|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಹಾಶಿವರಾತ್ರಿ: ಆತ್ಮ ಸಾಕ್ಷಾತ್ಕಾರಕ್ಕಾಗಿ ಶಿವಧ್ಯಾನ

ಮಹಾಶಿವರಾತ್ರಿ: ಆತ್ಮ ಸಾಕ್ಷಾತ್ಕಾರಕ್ಕಾಗಿ ಶಿವಧ್ಯಾನ


ಹಾಶಿವರಾತ್ರಿ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹೆಸರೇ ಸೂಚಿಸುವಂತೆ ಇದು ಶಿವರಾತ್ರಿ; ಶಿವನಿಗೆ ಅತ್ಯಂತ ಪ್ರಿಯತಮವಾದ ದಿವಸ. ಆತ್ಮ ಸಾಕ್ಷಾತ್ಕಾರಕ್ಕಾಗಿ, ಯೋಗ ಸಾಧನೆಗಾಗಿ ಪ್ರಕೃತಿ ತಾನಾಗಿ ಮಾನವನಿಗೆ ತೆರೆದುಕೊಳ್ಳುವ ದಿವಸ. ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಈ ದಿನ ತನ್ನನ್ನು ಭಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ನೀಡುತ್ತಾನೆ, ಭಗವಂತ. ಇದು ಹಗಲಿಡೀ ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನದ ಮೂಲಕ ಭಗವಂತನ ಕೃಪೆಗೆ ಪಾತ್ರವಾಗುವ ಶುಭ ದಿನ. ಸಮಸ್ತ ಪಾಪಗಳು ಕ್ಷಯವಾಗಲಿ ಹಾಗೂ ಮೋಕ್ಷ ಪ್ರಾಪ್ತಿಯಾಗಲಿ ಎಂಬುದೇ  ಶಿವರಾತ್ರಿ ಆಚರಿಸುವ ಪರಮ ಉದ್ದೇಶವಾಗಿದೆ.


ಆಚರಣೆ ವಿಧಿ ವಿಧಾನಗಳು:


ಶಿವರಾತ್ರಿಯ ಹಿಂದಿನ ದಿನ ಒಂದೇ ಹೊತ್ತು ಊಟ ಮಾಡಿ ಚತುರ್ದಶಿಯಂದು ಬೆಳಗಿನಿಂದ ಉಪವಾಸ ಇದ್ದುಕೊಂಡು, ರಾತ್ರಿ ನಿದ್ರೆಯನ್ನು ಮಾಡದೆ ಜಾಗರಣೆಯಿಂದ ಶಿವನನ್ನು ಭಕ್ತಿಯಿಂದ ಭಜಿಸಿ ಪೂಜಿಸಬೇಕು. ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು, ಪವಿತ್ರ ನೀರಿನಲ್ಲಿ ಸ್ನಾನವನ್ನು ಮಾಡಿ, ಹೊಸದಾದ ಅಥವಾ ಶುಚಿಯಾದ ಬಿಳಿಯ ವಸ್ತ್ರವನ್ನು ಉಟ್ಟು ಪರಮಾತ್ಮನ ಸ್ಮರಣೆಯಿಂದ ಅಂತರಂಗ ಬಹಿರಂಗದಲ್ಲಿ ಪವಿತ್ರನಾಗಿ ಧ್ಯಾನನಿರತನಾಗಿರಬೇಕು. ಪರಮೇಶ್ವರನ ಲಿಂಗದ ಎದುರುಗಡೆ ಕುಳಿತುಕೊಂಡು,

ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ 

ಅಂದರೆ ತಮ್ಮ ದೇಹವೇ ಒಂದು ದೇಗುಲ, ಆ ದೇಹದಲ್ಲಿ ಇರುವ ಜೀವವೇ ಭಗವಂತ.ತನ್ನೊಳಗಿರುವ ಜೀವಾತ್ಮ ಬೇರೆಯಲ್ಲ, ಲಿಂಗದಲ್ಲಿ ಕಂಡುಕೊಳ್ಳಬೇಕಾದ ಪರಶಿವ ಬೇರೆ ಅಲ್ಲ ಎಂಬ ಭಾವವನ್ನರಿತು ದೇಹದಲ್ಲಿರುವ ಜೀವಾತ್ಮನನ್ನು ಲಿಂಗದಲ್ಲಿ ಸ್ಥಾಪಿಸಿಕೊಂಡು ಪೂಜಿಸಬೇಕು. 

