ಉಡುಪಿಯಲ್ಲಿ ಸಂತ- ಮಂಥನ: ಮಠಾಧೀಶರ ಜತೆ ಜೆಪಿ ನಡ್ಡಾ ಸೌಹಾರ್ದ ಸಮಾಲೋಚನೆ

Upayuktha
0

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ರಾಮ ವಿಠಲ‌ ಸಭಾಂಗಣದಲ್ಲಿ ಇಂದು (ಫೆ 20, ಸೋಮವಾರ) ಮಠಾಧೀಶರೊಂದಿಗೆ ಸೌಹಾರ್ದ ಸಭೆ 'ಸಂತ-ಮಂಥನ' ನಡೆಸಿದರು.


ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆಯೋಜಿಸಲಾದ ಈ ಸಭೆಯಲ್ಲಿ  ಕರಾವಳಿ ಜಿಲ್ಲೆಗಳ ಅನೇಕ ಮಠಾಧೀಶರು ಉಪಸ್ಥಿತರಿದ್ದರು.


ಆರಂಭದಲ್ಲಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ವ, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಇಂದು ಶೇಖರ ಹೆಗಡೆ ಮೊದಲಾದವರು ನಡ್ಡಾರನ್ನು ಆದರದಿಂದ ಬರಮಾಡಿಕೊಂಡರು. ಬಳಿಕ ನಡ್ಡಾ ಅವರು  ಶ್ರೀ ವಿಶ್ವೇಶತೀರ್ಥರ ಪಾದುಕೆಗೆ ಪುಷ್ಟಾರ್ಚನೆ ಸಲ್ಲಿಸಿ ಗೌರವಾರ್ಪಣೆ ಮಾಡಿದರು. ಶ್ರೀ ವಿಶ್ವಪ್ರಸನ್ನತೀರ್ಥರಿಂದ ರಾಮವಿಠಲ ದೇವರ ಗಂಧ ತುಲಸಿ ಪ್ರಸಾದ ಸ್ವೀಕರಿಸಿದರು.


ಉಡುಪಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ: ಸಂತ-ಮಂಥನದಲ್ಲಿ ಕರಾವಳಿಯ ಅಪೇಕ್ಷೆಗಳ ಸಲ್ಲಿಕೆ


ಬಳಿಕ ಸಭೆ ಆರಂಭವಾಯಿತು. ಮಠಾಧೀಶರು ಹಾಗೂ ನಡ್ಡಾರಿಂದ ದೀಪ ಜ್ವಲನ‌, ಮಠದ ವಿದ್ಯಾರ್ಥಿಗಳಿಂದ ಮಂತ್ರಘೋಷ ನೆರವೇರಿತು.


ರಾಜಗೋಪಾಲಾಚಾರ್ಯರು ಉಡುಪಿಯ ಪೌರಾಣಿಕ ಹಿನ್ನೆಲೆ ಮಧ್ವಾಚಾರ್ಯರು, ಕೃಷ್ಣ ಮಠ ಅಷ್ಟ ಮಠಗಳ ಪರಿಚಯವನ್ನು ಹಿಂದಿಯಲ್ಲಿ ಮಾಡಿಕೊಟ್ಡರು. ಬೈಕಾಡಿ ಸುಪ್ರಸಾದ ಶೆಟ್ಟರು ಎಲ್ಲ ಮಠಾಧೀಶರ ಪರಿಚಯ ಮಾಡಿದರು.


ರಾಜ್ಯಾಧಿಕಾರ ನಡೆಸುವ ಪಕ್ಷಗಳಿಂದ ಕರಾವಳಿಯ ಸಾಧು ಸಂತರ ಅಪೇಕ್ಷೆ ನಿರೀಕ್ಷೆಗಳ ಬಗ್ಗೆ ಹತ್ತು ಅಂಶಗಳ ಪತ್ರಕವನ್ನು ಪೇಜಾವರ ಶ್ರೀಗಳು ನಡ್ಡಾರವರಿಗೆ ಹಸ್ತಾಂತರಿಸಿದರು. ಈ ಅಂಶಗಳ ಬಗ್ಗೆ ಆದ್ಯತೆಯ ಮೇಲೆ ಗಮನಹರಿಸುವಂತೆ ವಜ್ರದೇಹಿ ಶ್ರೀ, ಪುತ್ತಿಗೆ ಶ್ರೀ, ಮೂಡಬಿದ್ರೆ ಜೈನ ಮಠದ ಶ್ರೀಗಳು ಪೇಜಾವರ ಶ್ರೀಗಳು ವಿಷಯ ಮಂಡಿಸಿ ಅಪೇಕ್ಷೆ ವ್ಯಕ್ತಪಡಿಸಿದರು ‌


ನಡ್ಡಾ ಅವರು ಇದಕ್ಕುತ್ತರಿಸಿ ಮಾತನಾಡಿದರು. ಉಡುಪಿ ಭೇಟಿ ಹಾಗೂ ಇಷ್ಟು ಜನ ಸಂತರೊಂದಿಗೆ ಸಮಾಲೋಚನೆ ನಡೆಸಿ ಧನ್ಯತೆ ಉಂಟಾಗಿದೆ.‌ ಖಂಡಿತ ಸಂತರ ಆಶೀರ್ವಾದ ಮಾರ್ಗದರ್ಶನಗಳೊಂದಿಗೆ ಬಿಜೆಪಿ ಯಾವತ್ತೂ ಮುನ್ನಡೆಯುತ್ತದೆ ಎಂದರು.


ಪೇಜಾವರ ಶ್ರೀಗಳು ಶಾಲು ಸಹಿತ ಗೋಪಾಲಕೃಷ್ಣನ ಕಂಚಿನ ವಿಗ್ರಹ, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಎಲ್ಲ ಸಂತರೂ ನಡ್ಡಾ ಅವರಿಗೆ ಶಾಲು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.


ಶ್ರೀಶ ನಾಯಕ್ ಪೆರ್ಣಂಕಿಲ, ಸ್ವಸ್ತಿಕ್ ಕಲ್ಯಾಣಪುರ, ಸತೀಶ್ ಕುಮಾರ್, ಮಠದ ಕೊಟ್ಟಾರಿ ಸಂತೋಷ್ ಸಹಕರಿಸಿದರು. ನಳಿನ್ ಕಟೀಲ್, ಎಸ್ ಅಂಗಾರ, ಶೋಭಾ  ಕರಂದ್ಲಾಜೆ, ಸುನಿಲ್ ಕುಮಾರ್ ಲಾಲಾಜಿ ಮೆಂಡನ್, ರಘುಪತಿ ಭಟ್ ಸುರೇಶ್ ನಾಯಕ್ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top