ಭಾರತೀಯರಿಗೆ ಮುನ್ನೂರ ಮೂವತ್ತು ಕೋಟಿ ದೇವತೆಗಳಿದ್ದರೂ ಸೃಷ್ಟಿ, ಸ್ಥಿತಿ, ಲಯಾಧಿಕಾರಿಗಳಾದ ತ್ರಿಮೂರ್ತಿಗಳಿಗೆ ಅಗ್ರ ಪ್ರಾಶಸ್ತ್ಯ, ತ್ರಿಮೂರ್ತಿಗಳಲ್ಲಿ ಬ್ರಹ್ಮಜ್ಞಾನದ ಪ್ರತೀಕ ಸೃಷ್ಟಿಕರ್ತ. ವಿಷ್ಣು ಲೋಕ ಪರಿಪಾಲಕ, ಶಿವ ಜ್ಞಾನದ ಪ್ರತೀಕ; ಓಂಕಾರ ಸ್ವರೂಪ, ನಾದರೂಪಿ ಲಯಕಾರಕ. ಈತ ಗೌರಿಗೆ ತನ್ನ ಅರ್ಧ ದೇಹವನ್ನೇ ಕೊಟ್ಟ ಸಮನ್ವಯವಾದಿ - ಅರ್ಧನಾರೀಶ್ವರ. ಗಂಗೆಯನ್ನು ತಲೆಯ ಮೇಲೆ ಕೂಡಿಸಿಕೊಂಡ ಹೆಗ್ಗಳಿಕೆಯ ಗಂಗಾಧರ. ಪ್ರಪಂಚದ ಲಯಕರ್ತ ಈತ. ಶಾಂತ-ರೌದ್ರಗಳ ದ್ವಿಸ್ವರೂಪಿ. ತಮೋಗುಣದ ಪ್ರತೀಕವೂ, ಲಯಸುಳಿಯ ಕೇಂದ್ರವೂ ವಿಕರಣದ ಮತ್ತು ನಿಶ್ಶೇಷ ಲಯದ ಪ್ರತೀಕವೂ ಶಿವ. ಹುಟ್ಟಿದ್ದೆಲ್ಲವೂ ಮರಣ ಹೊಂದಲೇಬೇಕು. ಉತ್ಪತ್ತಿಯಾದುದೆಲ್ಲವೂ ವಿಘಟಿತವಾಗಬೇಕು, ನಾಶವಾಗಬೇಕು. ಇದು ಅಲಂಘ್ಯ ನಿಯಮ. ಈ ವಿಘಟನೆಯುಂಟುಮಾಡುವ ತತ್ವವೇ `ಶಿವ' ತತ್ವ.
ಶಿವೋಪಾಸನೆ ಅತಿ ಪ್ರಾಚೀನ. ಋಗ್ವೇದದಲ್ಲಿ ಅಲ್ಲಲ್ಲಿ ರುದ್ರನ ಉಲ್ಲೇಖ ಬರುತ್ತದೆ. ರುದ್ರ ಸೂಕ್ತಗಳಿವೆ. ಯಜುರ್ವೇದದ ಒಂದು ಇಡೀ ಅಧ್ಯಾಯ `ಶ್ರೀ ರುದ್ರಾಧ್ಯಾಯ' ಎಂದು ಖ್ಯಾತ. ಇದು ಶಿವಾರ್ಚನೆಯ ಮಂತ್ರಗಳ ಸಂಗ್ರಹ. ಇದರಲ್ಲಿ ಶಿವನ ವಿಶ್ವವಿರಾಟ್ ಸ್ವರೂಪದ ವರ್ಣನೆಯ ಜತೆಗೆ ಅವನನ್ನು ಕಾಣುವ ಬಗೆಯನ್ನು ರಮಣೀಯವಾಗಿ ವರ್ಣಿಸಲಾಗಿದೆ.
ಪಂಚರೂಪಿ ಶಿವ
ಪ್ರಾಚೀನ ಪಂಚದೇವೋಪಾಸನೆಯ ವಿವರದಂತೆ ಶಿವನನ್ನು ಪಂಚಮುಖೀ ಎಂದು ಕರೆಯಲಾಗಿದೆ. ಅವನ ಪಂಚಮುಖಗಳನ್ನು ಪಂಚಾಗ್ನಿ, ಪಂಚದೇವತಾ, ಪಂಚಲೋಕ, ಪಂಚಕ್ಲೇಶ, ಪಂಚಕೋಶ ಇವುಗಳ ಪ್ರತೀಕ ಎಂಬುದು ಶೈವಾರಾಧನೆಯ ಪರಂಪರೆಯ ಸಿದ್ಧಾಂತ. ಚಿದ್ಭಾವದಿಂದ ವಿಷ್ಣುರೂಪಿ, ಸದ್ಭಾವದಿಂದ ಶಿವರೂಪಿ, ಶಕ್ತಿಭಾವದಿಂದ ಶಕ್ತಿಸ್ವರೂಪಿ ತೇಜಸ್ ಸ್ವಭಾವದಿಂದ ಸೂರ್ಯ, ಬುದ್ಧಿಭಾವದಿಂದ ಗಣೇಶರೂಪಿ. ಅಘೋರ, ತತ್ಪುರುಷ, ಈಶಾನ, ವಾಮದೇವ, ಸದ್ಯೋಜಾತ ಎಂಬ ಐದು ರೂಪಗಳ ಸವಿಸ್ತಾರ ವರ್ಣನೆ ವೇದಗಳಲ್ಲಿದೆ. ಇವು ಪೃಥ್ವೀ, ಜಲ, ತೇಜಸ್ಸು, ಆಕಾಶ, ವಾಯು ಎಂಬ ಪಂಚಭೂತಗಳ ಆಧಿಪತ್ಯದ ಸಂಕೇತವಾಗಿದೆ. ಹಾಗೆಯೇ ಶಬ್ದ, ರೂಪ, ರಸ, ಗಂಧ ಸ್ಪರ್ಶ ಎಂಬ ಪಂಚತನಾತ್ರೈಗಳ ಮೇಲೆ ಮಾನವನಿಗೆ ತಕ್ಕ ನಿಯಂತ್ರಣ ಇರಬೇಕು ಎಂಬುದು ಶಿವನ ಈ ಪಂಚಮುಖಗಳ ತತ್ವ - ಸಂದೇಶ. ಪರಶುರಾಮನಿಗೆ ಧನುರ್ವಿದ್ಯೇ ಧಾರೆಯೆರೆದವನೂ ಅರ್ಜುನನಿಗೆ ಪಾಶುಪತಸ್ತ್ರ ಕರುಣಿಸಿದವನೂ ಶಿವನೇ.
