ಅನುರಾಗವಿರುವಲ್ಲಿ ಜೀವನ ಸರಾಗ
ಕೆಲವರು ಹಂಗೆ ಸುಮ್ ಸುಮ್ನೆ ಇಷ್ಟ ಆಗ್ಬಿಡ್ತಾರೆ.
ಅವರ ಆಡೋ ಮಾತು ಸುಳ್ಳು ಅಂತ ಗೊತ್ತಿದ್ರು ಅವರ ಮಾತಿಗೆ ತಲೆ ಅಲ್ಲಾಡಿಸ್ತೀವಿ,
ಅವರ ಮನಸ್ಸಿಲಿ ನಾವಿಲ್ಲ ಅನ್ನೋ ಸತ್ಯ ತಿಳಿದಿದ್ರೂ ಮುಂದೊಂದಿನ ಸಿಗಬಹುದೇನೋ ಅನ್ನೋ ಬರವಸೆಯಲ್ಲಿ ದಿನ ಕಳಿತೀವಿ,
ನಮ್ಮ ಭಾವನೆಗೆ ಅವರು ಪ್ರತಿಕ್ರಿಯಸದಿದ್ದರೂ ಅವರನ್ನ ಸದಾ ಗೌರವಿಸುತ್ತಲೇ ಇರ್ತೀವಿ,
ಅವರು ಬೇಡ ಅಂದ್ರು ಕಾಡಿ, ಬೇಡಿ ಪದೇ ಪದೇ ಉಡುಗರೇ ಕೊಡ್ತಾನೆ ಇರ್ತೀವಿ,
ನಮ್ಮ ಬಗ್ಗೆ ಕೊಂಚಿತ್ತೂ ಪ್ರೀತಿ ಇಲ್ಲ ಅಂತ ತಿಳಿದಿದ್ರೂ ನಾವು ಮಾತ್ರ ರಾಶಿ ಪ್ರೀತಿ ತೋರಿಸ್ತಾನೆ ಇರ್ತೇವಿ,
ಇದಕ್ಕೆಲ್ಲ ಕಾರಣ ನಮ್ಗೆ ಬೇರೆ ಯಾರೂ ಸಿಕ್ಕಿಲ್ಲ, ಗತಿಯಿಲ್ಲ ಅಂತ ಅಲ್ಲಾ, ಸಿಕ್ಕವರ್ಯಾರು ಮನಸಿಗೆ ಇವರಷ್ಟು ಇಷ್ಟ ಆಗಿಲ್ಲ ಅಂತ ಅರ್ಥ,
ಇದೆ ಪ್ರೀತಿಗಿರುವ ತಾಕತ್ತು...
ಜಗತ್ತಿನಲ್ಲಿ ಮಗುವಾಗು ನೀನು, ಮಡಿಲಾಗುವೆ
ನಾನು ಎಂದು ಅಕ್ಕರೆ ಚೆಲ್ಲುವ ಹೃದಯಕೆ ಸೋಲದವರು ಯಾರಾದರೂ ಇದ್ದಾರೆಯೇ?
ನೋ.. ವೇ... ಚಾನ್ಸೇ ಇಲ್ಲ... ಪ್ರೀತಿ ಗೆಲ್ಲುವುದೇ ಹಾಗೆ. ಪರಸ್ಪರರಲ್ಲಿ ಸಮರ್ಪಣೆಯ ಭಾವವೇ ಇದರ ಜೀವಾಳ. ಅನುರಾಗ ಇರುವಾಗ ಸಾವೆಲ್ಲಿಯದು ನೋವೆಲ್ಲಿಯದು. ಯುಗ ಮರುಳಾಗೊ ಜಗದ ಸವಿ ಪ್ರೇಮಕ್ಕೆ ಕರಗದ ಕವಿ ಯಾರಿದ್ದಾರೆ? ಒಂದು ಮುಗುಳ್ನಗೆಯಲ್ಲಿ ಅರಳಿದ ಪ್ರೀತಿಗೆ ಒಂದಿಷ್ಟು ಕಾಳಜಿ ಹಸಿ ಬಿಸಿ ತುಂಟಾಟ ಚೂರುಪಾರು ಮುನಿಸು, ಹಠ, ಜೊತೆಗೆ ಬೆಟ್ಟದಷ್ಟು ಪ್ರೀತಿ ಇಷ್ಟು ಸಾಕಲ್ಲವೇ ಜೀವನಕ್ಕೆ.
ಇಂದು ವಾಲೆಂಟೈನ್ಸ್ ಡೇ. ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಪ್ರೇಮಿಗಳ ದಿನಾಚರಣೆ.
