ಭೂಮಿತಾಯ ಪೂಜಿಸುವ ತುಳುನಾಡ ಹಬ್ಬ ಕೆಡ್ಡಸ

Upayuktha
0

ತುಳುನಾಡಿನವರು ಮೂಲತಃ ಕೃಷಿಕರು. ಅವರ ಹೆಚ್ಚಿನ ಹಬ್ಬಗಳು ಕೃಷಿಗೆ ಸಂಬಂಧಿಸಿರುತ್ತದೆ. ಅದರಲ್ಲೊಂದು ಈ ಫೆಬ್ರವರಿ ತಿಂಗಳಿನಲ್ಲಿ ಬರುವ ಕೆಡ್ಡಸ ಹಬ್ಬ. ವರ್ಷವಿಡೀ ಫಲ ಕೊಡುವ ಭೂಮಿಗೆ ವಿಶೇಷವಾದ ಪೂಜೆ ಸಲ್ಲಿಸುವುದು ಈ ಹಬ್ಬದ ಹಿಂದಿನ ಉದ್ದೇಶ. ಇದು ಭೂಮಿ ಪೂಜೆ ಎಂದೇ ಪ್ರಸಿದ್ಧವಾಗಿದೆ. ಕೆಡ್ಡಸ ಹಬ್ಬಕ್ಕೆ ವಿಶೇಷವಾದ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯೂ ಇದೆ.


ಕೆಡ್ಡಸ ಹಬ್ಬವನ್ನು ತುಳು ತಿಂಗಳಿನ ಪೋನಿ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಸಂಕ್ರಾಂತಿಗಿಂತ ಮೂರು ದಿನ ಮೊದಲು ಆಚರಿಸಲಾಗುತ್ತದೆ. ಈ ವರ್ಷ ಫೆ.10 ರಿಂದ 12ರ ತನಕ ತುಳುನಾಡಿನೆಲ್ಲಡೆ ಆಚರಿಸುತ್ತಿದ್ದಾರೆ. ಕೆಡ್ಡಸವೆಂದರೆ ಭೂಮಿತಾಯಿ ಪುಷ್ಪವತಿಯಾಗುವ ದಿನಗಳು. ಈ ಮೂರು ದಿನಗಳನ್ನು- ಶುರು ಕೆಡ್ಡಸ, ನಡು ಕೆಡ್ಡಸ, ಕಡೇ ಕೆಡ್ಡಸ ಎಂದು ಕರೆಯುತ್ತಾರೆ. ಭೂಮಿ ಎಂದರೆ ಹೆಣ್ಣು; ಆಕೆ ತಾಯಿ ಸಮಾನ. ಜನ್ಮ ನೀಡಿದ ತಾಯಿಯಂತೆಯೇ ಪೂಜನೀಯಳು. ಹೆಣ್ಣಾದ ಭೂಮಿತಾಯಿ ವರ್ಷದಲ್ಲಿ ಒಮ್ಮೆ ಋತುಮತಿ ಆಗುವುದು ಎಂಬ ನಂಬಿಕೆಯಿದೆ. ಹೀಗೆ ಋತುಮತಿಯಾದ ನಂತರ ಭೂಮಿತಾಯಿ ಸ್ನಾನಾದಿ ಸಂಪ್ರದಾಯಗಳನ್ನು ಮಾಡಿ ಪರಿಶುದ್ಧಳಾಗುವುದು ಎಂಬ ಸಂಪ್ರದಾಯ ಈ ಕೆಡ್ಡಸ ಹಬ್ಬದ ನಂಬಿಕೆ. ಈ ಸಮಯದಲ್ಲಿ ಭೂಮಿತಾಯಿ ಭೂಮಿಯ ಫಲವತ್ತತೆಯನ್ನು ಪಡೆಯುತ್ತಾಳೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಕೆಡ್ಡಸ ಫಲವತ್ತತೆಯ ಸಂಕೇತ ಕೂಡ ಹೌದು. ಈ ಸಮಯದಲ್ಲಿ ಭೂಮಿಯ ವಾತಾವರಣದಲ್ಲಿ ಕೂಡ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಸಹ ಕಾಣಬಹುದು. ಕೆಡ್ಡಸದ ಸಮಯದಲ್ಲಿ ಭೂಮಿ ಉಳುವುದು, ಅಗೆಯುವ ಕೆಲಸ ಮಾಡಬಾರದು. ಈ ಸಮಯದಲ್ಲಿ ಕೃಷಿಯಲ್ಲಿ ತೊಡಗಿ ಭೂಮಿಗೆ ನೋವುಂಟುಮಾಡಿದರೆ ಭೂಮಿತಾಯಿ ಕೋಪಗೊಳ್ಳುತ್ತಾಳೆ, ಆಕೆ ಬಂಜೆಯಾಗುತ್ತಾಳೆ ಎಂಬುದು ತುಳುನಾಡಿನವರ ನಂಬಿಕೆ.