ಶಿವದರ್ಶನ ಹೇಗೆ?
ಶಿವನ ದರ್ಶನವನ್ನು ಹೇಗೆ ಮಾಡಬೇಕು? ಶಿವಾಲಯದಲ್ಲಿ ಮುಂದೆ ಇರುವ ನಂದಿಯ ವೃಷಣವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಿಂದ ನಂದಿಯ ಕೋಡುಗಳ ಮೇಲೆ ಬೆರಳಿಟ್ಟು, ಅದರ ಮಧ್ಯದಿಂದ ಶಿವ ದರ್ಶನ ಮಾಡಬೇಕು ಎಂಬುದು ರೂಢಿ. ಈ ಪದ್ಧತಿ ಸಾಕಷ್ಟು ಜಿಜ್ಞಾಸೆಗೆ ಒಳಗಾಗಿರುವ ಅಂಶ ಬ್ರಹ್ಮಾಂಡಕ್ಕೆ ಪ್ರತೀಕವಾಗಿರುವ ನಂದಿಯ ಮೂಲಕ ಎರಡು ಹುಬ್ಬುಗಳ ಮಧ್ಯೆ ಇರುವ ಅಂತಃಚಕ್ಷುವಿನಿಂದ ಸರ್ವಶಕ್ತ್ಯಾತ್ಮಕನಾದ ಶಿವನನ್ನು ದರ್ಶಿಸಬೇಕು ಎಂಬುದೇ ಇದರ ತಾತ್ಪರ್ಯ. ಮನುಷ್ಯ ಪೂರ್ಣತ್ವ ಸಾಧಿಸಬೇಕಿದ್ದರೆ ಮನಸ್ಸು ಬುದ್ಧಿಯಲ್ಲಿ ಲಯವಾಗಬೇಕು. ಇದೇ ಶಿವರಾತ್ರಿಯ ತತ್ವ. ಹಾಗಾಗಿ, ಜ್ಞಾನಾಧಿದೇವತೆ ಶಿವನ ಆರಾಧನೆಗೆ ಉತ್ಕೃಷ್ಟವಾದ ಪರ್ವಕಾಲ ಮಹಾಶಿವರಾತ್ರಿ. ಆ ದಿನ ರಾತ್ರಿ ಹದಿನಾರನೇ ಒಂದಂಶದ ಚತುದರ್ಶಿಯ ಚಂದ್ರನ್ನು ಧರಿಸಿದ ಶಿವನನ್ನು ಪೂಜಿಸಿ ಜಾಗರಣೆ, ಶಾಸ್ತ್ರ ಶ್ರವಣಾದಿಗಳ ಮೂಲಕ ಪೂರ್ಣ ಜ್ಞಾನ ಪಡೆಯಬೇಕು. ಶಿವರಾತ್ರಿಯಂದು ರಾತ್ರಿ ನಾಲ್ಕು ಯಾಮಗಳಲ್ಲಿ ಪೂಜೆ ಮಾಡುವರು ಮೊದಲನೆಯ ಜಾವದಲ್ಲಿ ಬಿಲ್ವಪತ್ರೆಯಿಂದಲೂ, ಎರಡನೆಯ ಜಾವದಲ್ಲಿ ದ್ರೋಣ ಪುಷ್ಪದಿಂದ, ಮೂರನೆಯ ಜಾವದಲ್ಲಿ ಅರ್ಕಪುಷ್ಪದಿಂದ, ನಾಲ್ಕನೆ ಜಾವದಲ್ಲಿ ಕದಂಬ ಪುಷ್ಪಗಳಿಂದ ಪೂಜಿಸಿದರೆ ರೋಗ ನಿವೃತ್ತಿ, ನೆಮ್ಮದಿ, ಅಷ್ಟೈಶ್ವರ್ಯ, ಮೋಕ್ಷ ಪ್ರಾಪ್ತಿ.