ಐದು ಮುಖಗಳಿಂದ ಕೂಡಿದ, ಮಂಗಳಮಯ ರೂಪಿಯಾದ, ಮೂರು ಕಣ್ಣುಗಳನ್ನು ಹೊಂದಿದ, ನಾಲ್ಕು ಕೈಗಳಿಂದ ಕೂಡಿದ ಸರ್ವಾಭರಣಗಳಿಂದ ಅಲಂಕೃತನಾದ, ನೀಲವರ್ಣದ ಕಂಠವನ್ನು ಹೊಂದಿರುವ, ಚಂದ್ರನನ್ನು ಜಡೆಯಲ್ಲಿ ಧರಿಸಿರುವ, ಸ್ಪಟಿಕದಂತೆ ನಿರ್ಮಲವಾದ ಸರ್ಪಗಳನ್ನೇ ಯಜ್ಞೋಪವೀತ ಮಾಡಿಕೊಂಡ, ಹುಲಿಯ ಚರ್ಮವನ್ನೇ ಉತ್ತರೀಯವಾಗಿ ಧರಿಸಿಕೊಂಡ, ಕಮಂಡಲುವನ್ನು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದುಕೊಂಡ, ಎಲ್ಲಾ ಕಡೆಗೂ ವ್ಯಾಪಿಸಿಕೊಂಡಿರುವ, ಎಲ್ಲರಿಗೂ ಅಭಯವನ್ನು ನೀಡುವ, ಬೇಡಿದವರಿಗೆ ಇಲ್ಲ ಎನ್ನದೆ ವರವನ್ನು ನೀಡುವ, ನಂದಿಯನ್ನೇರಿ ಕುಳಿತಿರುವ, ತನ್ನ ಅರ್ಧಶರೀರದಲ್ಲಿ ಪಾರ್ವತಿಯನ್ನು ಧರಿಸಿರುವ, ಅತಿ ಭಯಂಕರನೂ ಆಗಿರುವ, ಕಪಿಲ ಬಣ್ಣದಿಂದ ಕೂಡಿದ ಜಟೆಯನ್ನು ಎತ್ತಿ ಕಟ್ಟಿಕೊಂಡಿರುವ, ಅಮೃತದಿಂದ ತುಂಬಿ ಸದಾ ಆನಂದವನ್ನೇ ಅನುಭವಿಸುವ, ಇಂದ್ರನೇ ಮೊದಲಾದ ದಿಕ್ಪಾಲಕರಿಂದ ಕೂಡಿ ಎಲ್ಲ ದೇವತೆಗಳಿಂದ ನಮಸ್ಕರಿಸಲ್ಪಡುವ ಹಾಗೂ ನಿತ್ಯವೂ ಶಾಶ್ವತವೂ ಶುದ್ಧ ಸ್ವರೂಪನಾದ, ಸ್ಥಿರನಾದ, ನಾಶರಹಿತನಾದ, ಕ್ಷೀಣನಾಗದ ಎಲ್ಲ ವಸ್ತುಗಳಲ್ಲಿಯೂ ವ್ಯಾಪಿಸಿಕೊಂಡಿರುವ, ಭಕ್ತರ ಎಲ್ಲ ದುಃಖವನ್ನು ನಾಶ ಮಾಡುವ, ಸದಾಶಿವನಾದ ಪರಮ ಮಂಗಳ  ಸ್ವರೂಪವನ್ನು ಲಿಂಗದಲ್ಲಿ ಕಾಣಬೇಕು.


