ಹಾಳಾಗಿರುವ ದೇವರ ಫೋಟೋಗಳ ವಿಲೇವಾರಿ ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

Upayuktha
0

ಚಕ್ರವರ್ತಿ ಸೂಲಿಬೆಲೆ ಅವರ ಯುವಾ ಬ್ರಿಗೇಡ್‌ನಿಂದ ಸ್ತುತ್ಯರ್ಹ ಕಾರ್ಯ



ಬೆಂಗಳೂರು: ಇದೊಂದು ನಿಜಕ್ಕೂ ಸ್ತುತ್ಯರ್ಹ ಕಾರ್ಯ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹದೊಂದು ಸಾರ್ವಜನಿಕ ಜಾಗೃತಿ ಮೂಡಿಸುವ ಮತ್ತು ಸಾರ್ವಜನಿಕ ಸೇವಾ ಕಾರ್ಯ ಅತ್ಯಗತ್ಯವಾಗಿತ್ತು. ಅದನ್ನು ಯುವಾ ಬ್ರಿಗೇಡ್‌ ಮುಖ್ಯಸ್ಥರಾದ ಸಾಮಾಜಿಕ ಕಾರ್ಯರ್ತ, ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಸಮಾನ ಮನಸ್ಕ ಸಹವರ್ತಿಗಳ ಜತೆಗೂಡಿ ಮಾಡುತ್ತಿದ್ದಾರೆ.


ನಮ್ಮ ನಿಮ್ಮೆಲ್ಲರ ಮನೆಗಳಲ್ಲಿ ದೇವರ ಫೋಟೋಗಳನ್ನಿಟ್ಟು ನಮಸ್ಕರಿಸುತ್ತೇವೆ, ಪೂಜೆ ಮಾಡುತ್ತೇವೆ. ಯಾವುದೋ ಕಾರಣಕ್ಕೆ ದೇವರ ಫೋಟೋಗೆ ಹಾನಿಯಾದರೆ, ಅದರ ಗಾಜು ಒಡೆದರೆ, ಗೆದ್ದಲು ಅಥವಾ ಫಂಗಸ್‌ ಬಂದು ದೇವರ ಚಿತ್ರ ಹಾಳಾದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲೂ ಆಗದು, ಇತರೆ ಕಸಗಳ ಜತೆ ಎಸೆಯಲೂ ಆಗದು. ಅಂತಹ ಸಂದರ್ಭಗಳಲ್ಲಿ ಜನರು ಸುಲಭವಾಗಿ ಮಾಡುವುದು ಏನೆಂದರೆ, ತಮ್ಮ ಮನೆಯಿಂದ ಅವುಗಳನ್ನು ಹೊರಹಾಕಿ ರಸ್ತೆ ಬದಿಯಲ್ಲೋ, ಯಾವುದೋ ಮರದ ಬುಡದಲ್ಲೋ, ಸಾರ್ವಜನಿಕರು ಕುಳಿತುಕೊಳ್ಳುವ ಕಟ್ಟೆಗಳ ಮೇಲೋ ಇಟ್ಟು ಕೈತೊಳೆದುಕೊಳ್ಳುತ್ತಾರೆ.


ನಾವೆಲ್ಲ ಪೂಜಿಸುವ, ಭಕ್ತಿಯಿಂದ ನಡೆದುಕೊಳ್ಳುವ ದೇವರ ಫೋಟೋಗಳನ್ನು ಹೀಗೆ ಇಟ್ಟು ಬಿಡುವುದೂ ಸಹ ಒಂದು ರೀತಿಯಲ್ಲಿ ಅವಮಾನಿಸಿದಂತೆಯೇ ಸರಿ. ಎಲ್ಲೋ ಅಶುದ್ಧ ಜಾಗದಲ್ಲಿ ದೇವರ ಫೋಟೋಗಳನ್ನು ಇಡುವುದು ಶ್ರದ್ಧಾಳುಗಳಿಗೆ ಸರಿ ಎನಿಸುವಂತಹ ವಿಚಾರವಲ್ಲ. ಹಾಗಾದರೆ ಏನು ಮಾಡೋದು? ಹಾಳಾದ ಫೋಟೋಗಳನ್ನಂತೂ ವಿಲೇವಾರಿ ಮಾಡಲೇಬೇಕಲ್ಲಾ...? ವಿಲೇವಾರಿ ಮಾಡುವ ವಿಧಾನ ಹೇಗೆ? ಈ ಬಗ್ಗೆ ಇದಮಿತ್ಥಂ ಎಂಬಂತೆ ಶಾಸ್ತ್ರ ಸಮ್ಮತ ರೀತಿಯಲ್ಲಿ ವಿಲೇವಾರಿ ಮಾಡುವುದು ಯಾರಿಗೂ ತಿಳಿದಿಲ್ಲ.


ಎಲ್ಲರಿಗೂ ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತಹ ವಿಧಾನದ ಅರಿವೂ ಇರುವುದಿಲ್ಲ. ಮುಖ್ಯವಾಗಿ ನಮ್ಮ ಧರ್ಮಗುರುಗಳು, ಶಾಸ್ತ್ರ ಕೋವಿದರಲ್ಲೇ ಹಾಳಾದ ಅಥವಾ ಚ್ಯುತಿ ಬಂದ ದೇವರ ಬಿಂಬಗಳನ್ನು ವಿಲೇವಾರಿ ಮಾಡುವ ವಿಧಾನದ ಬಗ್ಗೆ ಒಮ್ಮತವಿಲ್ಲ. ಕೆಲವರು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಅನ್ನುತ್ತಾರೆ. ಬೆಂಗಳೂರಿನಂತಹ ನಗರದಲ್ಲಿ ಹರಿಯುವ ನೀರನ್ನು ಎಲ್ಲಿ ಹುಡುಕಿಕೊಂಡು ಹೋಗೋದು..? ಹೋದರೂ ಸಿಗುವುದು ವೃಷಭಾವತಿಯಂತಹ ಕೊಳಚೆ ನೀರು ಹರಿಯುವ ತೋಡುಗಳೇ ಹೊರತು ಶುದ್ಧ ನೀರಿನ ನದಿಗಳಿಲ್ಲ. ಒಂದೊಮ್ಮೆ ಶುದ್ಧ ನೀರಿನ ನದಿಗಳನ್ನೇ ಹುಡುಕಿಕೊಂಡು ಹೋಗಿ ದೂರದಲ್ಲೆಲ್ಲಾದರೂ ಹಾಕಿ ಬಂದರೆ ಆಗಲೂ ಸಮಸ್ಯೆ ತಪ್ಪಿದ್ದಲ್ಲ. ಆ ನೀರಿನ ಮೂಲವನ್ನು ಮಾಲಿನ್ಯಗೊಳಿಸಿದಂತಾಗುತ್ತದೆ ಎನ್ನುವ ನಾಗರಿಕ ಪ್ರಜ್ಞೆ ಕಾಡುತ್ತದೆ; ಮತ್ತು ಕಾಡಲೂ ಬೇಕು.


ಇಂತಹ ಸನ್ನಿವೇಶಗಳಿಗೆ ಪರಿಹಾರವೆಂಬಂತೆ ಚಕ್ರವರ್ತಿ ಸೂಲಿಬೆಲೆ ಅವರ ತಂಡ ಬೆಂಗಳೂರಿನ ಗಿರಿನಗರದಲ್ಲಿ ಒಂದು ಕಡೆ ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಕಿ ಬರುವ ದೇವರ ಫೋಟೋಗಳನ್ನು ಸಂಗ್ರಹಿಸಿ ಅವುಗಳ ಎಲ್ಲ ಭಾಗಗಳನ್ನೂ ಪ್ರತ್ಯೇಕಿಸಿ, ಫೋಟೋ ಫ್ರೇಮ್‌ ಮತ್ತು ಗಾಜುಗಳನ್ನು ಮರು ಬಳಕೆ ಮಾಡುವವರಿಗೆ ಒದಗಿಸುತ್ತಾರೆ. ದೇವರ ಚಿತ್ರದ ಕಾಗದ ಮತ್ತು ಮರುಬಳಕೆ ಸಾಧ್ಯವಾಗದ ಫ್ರೇಮ್‌ನ ತುಂಡುಗಳು ಸೇರಿದಂತೆ ಮಣ್ಣಿನಲ್ಲಿ ಬೆರೆತು ಗೊಬ್ಬರವಾಗಬಲ್ಲ ವಸ್ತುಗಳನ್ನು ಮಾತ್ರ ನೆಲದಲ್ಲಿ ಗುಂಡಿ ತೋಡಿ ಹೂತುಹಾಕಿ ಅದರ ಮೇಲೆ ಗಿಡವೊಂದನ್ನು ನೆಡುವ ಪ್ರಯೋಗವನ್ನು ಮಾಡುತ್ತಿದ್ದಾರೆ.