ವಿಭೂತಿಯ ಮಹತ್ವ
ವಿಭೂತಿಗೂ ಶಿವನಿಗೂ ಅನನ್ಯ ಸಂಬಂಧ. ಪರಮೇಶ್ವರನಿಗೆ `ಭಸ್ಮೋದ್ಧೂಳಿತ', `ಭಸ್ಮಾನುಲೇಪಿತ' ಮೊದಲಾದ ವಿಶೇಷಣಗಳು. ವಿಭೂತಿಯ ಧಾರಣೆ ಮಾಡುವುದರಿಂದ ಮೇಧಾಶಕ್ತಿ ವರ್ಧಿಸುತ್ತದೆ. ಮಿದುಳಿನ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಅದರ ಪರಿಣಾಮವಾಗಿ ಮಾನಸಿಕ ಪ್ರಸನ್ನತೆ ಲಭಿಸುತ್ತದೆ. ಗರುಡ ಚಯನ, ಸೋಮಯಾಗ ಮತ್ತು ಅತಿರುದ್ರಾದಿ ಮಹಾಯಾಗಗಳಲ್ಲಿ ಗಣಪತಿ ಹವನ, ಗ್ರಹ ಶಾಂತಿ ಮುಂತಾದ ಹೋಮದಲ್ಲಿ ಹವಿಸ್ಸಿನ ದಹನದಿಂದ ಒದಗಿದ ಭಸ್ಮವು ಉತ್ಕೃಷ್ಟ ವಿಭೂತಿಯೆನಿಸುವುದು.
ಶಿವ ಪರಿವಾರ
ನಂದಿಯಿಲ್ಲದ ಶಿವಾಲಯವಿಲ್ಲ. ಇವನು ಶಿವಗಣಗಳ ನಾಯಕ. ವೃಷಭವು ಕಾಮದ - ವೀರತ್ವದ ದ್ಯೋತಕ. ಶಿವನು ಇದನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾನೆಂದರೆ ಕಾಮವನ್ನು ಜಯಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಾನೆಂದು ಅರ್ಥ. ನಂದಿಯ ನಂತರ ಬರುವ ಪ್ರಮುಖ ಭೃಂಗಿ. ಈತನು ಶಿವನಲ್ಲಿ ಏಕನಿಷ್ಠೆಯ ಭಕ್ತ. ಪಾರ್ವತಿಯು ಶಿವನಲ್ಲಿ ಐಕ್ಯವಾಗಿ, ಶಿವ ಅರ್ಧನಾರೀಶ್ವರ ರೂಪ ಪಡೆದಾಗಲೂ ಭೃಂಗಿ (ದುಂಬಿ) ಭೃಂಗದ ರೂಪ ಧರಿಸಿ ಶಿವನಿಗೆ ಪ್ರದಕ್ಷಿಣೆ ಬರುತ್ತ ಅರ್ಧನಾರೀಶ್ವರನನ್ನೇ ಮಧ್ಯದಲ್ಲಿ ಕೊರೆದನಂತೆ. ಆದ್ದರಿಂದಲೇ ಇವನಿಗೆ `ಭೃಂಗ' ಎಂದು ಹೆಸರು ಬಂತೆಂದು ಪ್ರತೀತಿ. ಶಿವನೊಂದಿಗೆ ನಿಕಟ ಸಂಬಂಧ ಹೊಂದಿದ ಇನ್ನೊಬ್ಬ ದೇವತೆಯೆಂದರೆ ವೀರಭದ್ರ. ದಕ್ಷ ಸಂಹಾರಕ್ಕಾಗಿ ನಿಯುಕ್ತನಾದ ಶಿವನ ಶಕ್ತಿಯು ಸ್ವರೂಪ. ವೀರಭದ್ರನ ಅನಂತರ ಬರುವ ದೇವತೆ ಚಂಡೇಶ್ವರ. ಇವನು ಮನುಷ್ಯವರ್ಗದ ಮಹಾಭಕ್ತ. ಶಿವನ ಇತರ ಅನುಚರರೆಂದರೆ ಅವನ ಗಣಗಳು. ಇವು ಹೆಚ್ಚಾಗಿ ಪ್ರಮಥ ಅಥವಾ ಭೂತಗಣಗಳೆಂದು ಪ್ರಸಿದ್ಧ.
ರುದ್ರಾಕ್ಷಿಯ ಮಹತ್ವ
ರುದ್ರಾಕ್ಷಿಯಲ್ಲಿ ಶಿವನ ಸಾನ್ನಿಧ್ಯ ಇದೆ ಎಂಬುದು ರೂಢಿಗತ ನಂಬಿಕೆ. ಸಾಲಿಗ್ರಾಮ, ಶಿವಲಿಂಗ, ಬಿಲ್ವಪತ್ರೆ, ತುಳಸಿ, ವಿಭೂತಿಗಳಂತೆ ಅದು ವಿಶಿಷ್ಟ. ರುದ್ರಾಕ್ಷವು ಶಿವಾರಾಧಕರಿಗೆ ಅತ್ಯಂತ ಪವಿತ್ರ. ಶಿವ ರಹಸ್ಯದಲ್ಲಿ ತಿಳಿಸಿರುವಂತೆ ಶಿವನ ನೇತ್ರಗಳಿಂದ ಹುಟ್ಟಿ ರುದ್ರನ ಅಕ್ಷಿಗಳೆಂದು ಹೇಳಲ್ಪಟ್ಟು `ರುದ್ರಾಕ್ಷಿ' ಎಂದಾಯಿತು. ರುದ್ರಾಕ್ಷಿ ಮಣಿಗೆ ಒಂದರಿಂದ ಹದಿನಾಲ್ಕು ಮುಖಗಳಿರುತ್ತವೆ. ಇವುಗಳ ಮಾಲೆಯನ್ನು ಧರಿಸುವುದರಂದ ರೋಗಗಳ ನಿವಾರಣೆಯಾಗಿ ಮಂತ್ರಸಿದ್ಧಿಯಾಗತ್ತದೆಯೆಂದು ನಂಬಿಕೆ.