ಲಿಂಗಗಳು ಮತ್ತು ಅವುಗಳ ಪೂಜಾಫಲ:


ಯಾವ ರೀತಿಯಾದ ಲಿಂಗವನ್ನು ನಾವು ಪೂಜಿಸಬೇಕು ಎಂದರೆ, ನರ್ಮದಾ ನದಿಯಲ್ಲಿ ಸಿಗುವ ಬಾಣಲಿಂಗ ಉತ್ತಮ, ವಿಶೇಷವಾದದ್ದು. ಇದಲ್ಲದೆ, ವಜ್ರದ ಲಿಂಗದಿಂದ ಆಯುಷ್ಯ ಪ್ರಾಪ್ತಿಯಾಗುತ್ತದೆ, ಮುತ್ತಿನ ಲಿಂಗದಿಂದ ರೋಗನಾಶವಾಗುವುದು, ವೈಢೂರ್ಯದ ಲಿಂಗದಿಂದ ಶತ್ರುನಾಶ, ಪುಷ್ಯರಾಗ ಲಿಂಗದಿಂದ ಸುಖಪ್ರಾಪ್ತಿ, ಪದ್ಮರಾಗದ ಲಿಂಗದಿಂದ ಐಶ್ವರ್ಯ ಪ್ರಾಪ್ತಿ, ಇಂದ್ರ ನೀಲದಿಂದ ಯಶಸ್ಸು, ಪಚ್ಚೆಯಿಂದ ಪುಷ್ಟಿ, ಸ್ಪಟಿಕದಿಂದ ಸಕಲ ಕಾಮನ ಪ್ರಾಪ್ತಿ, ಬೆಳ್ಳಿಯ ಲಿಂಗದಿಂದ ರಾಜ್ಯ ಪ್ರಾಪ್ತಿ ಹಾಗೂ ಪಿತೃಗಳಿಗೆ ಮುಕ್ತಿ, ಬಂಗಾರದಿಂದ ಸತ್ಯ ಲೋಕ ಪ್ರಾಪ್ತಿ, ಸ್ಥಿರ ಲಕ್ಷ್ಮಿ ಹಾಗೂ ಬ್ರಹ್ಮಸ್ವಾಪರ ದೋಷ ನಿವಾರಣೆ, ತಾಮ್ರದ ಲಿಂಗದಿಂದ ಪುಷ್ಟಿ, ಹಿತ್ತಾಳೆಯಿಂದ ತುಷ್ಟಿ, ಕಂಚಿನ ಲಿಂಗದಿಂದ ಕೀರ್ತಿ, ಲೋಹಮಯ ಲಿಂಗದಿಂದ ಶತ್ರುನಾಶ, ಸೀಸದ ಲಿಂಗದಿಂದ ಆಯುಷ್ಯ ಪ್ರಾಪ್ತಿ, ಗಂಧದ ಲಿಂಗದಿಂದ ಸೌಭಾಗ್ಯ, ದಂತದ ಲಿಂಗದಿಂದ ಸೇನಾಧಿಪತ್ಯ, ಉದ್ದಿನ ಹಿಟ್ಟಿನ ಲಿಂಗದಿಂದ ಸ್ತ್ರೀ ಲಾಭ, ಬೆಣ್ಣೆಯ ಲಿಂಗದಿಂದ ಸುಖ ಪ್ರಾಪ್ತಿ, ಗೋಮಯದ ಲಿಂಗದಿಂದ ರೋಗ ನಾಶ, ಬೆಲ್ಲದ ಲಿಂಗದಿಂದ ಅನ್ನಪ್ರಾಪ್ತಿ, ಬಿದಿರಿನ ಮೊಳಕೆಯ ಲಿಂಗದಿಂದ ವಂಶ ಅಭಿವೃದ್ದಿ, ಮೃಣ್ಮಯ ಲಿಂಗದಿಂದ ಸಮಸ್ತ ಪಾಪ ನಿವಾರಣೆಯಾಗಿ ಮನೋ ಅಭಿಲಾಷಿತ ಕಾಮನಸಿದ್ಧಿ ಎಂಬುದಾಗಿ ಹಲವು ರೀತಿಯಲ್ಲಿ ಪೂಜಿಸಿದರೆ ಬೇರೆ ಬೇರೆ ರೀತಿಯ ಫಲಗಳು ಲಭ್ಯವಾಗುತ್ತದೆ.

ಇದಲ್ಲದೆ ಇನ್ನೂ ಅನೇಕ ರೀತಿಯಲ್ಲಿ ಪೂಜಿಸಬಹುದಾದ ವಿಧಿಗಳನ್ನು ಸ್ಮೃತಿಗಳು ಸಾರುತ್ತದೆ.