ಈ ದಿನವನ್ನು ವಿಶ್ವದಾದ್ಯಂತ ಬಲು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೊಂದು ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು. ಫೆಬ್ರವರಿ 7 ರಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ಹಲವು ರೀತಿ ಸರ್ಪ್ರೈಸ್ ಗಿಫ್ಟ್ಗಳನ್ನು ನೀಡಿರುತ್ತಾರೆ. ಫೆಬ್ರವರಿ ಬಂತೆಂದರೆ ಸಾಕು ಅದು ಪ್ರೇಮಿಗಳ ತಿಂಗಳು.
ರೋಸ್ ಡೇ, ಹಗ್ ಡೇ, ಚಾಕೊಲೆಟ್ ಡೇ, ಪ್ರಪೋಸ್ ಡೇ, ಹೀಗೆ ಎಲ್ಲಾ ದಿನಗಳನ್ನು ದಾಟಿಕೊಂಡು ಫೆಬ್ರವರಿ 14 ನ್ನು ವ್ಯಾಲೆಂಟೈನ್ಸ್ ಡೇ ಆಗಿ ಆಚರಿಸುವ ಪ್ರೇಮಿಗಳಿಗೆ ಈ ತಿಂಗಳು ತುಂಬಾ ನೆಚ್ಚಿನ ತಿಂಗಳು. ಪ್ರತಿ ದಿನ ಕಿತ್ತಾಡುತ್ತಾ ಇರುವ ಜೋಡಿಗಳು 14 ರಂದು ತಮ್ಮ ಪ್ರೀತಿ ಪಾತ್ರರಿಗೆ ಕೆಂಗುಲಾಬಿ, ಚಾಕೊಲೆಟ್ ನೀಡಿ “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಹೇಳಿ ಬೆಲೆ ಬಾಳುವ ಉಡುಗರೇ ಕೊಟ್ಟು ಅವರನ್ನು ಖುಷಿ ಪಡೆಸಲು ಪ್ರಯತ್ನಿಸುತ್ತಾರೆ. ಇದೊಂದು ದಿನವೆಲ್ಲಾ ಖುಷಿಯ ವಾತಾವರಣ. ಇದು ತಪ್ಪು ಅಂತ ಅಲ್ಲ ಆದ್ರೆ ಮರುದಿನವಾದರೆ ಮತ್ತೆ ಅದೇ ಹೊಂದಾಣಿಕೆಯಿಲ್ಲದ ಜೀವನ, ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳದೆ ವಿರಸದ ಪಯಣ. ಹಾಗಾದರೆ ಪ್ರೇಮವೆಂಬುದು ಬರೀ ಗುಲಾಬಿ, ಉಡುಗೊರೆ, ಚಾಕೋಲೆಟ್, ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂಬ ಸಂದೇಷಕ್ಕಷ್ಟೇ ಸೀಮಿತವೇ ಎನ್ನುವದಾದರೆ ಇದು ನೂರಕ್ಕೆ ನೂರರಷ್ಟು ಸುಳ್ಳು. ಪ್ರೀತಿ ಎಂದರೆ ಕೇವಲ ಗುಲಾಬಿ, ಬೆಲೆ ಬಾಳುವ ಉಡುಗೊರೆ, ಚಾಕ್ಲೆಟ್ ಕೊಡುವದಂತೂ ಖಂಡಿತಾ ಅಲ್ಲ. ಪ್ರೇಮವೆಂಬುದು ಹೀಗೆ ಎಂದು ವ್ಯಾಖ್ಯಾನಿಸುವುದು ಕಷ್ಟ ಆದ್ರೆ ವ್ಯಾಲೆಂಟೈನ್ಸ್ ಡೇ ಯಾರೋ ಒಂದಿಷ್ಟು ಜನರಿಗೆ ಸೀಮಿತವಾದದ್ದಲ್ಲ. ಅದು ವ್ಯಾಖ್ಯೆಗೆ ನಿಲುಕದ್ದು. ಎಲ್ಲಾ ಮಿತಿಗಳನ್ನು ಮೀರಿ ಬೆಳೆದಿರುವಂತದ್ದು. ಅಂತಹ ಪ್ರೇಮವನ್ನು ಬರೀ ಪ್ರಿಯತಮ- ಪ್ರೇಯಸಿಯರಿಗಷ್ಟೆ ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ. ಅದರ ವ್ಯಾಪ್ತಿ ವಿಶಾಲವಾದದ್ದು.