ಒಂದು ಮುಖವುಳ್ಳ ರುದ್ರಾಕ್ಷಿ ಪರಬ್ರಹ್ಮ ಸ್ವರೂಪವಾಗಿದ್ದು, ಅದನ್ನು ಧರಿಸಿದವರು ಜಿತೇಂದ್ರಿಯರಾಗುತ್ತಾರೆ. ಎರಡು ಮುಖವುಳ್ಳ ರುದ್ರಾಕ್ಷಿಯು ಅರ್ಧನಾರೀಶ್ವರ ರೂಪಿ. ಅದರ ಧಾರಣೆಯಿಂದ ಶಿವನಿಗೆ ಪರಮಪ್ರಿಯರಾಗುವರೆಂದು ನಂಬಿಕೆ. ಮೂರು ಮುಖಗಳ ರುದ್ರಾಕ್ಷಿಯು ಅಗ್ನಿತ್ರಯ ಸ್ವರೂಪ. ನಾಲ್ಕು ಮುಖದ ರುದ್ರಾಕ್ಷಿ ಪರಬ್ರಹ್ಮದ ಪ್ರತೀಕ. ಐದು ಮುಖದ್ದು ಸಾಕ್ಷಾತ್ ಪರಶಿವ ಸ್ವರೂಪ ಎಂಬ ಭಾವನೆ. ಅದಕ್ಕೆ ಕಾಲಾಗ್ನಿ ಎಂಬ ಹೆಸರು. ಆರು ಮುಖದ ರುದ್ರಾಕ್ಷಿಯು ಷಣ್ಮುಖ ಮತ್ತು ಗಣಪತಿ ದೇವತಾ ಸ್ವರೂಪಿ. ಏಳು ಮುಖಗಳ ರುದ್ರಾಕ್ಷಿ ಸಪ್ತನಿಧಿ, ಸಪ್ತಾಶ್ವ, ಸಪ್ತ ಮಾತೃಕೆಯ ಸಾನ್ನಿಧ್ಯ ಹೊಂದಿದೆ. ಎಂಟು ಮೊಗದ ರುದ್ರಾಕ್ಷಿಯು ಅಷ್ಟಮೂರ್ತಿ ಮತ್ತು ಅಷ್ಟವಸು ಸ್ವರೂಪಿ. ಒಂಭತ್ತು ಮುಖದ ರುದ್ರಾಕ್ಷಿ ಶಕ್ತಿಯ ಪ್ರತೀಕ. ಹತ್ತು ಮೊಗದ ರುದ್ರಾಕ್ಷಿಯು ಯಮದೇವಾತ್ಮಕವಾದುದು. ಹನ್ನೊಂದು ಮುಖಗಳ ರುದ್ರಾಕ್ಷಿ ಏಕಾದಶರುದ್ರ. ಹನ್ನೆರಡು ಮುಖಗಳ ರುದ್ರಾಕ್ಷಿಯು ದ್ವಾದಶಾದಿತ್ಯ ಸ್ವರೂಪಿ. ಹದಿಮೂರು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ಕಣ್ಣುಗಳ ರುದ್ರಾಕ್ಷಿಯು ರುದ್ರನೇತ್ರ ಸ್ವರೂಪಿ. ಇದನ್ನು ಧರಿಸುವುದರಿಂದ ಸಮಸ್ತ ವ್ಯಾಧಿ ನಿವಾರಣೆ.
ಶಿವನು ಯೋಗಾಚಾರ್ಯ, ಸಂಗೀತ, ನೃತ್ಯ, ಕಲೆಯ, ಮಹಾಗುರು, ದಕ್ಷಿಣಾಮೂರ್ತಿ, ಪರಿಪೂರ್ಣ, ಲೋಕ ಗುರುವಿನ ಆದರ್ಶರೂಪವೇ ದಕ್ಷಿಣಾಮೂರ್ತಿ.
ಶಿವ ತತ್ವ ರಹಸ್ಯ
ಶಿವ ತ್ರಿನೇತ್ರ. ಸೂರ್ಯ, ಚಂದ್ರ ಮತ್ತು ಅಗ್ನಿಗಳ ಪ್ರತೀಕ. ಈ ನೇತ್ರಗಳಲ್ಲಿ ಎರಡು ಕಣ್ಣುಗಳು ಬಾಹ್ಯ ಜಗತ್ತು ಅವಲೋಕಿಸುತ್ತಿದ್ದರೆ, ಮತ್ತೊಂದು ಅಂತರ್ಮುಖಿ. ಅದೇ ಜ್ಞಾನ ನೇತ್ರ. ಅದು ತೆರೆದಾಗ ಭೂತ, ಭವಿಷ್ಯ, ವರ್ತಮಾನಗಳ ದರ್ಶನ. ಮೂರನೇ ಕಣ್ಣು ತೆರೆದರೆ ಅದು ಪ್ರಳಯಕಾರಿ. ಶಿವ, ಚಂದ್ರನನ್ನೇ ತಲೆಯಲ್ಲಿ ಧರಿಸಿದ್ದಾನೆ. ಚಂದ್ರನು ಸಾಂಕೇತಿಕವಾಗಿ ಕಾಲವನ್ನು ವ್ಯಕ್ತಪಡಿಸುತ್ತಾನೆ. ಕಾಲವು ಮಾನವನ ದೃಷ್ಟಿಯಿಂದ ಗಣನೆಗೆ ಸೀಮಿತ. ಭಗವಂತ ಕಾಲಾತೀತ. ಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿದ ಶಿವನ ಕಲ್ಪನೆಯು ಸಾಂಕೇತಿಕವಾಗಿ ಅದನ್ನೇ ಸೂಚಿಸುತ್ತದೆ. ಅವನ ತ್ರಿಶೂಲ ಸತ್ವ, ರಜ, ತಮೋ ಗುಣಗಳ ಸಂಕೇತ. ಶಿವನು ಹಿಮದಂತೆ ಧವಲ ಮೂರ್ತಿ, ಶ್ವೇತ ಮುಖ. ಬೆಳಕಿನ ಸಂಕೇತ. ಅಂದರೆ ಅಜ್ಞಾನವನ್ನು ಅಳಿಸಿ ಅರಿವನ್ನು ಬೆಳಗುವ ಜ್ಞಾನದ ಪ್ರತೀಕ, ಕಾಮ ದಹನದ ವೃತ್ತಾಂತ, ದಿಗಂಬರತ್ವ ಶಿವ ವೈರಾಗ್ಯಮೂರ್ತಿ ಎಂಬುದನ್ನು ಸೂಚಿಸುತ್ತದೆ. ಶಿವನು ಧರಿಸುವ ತಲೆ ಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೆ ಪ್ರಳಯಕಾರಕ ಎಂಬುದರ ಸಂಕೇತ. ತಲೆಬುರುಡೆಗಳ ಮಾಲೆಯು ಕಾಲಪ್ರವಾಹದ ಆವರ್ತಗಳನ್ನು, ಮನುಕುಲದ ವಿನಾಶ ಮತ್ತು ಪುನಃಸಷ್ಟಿಯ ಚಕ್ರವನ್ನು ಸೂಚಿಸುತ್ತದೆ.