ಯಾಮ ಪೂಜೆ:


ಶಿವರಾತ್ರಿಯಲ್ಲಿ ಯಾಮ ಪೂಜೆ ವಿಶೇಷವಾಗಿದೆ. ಪ್ರದೋಷಕಾಲದಿಂದ ರಾತ್ರಿಯನ್ನು ನಾಲ್ಕು ಭಾಗವನ್ನಾಗಿ ಮಾಡಿದಾಗ ಸರಿ ಸುಮಾರು ಮೂರು ಗಂಟೆಗಳ ಕಾಲ ಒಂದು ಯಾಮವಾಗುತ್ತದೆ. ಒಂದೊಂದು ಯಾಮಕ್ಕೆ ಅನುಗುಣವಾಗಿ ಪರಮಶಿವನನ್ನು ಒಂದೊಂದು ಹೆಸರಿನಿಂದ ಪೂಜಿಸಬೇಕು.

ಮೊದಲ ಯಾಮದಲ್ಲಿ ಶ್ರೀ ಶಿವಾಯ ನಮಃ; ಎರಡನೆ  ಯಾಮದಲ್ಲಿ ಶ್ರೀ ಶಂಕರಾಯ ನಮಃ; ಮೂರನೆಯಾಮದಲ್ಲಿ ಶ್ರೀ ಮಹೇಶ್ವರಾಯ ನಮಃ; ನಾಲ್ಕನೇಯಾಮದಲ್ಲಿ ಶ್ರೀ ರುದ್ರಾಯ ನಮಃ ಎಂದು ಪೂಜಿಸಬೇಕು.

ಈ ನಾಲ್ಕು ಸ್ವರೂಪದಲ್ಲಿ ಶಿವನನ್ನು ಅರ್ಚಿಸಿ ಆರಾಧಿಸಿದಲ್ಲಿ ಶಿವನು ಉತ್ತಮವಾದ ಫಲಗಳನ್ನು ದಯಪಾಲಿಸುವುದರಲ್ಲಿ ಸಂದೇಹವಿಲ್ಲ.


ಅಭಿಷೇಕ ಪ್ರಿಯ ಶಿವ:


ಶಿವನಿಗೆ ಅಭಿಷೇಕ ಅತ್ಯಂತ ಪ್ರಿಯವಾದದ್ದು. ನಾಲ್ಕು ಯಾಮಾಗಳಲ್ಲಿಯೂ ಕೂಡ ರುದ್ರ ಹಾಗೂ ಚಮಕ ಇನ್ನಿತರ ವೇದ ಮಂತ್ರಗಳಿಂದ ಸತತ ಧಾರೆಯಾಗಿ ಅಭಿಷೇಕ ಮಾಡಬೇಕು.

ಮೊದಲ ರುದ್ರದಲ್ಲಿ ಗಂಧದಿಂದ ಅಭಿಷೇಕ ಮಾಡಬೇಕು; ಎರಡನೆಯದರಲ್ಲಿ ಪಂಚಗವ್ಯ ಅಥವಾ ಹೂವಿನ ನೀರಿನಿಂದ- ಪನ್ನೀರಿನಿಂದ; ಮೂರನೆಯದರಲ್ಲಿ ಪಂಚಾಮೃತದಿಂದ; ನಾಲ್ಕನೆಯದರಲ್ಲಿ ತುಪ್ಪದಿಂದ; ಐದನೆಯದರಲ್ಲಿ ಹಾಲಿನಿಂದ; ಆರನೆಯದರಲ್ಲಿ ಮೊಸರಿನಿಂದ; ಏಳನೆಯದರಲ್ಲಿ ಜೇನಿನಿಂದ; ಎಂಟನೆಯದರಲ್ಲಿ ಕಬ್ಬಿನ ರಸದಿಂದ; ಒಂಭತ್ತನೆಯದರಲ್ಲಿ ಎಳನೀರಿನಿಂದ; ಹತ್ತನೆಯದರಲ್ಲಿ ಹಣ್ಣಿನ ರಸಗಳಿಂದ; ಹನ್ನೊಂದನೇಯದರಲ್ಲಿ ಶುದ್ಧ ಜಲದಿಂದ ಅಭಿಷೇಕವನ್ನು ಮಾಡಬೇಕು.