ಮೊದಲನೇ  ದಿನವಾದ ಶುರು ಕೆಡ್ಡೆಸದ ದಿನ ಬೆಳಗ್ಗೆ ಹೆಂಗಸರು ಅಂಗಳದಲ್ಲಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುದ್ಧಿ ಮಾಡುತ್ತಾರೆ. ದೀಪ ಬೆಳಗುತ್ತಾರೆ. ನವಧಾನ್ಯಗಳನ್ನು ಪುಡಿ ಮಾಡಿ ಬೆಲ್ಲ, ಅರಳು, ತೆಂಗಿನ ತುರಿ ಹಾಕಿ ಭೂಮಿತಾಯಿಯ ಎದುರು ಬಾಳೆ ಎಲೆಯಲ್ಲಿ ಇಡುತ್ತಾರೆ. ಇದು ಬಯಕೆಯ ಸಂಕೇತವಾಗಿದೆ. ನಂತರ ಅದನ್ನು ಮನೆ ಮಂದಿ ಹಂಚಿ ತಿನ್ನುತ್ತಾರೆ. ಇದನ್ನು ನನ್ನೇರಿ ಎಂದು ಕರೆಯುತ್ತಾರೆ.


ಎರಡನೇ ದಿನವಾದ ನಡು ಕೆಡ್ಡಸದಂದು ಕೆಲವರು ಬೇಟೆಯಾಡಿ ಮಾಂಸದ ಆಹಾರ ತಯಾರಿಸುತ್ತಾರೆ. ಮೂರನೇ ದಿನವಾದ ಕಡೆ ಕೆಡ್ಡಸದಂದು ಮೂರು ಲೋಳಿಸರದ ಎಲೆಗಳು, ಮೂರು ಮಾವಿನ ಎಲೆಗಳು, ಮೂರು ಹಲಸಿನ ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ ಬೆಳಗಿಸಿ ಎಣ್ಣೆ, ಸೀಗೆ ಮುಂತಾದುವುಗಳನ್ನುಇಡುತ್ತಾರೆ. ಇದು ಭೂಮಿದೇವಿಯ ಸ್ನಾನಕ್ಕೋಸ್ಕರ ಎಂಬುದು ನಂಬಿಕೆ. ಭೂಮಿದೇವಿಯ ಅಲಂಕಾರಕ್ಕಾಗಿ ಕುಂಕುಮ, ಬಾಚಣಿಗೆ, ಕನ್ನಡಿಯನ್ನು ಇಡುತ್ತಾರೆ. ಹೀಗೆ ಭೂಮಿತಾಯಿ ಶುದ್ಧಿಗುತ್ತಾಳೆ ಎಂದು ನಂಬಲಾಗುತ್ತದೆ.


ಕೆಡ್ಡಸದಂದು ಭೂಮಿಗೆ ಎಣ್ಣೆ ಬಿಡುವುದು ಎಂಬ ಸಂಪ್ರದಾಯವಿದೆ. ಅಲ್ಲದೆ ಭೂಮಿತಾಯಿ ಸಿಂಗಾರಕ್ಕಾಗಿ ರಂಗೋಲಿ ಹಾಕಿ, ಕನ್ನಡಿ, ಬಾಚಣಿಗೆ, ಹಾರ ಇತ್ಯಾದಿಗಳನ್ನು ಇಡುವ ಸಂಪ್ರದಾಯ ಕೆಲವೆಡೆ ಇದೆ. ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಪ್ರದೇಶಗಳಲ್ಲಿ ಹಾಗೂ ಕೊಡಗಿನಲ್ಲಿ ಈ ಹಬ್ಬ ಆಚರಣೆಯಲ್ಲಿದೆ. ಪ್ರದೇಶದಿಂದ ಪ್ರದೇಶಕ್ಕೆ ಸಂಪ್ರದಾಯದಲ್ಲಿ ಸಣ್ಣಪುಟ್ಟ ಬದಲಾವಣೆಯನ್ನೂ ಕಾಣಬಹುದಾಗಿದೆ. ಈ ಸಂಪ್ರದಾಯಗಳ ಮೂಲಕ ನಮ್ಮ ಪೂರ್ವಿಕರು ಭೂಮಿತಾಯಿಯನ್ನು ಪೂಜಿಸುತ್ತಾ ಪ್ರಕೃತಿ ಪ್ರೇಮ, ಮಾನವೀಯ ಸಂಬಂಧಗಳನ್ನು ಮೆರೆಯುತ್ತಿದ್ದರು. 


-  ಜಯಶ್ರೀ ಸಂಪ





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top