿ ದಾರಿ ತಪ್ಪಿ ನಡೆಯುತ್ತಿರಲು ದೂರದಲ್ಲೊಂದು ಸಣ್ಣ ಬೆಳಕು ಕಂಡಾಗ ಕಾಲಿಗೆ ಹೆಜ್ಜೆ ಹಾಕುವ ಹುರುಪು ಇನ್ನಷ್ಟು ಬಲ ಕೊಡುವಂತೆ ಮನಸೆಂಬ ಕಾಲಿನ ನಡಿಗೆ ಮೊಬೈಲ್ ತೆಗೆದುಕೊಳ್ಳುವಂತೆ ಕೈಗೆ ಪ್ರೇರೇಪಿಸುತ್ತದೆ. ಮಗುವನ್ನೆತ್ತಿದಂತೆ ಎತ್ತಿಕೊಂಡರೆ ಹಾಯಾಗಿ ನಿದ್ದೆ ಮಾಡಿದಂತೆ ತೋರುತ್ತದೆ. ಎಬ್ಬಿಸುವ ಪ್ರಯತ್ನಕ್ಕೆ ಒಪ್ಪುವುದಿಲ್ಲ . ಪೂರ್ತಿ ಬ್ಯಾಟರಿ ಖಾಲಿಯಾಗಿ ಚಿರ ನಿದ್ರೆಗೆ ಇಳಿದಿರುತ್ತದೆ .
ಆಗ ಪರಿಸ್ಥಿತಿ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತಾಗುತ್ತದೆ. ಅದಕ್ಕೆ ಜೀವ ಬರಬೇಕೆಂದರೆ ಚಾರ್ಜಿಗೆ ಇಡಲೇಬೇಕು. ಚಾರ್ಜರ್ ನ ಗೋಚರಿಸುವಿಕೆಯೇ ಇಲ್ಲ . ಸಮಯ ತನ್ನ ಪಾಡಿಗೆ ಸರಿಯುತ್ತಿದೆ. ಸೂಜಿಯೆಲ್ಲೋ ದಾರವೆಲ್ಲೋ ಎಂಬಂತೆ ಸೂಜಿ ಇದ್ದ ಕಡೆ ದಾರ ಇರಲೇಬೇಕೆಂದಿಲ್ಲ. ಆದರೂ ಅವೆರಡು ಒಟ್ಟಿಗೇ ಇದ್ದಾಗ ಮಾತ್ರ ಒಂದುಗೂಡಲು ಸಾಧ್ಯ. ಹಾಗಾಗಿ ಬಿಲ್ಲನ್ನೇರಿಸಿ ಹೊರಟ ವೀರನಂತೆ ಸಾಗಬೇಕು. ನಿರೀಕ್ಷೆಯ ಮೆಟ್ಟಲು ತುಳಿದು ಮೇಲೆ ಸಾಗಿ ನೋಡಿದರೆ ಪಕ್ಕನೆ ಗೋಚರವಾಗುವಂತಹುದಲ್ಲ. ಅಲ್ಲಿ, ಇಲ್ಲಿ, ಮೇಲೆ, ಕೆಳಗೆ, ಆ ಬದಿ, ಈ ಬದಿ ಒಂದೂ ಬಿಡದೆ ಹುಡುಕಿದಾಗ ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ನಿನ್ನ ನುಡಿಗೆ ಎಂಬ ಹಾಡಿನ ಸಾಲಿನಂತೆ ಕಾರ್ಯ ಒಪ್ಪಿತವಾಗಿ ಮೆಲ್ಲನೆ ಗೋಚರಿಸುತ್ತದೆ. ಮೊಬೈಲ್ ಸಿಕ್ಕಿಸಿ ಚಾರ್ಜರಿಗೆ ಇಟ್ಟಾಗಲೂ ಸುದ್ದಿಯಿಲ್ಲ. ಯಾವ ಜನ್ಮದ ಕರ್ಮ ಈ ಮೊಬೈಲಲ್ಲಿ ಬಂದು ಹೀಗೆ ಅಟ್ಟಾಡಿಸುತ್ತಿದೆಯೋ ಎನ್ನುವಂತೆ ಮನಸ್ಸಿಗೆ ತೋರುತ್ತದೆ. ಸಣ್ಣಗೆ ಏನೋ ಒಂದು ಪರದೆಯಲ್ಲಿ ಬಾಣದ ಗುರುತಿನಂತೆ ಹೊಳೆದಂತಾಗುತ್ತದೆ. ಆಗಲೇ ಹೋದ ಜೀವ ಮರಳಿ ಬಂದಂತಹ ಸ್ಥಿತಿ. ಆದರೂ ಮೊಬೈಲನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಚಾತಕ ಪಕ್ಷಿಯಂತೆ ಕಾದು ಗುಂಡಿ ಒತ್ತಿದರೂ ಪ್ರಯೋಜನವಾಗುವುದಿಲ್ಲ. ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ ಹಾಡು ಅಣಕಿಸಿದಂತಾಗುತ್ತದೆ. ಹೆದರಿದ ಗುಬ್ಬಚ್ಚಿಯಾಯಿತೋ ಅರಿಯದಾಗುತ್ತದೆ. 0% ಪರದೆಯ ಮೇಲೆ ತೋರಿಸುತ್ತದೆ. ಆದರೆ ಕಾಯುವವ ಮೇಲೊಬ್ಬನಿರಲು ಪ್ರಯತ್ನ ಸಾಗಿಯೇ ಬಿಡಲಿ ಎಂದು ಅದರ ಗುಂಡಿಯನ್ನು ಮತ್ತೊಮ್ಮೆ ಜೋರಾಗಿ ಒತ್ತಿ ಬಿಡುತ್ತಲೇ ಅದರ ಹೆಸರು ಗೋಚರಿಸಲಾರಂಭಿಸುತ್ತದೆ. ತುಂಬಾ ಹಸಿವೆ ಇರುವಾಗ ತುತ್ತು ಅನ್ನ ತಿಂದ ಕೂಡಲೇ ಹೊಟ್ಟೆಯ ತಳಮಳ ಕೊಂಚ ಕಡಿಮೆಯಾದಂತಹ ಅನುಭವವಾಗುತ್ತದೆ. ಸ್ವಲ್ಪ ನಿಮಿಷಗಳ ಬಳಿಕ ಮುಖವನ್ನು ಮುಚ್ಚಿದ ಕೈಯನ್ನು ಹೊರ ತೆಗೆದಂತೆ ಗುರುತರವಾದ ಆ ಸ್ಥಿತಿಯ ಅನುಭವ ಮೊದಲ ಸಲ ಇನಿಯನನ್ನು ನೋಡುವ ನೋಟದಂತೆ ತೋರುತ್ತದೆ. ಅಬ್ಬಾ ಕಲ್ಪನೆ ನಿಜಕ್ಕೂ ಸಂತೋಷ ಕೊಡುತ್ತದೆ. ಹಿಂದಿನ ನೆನಪುಗಳನ್ನು ಮೊಬೈಲು ಪುನರಪಿ ನೆನಪಿಸುತ್ತ ಆಗ ಪುಳಕ ನೀಡಿದಂತಾಗುತ್ತದೆ. ಹಾಗಾಗಿ ಪ್ರತಿಕ್ಷಣದಲ್ಲೂ ನಗುವೆಂಬುದು ಕರಿಮೋಡ ಆವರಿಸಿದ ಬಾನಿನಂತೆ ಅದ್ಭುತ ರೋಮಾಂಚನವೀಯುವುದು ಸಹಜ. ಆದರೆ ಅದರೊಳಗೆ ಕರಗುವ ಮನಸ್ಸು ಬೇಕು ಅಷ್ಟೇ. ಮುದಗೊಳ್ಳುವ ಪ್ರೇರಕ ಶಕ್ತಿ ಬೇಕು, ಯೋಚಿಸೋ ತಾಕತ್ತಿರಬೇಕು. ಹಾಗಾದಾಗ ಈ ಜೀವನದ ನೆಮ್ಮದಿಯನ್ನು ನೂರು ಕಾಲಕ್ಕೂ ಜತನದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಲ್ಪನೆಗೂ ಮಿಗಿಲಾದ ಲೋಕವೆಂಬುದಿಲ್ಲ. ಆದರೆ ಕಲ್ಪನೆಯೇ ಬದುಕಲ್ಲ. ಕಲ್ಪಿಸಿಕೊಳ್ಳಲು ಈ ಮನಸ್ಸು ಅಷ್ಟು ನಿರಾಳವಾಗಿರಲು ಸಾಧ್ಯವಿಲ್ಲವಲ್ಲ. ಕಡಲು ಕಾಣ ಬರುವುದು ನಮ್ಮ ಸೀಮಾ ಪರಿದಿಯೊಳಗೆ ಮಾತ್ರ. ಅದರ ಆಚೆಗಿನ ಕಡಲು ಕಲ್ಪನೆಗೂ ಮೀರಿದ್ದು. ಹಾಗೆಯೇ ಈ ಮನಸ್ಸು ಕಂಡು ಬಂದವುಗಳು ಮಾತ್ರ ಗೋಚರಿಸುತ್ತವೆ. ಕಾಣದೇ ಇರುವುದು ಅಗೋಚರವಾಗಿಯೇ ಇರುತ್ತದೆ.
