ಕೃತಿ ವಿಮರ್ಶೆ- ಹಾಸ್ಯಪ್ರಬಂಧ ಸಾಹಿತ್ಯ 'ಸನ್ಮಾನ... ಪ್ರಶಸ್ತಿ'

Upayuktha
0

 

ವಿಷಣ್ಣತೆಯೇ ಭಾರತದ ಸಾರ್ವತ್ರಿಕ ಗುಣವೋ ಏನೋ ಒಂದು ಒಬ್ಬ ವಿನೋದಪ್ರಿಯ ಹೇಳಿದ್ದುಂಟು. ಜೀವನದ ತಲೆಭಾರ, ನಡುಭಾರ, ತುದಿಭಾರದಿಂದ ಕುಗ್ಗಿಹೋದ ಭಾರತೀಯರಿಗೆ ವಿನೋದ ಒಗ್ಗಲಿಲ್ಲವೇನೋಎಂದು ಭಾವಿಸಲು ಅಪಹಾಸ್ಯದ ನೆರವೇ ಬೇಕಾದೀತು. ಅಂತಹ ಅನೇಕ ತೀವ್ರತೆಗಳ ರಸಭಂಗ ಮಾಡಲು ಸಾಹಿತಿ ಮಿತ್ರ ಗೊರೂರು ಅನಂತರಾಜುರವರ ಚೂಪು ಲೇಖನಿಯ ಚುಚ್ಚು ಹಾಸ್ಯ ಸಿದ್ದವಾಗಿಯೇ ಇದೆ. ಗೊರೂರಿನ ಹೆಸರಿನ ಮಹತ್ವವೋ ಏನೋ ಮೊದಮೊದಲು ಗಂಭೀರ ಸಾಹಿತ್ಯದಿಂದಲೇ ಆರಂಭಿಸಿದರೂ ಕ್ರಮೇಣತಮ್ಮ ವಿನೋದ ಸಹಜ ಗುಣದ ಕಡೆಗೆ ಅವರ ಲೇಖನಿ ಓಡತೊಡಗಿತು. ಅವರೀಗ ಅದರಲ್ಲೆಷ್ಟು ಆಳಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆಂದರೆ ಅವರು ಗಂಭೀರ ವಿಷಯ ಹೇಳಿದಾಗಲೂ, ಬರೆದಾಗಲೂ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ  ಇದು ಎಲ್ಲಾ ಹಾಸ್ಯ ಸಾಹಿತಿಗಳಿಗೆ ದಕ್ಕುವ ಪ್ರಾರಬ್ಧಎಂದು ಬಿಡಬಹುದು. ಗಂಭೀರ ಹಾಸ್ಯ ಸಾಹಿತಿ ಎಂದರೆ ಅಸಂಗತವಾದೀತು. ಹಾಸ್ಯದ ಹೊನಲಿನ ಹಿಂದೆ ಯಾವುದೋ ಗಾಂಭೀರ್ಯದ  ಬೀಜ ಇದೆ ಎಂದರೆ ಅದನ್ನು ಹುಡುಕಲು ಹೊರಟವ ಸಿನಿಕನಾಗಿ ಬಿಡುತ್ತಾನೆ. ಸಿನಿಕರಿಗೆಲ್ಲಿದೆ ನಗುವಿನ ಸಂಪತ್ತು.

