ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತ: ಡಾ.ಜೋಶಿ

Upayuktha
0

ಎಸ್‌ಡಿಎಂ ಯಕ್ಷೋತ್ಸವ ಸಮಿತಿಯಿಂದ ಬಲಿಪರಿಗೆ ನುಡಿನಮನ


ಮಂಗಳೂರು: 'ಬಲಿಪ ನಾರಾಯಣ ಭಾಗವತರದು ಮೇರು ವ್ಯಕ್ತಿತ್ವ. ಅಪಾರ ಅನುಭವ ಹೊಂದಿದ್ದರೂ ಗರ್ವ ವರ್ಜಿತರಾದ ನಿಜಾರ್ಥದ ಭಾಗವತ ಬಲಿಪರು. ಅವರ ಅಗಲುವಿಕೆಯ ಬಳಿಕವೂ ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತವಾಗಿರುತ್ತದೆ' ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು. 


ಗುರುವಾರ ನಿಧನರಾದ ಪ್ರಸಿದ್ಧ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಯಕ್ಷೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಲಿಪ ಪರಂಪರೆ:

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ ಮಾತನಾಡಿ 'ತೆಂಕುತಿಟ್ಟು ಯಕ್ಷಗಾನದ ಪ್ರಮುಖ ಘರಾನವೆನಿಸಿದ ಬಲಿಪ ಪರಂಪರೆಯಲ್ಲಿ ಹಿರಿಯ ಅಜ್ಜ ಬಲಿಪರ ನಂತರ ಅಷ್ಟೇ ಸಮರ್ಥವಾಗಿ ಅದನ್ನು ಜನಪ್ರಿಯ ಗೊಳಿಸಿದ ಕೀರ್ತಿ ಬಲಿಪ ನಾರಾಯಣ ಭಾಗವತರಿಗೆ ಸಲ್ಲುತ್ತದೆ.ಮಗು ಮನಸ್ಸಿನ ಅವರ ಸಾಧನೆ ಅಪಾರ. ಅಮೋಘ ಕಂಠಸಿರಿಯಿಂದ ಸಮುದಾಯವನ್ನು ಕ್ಷಣಮಾತ್ರದಲ್ಲಿ ಆವರಿಸುವ ಬಲಿಪತನ ಎಂದೆಂದಿಗೂ ಪ್ರಸ್ತುತ' ಎಂದರು .


ಶ್ರೀ ಕೃಷ್ಣ ಯಕ್ಷಸಭಾದ ಸುಧಾಕರರಾವ್ ವೇಜಾವರ, ದೇರಳಕಟ್ಟೆ ರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅನಿವಾಸಿ ಭಾರತೀಯ ರಮೇಶ್ ಮಂಜೇಶ್ವರ, ಕಲಾಪೋಷಕ ಹರೀಶ್ ಶೆಟ್ಟಿ ಕೊಡೆತ್ತೂರು ಗುತ್ತು ಮೃತರ ಗುಣಗಾನ ಮಾಡಿದರು. ಯಕ್ಷೋತ್ಸವ ಸಮಿತಿ ಸಂಚಾಲಕ ಪ್ರೊ. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿ, ಪ್ರೊ.ನರೇಶ್ ಮಲ್ಲಿಗೆ ಮಾಡು ವಂದಿಸಿದರು. ಮೌನ ಪ್ರಾರ್ಥನೆಯ ಬಳಿಕ ಬಲಿಪರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

Post a Comment

0 Comments
Post a Comment (0)
To Top