ಯಾವ ರೀತಿಯಾಗಿ ಶಿವಲಿಂಗದ ಮೇಲೆ ಬಿದ್ದಂತಹ ನೀರು ಹರಿದು ಕೆಳಗಿಳಿದು ಹೋಗುವುದೋ ಅದೇ ರೀತಿಯಾಗಿ ಈ ಅಭಿಷೇಕದಿಂದ ಪೂರ್ವಜನ್ಮದ ಪಾಪಗಳೆಲ್ಲವೂ ಕೂಡ ಕಳಚಿ ಹೋಗುವುದು ಎಂಬುದಾಗಿ ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.

ಅಭಿಷೇಕವನ್ನು ಮಾಡಿದ ನಂತರ ಉತ್ತಮ ವಸ್ತ್ರದಿಂದ ಲಿಂಗವನ್ನು ಒರೆಸಿ ಕಂದಾಕ್ಷತೆಗಳನ್ನು ಇಟ್ಟು ಉತ್ತಮ ಪೀಠದಲ್ಲಿ ಇಡಬೇಕು. ಯಾವ ರೀತಿಯಾಗಿ ಮನೆಗೆ ಬಂದಂತಹ ಅತಿಥಿಗಳಿಗೆ ಆಸನವನ್ನು ಕೊಡುತ್ತೇವೆಯೋ ಅದೇ ರೀತಿಯಾಗಿ ಭಗವಂತನನ್ನು  ಕುಳ್ಳಿರಿಸಲು ಸರ್ವಾಧಾರ ಶಕ್ತಿಯನ್ನು ಆರೋಪಿಸಿ ಶುಚಿಯಾದ ಉತ್ತಮ ಅಲಂಕಾರಗಳಿಂದ ಕೂಡಿದ ಪೀಠದಲ್ಲಿ ಭಗವಂತನನ್ನು ಕುಳ್ಳಿರಿಸಬೇಕು.

ಶಿವ ಶಕ್ತ್ಯಾಯುಕ್ತೋ ಯದಿಭವತಿ ಶಕ್ತಃ ಎಂದು ಭಗವಾನ್  ಶಂಕರಾಚಾರ್ಯರು ತಿಳಿಸಿರುವಂತೆ, ಪುರುಷನ ಶಕ್ತಿ ಪ್ರಕೃತಿಯಿಂದ ಜಾಗೃತಿಗೊಳ್ಳುತ್ತದೆ. ಶಿವನ ಜತೆ ಶಕ್ತಿ ಇದ್ದಾಗ ಶಿವ ಅತ್ಯಂತ ಶಕ್ತನಾಗುತ್ತಾನೆ. ಇದರ ಪ್ರತೀಕವಾಗಿ ಸತ್ವ, ರಜ, ತಮ ರೂಪದಲ್ಲಿ ಶಕ್ತಿ ತ್ರಿಗುಣೀಕೃತವಾದ ರೂಪ ನವಶಕ್ತಿ. ಇಂತಹ ಶಿವನ ನವಶಕ್ತಿಯನ್ನು ಪೂಜಿಸಬೇಕು.


ವಾಮಾಯೈ ನಮಃ

ಜ್ಯೇಷ್ಠಾಯೈ ನಮಃ

ರೌದ್ರ್ಯೈ ನಮಃ

ಕಾಲ್ಯೈ ನಮಃ

ಕಲವಿಕಲ್ಯೈ ನಮಃ

ಬಲವಿಕಲಿನ್ಯೈ ನಮಃ

ಬಲಪ್ರಮಥಿನ್ಯೈ ನಮಃ

ಸರ್ವಭೂತದಮನ್ಯೈ ನಮಃ

ಮನೋನ್ಮನ್ಯೈ ನಮಃ


ಈ ರೀತಿಯಾಗಿ ನವಶಕ್ತಿಗಳನ್ನು ಆರಾಧನೆ ಮಾಡಿಕೊಂಡು, ಆತ್ಮದಲ್ಲಿ ಸಂಸ್ಥಾಪನಾದ ಪರಮ ಪುರುಷನನ್ನು ಮೂರ್ತಿಯಲ್ಲಿ ಭಾವಿಸಬೇಕು, ಇದುವೇ ಆವಾಹನೆ.