ಶಿವ ಸರ್ಪಭೂಷಣ. ಅಂಥವನು ಮಾತ್ರ ಹಾಲಾಹಲದಂತಹ ಘೋರ ವಿಷವನ್ನು ನುಂಗಿ ಜಗತ್ತನ್ನು ಕಾಪಾಡಬಲ್ಲ. ಹಾಗಾಗಿಯೇ ಶಿವ ಮೃತ್ಯುಂಜಯ. ಶಿವನು ತಾಂಡವನತ್ಯ ಮಾಡುತ್ತಿರುವಾಗ ಹದಿನಾಲ್ಕು ಬಾರಿ ಡಮರುಗವನ್ನು ನುಡಿಸಿದನೆಂದೂ, ಆ-ಇ-ಉಣ್-ಋ-ಲ-ಕ್ ಮೊದಲಾದ ಸ್ವರಗಳು, ಅಂದರೆ ಮಾಹೇಶ್ವರ ಸೂತ್ರಗಳು, ಎಲ್ಲ ಅಕ್ಷರಗಳಿಗೂ ಮೂಲವಾದ ಹದಿನಾಲ್ಕು ಮೂಲಸೂತ್ರಗಳು ಹೊರಬಿದ್ದವೆಂದೂ, ಮುಂದೆ ವ್ಯಾಕರಣ ಪ್ರಕ್ರಿಯೆಗಳಿಗೂ ಅವೇ ದಾರಿ ಮಾಡಿಕೊಟ್ಟಿತೆಂಬುದು ತಾತ್ವಿಕ ಸಿದ್ಧಾಂತ. ಡಮರುಗ ವರ್ಣಗಳ ಮತ್ತು ವ್ಯಾಕರಣದ ಪ್ರತಿನಿಧಿ ಎಂದೇ ಹೇಳಬಹುದು. ವ್ಯಕ್ತ-ಅವ್ಯಕ್ತ ವಾಜ್ಞಯದ ಏಕೈಕ ಪ್ರತೀಕವಿದು.
ಅಕ್ಷಮಾಲೆಯು ಶಿವನು ಆಧ್ಯಾತ್ಮ ವಿದ್ಯೆಯ ಆದಿಗುರುವೆಂದು ಸೂಚಿಸಿದರೆ ಖಟ್ವಾಂಗವು ಅವನು ಮಂತ್ರವಿದ್ಯೆಯಲ್ಲೂ ಪ್ರವೀಣನೆಂದು ತೋರಿಸುವುದು. ಶಿವನು ರಕ್ತಪಾನ ಮಾಡುವ ಕಪಾಲವು ಅವನ ಸರ್ವವಿನಾಶ ಶಕ್ತಿಯ ಮತ್ತೊಂದು ಸಂಕೇತ. ದರ್ಪಣವು ಸೃಷ್ಟಿಯ ಪ್ರತಿಬಿಂಬವನ್ನು ಸೂಚಿಸುತ್ತದೆ.
ಪರಮೇಶ್ವರನ ಅರ್ಚನಾ ಕ್ರಮಗಳಲ್ಲಿ ಅಭಿಷೇಕಕ್ಕೆ ಪ್ರಾಶಸ್ತ್ಯ. `ಅಭಿಷೇಕ ಪ್ರಿಯಃ ಶಿವ' ಎಂಬ ವಚನ ಜನಜನಿತ. ಲಿಂಗರೂಪಿ ಶಿವನಿಗೆ ಧಾರಾಕಾರವಾಗಿ ಜಲದಿಂದ ಅಭಿಷೇಕ ಮಾಡುವ ಪದ್ಧತಿಯಲ್ಲಿ ಉಪಾಸನೆಯ ರಹಸ್ಯವೂ ಅಡಗಿದೆ. ಭಗವಂತನೂ ತೇಜೋರೂಪದಿಂದ ಪಾತಾಳದಿಂದ ದ್ಯುಲೋಕದವರೆಗೆ ವ್ಯಾಪಿಸಿಕೊಂಡಾಗ ಆತನ ಅವಿರ್ಭಾವವು ಲಿಂಗಾಕಾರವಾಗಿತ್ತು. ಇದು ಪರಮೇಶ್ವರನು ದೇವತೆಗಳಿಗಾಗಿ ಪ್ರಕಟಿಸಿದ ರೂಪವಾಗಿತ್ತು. ಇಂಥ ರೂಪವನ್ನು ಚಿಂತಿಸುತ್ತಾ ರುದ್ರಾಧ್ಯಾಯವನ್ನು ಪಠಿಸುತ್ತಾ ಅಭಿಷೇಕ ಮಾಡುವುದು ವಿಧಿ. ಶಿವಲಿಂಗದ ಅಭಿಷೇಕಕ್ಕೆ ಮೇಲೆ ಕಟ್ಟುವ ಧಾರಾಪಾತ್ರೆಯು ಶಿವದೇವಾಲಯಗಳ ವೈಶಿಷ್ಟ.