ಕಳೆದ ಹಲವಾರು ವರ್ಷಗಳಲ್ಲಿ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಕಚಗುಳಿ ಇಡುವ ವಿನೋದ ಸಾಹಿತ್ಯದ ನಿರ್ಮಾಣವನ್ನುತಾವೇ ಕೈಯಾರೆ ಎತ್ತಿಕೊಂಡ ಗೊರೂರು ಅನಂತರಾಜುರವರು ಈಗ ಅವುಗಳನ್ನೆಲ್ಲಾ ಜೋಡಿಸಿ ಒಂದೇ ಗೊಂಚಲಿನ ಹೂ ಹಣ್ಣುಗಳಂತೆ ಪ್ರಕಟಿಸುವ ಧೈರ್ಯಕ್ಕೆ ಕೈ ಹಾಕಿದ್ದಾರೆ. ನಾಟಕದ ಹಾಸ್ಯಗಾರನಿಗೆ ನಿಜವಾಗಿಯೂ ಹಾವು ಕಚ್ಚಿದರೆ ಆತನ ಅಭಿನಯದ ಪೇಚಾಟವನ್ನು ನೆನಪಿಗೆ ತರುವಂತಹ ಸಂಗತಿಯಿದು. ನಗೆ ಬರಹಗಾರನಿಗೆ ಎಲ್ಲರೂ ತುಚ್ಛವೆಂದು ಬದಿಗೆ ಸರಿಸಿದ ವಿಚಾರದಲ್ಲೇ ಹಾಸ್ಯದ ಗಣಿಯೇ ದೊರಕುವುದು ಹಾಸ್ಯಾಸ್ಪದವಲ್ಲದಿದ್ದರೂ ಹಾಸ್ಯಕ್ಕಂತೂ ಆಸ್ಪದ ದೊರಕುತ್ತದೆ

 ವಿನೋದ ಮತ್ತು ವಿಷಾದ ಎಂಬ ಎರಡೂ ಪದಗಳ ನಡುವಿನ ಅಕ್ಷರಗಳಷ್ಟೇ ಬೇರೆ.ಅರ್ಥ ಮಾತ್ರ ಒಂದು ತುಟ್ಟತುದಿಯಿಂದ ಮತ್ತೊಂದು ತುಟ್ಟತುದಿಯವರೆಗೆ ಮಧ್ಯದಲ್ಲೇಲ್ಲೋ ಜೀವನದ ಸಮತೂಕದ ಬಿಂದು ಇರುತ್ತದೆ. ವಿಷಾದದ ಆಳಕ್ಕೆ ಸದಾ ಜಾರುವವರನ್ನು ಜಗ್ಗಿ ಮೇಲೆತ್ತಲು ವಿನೋದದ ಇನ್ನೊಂದು ತುದಿ ಬೇಕಲ್ಲ. ತುಟಿಬಿಗಿದ, ಸಿಡಿಮೊಗದ, ಕಲ್ಲು ಭಾವನೆಯವರಲ್ಲೂ ಸ್ವಲ್ಪ ಬಿಗಿತವನ್ನು ಕಳೆದುಕೊಳ್ಳುವಂತೆ ಕ್ಷಣ ಹೊತ್ತದಾರೂ ದೂಡಬಲ್ಲ ರಸಶಕ್ತಿಯನ್ನು ಗೊರೂರು ಅನಂತರಾಜು ಕ್ರಮೇಣ ರೂಢಿಸಿಕೊಂಡಿದ್ದಾರೆ ಎನ್ನಲು ಈ ಸಂಕಲನದ ಬರಹಗಳೇ ಸಾಕ್ಷಿ.