ಮಮತೆಯಿಂದ ಮುದ್ದಿಸುವ, ತನ್ನೆಲ್ಲ ಆಸೆಗಳನ್ನು ಗಂಟು ಕಟ್ಟಿ, ಮಕ್ಕಳ ಖುಷಿಯಲ್ಲೇ ತನ್ನ ಖುಷಿಕಾಣುವ ಅಮ್ಮನದ್ದು ಪ್ರೇಮವೇ, ತನಗೆಂದು ಒಂದು ಏನನ್ನು ನಿರೀಕ್ಷಿಸದ, ಕಷ್ಟಗಳಿಗೆ ಕಣ್ಣಾಗಿ ದುಡಿಯುವ, ಹಗಲು ರಾತ್ರಿ ನಿದ್ದೆ ಇಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವ ಅಪ್ಪನ ಶ್ರಮ ಪ್ರೇಮದ ಪ್ರತಿರೂಪವೇ, ಅಮ್ಮ, ಅಪ್ಪನ ಮುಂದೆ ಹೇಳಿಕೊಳ್ಳಲಾಗದ ಅದೆಷ್ಟೋ ಸಮಸ್ಸೆಗಳಿಗೆ ಪರಿಹಾರ ನೀಡುವ, ನಮ್ ಜೊತೆ ನಿಲ್ಲುವ ಒಡಹುಟ್ಟಿದ ಸಹೋದರಿಯ ತ್ಯಾಗದ ಇನ್ನೊಂದು ಮುಖ ಕೂಡ ಪ್ರೇಮವೇ, ಕಷ್ಟ, ಸುಖಕೆ ಸದಾ ಜೊತೆಗಿರುವ ಗಂಡ, ಹೆಂಡತಿಯಾದ್ದು ಪ್ರೇಮವೇ, ಅಪ್ಪಂನಂತೆ ಪ್ರೀತಿ, ಮಮತೆ ತೋರಿ, ಹೊರಗಡೆ ಧೈರ್ಯದಿಂದ ಓಡಾಡಲು ನಮಗೆ ಕಾವಲುಗರಾನಾದ, ತರಲೆ ಮಾಡುತ್ತಲೇ ಕಾಳಜಿ ತೋರುವ ಅಣ್ಣ, ತಮ್ಮನದ್ದು ಪ್ರೇಮವೇ, ಜೊತೆಯಾಗಿ ಹುಟ್ಟದಿದ್ದರೂ, ಯಾವುದೇ ಸಂಬಂಧದವಿಲ್ಲದಿದ್ದರೂ ಪ್ರೀತಿ, ಕಾಳಜಿ ತೋರಿಸುವ, ಕಷ್ಟದಲ್ಲಿ ಸಾಥ್ ನೀಡುವ ಗೆಳೆಯರದ್ದು ಪ್ರೇಮವೇ. ಹೀಗೆ ನಾವು ಹುಟ್ಟಿದಾಗಿಂದ ಸಾಯುವವರೆಗೂ ಪ್ರತಿಯೊಬ್ಬರಿಂದ ಒಂದಲ್ಲ ಒಂದು ರೀತಿಯ ಪ್ರೀತಿ ನಿರೀಕ್ಷೆಯಲ್ಲಿ ಇರುವದು ಸಹಜ ಮತ್ತು ಅನಿವಾರ್ಯ. ಇವರೆಲ್ಲರ ಜೊತೆ ಈ ದಿನ ಆಚರಿಸೋಣ. ಪ್ರೀತಿಯ ಛಾಯೆ ಪ್ರತಿ ಸಂಬಂಧದಲ್ಲೂ ಇದೆ. ಅದನ್ನು ಉಳಿಸೋಣ, ಬೆಳಿಸೋಣ.
ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮಿಯತೆ ಮಾಯವಾಗಿದೆ. ಮೊಬೈಲ್‌ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆ ಆಗಿದೆ. ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆಯೇ ಹೊರತು ಅತಿಥಿಗಳ ಸತ್ಕಾರ ಮಾಡಲು ಜನರಿಗೆ ಸಮಯದ ಅಭಾವವಿದೆ. ಈ ದೃಶ್ಯಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಾಣುತ್ತ್ತಿದೆ.