ಬಿಲ್ವ ವೃಕ್ಷ
ಎಲ್ಲಿ ಶಿವಾಲಯವೋ ಅಲ್ಲಿ ಬಿಲ್ವವಕ್ಷ, ಎಲ್ಲಿ ಶಿವಪೂಜೆ ನಡೆಯುತ್ತದೋ ಅಲ್ಲಿ ಬಿಲ್ವಪತ್ರೆ. ಶಿವಾರ್ಚನೆಗೆ ಬಿಲ್ವಪತ್ರೆ ಎಲ್ಲಕ್ಕಿಂತ ಪವಿತ್ರವಾದದ್ದು. `ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಮಂತ್ರವೊಂದೇ ಸಾಕು ಬಿಲ್ವದ ಮಹತ್ವವನ್ನು ಹೇಳಲು. ಬಿಲ್ವವು ಅಶ್ವತ್ಥ, ಔದುಂಬರಾದಿಗಳಂತೆ ದೇವವೃಕ್ಷ. ಅದು ಭೌತಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಪ್ರಖ್ಯಾತ. ಇದರ ಮಹಿಮೆಯನ್ನು ಶ್ರೀಸೂಕ್ತ, ಸೌಭಾಗ್ಯ ಸಂಜೀವಿನಿ, ಸನತ್ಕುಮಾರ ಸಂಹಿತೆ, ಸಾರಸ್ವತ ಸಿದ್ಧಿ, ವಾಮನ ಪುರಾಣ, ಶಿವಪುರಾಣ ಮುಂತಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.
ಬಿಲ್ವಪತ್ರೆ ಒಣಗಿದ್ದರೂ ಒಂದು ಸಲ ಅರ್ಚಿಸಿದರೂ ನೀರಿನಿಂದ ತೊಳೆದು ಪುನಃ ಅರ್ಚಿಸಬಹುದೆಂದು ಶಾಸ್ತ್ರಮತ. ಸ್ಕಂದ ಪುರಾಣದಲ್ಲಿ ರೋಚಕವಾದ ಕಥೆಯೊಂದುಂಟು. ಲಕ್ಷ್ಮೀನಾರಾಯಣರು ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಆಗ ಲಕ್ಷ್ಮಿಯ ಬಲಗೈಯಿಂದ ಬಿಲ್ವದ ಮರಹುಟ್ಟಿತಂತೆ. ಅದಕ್ಕೆಂದೇ ಶ್ರೀವಕ್ಷ ಎಂದು ಹೆಸರು ಪಡೆಯಿತು. ತ್ರಿಗುಣಗಳನ್ನು ಸಂಕೇತಿಸುವ ಅದರ ಎಲೆಯ ಮೂರು ಎಸಳುಗಳನ್ನು ತ್ರಿಮೂರ್ತಿಗಳ ಮೂರು ವೇದಗಳ ಪ್ರತೀಕ.
ಬಿಲ್ವವಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಪುನಶ್ಚರಣೆ ಮಾಡಿದರೆ ಸಿದ್ಧಿಯಾಗುವುದೆಂದು ನಂಬಿಕೆ. ತುಳಸಿ, ನೆಲ್ಲಿ, ಬಿಲ್ವ ಇವು ಮೂರು ಪಾರ್ವತಿ, ಸರಸ್ವತಿ, ಲಕ್ಷ್ಮಿ ಸ್ವರೂಪದಿಂದ ದೇವತೆಗಳ ಅಂಶವೆಂದು ಪುರಾಣಗಳು ಸಾರುತ್ತವೆ. ಬಿಲ್ವ, ಚರು, ಆಜ್ಯಗಳಿಂದ ಹೋಮ ಮಾಡುವುದರಿಂದ ದಾರಿದ್ರವು ನಿರ್ನಾಮವಾಗಿ ಲಕ್ಷ್ಮಿಯು ಗೃಹದಲ್ಲಿ ಸ್ಥಿರವಾಗಿರುವಳೆಂದು ಧರ್ಮಗ್ರಂಥಗಳಲ್ಲಿ ನಿರೂಪಣೆ ಇದೆ.
ಶಿವಪುರಾಣಗಳಲ್ಲಿ ಶಿವರಾತ್ರಿಯ ಮಹಿಮೆಯನ್ನು ತಿಳಿಸುತ್ತಾ ಓರ್ವ ಬೇಡನೂ, ಚಂಡಾಲಿಯೂ ಎಸೆದ ಬಿಲ್ವಪತ್ರೆಯು ಶಿವಲಿಂಗದ ಮೇಲೆ ಬಿದ್ದುದರಿಂದ ಅವರು ನರಕ ಬಾಧೆಯಿಂದ ಪಾರಾಗಿ ಕೈಲಾಸವನ್ನು ಸೇರಿದರೆಂದು ಬಣ್ಣನೆ ಇದೆ.