ಇಲ್ಲಿ ಲಘು ಹರಟೆಯಿದೆ, ತಿಳಿಹಾಸ್ಯದ ಬುಗ್ಗೆಯಿದೆ, ವಿನೋದ ಕಲ್ಪವಿದೆ. ಒಂದೇ ತುಣುಕಿನ ಸುತ್ತ ಹೆಣೆದ ಕತೆಯಿದೆ. ಓದಿನ ನಂತರವೂ ಕಾಡುವ ಲಘು ಬರಹವಿದೆ. ಓದಿದವನಿಗೆ ಇದ್ದಕ್ಕಿದ್ದಂತೆ ಏನನ್ನೂಇಲ್ಲವಾಗಿಸುವ ಕ್ಷಣಗಳೇ ವಿನೋದದ ವಿಶೇಷ. ಓದು ಸಂಧರ್ಭಕ್ಕೆ ಹೊಂದಿಕೊಳ್ಳುವುದನ್ನು ಹೊಂದಿಕೊಳ್ಳದ ಇನ್ನೊಂದು ಸಂದರ್ಭಕ್ಕೆ ಸಾಟಿ ಮಾಡುವುದೇ ಹಾಸ್ಯ ಸೃಷ್ಟಿಯ ಚಾತುರ್ಯ. ಓದಿದವ ಘೊಳ್ಳೆಂದು ನಕ್ಕು ಪೊಳ್ಳುತನವೆಂದು ಆನಂದಿಸುವ, ಸುಳ್ಳಾದರೂ ನಿಜಾನಂದ ನೀಡಬಲ್ಲ ಸಾಹಿತ್ಯ ಕ್ಷೇತ್ರವಿದು. ತಾನು ನಗಿಸುವಲ್ಲಿಎಲ್ಲ ವಿಫಲ ರಾಗುತ್ತೇವೆಯೋ ಎಂದೇ ಅನೇಕ ಬರಹಗಾರರು ಗಂಭೀರ ಸಾಹಿತ್ಯರಚನೆಗೆ ಮುಂದಾದರೇ ಹೊರತು ವಿನೋದ ಸಾಹಿತ್ಯ ಸೃಷ್ಟಿಸಲು ಹೊರಡಲಿಲ್ಲ. ಗೇಲಿ ಮಾಡಿಕೊಳ್ಳುವುದು ಮತ್ತು ಗೇಲಿ ಮಾಡುವುದು ಎರಡೂ ಸಭ್ಯತೆಗೆ ದೂರ ಎನ್ನುವುದರಿಂದ ಯಾವ ತಾಜಾ ಹಾಸ್ಯ ಸಾಧ್ಯವಾದೀತು? ಕೇವಲ ಘೊಳ್ಳೆಂದು ನಗಿಸುವ ಅಸಭ್ಯ ಹಾಸ್ಯದಲ್ಲಿ ಸಾಂಸ್ಕøತಿಕ ಸದಭಿರುಚಿಎಲ್ಲಿದ್ದೀತು? ನವಿರಾದ, ಯಾರ ಮನಸ್ಸನ್ನೂ ನೋಯಿಸದ, ನಾಗರಿಕವೆನ್ನಬಹುದಾದ ಹಾಸ್ಯ ಸಾಹಿತ್ಯರಚನೆ ನಗೆಯ ಮಾತಲ್ಲ. 

ಈ ಪುಸ್ತಕದಲ್ಲಿಗೊರೂರು ಅನಂತರಾಜುರವರ ಹಾಸ್ಯದ ಬಟ್ಟಲು ತುಂಬಿ ಚೆಲ್ಲಿದೆ. ಈ ಸಂಕಲನದ ಬರಹಗಳನ್ನು ವಿಭಾಗವಾಗಿ ಮಾಡಿದ್ದರೆ ಅದರ ಗುಣಗೌರವ ಹೆಚ್ಚುತ್ತಿತ್ತೇನೋ ಅನ್ನಿಸಿದರೂ ಹಾಸ್ಯ ಸಾಹಿತ್ಯಕ್ಕೂ ಸಾಲು ಮರ್ಯಾದೆಯೇಕೆ ಎಂದು ಅದನ್ನು ಬದಿಗಿರಿಸಬಹುದು. ವಿಡಂಬನಾ ಸಾಹಿತ್ಯವೇ ಸಾವಧಾನವಾಗಿ ಬೆಳೆದ ಒಂದು ಸಾಹಿತ್ಯ ಪ್ರಕಾರವಾಗಿರುವಾಗ ಕನ್ನಡದಲ್ಲಿ ಈ ದಿಸೆಗೆ ಹೆಜ್ಜೆ ಹಾಕುವವರಿಗೆಎಂಟೆದೆ ಬೇಕು. ಗೊರೂರುಅನಂತರಾಜುರವರು ಚಾತುರ್ಯದ ನಾಲ್ಕೆದೆಯನ್ನೀಗಾಗಲೇ ಬೆಳೆಸಿಕೊಂಡಿದ್ದಾರೆ. ಇನ್ನರ್ಧವನ್ನೂ ರೂಢಿಸಿಕೊಳ್ಳುವ ದಾರಿಯಲ್ಲೇ ಇದ್ದಾರೆ ಎಂಬುದು ಈ ಪುಸ್ತಕವನ್ನುಓದಿದ ಯಾರಿಗಾದರೂ ತಿಳಿಯದಿದ್ದರೆ ಅವರಿಗೆ ಹಾಸ್ಯ ಶಾಪ ಉಂಟೆಂದರ್ಥ.