ಒಂದು ಪ್ರಚಲಿತ ಸುದ್ದಿಯನ್ನಾಧರಿಸಿದ ಕುತೂಹಲದ ವಸ್ತುವಾದ ಮದುವೆಯಾದಂದಿನಿಂದ ಪತಿ ತನ್ನ ಪತ್ನಿಯನ್ನು ಮನೆ ಬಿಟ್ಟು ಹೋಗುವಂತೆ ಒತ್ತಡ ಹೇರುತ್ತಿದ್ದಾನೆಂದು ಘಟನೆ. ಮನೆ ಬಿಟ್ಟು ಹೋಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾನೆoದಾದರೆ ( ತ್ರಿವಳಿ ತಲಾಕ್ ಜೊತೆಗೆ) ಅವನದೇ ಕೈವಾಡ ಇದೆ ಎಂದರ್ಥ ತಾನೆ? ದೇಶದಲ್ಲಿ ದಂಪತಿಗೆ ಮಕ್ಕಳು ಒಂದು ಎರಡು ಸಾಕು ಎಂದು ಬೊಬ್ಬಿಡುತ್ತಿದ್ದರೂ ಆ ಮಹರಾಯ ಅಷ್ಟು ಒತ್ತಡ ಹೇರಿಯೇ ಆರು ಮಕ್ಕಳಾಗಿದೆ! ಒತ್ತಡ ಇಲ್ಲದೆ ಇದ್ದಿದ್ದರೆ ಇನ್ನೂ ಎಷ್ಟು ಮಕ್ಕಳ ಭಾಗ್ಯ ಬರುತ್ತಿತ್ತೋ ಏನೋ?! ಅಲ್ಲಾ, ಈ ದೇಶದ ಬಗೆಗೆ ಕೊಂಚವೂ ಕಾಳಜಿಯೇ ಇಲ್ಲವಾಗಿದೆ. ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕು ನಡೆಸುವುದಾದರೆ ಈ ಬುದ್ಧಿವಂತಿಕೆ, ಒಳ್ಳೆಯದು ಕೆಟ್ಟದು ಎಂಬ ತಿಳುವಳಿಕೆಗಳ ಅಗತ್ಯವೇ ಬೇಕಾಗಿಲ್ಲವಾಗಿದೆ.
ಆಕಾಶದಿಂದ ಹನಿ ಹನಿಯಾಗಿ ಸುರಿವ ಮಳೆಯನ್ನು ಆಸ್ವಾದಿಸುವುದೇ ಚಂದ. ಅದರಲ್ಲೂ ಮೊದಮೊದಲ ಮಳೆಯ ಸೆಳೆತಕ್ಕೆ ಎಂತಹವರೂ ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಅದರ ಸ್ಪರ್ಶದೊಂದಿಗೆ ಅನುಭವಿಸುವವರು ಸಾಕಷ್ಟಿದ್ದಾರೆ. ಆದರೆ ಈಗ ಮಳೆಯ ಜೊತೆಗೆ ಬೇರೆ ಬೇರೆ ತಳಿಗಳ ಸುರಿಮಳೆ ಶುರುವಾಗಿದೆ ಎಂದರೆ ನಂಬಲು ಕಷ್ಟ. ಚೀನಾದ ಬೀಜಿಂಗ್ ನಲ್ಲಿ ಹುಳುಗಳ ಮಳೆ ಪ್ರಾರಂಭವಾಗಿದೆಯೆಂದಾದರೆ ಅಚ್ಚರಿಯೇ ಹೌದು. ಇನ್ನೂ ಏನೆಲ್ಲಾ ಮಳೆಯಂತೆ ಬೀಳುವುದೋ ಕಾದುನೋಡಬೇಕಿದೆ.
-ಮಲ್ಲಿಕಾ ಜೆ ರೈ ಗುಂಡ್ಯಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