ವಿದೇಶಗಳಲ್ಲಿ ಶಿವೋಪಾಸನೆ
ಭಾರತೀಯ ಸಂಸ್ಕೃತಿಯು ವಿಶ್ವವ್ಯಾಪಿಯಾಗುತ್ತಿದ್ದಂತೆಯೇ ಭಾರತೀಯರ ಶಿವೋಪಾಸನ ಪದ್ಧತಿಯು ವಿದೇಶಗಳಲ್ಲಿ ಪ್ರಚುರಗೊಂಡಿತು. ಆ ವಿದೇಶಿಯರೂ, ಈ ಪರಿಪಾಟವನ್ನು ತಮ್ಮದಾಗಿಸಿಕೊಂಡು ಇದರ ವಿಕಾಸಪಥದಲ್ಲಿ ಶ್ರದ್ಧಾಳುಗಳಾದರು. ಇದರ ಪರಿಣಾಮಗಳಲ್ಲಿ ಭೂಮಂಡಲದ ಮೂಲೆ ಮೂಲೆಗಳಲ್ಲಿ ಶಿವಾರಾಧನೆಯ ತನ್ನ ಅಸ್ತಿತ್ವವನ್ನು ಪಡೆದು ಬೆಳಗಿತು.
ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರವು ನೇಪಾಲಿಯರಿಗೆ ಭಾರತದ ವಾರಾಣಾಸಿಯಷ್ಟು ಪವಿತ್ರವಾಗಿದೆ. ಈ ದೇವಾಲಯದಲ್ಲಿ ಮೂರೂವರೆ ಅಡಿ ಎತ್ತರದ ಶಿವಲಿಂಗವನ್ನು ಕಾಣಬಹುದು. ಇಲ್ಲಿನ ಪರ್ವತ ಶ್ರೇಣಿಗಳೆಲ್ಲ ಶಿವನ ಸಂಬಂಧವಾದ ಹೆಸರನ್ನೆ ಪಡೆದಿದೆ ಎಂಬುದಕ್ಕೆ ಕೈಲಾಸಪರ್ವತ, ಶಿವಪುರಿ ಪರ್ವತ, ಮಾಲಾ ಇತ್ಯಾದಿಗಳನ್ನು ಹೆಸರಿಸಬಹುದು. ಶಿವಜಟಾಲಂಕೃತೆಯಾದ ಗಂಗೆಯ ಉಗಮಸ್ಥಾನವಿದು. ಶಿವನ ತಪಃಸ್ಥಳವೂ, ಶಿವಪಾರ್ವತಿಯರ ಕ್ರೀಡಾಸ್ಥಳವೂ ಆದ `ನೇಪಾಳ' ಇಂದು ಶಿವೋಪಾಸನೆಗೆ ಹೆಚ್ಚಿನ ಮಹತ್ವವನ್ನು ಗಳಿಸಿದೆ. ಭಾರತೀಯರಿಗೆ ಅತ್ಯಂತ ಪವಿತ್ರವಾದ ಕೈಲಾಸ ಹಾಗೂ ಮಾನಸ ಸರೋವರಗಳು ಟಿಬೆಟ್ಟಿನಲ್ಲಿದೆ.
ಶಿವಪಂಚಾಕ್ಷರಿಯ ಮಹತ್ವ
ವಿದ್ಯೆಗಳಲ್ಲಿ ವೇದ ವಿದ್ಯೆ, ವೇದಗಳಲ್ಲಿ ರುದ್ರಾಧ್ಯಾಯದಲ್ಲಿ ಪಂಚಾಕ್ಷರಿ, ಪಂಚಾಕ್ಷರಿಯಲ್ಲಿ `ಶಿವ' ಎಂಬ ಎರಡಕ್ಷರಗಳೂ ಪರಮ ಪವಿತ್ರ. ದೇವನನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಮಾನವನ ಮುಖ್ಯ ಗುರಿ. ಅದೇ ಪರಮ ಪುರುಷಾರ್ಥ ಅದೇ ಮೋಕ್ಷ. ಇದಕ್ಕೆ ಸಾಧಕವಾದುದು ಪಂಚಾಕ್ಷರಿ ಮಂತ್ರ. ಇದು `ಓಂ' ಪ್ರಣವದೊಡಗೂಡಿ ಷಡಾಕ್ಷರಿಯೆನಿಸಿದೆ. ಓಂಕಾರ ಪರಬ್ರಹ್ಮನನ್ನು ತಿಳಿಸುವ ಶಬ್ದ. ಅದರ ವಿವರಣೆಯೇ ಪಂಚಾಕ್ಷರಿ ಪರಮಾತ್ಮನ ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಾಂತರ್ಯಾಮಿತ್ವವನ್ನು ಎಳೆ ಎಳೆಯಾಗಿ ಪ್ರತಿಪಾದಿಸುವ ಭಾಗವೇ ಸುಪ್ರಸಿದ್ಧ ರುದ್ರಾಧ್ಯಾಯ. ಈ ಪಂಚಾಕ್ಷರಿ ಮಂತ್ರ ರಾಜಾಧಿರಾಜ, ಜ್ಞಾನನಿಧಿ, ಮೋಕ್ಷಕ್ಕೆ ದಾರಿದೀಪ. ಅವಿದ್ಯೆಯೆಂಬ ಸಮುದ್ರಕ್ಕೆ ಬಡಬಾಗ್ನಿ. ಪಾಪರಾಶಿಗಳಿಗೆ ಕಾಡ್ಗಿಚ್ಚು. ಸಕಲಾಭೀಷ್ಟಗಳಿಗೂ ಕಾಮಧೇನು. ಸ್ತ್ರೀ-ಪುರುಷ ಭೇದವಿಲ್ಲದೆ ಸಕಲ ಮಾನವರೂ ಈ ಮಂತ್ರವನ್ನು ವಿಶೇಷವಾದ ದೀಕ್ಷಾದಿ ನಿಯಮಗಳಿಲ್ಲದೆ ವಿಧಿವಿಹಿತ ಕ್ರಮದಲ್ಲಿ ಸದ್ಗುರುಗಳಿಂದ ಉಪದೇಶ ಪಡೆದು ಅನುಷ್ಠಾನದಿಂದ ಜನ್ಮ ಸಾಫಲ್ಯವನ್ನು ಪಡೆಯಬಹುದು.