ಕುಡುಕ ಕರಿಯಪ್ಪನ ಕಥೆಗಳ ಸರಣಿಯಲ್ಲಿರುವ ಜಾಡನ್ನೇ ಇನ್ನೂ ಕೆಲವಲ್ಲಿ ನಾವು ಕಾಣಬಹುದಾದರೂ ಬೇತಾಳ ಕತೆಯ ನೆರಳಿನಲ್ಲೇ ಬರೆದ ಇತರ ಪುಡಿ ಲೇಖನಗಳು ತಾತ್ಕಾಲಿಕವಾಗಿಯಾದರೂ ತಿಳಿಹಾಸ್ಯದ ಕೆಣಕಿನ ಕಚಗುಳಿಯಿಡುತ್ತದೆ. ಈವರೆಗಿನ ಮೂವತ್ತೈದಕ್ಕೂ ಹೆಚ್ಚು ಲೇಖನಗಳು ಬೇರೆ ಬೇರೆ ಪತ್ರಿಕೆಗಳಿಗೆ ಬೇರೆ ಬೇರೆ ಸಂದರ್ಭದಲ್ಲಿ ಬರೆದವುಗಳು ಎಂದುಕೊಂಡರೂ ಅಲ್ಲೊಂದು ಸಾವಧಾನ ಬೆಳವಣಿಗೆಯನ್ನು ನೋಡಿ ತೃಪ್ತಿ ಪಟ್ಟುಕೊಳ್ಳಬಹುದು. ಆಂಗ್ಲ ಮತ್ತಿತರ ಭಾಷೆಗಳ ಹಾಸ್ಯ ಸಾಹಿತ್ಯದಲ್ಲಿ ಕಾಣುವ ವೈವಿಧ್ಯಮಯ ತಾಂತ್ರಿಕತೆ ಇಲ್ಲಿಲ್ಲವಾದರೂ ಹೊಸ ಪ್ರಯೋಗಶೀಲ ಮಿದುಳಿಗೆ ಹೊಸ ಹೊಸ ಸಾಧ್ಯತೆಗಳು ಮುಂದೆ ಹೊಳೆದಾವು. ಅದಕ್ಕೆ ಕನ್ನಡದ ಹಲವೇ ವಿನೋದ ಸಾಹಿತಿಗಳಲ್ಲಿ ಒಬ್ಬರಾದ ಗೊರೂರು ಅನಂತರಾಜುರವರು ಹೊಸ ದಿಕ್ಕನ್ನು ನೀಡಬಲ್ಲರು ಎಂಬ ಭರವಸೆ ಮೂಡುತ್ತದೆ. ನಿಯತಕಾಲಿಕೆಗಳಿಂದ ಆಚೆಗೂ ಓದಿನ ಹುಚ್ಚುಳ್ಳವರಿಗಾಗಿಯೇ ಈ ಸಂಕಲನವನ್ನು ಸಿದ್ಧಪಡಿಸಿದಂತೆ ಇದೆ. ಇದು ಬವಣೆಗಳ ವ್ಯವಕಲನ ಖುಷಿಯ ಗುಣಾಕಾರ ಮತ್ತು ಅದನ್ನು ಹಂಚಿಕೊಳ್ಳುವ ಭಾಗಾಕಾರವನ್ನುಂಟು ಮಾಡಿದರೆ ಗೊರೂರು ಅನಂತರಾಜುರವರ ಲೆಕ್ಕಾಚಾರ ಸಿದ್ಧಿಸಿದಂತೆ. 

 ಪ್ರೊ.ವಿ.ನರಹರಿ, ಹಾಸನ.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top