ಸೂಲಿಬೆಲೆ ಮತ್ತು ಅವರ ತಂಡ ಹೀಗೆ ಕೆಲವೇ ದಿನಗಳಲ್ಲಿ ನಗರದ ವಿವಿಧ ಪ್ರದೇಶಗಳಿಂದ ಒಂದು ವಾರದಲ್ಲಿ 10,000ಕ್ಕೂ ಹೆಚ್ಚು ಎಸೆಯಲ್ಪಟ್ಟ ದೇವರ ಚಿತ್ರಗಳನ್ನು ಸಂಗ್ರಹಿಸಿ ಒಂದೆಡೆ ಕಲೆಹಾಕಿ ಕ್ರಮಬದ್ಧ ರೀತಿಯಲ್ಲಿ ವಿಲೇವಾರಿ ಮಾಡುವ ಅನನ್ಯ ಕಾರ್ಯವನ್ನು ಆರಂಭಿಸಿದ್ದಾರೆ.  'ಕಣಕಣದಲ್ಲೂ ಶಿವ' ಎಂಬ ಚೆಂದದ ಹೆಸರಿಟ್ಟುಕೊಂಡು ದೇವರ ಚಿತ್ರಗಳು ಬೆಳೆಯುತ್ತಿರುವ ಆ ಗಿಡದ ರೂಪದಲ್ಲಿ ಜನರಿಗೆ ದರ್ಶನ ನೀಡುತ್ತದೆ ಎಂಬ ಪರಿಕಲ್ಪನೆಯನ್ನು ಅವರು ಮುಂದಿಡುತ್ತಾರೆ.


ಅನ್ಯ ಮತೀಯರಿಂದ ಹಿಂದೂ ಧರ್ಮದ ನಂಬಿಕೆ, ಶ್ರದ್ಧೆ, ಆಚರಣೆಗಳ ಬಗ್ಗೆ ಹೀಯಾಳಿಕೆ, ಅಪಮಾನಗಳಂತಹ ದಾಳಿಗಳು ಅವ್ಯಾಹತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಹಿಂದೂ ಧರ್ಮದ ಒಳಗಿದ್ದುಕೊಂಡೇ ನಾಶಪಡಿಸುವ ಗೆದ್ದಲು ಹುಳಗಳಂತಹ ಎಡಚರ ಕುತ್ಸಿತ ಕಥನಗಳಿಂದ ನಮ್ಮ ನಂಬಿಕೆಗಳನ್ನು ಪಾರು ಮಾಡಲು ಇಂತಹದೊಂದು ಕಾರ್ಯವನ್ನು ಮಾಡುವುದು ಅನಿವಾರ್ಯವಾಯಿತು ಎನ್ನುತ್ತಾರೆ ಸೂಲಿಬೆಲೆ. ನಿಮ್ಮ ದೇವರಿಗೆ ಸ್ವತಃ ಅವರನ್ನೇ ರಕ್ಸಿಸಿಕೊಳ್ಳುವ ಸಾಮರ್ಥ್ಯವಿಲ್ಲ ಎಂಬಂತಹ ಅಪದ್ಧ ವ್ಯಾಖ್ಯಾನಗಳನ್ನು ಮುಂದಿಟ್ಟು ಮತಾಂತರಕ್ಕೆ ಯತ್ನಿಸುವ ಅನ್ಯ ಮತೀಯರ ಹುನ್ನಾರಗಳಿಗೆ ಉತ್ತರವಾಗಿ ದೇವರ ಫೋಟೋಗಳು, ಬಿಂಬಗಳನ್ನು ವಿಲೇವಾರಿ ಮಾಡುವ ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾರೆ ಸೂಲಿಬೆಲೆ.


ಎಲ್ಲರೂ ಮನೆಯಲ್ಲೇ ಮಾಡಿಕೊಳ್ಳಬಹುದಾದ ಪರಿಹಾರವನ್ನೂ ಸಹ ಅವರ ಸೂಚಿಸುತ್ತಾರೆ. ಅದು ಸಿಂಪಲ್ಲಾಗಿದೆ. ಹಾಳಾಗಿರುವ ಫೋಟೋವನ್ನು ಮನೆಯಲ್ಲೇ  Dismantle ಮಾಡಿಕೊಂಡು ಎಸೆಯಬಹುದಾದ ಭಾಗಗಳನ್ನು ಕಸ ಸಂಗ್ರಹಿಸುವವರಿಗೆ ನೀಡಬಹುದು. ದೇವರ ಚಿತ್ರವಿರುವ ಕಾಗದದ ತುಂಡುಗಳನ್ನು ಕುಂಡವೊಂದರಲ್ಲಿ ಹಾಕಿ ಮಣ್ಣು ತುಂಬಿ ಹೂಗಿಡವನ್ನು ನೆಡಬಹುದು.


ಚಕ್ರವರ್ತಿ ಸೂಲಿಬೆಲೆಯವರು ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ಹಂಚಿಕೊಂಡ  ಈ ವೀಡಿಯೋ ನೋಡಿ; ಅದರಿಂದ ನೀವೂ ಪ್ರೇರಣೆ, ಸ್ಫೂರ್ತಿ ಪಡೆದರೆ ಅಷ್ಟರ ಮಟ್ಟಿಗೆ ಈ ಪ್ರಯತ್ನ ಯಶಸ್ವಿ.




- ಚಂದ್ರಶೇಖರ ಕುಳಮರ್ವ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top