ದಕ್ಷಿಣ ಭಾರತದ ಸ್ವಯಂಭೂ ಪಂಚಶಿವಲಿಂಗಗಳು ಪಂಚತತ್ವಗಳ ಪ್ರತೀಕವಾಗಿ ಈ ಕ್ಷೇತ್ರಗಳಲ್ಲಿವೆ.
ಕಂಚಿ-ಏಕಾಂಬರೇಶ್ವರ (ಪೃಥ್ವಿ), ತಿರುವಣ್ಣಾಮಲೆ-ಅರುಣಾಚಲೇಶ್ವರ (ಅಗ್ನಿ), ಶ್ರೀರಂಗಂ-ಜಂಬುಕೇಶ್ವರ (ಜಲ), ಕಾಳಹಸ್ತಿ-ಶ್ರೀಕಾಳಹಸ್ತೇಶ್ವರ (ವಾಯು), ಚಿದಂಬರ-ನಟರಾಜ (ಆಕಾಶ).
ಶಿವನಾಮ ಪರಮ ಮಂಗಳಮಯ, ಸರ್ವದುಃಖನಾಶಕ, ಮಹಾಶಿವರಾತ್ರಿಯ ಶುಭ ಅವಸರದಲ್ಲಿ ಶ್ರದ್ಧಾತಿಶಯದಿಂದ `ಓಂ ನಮಃ ಶಿವಾಯ' ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಜಗದೊಡೆಯನ ಕೃಪಾಪಾತ್ರರಾಗಲು ಶಿವರಾತ್ರಿ ಒಂದು ಪರ್ವ ಕಾಲ.`ಶಿ' ಎಂದರೆ ಶಿಖೆಯಲ್ಲಿ ಪವಿತ್ರ ಗಂಗೆಯನ್ನು ಧರಿಸಿರುವ, `ವ' ಅಂದರೆ ವರದಾತ ಕಲ್ಯಾಣಕಾರಕ ಮಹಾಶಕ್ತಿಶಾಲಿ ನಮ್ಮ `ಶಿವ'. ಈಶ್ವರನನ್ನು ಸರ್ವೋತ್ತಮ ಗಾನಲೋಲನೆಂದೇ ಕರೆಯುವರು. ಸಿರಿಸಂಪದನಾದ ಈಶ್ವರ ಸಪ್ತಸ್ವರಗಳ ಸತ್‍ಶಕ್ತಿ. ಶಿವಶಕ್ತಿಯಲ್ಲಿ ಅಜ್ಞಾನ-ಅಂಧಕಾರದ ಮೂಢನಂಬಿಕೆಗಳನ್ನು ಕಿತ್ತೊಗೆಯುವ ಅಗೋಚರ ಅದಮ್ಯ ದಿವ್ಯ ಶಕ್ತಿಯು ಅಡಗಿದೆ. ಜ್ಞಾನಿಗಳು ಹೇಳುವರು ಆರೋಗ್ಯವೇ ಭಾಗ್ಯವೆಂದು. ಒಳ್ಳೆಯ ಆರೋಗ್ಯಕ್ಕೆ ಬೆನ್ನು ಮೂಳೆಯೇ ಅತಿ ಮುಖ್ಯ. ಶರೀರದ ಹಿಂಭಾಗ ಬೆನ್ನೆಲುಬಿನ ನಾಡಿಗೆ `ಬ್ರಹ್ಮನಾಡಿ' ಎಂದು ಹೆಸರು. ಈ ನಾಡಿನ ಅಗ್ರಭಾಗವೇ `ಮೇರು'. ಈ ಮೇರುವಿನಲ್ಲಿ ಸಹಸ್ರದಳದ ಕಮಲಾಕಾರದ ಒಂದು ಚಕ್ರವಿದೆ. ಅದುವೇ `ಮೇರು ಚಕ್ರ'. ಈ ಚಕ್ರದ ಮಧ್ಯದಲ್ಲಿರುವ ಸರ್ವಸಂಪನ್ನನಾದ ಸಚ್ಚಿದಾನಂದ ಶಕ್ತಿಗೆ `ಪರಮೇಶ್ವರ'ನೆಂದು ಹೆಸರು. ಹೃದಯ ಕಮಲದ ಮಧ್ಯ ಬಿಂದುವಿನಿಂದ ಮೇಲೇರಿ `ಸುಷಮ್ನಾನಾಡಿ'ಯ ಮೂಲಕ ಚಿಮ್ಮುವ ಕಾಂತಿಯುಳ್ಳ ದಿವ್ಯಜ್ಞಾನಮಯ ಅರಿವೆಂಬ ಪರಂಜ್ಯೋತಿಯೇ ಬ್ರಹ್ಮಾನಂದಮಯವಾದ ಸಚ್ಚಿದಾನಂದ ಮೂರ್ತಿ. ಇದೇ `ಜ್ಯೋತಿರ್ಲಿಂಗ' (ಅರಿವು-ಜ್ಞಾನ ಸಿದ್ಧಿ)
- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ



