ಮಂಗಳೂರು ವಿವಿ: ಸ್ವಾವಲಂಬನೆಗಾಗಿ ಸಾವಯವ ಕೃಷಿ- ತರಬೇತಿ ಕಾರ್ಯಕ್ರಮ

Upayuktha
0

ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗ ಮತ್ತು ಮಂಗಳ ಯೋಜನೆ - ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ ಅಡಿಯಲ್ಲಿ ಉದಯವಾಣಿ ಮತ್ತು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ (OFCG) ಸಹಭಾಗಿತ್ವದಲ್ಲಿ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಸ್ವಾವಲಂಬನೆಗಾಗಿ ಮನೆಯಂಗಳದಲ್ಲಿ ಇತ್ತೀಚೆಗೆ ಸಾವಯವ ಕೃಷಿ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಬೇಕು, ಇದು ಕೃಷಿಯಲ್ಲಿ ಹೆಚ್ಚು ಸ್ವಾವಲಂಬಿಯಾಗಲು ದೇಶದ ಪ್ರಯತ್ನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಲಬೆರಕೆ, ಕಲುಷಿತ ಮತ್ತು ಜಂಕ್ ಫುಡ್ ಸೇವನೆಯಿಂದ ಆರೋಗ್ಯಕ್ಕೆ ಆಗುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ, ಎಂದು ಹೇಳಿದರು.


ಸಾವಯವ ರೈತ ಗ್ರಾಹಕ ಬಳಗ, ಮಂಗಳೂರು ಇದರ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತಮ್ಮ ದಿಕ್ಸೂಚಿ ಭಾಷಣದಲ್ಲಿ, ವಿಷಮುಕ್ತ ಸಾವಯವ ಆಹಾರದ ಮೇಲೆ ಜನರು ಅವಲಂಬಿತರಾಗಲು ಇದು ಸಕಾಲ. ಸರಳ ವಿಧಾನಗಳೊಂದಿಗೆ ಜನರು ತಮ್ಮ ವಸತಿ ಪ್ರದೇಶಗಳಲ್ಲಿ ಸಾವಯವವಾಗಿ ತರಕಾರಿಗಳನ್ನು ಬೆಳೆಯಬಹುದು. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಜನರು ಆಸಕ್ತಿ ವಹಿಸುತ್ತಿದ್ದಾರೆ. ಸಾವಯವ ರೈತ ಗ್ರಾಹಕ ಬಳಗ ಅವರಿಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ಸಿದ್ಧವಾಗಿದೆ, ಎಂದರು. 


ಮುಖ್ಯ ಅತಿಥಿ ಮಣಿಪಾಲ ಮೀಡಿಯಾ ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ.ಇ.ಓ. ವಿನೋದ್ ಕುಮಾರ್ ಸ್ವಾವಲಂಬನೆಗಾಗಿ ಸಾವಯವ ಕೃಷಿ ತರಬೇತಿಯು ಅಂತಹ ಒಂದು ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ತಮ್ಮ ಏಳಿಗೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಇದರ ಪ್ರಯೋಜನವನ್ನು ಬಳಸಿಕೊಳ್ಳಬೇಕು. ಸಾವಯವ ವ್ಯವಸಾಯದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದಲ್ಲದೆ ಜೀವನದ ಗುಣಮಟ್ಟವೂ ಹೆಚ್ಚುತ್ತದೆ, ಎಂದರು. 


ಸಂಪನ್ಮೂಲ ವ್ಯಕ್ತಿಗಳಾಗಿ ಸ್ನೇಹಾ ಭಟ್ ಅವರು ಮನೆಯಲ್ಲಿ ಹೂವಿನ ಗಿಡಗಳು ಮತ್ತು ತರಕಾರಿಗಳನ್ನು ಬೆಳೆಸುವ ಬಗ್ಗೆ ತರಬೇತಿ ನೀಡಿದರು. ಹರಿಕೃಷ್ಣ ಕಾಮತ್, ಪುತ್ತೂರು ಅವರು ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಯವ ರೈತ ಗ್ರಾಹಕ ಬಳಗ, ಮಂಗಳೂರು ಇದರ  ಅಧ್ಯಕ್ಷ ಜಿ.ಆರ್. ಪ್ರಸಾದ್, ಉದಯವಾಣಿ ಮುಖ್ಯ ವರದಿಗಾರ ವೇಣು ವಿನೋದ್ ಕೆ.ಎಸ್. ಅವರು ಸಾವಯವ ಕೃಷಿ ಕುರಿತು ನಡೆಸುತ್ತಿರುವ ಸರಣಿ ಕಾರ್ಯಕ್ರಮಗಳ ಅವಲೋಕನ ನೀಡಿದರು.


ಜೈವಿಕ ವಿಜ್ಞಾನ ವಿಭಾಗದ ಅಧ್ಯಕ್ಷೆ ಪ್ರೊ.ಚಂದ್ರಾ ಎಂ. ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ವಂದನಾರ್ಪಣೆಗೈದರು. ಕಾರ್ಯಕ್ರಮದ ಸಹ ಸಂಯೋಜಕ ಡಾ.ಶರತ್ ಚಂದ್ರ ಕೆ. ಮತ್ತು ಪರಿಸರ ವಿಜ್ಞಾನದ ಸಂಯೋಜಕಿ ಡಾ.ತಾರಾವತಿ ಎನ್.ಸಿ. ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಡಾ. ಲವೀನಾ ಕೆ.ಬಿ. ಮತ್ತು ಸೌರವ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತರಕಾರಿ ಬೀಜಗಳು, ರಸಗೊಬ್ಬರ ಮತ್ತು ತೋಟಗಾರಿಕಾ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು. 


ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಸಂಯೋಜಕರು, ಬೋಧಕ, ಬೋಧಕೇತರ ಸಿಬ್ಬಂದಿ  ಮತ್ತು ಸಾರ್ವಜನಿಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top