ಬೆಂಗಳೂರು : ಕಲಬುರಗಿಯ ಕುಟುಂಬ ಪ್ರಕಾಶನ ಹಾಗೂ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಲೇಖಕ ಎಚ್.ಟಿ. ಪೋತೆ ಅವರ ಅನುವಾದಿತ ‘ON THE ROAD TRODDEN BY BABASAHEB’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನಲ್ಲಿಂದು ನಡೆಯಿತು.
ದಲಿತರ ಶಿಕ್ಷಣಕ್ಕೆ ಪ್ರಾಮುಖ್ಯತೆ; ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ನವದೆಹಲಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, “45 ವರ್ಷಗಳ ರಾಜಕೀಯ ಪಯಣದಲ್ಲಿ ರಾಜಕೀಯ ಮುತ್ಸದ್ಧಿ ತನವನ್ನು ತೋರಿದ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ. ಅವರ ಏಳಿಗೆ ಬಹಳ ಕಷ್ಟವಾಗಿದ್ದು, ಸುಲಭದ ಹಾದಿ ಅವರಿಗಿರಲಿಲ್ಲ. ಇನ್ನು ನಗ್ನ ಸತ್ಯಗಳನ್ನು ಮುಚ್ಚುಮರೆಯಬಾರದು. ಸುಮಾರು ಶೇ.20 ರಷ್ಟು ದಲಿತರು 5000 ವರ್ಷಗಳ ಕಾಲ ಶೋಷಣೆಗೆ ಒಳಪಟ್ಟಿದ್ದಾರೆ. ಅವರು ಈ ದೇಶದ ಕಷ್ಟಕರ್ಮಿಗಳು ಕೂಡ ಹೌದು. ಆದರೆ ಅವರಿಗೆ ಕರ್ಮಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕಿಲ್ಲ. ಹಾಗೆ ಇವತ್ತು ಕೂಡ ಹೋರಾಟ ನಡೆಯುತ್ತಲೇ ಇದೆ. 75 ವರ್ಷಗಳ ಸ್ವಾತಂತ್ಯ್ರ ಪಯಣದಲ್ಲಿ ಅವರ ಇರುವಿಕೆ, ಮಾತನಾಡುವಿಕೆ, ಅಕ್ಷರಾಭ್ಯಾಸ, ಶೋಷಣೆಯು ಈ ವರ್ಗಕ್ಕೆ ನಿಲ್ಲಲಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಿಷ್ಟ 2ರಷ್ಟು ಶಿಕ್ಷಣ ದೊರಕುತ್ತಿದೆ. ಆದರೆ ನಗರ ಪಟ್ಟಣಗಳಲ್ಲಿ ಬಹಳಷ್ಟು ಜನ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ದಲಿತ ವರ್ಗದ ಜನರಿಗೋಸ್ಕರ ಹೋರಾಟ ಮಾಡುತ್ತಿರುವ ಧೀಮಂತ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ”.
ಜನರ ವಿಶ್ವಾಸಕ್ಕೆ ಸದಾಕಾಲ ಮಿಡಿಯುವ ವ್ಯಕ್ತಿ; ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ''ಅಂಬೇಡ್ಕರ್ ಅವರಲ್ಲಿರುವ ವ್ಯಕ್ತಿತ್ವ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿದೆ. ನಾವು ಅಂಬೇಡ್ಕರ್ ಅವರನ್ನು ನೋಡಿಲ್ಲ. ಅಂಬೇಡ್ಕರ್ ಅವರಿಗೆ ಆ ರೀತಿ ಆದಂತಹ ಒಂದು ಬಿಗಿ ಮುಖವಿತ್ತಲ್ಲ, ಅದು ಈ ದೇಶದ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಅನ್ಯಾಯಗಳ ಬಗ್ಗೆ, ಪರಿಹಾರದ ಕುರಿತ ಚಿಂತೆಯ ಕುರಿತು ಯೋಚಿಸುತ್ತಿತ್ತು. ಅಂತಹ ಒಂದು ಭಾವವನ್ನು ನಾವು ಖರ್ಗೆ ಅವರಲ್ಲಿಯೂ ಕಾಣಬಹುದು. ಇನ್ನು ಈ ಕೃತಿಯಲ್ಲಿ ಅಂಬೇಡ್ಕರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿ, ಸಹ ನಾಯಕ ನಾಯಕಿಯರನ್ನು ಕಾಣಬಹುದು. ದುಡ್ಡಿನಿಂದ, ಜಾತಿ ಪ್ರಭಾವದಿಂದ, ರಾಜಕೀಯದಿಂದ ವ್ಯಕ್ತಿಯೊಬ್ಬ ಭಾರತ ದೇಶದಲ್ಲಿ ಗೆಲ್ಲುವುದು ಬಹಳ ಸುಲಭ. ಖರ್ಗೆ ಅವರು ಜನರ ವಿಶ್ವಕ್ಕೆ ಸದಾಕಾಲ ತುಡಿಯುತ್ತಿರುವ ಮಿಡಿಯುತ್ತಿರುವ ವ್ಯಕ್ತಿಯಾಗಿದ್ದಾರೆ”.
ಓದುಗರ ವಲಯ ವಿಸ್ತಾರ; ಅನುವಾದಕ ಎನ್. ತಿರುಮಲೇಶ್ ಭಟ್, “ಪುಸ್ತಕ ಪ್ರಕಾಶನಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ಸಿಗಬೇಕು ಎಂಬುವುದೇ ನನ್ನ ಆಸೆ. ಓದುಗರು ಇಂದಿಗೂ ಇದ್ದಾರೆ. ಆದರೆ ಓದುವಿಕೆಯ ವಲಯ ಮಾತ್ರ ವಿಸ್ತರಿಸಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್ ಮೂಲಕ ಜನರು ಬೇಕಾದ ಹಾಗೂ ಬೇಡದ ರೀತಿಯಲ್ಲಿ ಬರವಣಿಗೆಗಳನ್ನು ಬರೆಯುತ್ತಿದ್ದಾರೆ. ಇನ್ನು ಪುಸ್ತಕ ಪ್ರಕಟ ಆಗಿಲ್ಲವೆಂದರೆ ಜ್ಞಾನ ಪ್ರಕಟವೂ ಆಗಿಲ್ಲವೆಂದು ಲೆಕ್ಕ. ಜ್ಞಾನ ಪ್ರಸಾರ ಆಗಬೇಕೆಂದರೆ ಇನ್ನೊಬ್ಬರ ಕೈಗೆ ಪುಸ್ತಕಗಳು ಸೇರಬೇಕು”.
ಸಾಧನೆಗೆ ಸ್ಫೂರ್ತಿ ಮಲ್ಲಿಕಾರ್ಜುನ ಖರ್ಗೆ; ಸಂಶೋಧಕ ಎಚ್.ಟಿ ಪೋತೆ, “ಮಲ್ಲಿಕಾರ್ಜುನ ಖರ್ಗೆ ಅವರು ನನಗೆ, ‘ನೀನು ನನ್ನನ್ನು ಅನುಯಾಯಿಯಾಗಿಸಿಕೊಂಡು ಪುಸ್ತಕವನ್ನುಬರೆಯುವುದು ಹೊರತು ಮಾದರಿಯಾಗಿ ಅಲ್ಲ’ ಎಂದರು. ಇನ್ನು ಅವರು ಮಾಡಿದ ಕೆಲಸದ ಕುರಿತು ಅವರೇ ಒಂದೊಮ್ಮೆ ಹೇಳಿಕೊಂಡಿದ್ದರು. ‘ಬಾಬಾ ಸಾಹೇಬರ ಸಂವಿಧಾನ ಇರುವ ತನಕ ನಾನು ಮಾಡಿದ ಕೆಲಸ ಕೂಡ ಇರುತ್ತದೆ’ ಎಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ವ್ಯಕ್ತಿತ್ವದಲ್ಲಿ ಒಂದು ಬಗೆಯ ತಾಯ್ತನವಿದೆ. ನಾನು ನನ್ನ ಬದುಕಿನಲ್ಲಿ ಹಲವಾರು ಮಜಲುಗಳನ್ನು ದಾಟಿ ಏನನ್ನಾದರೂ ಸಾಧಿಸಿದ್ದೇನೆ ಎಂದರೆ ಅದಕ್ಕೆ ಸ್ಪೂರ್ತಿ ಅಂಬೇಡ್ಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ. ನನಗೆ ಗೊತ್ತಿದ್ದನ್ನು ನಾಲ್ಕು ಅಕ್ಷರಗಳಲ್ಲಿ ಬರೆದು ಜನರಿಗೆ ತಿಳಿಸಿದ್ದೇನೆ ಎಂಬುದೇ ಖುಷಿಯ ಸಂಗತಿ”.
ಮಾತಿಗಿಂತ ಕೃತಿ ಶ್ರೇಷ್ಠ; ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, “ಮಾತಿಗಿಂತ ಕೃತಿ ಶ್ರೇಷ್ಠ ಎನ್ನುವಂತೆ ಖರ್ಗೆ ಸಾಹೇಬರ ಹೆಜ್ಜೆಯ ಹಾದಿಯಲ್ಲಿ ಎಚ್.ಟಿ ಪೋತೆ ಅವರು ಸಾಗುತ್ತಿದ್ದಾರೆ. ಅಂಬೇಡ್ಕರ್ ಅವರ ಹೆಜ್ಜೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಾಗುತ್ತಿದ್ದಾರೆ. ಮನುಷ್ಯ ಬೇರೆಯವರಿಗೆ ಪರಿಚಯವಾಗಬೇಕಾದುದು ಅವನ ಕೃತಿಯ ಮೂಲಕ, ಕೆಲಸ ಕಾರ್ಯಗಳ ಮೂಲಕ. ಅವರ ಕೆಲಸ ಕಾರ್ಯಗಳನ್ನು ಹತ್ತಿರದಿಂದ ನೋಡಿದ ಅನುಭವ ಕೂಡ ನನಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಸ್ವಯಂಭು ಮೂರ್ತಿ”.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