ಪತ್ರ-ಪುಷ್ಪಾದಿಗಳ ಅರ್ಚನೆ:


ಆವಾಹನೆಯನ್ನು ಮಾಡಿ ವಿಶೇಷವಾದ ಪತ್ರ ಪುಷ್ಪಾದಿಗಳಿಂದ ಭಗವಂತನನ್ನು ಅರ್ಜಿಸಬೇಕು. ಯಾವ ರೀತಿಯಾ‌ದ ಹೂವುಗಳನ್ನು ಭಗವಂತನಿಗೆ ಸಮರ್ಪಿಸಬೇಕು ಎಂದರೆ, ಕಾಡಿನಲ್ಲಿ ಬೆಳೆದ ಹೂವುಗಳು, ಪರ್ವತ ಗುಡ್ಡಗಳಲ್ಲಿ ಬೆಳೆದ ಹೂವುಗಳು ಅಥವಾ ತಮ್ಮ ತೋಟದಲ್ಲಿ ಬೆಳೆಸಿದ ಹೂವುಗಳು ತುಂಬಾ ವಿಶೇಷವಾದುದು. ಹೂವುಗಳು ಸಿಗದಿದ್ದರೆ ಎಲೆಗಳಿಂದ ಪೂಜಿಸಬಹುದು. ಇಲ್ಲದಿದ್ದರೆ ಹಣ್ಣುಗಳಿಂದಲಾದರೂ ಪೂಜಿಸಬಹುದು, ಔಷಧೀಯ ಗಿಡಗಳಿಂದಲೂ ಪೂಜಿಸಬಹುದು. ಕೊಳಕಾದ ನೆಲದ ಮೇಲೆ ಬಿದ್ದ ಹೂವುಗಳು; ಹುಳ, ಕೂದಲು, ಎಂಜಲು ಮೊದಲಾದವುಗಳಿಂದ ಕೂಡಿದ ಹೂವು; ಶರೀರದಲ್ಲಿ ಧರಿಸಿದ, ಹಳತಾದ ಹೂವುಗಳನ್ನು ಉಪಯೋಗಿಸಬಾರದು.


ಶಿವನಿಗೆ ಬಿಲ್ವಪತ್ರೆ ವಿಶೇಷವಾದುದರಿಂದ, ಆ ಸಮಯಕ್ಕೆ ಅನುಗುಣವಾಗಿ ಸಿಗದಿದ್ದರೆ ಮೊದಲೇ ಸಂಗ್ರಹಿಸಿ ಜೋಪಾನವಾಗಿ ಕೆಡದಂತೆ ಇಡಬಹುದು. 30 ದಿನಗಳ ತನಕ ಬಿಲ್ವಪತ್ರೆಯನ್ನು ಉಪಯೋಗಿಸಬಹುದು. ಒಂದು ವೇಳೆ ಪ್ರಯತ್ನ ಪಟ್ಟರು ಕೂಡ ಬಿಲ್ವಪತ್ರೆಗಳು ಎಲ್ಲಿಯೂ ಸಿಗಲಿಲ್ಲವೆಂದರೆ ಪೂಜೆ ಮಾಡಿದ ಬಿಲ್ವಪತ್ರೆಗಳನ್ನು ತೊಳೆದು ಮತ್ತೆ ಪುನಃ ಪೂಜೆಗೆ ಉಪಯೋಗಿಸಬಹುದು. ಬಿಲ್ವಪತ್ರೆಗಿಂತ ಶ್ರೇಷ್ಠವಾದ ಹೂವು ಶಿವನನ್ನು ಸಂತೋಷಗೊಳಿಸಲು ಬೇರೆ ಯಾವುದು ಇಲ್ಲ. ಬಿಲ್ವಪತ್ರೆಯ ಎಡ ಭಾಗದ ಎಲೆಯಲ್ಲಿ ಬ್ರಹ್ಮ ವಾಸ ಮಾಡುತ್ತಾನೆ, ಬಲಭಾಗದ ಎಲೆಯಲ್ಲಿ ಮಹಾವಿಷ್ಣುವೇ ನೆಲೆಸಿರುತ್ತಾನೆ, ಮಧ್ಯದ ಎಲೆಯಲ್ಲಿ ಸಾಕ್ಷಾತ್ ಪರಮಶಿವನೇ ಇರುತ್ತಾನೆ. ಬಿಲ್ವಪತ್ರೆಯನ್ನು ಕೊಯ್ಯುವಾಗ ಮರಕ್ಕೆ ನಮಸ್ಕಾರವನ್ನು ಮಾಡಿ, ಅಮೃತ ಹುಟ್ಟುವಾಗ ಹುಟ್ಟಿದಂತಹ ಬಿಲ್ವ ಮರವೇ, ನೀನು ಶಿವನಿಗೆ ಬಹಳ ಪ್ರಿಯವಾಗಿರುವುದರಿಂದ ಪ್ರೀತಿಯಿಂದ ನಿನ್ನ ಎಲೆಯನ್ನು ಕೊಯ್ದು ಭಗವಂತನಿಗೆ ಸಮರ್ಪಿಸುತ್ತೇನೆ ಎಂದು ಪ್ರಾರ್ಥನೆಯನ್ನು ಮಾಡಿ ಕೊಯ್ಯಬೇಕು.


