ಹೊಸ ರಂಗವೇದಿಕೆ ಉದ್ಘಾಟನೆ, ಪ್ರಶಸ್ತಿ ಪ್ರದಾನ ಸಮಾರಂಭ, ನಾಟ್ಯ ಗುರುಗಳ ಷಷ್ಟ್ಯಬ್ದಿ ಕಾರ್ಯಕ್ರಮಕ್ಕೆ ಚಾಲನೆ
ಪೆರ್ಲ: ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 18ನೇ ವಾರ್ಷಿಕೋತ್ಸವ, ಹೊಸ ರಂಗವೇದಿಕೆಯ ಉದ್ಘಾಟನೆ, ಪ್ರಶಸ್ತಿ ಪ್ರದಾನ, ನಾಟ್ಯ ಗುರುಗಳ ಷಷ್ಟ್ಯಬ್ದಿ ಕಾರ್ಯಕ್ರಮ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಫೆ.25 ಮತ್ತು 26ರಂದು ತರಬೇತಿ ಕೇಂದ್ರದ ಪರಿಸರದಲ್ಲಿ ನಡೆಯಲಿದೆ.
ಫೆ.25ರಂದು ಬೆಳಗ್ಗೆ 9ಕ್ಕೆ ಶ್ರೀ ಮಹಾಗಣಪತಿ ಹವನ, ಬಾಯಾರು ಪೆರುವೋಡಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಸದಸ್ಯರ ಭಜನಾ ಸಂಕೀರ್ತನೆ, 10ರಿಂದ ಶ್ರೀ ಸತ್ಯನಾರಾಯಣ ಪೂಜೆ, 11ಕ್ಕೆ ನೂತನ ರಂಗವೇದಿಕೆ ಉದ್ಘಾಟನೆ ನಡೆಯಲಿದೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು.ದಿಗ್ವಿಜಯ ಗ್ರೂಪ್ ಕಂಪೆನಿ ಅಧ್ಯಕ್ಷ ಮಾವೆ ದಿನಕರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಯಕ್ಷಪ್ರಭಾ ಮಾಸ ಪತ್ರಿಕೆ ಸಂಪಾದಕ, ಕಲಾವಿದ ಕೆ.ಎಲ್.ಕುಂಡಂತಾಯ, ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ನಾಟ್ಯ ತರಬೇತಿ ಕೇಂದ್ರದ ಗೌರವಾಧ್ಯಕ್ಷ ಎನ್.ಕೆ.ರಾಮಚಂದ್ರ ಭಟ್, ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ ಉಪಸ್ಥಿತರಿರುವರು.
ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅವರಿಗೆ ವಿಶೇಷ ಸಾಧನಾ ಪ್ರಶಸ್ತಿ, ಶಾಂತಾ ಕುಂಟಿನಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುವುದು. ಕಲಾವಿದ ಮಂಗೇಶ್ ಭಟ್ ವಿಟ್ಲ ಅವರಿಗೆ ಸನ್ಮಾನ, ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ಅವರಿಗೆ ಷಷ್ಟ್ಯಬ್ದಿ ಕಾರ್ರ್ಯಕ್ರಮದ ಪ್ರಾರಂಭದ ಅಂಗವಾಗಿ ಗುರುವಂದನೆ, ಗುರುಗಳಿಂದ ಶಿಷ್ಯರಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಮಧ್ಯಾಹ್ನ 12ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, 1 ರಿಂದ ಗಾನವೈಭವ, 2ರಿಂದ ಮಕ್ಕಳ ಯಕ್ಷಗಾನ ಬಯಲಾಟ, ಸಂಜೆ 6ರಿಂದ ಶ್ರೀ ದುರ್ಗಾಪೂಜೆ ನಡೆಯಲಿದೆ.
ಫೆ.26ರಂದು ಬೆಳಗ್ಗೆ 10ರಿಂದ ಯಕ್ಷನೃತ್ಯ ರಂಗಪ್ರವೇಶ, 11.30ರಿಂದ ಪೂರ್ವರಂಗ, 1 ಗಂಟೆಗೆ ರಂಗಪ್ರವೇಶ, 2.30ರಿಂದ ಮೂಡುಬಿದಿರೆ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ ಪೋರ್ಟ್ ನ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ನಡೆಯಲಿದೆ. ಪೆರ್ಲ ಹೈಸ್ಕೂಲ್ ಮುಖ್ಯ ಶಿಕ್ಷಕ ರಾಜೇಂದ್ರ ಬಿ., ಕರ್ಣಾಟಕ ಬ್ಯಾಂಕ್ ನ ಜಗದೀಶ್ ಬಲ್ಲಾಳ್, ಎನ್.ಕೆ. ರಾಮಚಂದ್ರ ಭಟ್ ಪನೆಯಾಲ ಮತ್ತಿತರರು ಉಪಸ್ಥಿತರಿರುವರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಫೆ.26ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಮರಣೋತ್ತರ ಚೇವಾರು ಕಾಮತ್ ಪ್ರಶಸ್ತಿ, ಬಲಿಪ ಪ್ರಸಾದ ಭಾಗವತರಿಗೆ ಮರಣೋತ್ತರ ಪಡ್ರೆ ಚಂದು ಪ್ರಶಸ್ತಿ, ಕುರಿಯ ಗಣಪತಿ ಶಾಸ್ತ್ರಿಗಳಿಗೆ ತೆಂಕಬೈಲು ಪ್ರಶಸ್ತಿ, ಬಲಿಪ ಶಿವಶಂಕರ ಭಟ್ ಅವರಿಗೆ ಅಡ್ಡಸ್ಥಳ ಪ್ರಶಸ್ತಿ, ಚೆನ್ನಪ್ಪ ಪೈವಳಿಕೆ ಅವರಿಗೆ ದೇವಕಾನ ಪ್ರಶಸ್ತಿ, ರಮೇಶ ಶೆಟ್ಟಿ ಬಾಯಾರು ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೋಟೆ ರಾಮ ಭಟ್ ಅಭಿನಂದನಾ ಭಾಷಣ ಮಾಡುವರು. ಹವ್ಯಾಸಿ ಯಕ್ಷಗಾನ ಕಲಾವಿದ ಎಸ್.ಮಾಧವ ಇಡಿಯಡ್ಕ ಅವರನ್ನು ಸನ್ಮಾನಿಸಲಾಗುವುದು. ಸಂಜೆ 4ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


