ನಿನ್ನಲ್ಲಿ ಅದೇನು ಸೆಳೆತವೋ ನಾ ಕಾಣೆ... ಕಣ್ಣುಗಳು ಕೂಡ ನನ್ನ ಮಾತು ಕೇಳದೇ ಹಠವ ಮಾಡಲು ಶುರು ಮಾಡಿದೆ. ಪಾಪ ಅವುಗಳದಾದರೂ ತಪ್ಪೇನು ನೀ ಹೇಳು. ನಿನ್ನ ಮುದ್ದು ಮುಖವ ಕಂಡಷ್ಟು ಕಾಣಬೇಕೆಂಬ ಹುಚ್ಚು ಹಂಬಲವು ಮತ್ತಷ್ಟು ಪುಟಿದೇಳುತ್ತದೆ. ಬರಿದಾಗಿದ್ದ ನನ್ನ ಹೃದಯದ ಕದ ಬಡಿದವನು ನೀನು. ಪ್ರೀತಿಯ ಅರ್ಥವರಿಯದ ಮನಕೆ ಪ್ರೀತಿಸುವುದ ತಿಳಿಸಿಕೊಟ್ಟೆ. ಭಾವನೆಗಳು ಇಲ್ಲದ ಮನದಲ್ಲಿ ಬಣ್ಣದ ರಂಗು ತುಂಬಿದೆ ನನ್ನ ಕಾಡಿಸಿ ಬೇಡಿಸಿ ಪ್ರೀತಿಸಿದವನು ಹಗಲನ್ನು ಕನಸಾಗಿ ಕಂಡು ನನ್ನ ನಿದ್ದೆಯ ಕದ್ದವನು ನೀನು. ನಿನ್ನ ತೆಳು ನಗುವ ಕಂಡು ನಾ ಸೋತು ಹೋದೆ. ದಿನದ ಪ್ರತಿಕ್ಷಣ ನಿನ್ನ ಕುರಿತಾಗಿ ಯೋಚಿಸುವಂತೆ ನನ್ನ ಮರುಳುಗೊಳಿಸಿದೆ ನೀನು. ಪ್ರಾರಂಭದಲ್ಲಿ ನಿನ್ನ ಕುರಿತು ಯೋಚಿಸುವುದು ಅಸಾಧ್ಯವಿದ್ದ ಮನಕೆ ಈಗ ನಿನ್ನ ಕಲ್ಪಿಸದಿರುವುದೇ ಅಸಾಧ್ಯವಾಗಿ ಹೋಗಿದೆ. ನನ್ನ ದಿನದ ಪ್ರಾರಂಭವೂ ನೀನು ರಾತ್ರಿಯ ಕೊನೆಯ ನೆನಪು ನೀನು ಪ್ರಪಂಚವರಿಯದ ನನಗೆ ನನ್ನ ಪುಟ್ಟ ಜಗತ್ತು ನೀನಾಗಿ ಹೋದೆ.ನಿನ್ನ ಪ್ರೀತಿಯ ಋಣ ತೀರಿಸಲಾಗದ ನನಗೆ ಪ್ರೀತಿ ನೀಡಿರುವೆ.
ಅದೇನೋ ಗೊತ್ತಿಲ್ಲ ನೀನು ನನ್ನಿಂದ ದೂರದಲ್ಲಿ ಬರುತ್ತಿದ್ದರೂ ಕೂಡ ನನ್ನ ಹೃದಯವು ನಿನ್ನ ಇರುವಿಕೆಯನ್ನು ಕಂಡುಹಿಡಿಯುತ್ತದೆ.ಎಷ್ಟಾದರೂ ನೀನು ನನ್ನ ಪುಟ್ಟ ಹೃದಯದ ಒಡೆಯನಲ್ಲವೇ. ನೀ ಬಂದು ನನ್ನೆದುರು ನಿಂತಾಗ ಕಣ್ಣ್ರೆಪ್ಪೆಗಳ ಮುಚ್ಚಲು ಕೂಡ ಭೀತಿ ಆಗುತ್ತದೆ. ಯಾಕೆ ಗೊತ್ತಾ ಸಿಗುವ ಪ್ರತಿ ನಿಮಿಷದಲ್ಲು ನಿನ್ನನ್ನು ನನ್ನ ಕಣ್ಣುಗಳಲ್ಲಿ ಸೆರೆ ಹಿಡಿಯುವ ಹುಚ್ಚು ಬಯಕೆ ಈ ಹೃದಯಕೆ ನಿನ್ನ ಒಂದು ಕುಡಿ ನೋಟಕ್ಕಾಗಿ ನಾ ಚಾತಕ ಪಕ್ಷಿಯಂತೆ ತವಕಿಸುವೆ. ಕಾರಣವೇನೆಂದು ನನಗೂ ತಿಳಿದಿಲ್ಲ.
ಕಣ್ಣಮುಂದೆ ಅದೆಷ್ಟು ಮುಖಗಳು ಹಾದು ಹೋದರೂ ಯಾವುದೇ ಭಾವನೆಗಳ ಸುಳಿಯೊಳಗೆ ಸಿಲುಕುದ ನನ್ನ ಮನವು ನೀ ನನ್ನೆದುರು ಬಂದಾಗ ನನ್ನ ಮಾತೇ ಕೇಳುವುದಿಲ್ಲ. ಭಾವನೆಗಳ ಪ್ರವಾಹಕ್ಕೆ ಸಿಲುಕಿ ನನ್ನನ್ನು ನಾನು ನಿಯಂತ್ರಿಸಲು ಅದೆಷ್ಟು ಕಷ್ಟ ಪಡುತ್ತೇನೆ ಗೊತ್ತಾ? ನಿನ್ನೊಂದಿಗೆ ಮಾತನಾಡುವಾಗ ಹಾಗೂ ನಿನ್ನನ್ನು ನೋಡುವಾಗ ನನಗೆ ದೊರೆಯುವ ಖುಷಿ ಹಾಗೂ ಸಂತೋಷ ಜಗತ್ತಲ್ಲಿ ಕೋಟಿ ಕೊಟ್ಟರು ಬೇರೆಲ್ಲೂ ದೊರೆಯದು. ಎಷ್ಟಾದರೂ ನನ್ನ ಮುದ್ದು ರಾಜಕುಮಾರ ಅಲ್ಲವೇ ನೀನು.
-ಪ್ರಸಾದಿನಿ.ಕೆ ತಿಂಗಳಾಡಿ
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