ದರ್ಶನಾದ್ಬಿಲ್ವವೃಕ್ಷಸ್ಯ ಸ್ಪರ್ಶನಾ  ದ್ವಂದನಾದಪಿ

ಅಹೋರಾತ್ರಕೃತಂ ಪಾಪಂ ನಶ್ಯತ್ಯೇವಹಿ ನಾರದ


ಬಿಲ್ವ ಮರವನ್ನು ನೋಡುವುದರಿಂದ, ಮುಟ್ಟುವುದರಿಂದ, ನಮಸ್ಕರಿಸುವುದರಿಂದ ನಾವು ಹಗಲು ಮತ್ತು ರಾತ್ರಿಗಳಲ್ಲಿ ಮಾಡಿದ ಪಾಪವು ನಾಶವಾಗುತ್ತದೆ. ಎಕ್ಕದ ಹೂವು, ಕರವೀರ, ಬಿಲ್ವ, ಬಕುಲ ಈ ನಾಲ್ಕು ಬಗೆಯ ಹೂವುಗಳನ್ನು ಪರಶಿವನು ಪ್ರೀತಿಯಿಂದ ಆಘ್ರಾಣಿಸುತ್ತಾನೆ. ಆದುದರಿಂದ ಈ ಹೂವುಗಳು ತುಂಬಾ ವಿಶೇಷ.


ಷೋಡಶೋಪಚಾರ:


ತದನಂತರದಲ್ಲಿ 16 ಬಗೆಯ ಉಪಚಾರಗಳನ್ನು ಮಾಡಬೇಕು. ಅದೇ ಷೋಡಶೋಪಚಾರ.

ಧ್ಯಾನ, ಆವಾಹನ, ಆಸನ ಇತ್ಯಾದಿ ಉಪಚಾರಗಳನ್ನು ಮಾಡಿ ವನಸ್ಪತಿಗಳಿಂದ ಕೂಡಿದ ಧೂಪವನ್ನು ದೇವರಿಗೆ ಸಮರ್ಪಿಸಬೇಕು. ನಂತರ ತುಪ್ಪದ ದೀಪವನ್ನು ತೋರಿಸಬೇಕು.


ನೈವೇದ್ಯ ಸಮರ್ಪಣೆ:


ನಂತರದಲ್ಲಿ ನೈವೇದ್ಯ ಭಗವಂತನಿಗೆ ಸಮರ್ಪಿಸಬೇಕು. ಶುಚಿಯಾಗಿ ಮಾಡಿದಂತಹ ನೈವೇದ್ಯಗಳನ್ನು ಭಗವಂತನ ಮುಂದಿರಿಸಿ, ಇದಂ ನಮಮ- ನನ್ನದಲ್ಲ ಎಲ್ಲವೂ ನಿನ್ನದೇ ಎನ್ನುವ ಭಾವನೆಯಿಂದ ಎಲ್ಲವೂ ಅಮೃತವಾಗಲಿ ಎಂದು ನೈವೇದ್ಯ ಮಾಡಬೇಕು.


