ಪ್ರೀತಿ ಯಾವುದೇ ಆಕಾರವಿಲ್ಲದ, ಆಧಾರ ಬಯಸದ, ಆಡಂಬರವಿಲ್ಲದ ಅಮೋಘ ಶಕ್ತಿ. ಸರ್ವವನ್ನೂ ಸ್ವಾಧೀನ ಪಡಿಸಿಕೊಳ್ಳಬಹುದಾದ, ಸರ್ವವನ್ನೂ ಬದಲಾಯಿಸಬಹುದಾದ, ಒಬ್ಬ ರಾಕ್ಷಸನನ್ನು ಮುಗ್ಧನನ್ನಾಗಿಸಿ ಬದಲಾಯಿಸುವ ಅನನ್ಯ ಶಕ್ತಿ.
ಅದು ಪದಗಳಿಗೆ ನಿಲುಕದ, ಕಣ್ಣಿಗೆ ಕಾಣದ, ಸ್ಪರ್ಶಿಸಲಾಗದ ಅಗೋಚರ ಶಕ್ತಿ. ಆದರೆ ಪ್ರೇಮಿಗಳ ಕೈಗೆ ಸಿಲುಕಿ ಪ್ರೀತಿ ಬಡಪಾಯಿಯಾಗಿದೆ! ತನ್ನ ನೈಜ ಮೌಲ್ಯವನ್ನು ಕಳೆದುಕೊಂಡಿದೆ. ಹಾಗಾಗಿ ಪ್ರೀತಿ ಕುರುಡು, ಅದೊಂದು ಮಾಯೆ, ಅದು ಹುಚ್ಚು ಆಕರ್ಷಣೆ,ತಂದೆ ತಾಯಿಗಳ ಪ್ರೀತಿ ಮಾತ್ರ ನೈಜ, ಅದು ಮಾತ್ರ ಶಾಶ್ವತ ಎಂಬ ನೈತಿಕ ತರ್ಕಕ್ಕೆ ಪ್ರೀತಿ ಸಿಲುಕುವಂತಾಗಿದೆ. ಆದರೆ ಆ ಪ್ರೀತಿ ವಾತ್ಸಲ್ಯ, ಜವಾಬ್ದಾರಿ, ಮಮತೆ ಎಂಬ ಕಾರಣಕ್ಕಾಗಿ ಹುಟ್ಟಿಕೊಳ್ಳುವಂತದ್ದು.
ಯಾವುದೇ ಕಾರಣ ಹುಡುಕದೆ, ಯಾವುದು? ಯಾಕೆ? ಹೇಗೆ? ಎಂದು ತಿಳಿಯದೆ ಎರಡು ಹೃದಯಗಳ ನಡುವೆ ಹುಟ್ಟುವ ಪ್ರೀತಿ ವಿಶೇಷವಾದದ್ದು. ಕೆಲವರು ಅದನ್ನು ಚಿಟ್ಟೆಗೆ, ಹಕ್ಕಿಗೆ, ಹೂವಿಗೆ ಹೋಲಿಸಬಹುದು. ಇನ್ನೂ ಕೆಲವರು ಅದನ್ನು ದೇವತೆ ಅನ್ನಬಹುದು ಅದು ಅವರವರ ವಿವೇಚನೆಗೆ, ಯೋಚನಾ ಲಹರಿಗೆ ಬಿಟ್ಟದ್ದು. ಪ್ರೇಮಿಗಳಾದ ನಾವು ನಮ್ಮ ಪ್ರೀತಿ ಇನ್ನೊಬ್ಬರಿಗೆ ಮಾದರಿಯಾಗಬೇಕು, ಅದು ಚಿರಕಾಲ ಉಳಿಯುವಂತಾಗಬೇಕು ಎಂದು ಬಯಸಿ ಬರಿಯ ಪ್ರೇಮ ಕಥೆಯನ್ನು ಸೃಷ್ಟಿಸುವ ಕಾತರದಲ್ಲಿದ್ದೇವೆ. ಆದರೆ ಅದು ಯಾರ ಕೈಗೂ ಸಿಗದೆ, ಯಾರ ಬಳಿಯೂ ಶಾಶ್ವತವಾಗಿ ಉಳಿಯದೆ, ಪವಿತ್ರ ಆತ್ಮದಂತೆ, ಸಂಚಾರವುಳ್ಳ ಪ್ರಕೃತಿಯ ಸುಂದರ ಸೃಷ್ಟಿ. ಪ್ರೇಮ ಕತೆಯ ಸೃಷ್ಟಿಯ ಭರದಲ್ಲಿ ಮುಗ್ದ ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ಸೋತಿದ್ದೇವೆ. ಹಾಗಾಗಿಯೇ ಪ್ರೇಮಿಗಳಿಗೆ ಮಾತ್ರವಲ್ಲ ಪ್ರೀತಿಗೂ ವಿರೋಧಗಳು ಹುಟ್ಟಿಕೊಂಡಿರುವಂತದ್ದು.