ವ್ಯಾಲಂಟೈನ್ ಡೇ ಹೆಸರಲ್ಲಿ ಪ್ರೇಮಿಗಳ ದಿನದಂದು ಹೋಟೆಲ್ ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ, ಪಬ್ ಗಳಲ್ಲಿ ಹೆಣ್ಣು ಗಂಡು ಒಟ್ಟಿಗೆ ಸೇರಿ ಕಂಠಪೂರ್ತಿ ಕುಡಿದು ಮಜಾ ಮಾಡುತ್ತಾರೆ. ಅಪ್ರಾಪ್ತರೂ ಇದನ್ನು ಅನುಕರಿಸಿ ಸಮಾಜ ಅಧೋಗತಿ ಹೊಂದಲು ಕಾರಣರಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವೇದಿಕೆಗಳಲ್ಲಿ ಪ್ರೇಮಿಗಳು ಪರಸ್ಪರರು ಬಿಗಿಯಾಗಿ ತಬ್ಬಿಕೊಂಡು, ಅಪ್ಪುಗೆ, ಮುತ್ತು ಕೊಟ್ಟು, ಐ ಲವ್ ಯು ಎಂದು ಜೋರಾಗಿ ಚೀರಾಡಿ, ನೂರಾರು ಗುಲಾಬಿ ಹೂಗಳ ಗುಚ್ಛ ಕೊಟ್ಟು, ಹಾರ್ಟ್ ಶೇಪ್ ರೆಡ್ ಬಲೂನುಗಳ ಕೊಟ್ಟು, ಅವುಗಳಿಂದನೇ ಆ ವೇದಿಕೆ ಸಿಂಗರಿಸಿ ಪ್ರೀತಿ ವ್ಯಕ್ತಪಡಿಸುತಾ ಈ ರೀತಿಯಾಗಿ ಪ್ರೇಮಿಗಳ ದಿನ ಆಚರಿಸುವುದು ಎಷ್ಟು ಸರಿ? ಇದು ಅದು ಎಂಥಾ ಪ್ರೀತಿ?
ಪ್ರೀತಿ ತೋರಿಸಬೇಕು ಆದ್ರೆ ಹೀಗೆ ಜನರಿಗೆ ಕಾಣುವಂತೆ ಅಲ್ಲ. ಯಾರಿಗೆ ತೋರಿಸಬೇಕಾಗಿರುತ್ತೋ ಅವರಿಗೆ ತೋರಿಸಲೇಬೇಕು. ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಬೇಕು, ಹೇಗೆ ತೋರಿಸಬೇಕೋ ಹಾಗೆ ತೋರಿಸಬೇಕು, ಎಷ್ಟು ತೋರಿಸಬೇಕೋ ಅಷ್ಟು ತೋರಿಸಬೇಕು, ತೋರಿಸಬೇಕಾದವರಿಗೆ ಅವಕಾಶವಾದಾಗಲೆಲ್ಲಾ ತೋರಿಸಬೇಕು. ಪ್ರೀತಿ ಹೃದಯಕ್ಕೆ ಅರ್ಥವಾಗುವ ಭಾಷೆ. ಎಲ್ಲಿದ್ದರೂ ಪ್ರೀತಿಸುವವರಿಗೆ ಅರ್ಥವಾಗುತ್ತದೆ. ಹೀಗೆ ಪ್ರದರ್ಶಿಸುವ ಅವಶ್ಯಕತೆ ನಿಜಕ್ಕೂ ಇಲ್ಲ. ನಿಜವಾದ ಪ್ರೀತಿ ಒಂದು ದಿನಕ್ಕೆ ಮೀಸಲಾಗಿ ಎಡುವಂತದಲ್ಲ. ಪ್ರತಿ ದಿನ ಆಚರಿಸುವ ಹಬ್ಬ. ಅವರಿಗೆ ಇಷ್ಟವಾಗುವ ವಸ್ತುಗಳ, ತಿನಿಸುಗಳ, ಉಡುಪುಗಳ, ಕೊಡಿಸುತ್ತ ವ್ಯಕ್ತಪಡಿಸಬೇಕು, ಇಷ್ಟವಾದ ಆಹಾರವ ಆಗಾಗ ಮಾಡಿ ಬಡಿಸುತ್ತಾ ವ್ಯಕ್ತಪಡಿಸಬೇಕು, ದಣಿದು ಮನೆಗ ಬಂದವರನ್ನು ಕಾಳಜಿ ತೋರಿಸುತ್ತಾ ಪ್ರೀತಿ ವ್ಯಕ್ತಪಡಿಸಬೇಕು, ಒಬ್ಬರ ಮಾತಿಗೆ ಒಬ್ಬರು ಗೌರವಿಸುತ್ತಾ, ಒಬ್ಬರ ಇಷ್ಟದಂತೆ ಮತ್ತೊಬ್ಬರು ಬದಕುತ್ತಾ ಪ್ರೀತಿ ವ್ಯಕ್ತಪಡಿಸಬೇಕು, ಅದೆಷ್ಟೇ ಬ್ಯುಸಿ ಇದ್ರು ಒಬ್ಬರಿಗೊಬ್ಬರು ಸಮಯ ಕೊಡುತ್ತಾ ಪ್ರೀತಿ ವ್ಯಕ್ತಪಡಿಸಬೇಕು, ಹೀಗೆ ಮಾಡುವದರಿಂದ ಇದರಿಂದ ಪರಸ್ಪರರು ಒಬ್ಬರನ್ನೊಬ್ಬರು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆಂದು ತಿಳಿಯುವ ಜತೆಗೆ ಅವರ ಮಧ್ಯದ ಪ್ರೀತಿಯ ಗಾಢತೆ ತಿಳಿಯುತ್ತದೆ. ಇದರಿಂದ ಸಂಬಂಧಗಳು ಬಿಗಿಗೊಳ್ಳುವುವು.