ಮಂಗಳಾರತಿಯನ್ನು ಮಾಡಿಕೊಂಡು, ಮಂತ್ರ ಪುಷ್ಪಾದಿಗಳನ್ನು ಸಮರ್ಪಿಸಿ, ಸಮಸ್ತ ಪಾಪವನ್ನು ನಿವಾರಣೆ ಮಾಡು ಎಂದು ಪ್ರಾರ್ಥನೆಯನ್ನು ಮಾಡಬೇಕು. ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕು. ಕಾಯಿಕವಾಗಿಯೂ ಮಾನಸಿಕವಾಗಿಯೂ ನಮಸ್ಕಾರವನ್ನು ಮಾಡಬೇಕು. ದೇಹವನ್ನು ಬಗ್ಗಿಸುವ ಜೊತೆಗೆ ಮನಸ್ಸು ಕೂಡ ಸಮರ್ಪಣಾ ಭಾವದಿಂದ ಬಾಗಿರಬೇಕು. ಪುರುಷರು ಅಷ್ಟಾಂಗ ನಮಸ್ಕಾರವನ್ನು ಮಾಡಬೇಕು, ಸ್ತ್ರೀಯರು ಪಂಚಾಂಗ ನಮಸ್ಕಾರವನ್ನು ಮಾಡಬೇಕು.

ಮಾಡಿದ ಕರ್ಮಗಳೆಲ್ಲವೂ ಕೂಡ ಭಗವಂತನ ಪಾದಾರವಿಂದಕ್ಕೆ ಸಮರ್ಪಣೆಯಾಗಲಿ ಎಂದು ಬ್ರಹ್ಮರ್ಪಣಾದಿಗಳನ್ನು, ಅರ್ಘ್ಯಾದಿಗಳನ್ನು ಬಿಡಬೇಕು. ಗುರುಗಳಿಗೆ, ಸದ್ಬ್ರಾಹ್ಮಣರಿಗೆ ಯಥಾಸಾದ್ಯ ದಾನ ದಕ್ಷಿಣೆಗಳನ್ನು ಕೊಟ್ಟು ಆಶೀರ್ವಾದವನ್ನು ಪಡೆದುಕೊಳ್ಳಬೇಕು. ತೀರ್ಥ ಪ್ರಸಾದಗಳನ್ನು ಸ್ವೀಕಾರ ಮಾಡಿಕೊಂಡು ಹೃದಯ ಮಂದಿರದಲ್ಲಿ ಭಗವಂತನನ್ನು ಪುನಃ ಸ್ಥಾಪಿಸಿ ಉದ್ವಾಸನೆಯನ್ನು ಮಾಡಬೇಕು. ಹೀಗೆ ಪೂಜಾದಿಗಳನ್ನು ಮಾಡುತ್ತಾ ಜಾಗರಣೆಯನ್ನು ಮಾಡಬೇಕು. ಪ್ರಾತಃಕಾಲದಲ್ಲಿ ಸ್ನಾನವನ್ನು ಮಾಡಿ ಪುನಹ ಶಿವನನ್ನು ಆರಾಧಿಸಿ ಪೂಜಿಸಿ ಬ್ರಾಹ್ಮಣರಿಗೆ ಬಂಧು ಬಾಂಧವರಿಗೆ ಪಾರಣೆಯನ್ನು ಮಾಡಿಸಬೇಕು, ತಾನು ಪ್ರಸಾದವನ್ನು ಸ್ವೀಕರಿಸಬೇಕು.


ಅನನ್ಯ ಭಕ್ತಿ ಭಾವದಿಂದ ಪೂಜೆಯನ್ನು ಮಾಡಿದರೆ ಭಕ್ತರನ್ನು ಪೊರೆಯುವ ಪರಶಿವ ಉತ್ತಮ ಮಾರ್ಗದಲ್ಲಿ ನಡೆಯುವ ಸುಜ್ಞಾನವನ್ನು ಹಾಗೂ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುವುದರಲ್ಲಿ ಸಂಶಯವಿಲ್ಲ.


-ಪ್ರಣೀತ ವೆಂಕಟೇಶ ಶರ್ಮ





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

1 Comments

Post a Comment

Post a Comment

Previous Post Next Post