ಆದರೂ ಒಬ್ಬ ಪ್ರೇಮಿ ವಾತ್ಸಲ್ಯ ತೋರುವ ತಾಯಿಯಾದಾನು, ಕಾಳಜಿ ವಹಿಸುವ ತಂದೆಯಾದಾನು, ಕಂಬನಿ ಒರೆಸುವ ಸ್ನೇಹಿತನಾದಾನು, ತಿದ್ದಿ ಬುದ್ಧಿ ಹೇಳುವ ಗುರುವಾದಾನು.ಹಾಗಾಗಿ ಪ್ರೀತಿಯನ್ನು ನಮ್ಮಲ್ಲಿಯೇ ಶಾಶ್ವತವಾಗಿರಿಸಿಕೊಳ್ಳಲು, ಪ್ರೇಮಿಗಳ ನಡುವೆ ಬಂಧಿಸುವ ಬದಲು ಒಬ್ಬರಲ್ಲೊಬ್ಬರು ನಿಷ್ಕಲ್ಮಶ ಪ್ರೀತಿಯನ್ನು ಕಂಡುಕೊಳ್ಳಬಹುದು. ಅರಿಷಡ್ವರ್ಗಗಳನ್ನು ತ್ಯಜಿಸಿ ಪ್ರೀತಿಯನ್ನು ಪೂಜಿಸಿದಾಗ ಪರಮ ಪವಿತ್ರವಾದ ಪ್ರೀತಿಯ ದರ್ಶನವಾಗಬಹುದು. ಪವಿತ್ರ ಪ್ರೀತಿಯನ್ನು ಕಂಡುಕೊಂಡವರು ಪ್ರಪಂಚದಲ್ಲಿ ಪರಮ ಸುಖಿಗಳಾದಾರು, ಭಾಗ್ಯಶಾಲಿಗಳಾದಾರು.
ನನ್ನವನು ಹಾಗೆ
ನನ್ನೆದೆಯ ಪ್ರತಿ ಮಿಡಿತ
ಭಾವನೆಗಳ ತುಡಿತ
ಕನಸಲ್ಲಿ ಕಾಡಿ ಸತಾಯಿಸುವವ
ಮುತ್ತಿಕ್ಕಿ ಆಲಂಗಿಸುವವ
ಕೋಪದಲ್ಲಿ ಗದರಿಸುವವ
ಒಮ್ಮೊಮ್ಮೆ ನಿನ್ನ ತೊರೆಯಬೇಕೆಂದೆನಿಸಿದರೂ
ಮತ್ತೆ ಮತ್ತೆ ನಿನ್ನ ಪ್ರೀತಿಗೆ ಆಸರೆಯಾಗಿರುವೆ
ಆದರೂ ಆ ಪರಮ ಪವಿತ್ರ ಪ್ರೀತಿ ನನ್ನೊಳಗೂ ಇರಬಹುದು, ನಿನ್ನೊಳಗೂ ಇರಬಹುದು, ನಿಮ್ಮೊಳಗೂ ಇರಬಹುದು.
ಪ್ರೇಮಿಗಳ ದಿನದ ಶುಭಾಷಯಗಳು
-ಪ್ರತೀಕ್ಷಾ ಪದ್ಯಾಣ
ತೃತೀಯ ಬಿಎ, ಪತ್ರಿಕೋದ್ಯಮ ವಿಭಾಗ
ವಿ.ವಿ ಕಾಲೇಜು ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