ನಿಜ ಈ ವ್ಯಾಲೆಂಟೈನ್ಸ್ ಡೇ ಯಾರೋ ಒಂದಿಷ್ಟು ಜನರಿಗೆ ಸೀಮಿತವಾಗಿ ಮಾಡುವದು ಬೇಡ. ಎಲ್ರಿಗೂ ಪ್ರೀತಿ ನೀಡೋಣ, ಪ್ರೀತಿ ಪಾತ್ರರಿಗೆ, ಅವರ ಮತ್ತು ನಮ್ಮ ತಂದೆ ತಾಯಿ ಮಕ್ಕಳಿಗೆ ಉಡುಗರೇ ನೀಡಿ ಮತ್ತೊಬ್ಬರ ಖುಷಿಯಲ್ಲಿ ಪಾತ್ರರಾಗೋಣ, ಕೋಟ್ಟವರಿಂದ ಏನು ನಿರೀಕ್ಷಿಸುವದು ಬೇಡ ಒಂದು ಮುದ್ದಾದ ನಗು ಬಂದರೆ ಸಾಕು ಅದೇ ಮನಸಿಗೆ ತೃಪ್ತಿ.
ನಮ್ಮನ್ನು ನಾವು ಪ್ರೀತಿಡುವದು, ಖುಷಿ ಪಡೆಸುವದು ಇದ್ದೆ ಇದೆ ಇಂತ ವಿಶೇಷ ದಿನದಲ್ಲಿ ಸ್ವಾರ್ಥ ಬದಿಗಿಟ್ಟು ಇನ್ನೊಬ್ಬರಲ್ಲಿ ನಮ್ಮ ಖುಷಿ ಕಾಣುವದೇ ನಿಜವಾದ ಮಾನವೀಯತೆ.
ಮುಷ್ಠಿ ಅಳತೆಯ ಮಾಂಸದ ಮುದ್ದೆಯಲ್ಲಿ ಅದೆಷ್ಟೋ ಭಾವನೆ, ಪ್ರೀತಿ, ಕನಸು ಹೊತ್ತು, ತನ್ನವರಿಗಾಗಿ, ತಾನು ಪ್ರೀತಿಸುವರಿಗಾಗಿ, ತನ್ನ ಕುಟುಂಬದವರಿಗಾಗಿ ಹಂಬಲಿಸುತ್ತಿರುವ ಈ ಹೃದಯಕೆ ಸರಿಸಾಟಿ ಯಾರು...? ನಮ್ಮನ್ನು ಪ್ರೀತಿಸುವ ಹೃದಯ ಸಿಗುವದೇ ಅಪರೂಪ ಈ ಕಾಲಕ್ಕೆ ಅಂತ ಹೃದಯ ಸಿಕ್ಕಾಗ ಕಷ್ಟ ಆದರೂ ಸರಿ ಇಷ್ಟ ಪಟ್ಟು ಕೊಂಚ ಪ್ರೀತಿಯ ಮಳೆ ಸುರಿಸಿ ಬಿಡೋಣ... ಅವಸರದಲ್ಲಿ ಅಂತ ಮನಸ್ಸಿಗೆ ಅಲಕ್ಷ ಮಾಡಿ, ಅವರ ಭಾವನೆಗಳಿಗೆ ಏಟು ಬಿದ್ರೆ ಎಂತ ಸೂಕ್ಷ್ಮ ಹೃದಯವು ಕಲ್ಲಾಗಿ ಬಿಡುತ್ತೆ... ಅದಕ್ಕೆ ಅವಕಾಶ ಮಾಡಿಕೊಡುವಾದ್ಯಕೆ ಅಲ್ವಾ...?
ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ...
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