ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 'ಮಾಸ್ಟರ್‌ ಮೈಂಡ್ಸ್‌-2' ರಾಜ್ಯ ಮಟ್ಟದ ಕ್ವಿಜ್‌ ಸ್ಪರ್ಧೆ

Upayuktha
0

ಬುದ್ಧಿಮತ್ತೆಗೆ ಸಾಣೆ ಹಿಡಿಯುವ ಕ್ವಿಜ್‌: ಎ. ಸುರೇಶ್‌


ಬೆಂಗಳೂರು: ‘ಕ್ವಿಜ್‌ - ಕಠಿಣ ಪರಿಶ್ರಮದಿಂದ ನಿರಂತರ ಸಂಶೋಧನೆ ಹಾಗೂ ಓದುಗಳ ನಡುವೆ ಬೌದ್ದಿಕ ರಂಜನೆ ನೀಡುವ ಅದ್ಬುತ ಒಳಾಂಗಣ ಕ್ರೀಡೆ. ಇಲ್ಲಿ ಪಾಲ್ಗೊಳ್ಳುವವರು ತಾವು ಕಲಿತದ್ದು, ಜ್ಞಾನದ ಸಮುದ್ರದಲ್ಲಿ ಈ ತನಕ ಆಯ್ದುಕೊಂಡ ಮುತ್ತು ರತ್ನಗಳ ಲೆಕ್ಕವನ್ನು ಮಾತ್ರ ಖಚಿತಪಡಿಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಒಳಗನ್ನು ಅರಿಯುತ್ತಾರೆ; ಬುದ್ದಿಮತ್ತೆಯನ್ನು ಸಾಣೆ ಹಿಡಿಯುವುದು ಮಾತ್ರವಲ್ಲ, ವೀಕ್ಷಕರನ್ನೂ ತಮ್ಮ ಬುದ್ದಿ ಚಾತುರ್ಯವನ್ನು ಪರೀಕ್ಷಿಸಿಕೊಳ್ಳುವಂತೆ ಕ್ವಿಜ್‌ ಮಾಡುತ್ತದೆ ಎಂದು ಸುರೇಶ್ ಎಸೋಸಿಯೇಟ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಸುರೇಶ್ ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಪರ್ಸನಲ್ ಮ್ಯಾನೇಜ್‍ಮೆಂಟ್- ಕರ್ನಾಟಕ ಚಾಪ್ಟರ್‍ನ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮಾಸ್ಟರ್ ಮೈಂಡ್ಸ್-2’ ರಾಜ್ಯಮಟ್ಟದ ಕ್ವಿಜ್‌ ಸ್ಪರ್ಧೆಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಸರ್ ಎಂ.ವಿ. ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.


ಪ್ರಸ್ತುತ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿರುವವರು ಕೈಗಾರಿಕೆಗಳಲ್ಲಿ ಹಾಗೂ ಬೃಹತ್ ಉದ್ಯಮಗಳಲ್ಲಿ ಪರಿಣತರು. ವೀಕ್ಷಿಸುತ್ತಿರುವವರು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಹಾಗೂ ಇಲ್ಲಿನ ಪ್ರಶ್ನೆಗಳು ಉದ್ಯಮ ಕ್ಷೇತ್ರದ ಹಾಗೂ ತಂತ್ರಜ್ಞಾನದ ವಲಯಕ್ಕೆ ಸೇರಿದವು. ಹೀಗಾಗಿ ರಂಜನೆಯ ಮೂಲಕ ಕಠಿಣ ವಿಷಯಗಳನ್ನು ಅರಿಯಲು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಲಭ್ಯವಾಗುತ್ತದೆ. ಇಂತಹ ವಿನೂತನ ಸ್ಪರ್ಧೆಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ನಿಜಕ್ಕೂ ಅಭಿನಂದನಾರ್ಹ’, ಎಂದು ಅವರು ನುಡಿದರು.


ಸ್ಪರ್ಧೆಯಲ್ಲಿ 28 ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳ ಪ್ರತಿಭಾವಂತ ಪ್ರತಿನಿಧಿಗಳನ್ನೊಳಗೊಂಡ       ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಟೀಮ್ ಸಾಯಿ ಮಿತ್ರ ಕನ್ಸ್ಟ್ರಕ್ಷನ್ಸ್, ಟೀಮ್ ಇನ್ಫೋಸಿಸ್, ಟೀಮ್ ಹಿಮಾಲಯ ವೆಲ್‍ನೆಸ್, ಟೀಮ್ ರಿಟ್ಟಲ್ ಇಂಡಿಯಾ ಪ್ರೈ. ಲಿ. ತಂಡಗಳು ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಗಳಿಸಿ ಪಾರಿತೋಷಕ ಹಾಗೂ ರೂ. 50,000/-, ರೂ. 25,000/-, ರೂ. 10,000/- ಹಾಗೂ ರೂ. 5,000/- ನಗದು ಬಹುಮಾನಗಳನ್ನು ಗೆದ್ದುಕೊಂಡವು.


ಬಹುಮಾನಗಳನ್ನು ವಿತರಿಸಿ ಮಾತನಾಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಪರ್ಸನಲ್ ಮ್ಯಾನೇಜ್‍ಮೆಂಟ್- ಕರ್ನಾಟಕ ಚಾಪ್ಟರ್‍ನ ಕಾರ್ಯದರ್ಶಿ ದಿನೇಶ್, ‘ನಿಜವಾದ ಯೋಧರ ಮನಸ್ಥಿತಿ ನಮ್ಮಲ್ಲಿರಬೇಕು. ಆಗ ಯಾವ ಪ್ರಶ್ನೆಗಳೂ ನಮ್ಮನ್ನು ಕಂಗೆಡಿಸುವುದಿಲ್ಲ. ಬದಲಿಗೆ ಸೋಲುಗಳ ಮೆಟ್ಟಿಲೇರಿ ವಿಜಯದ ಪತಾಕೆ ಹಾರಿಸಲು ಮನಸ್ಸು ಗಟ್ಟಿಗೊಳ್ಳುತ್ತದೆ’, ಎಂದರು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ ರೋಹಿತ್ ಪೂಂಜ ಮಾತನಾಡಿ, ‘ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸದಾ ಒಟ್ಟಿಗೆ ಸದೃಢ ಹೆಜ್ಜೆಗಳನ್ನಿಡಬೇಕು ಎಂಬ ತತ್ವಕ್ಕೆ ನಾವು ಸದಾ ಬದ್ಧರಾಗಿರಬೇಕು. ಇಂದು ಕಲಿಯುವ ವಿದ್ಯೆ ನಾಳೆ ಉದ್ಯಮಗಳ ಅಭಿವೃದ್ಧಿಗೆ ಇಂಬು ಕೊಡುವಂತಾದಾಗ ಮಾತ್ರ ತಾಂತ್ರಿಕ ಶಿಕ್ಷಣದ ಉದ್ದೇಶ ಈಡೇರುತ್ತದೆ’, ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ವಹಿಸಿದ್ದರು. ಪ್ರಾರಂಭದಲ್ಲಿ ನಿಟ್ಟೆ ಸಂಸ್ಥೆಯ ಮ್ಯಾನೇಜ್‍ಮೆಂಟ್ ವಿಭಾಗದ ಡೀನ್ ಪ್ರೊ. ಎಸ್. ನಾಗೇಂದ್ರ ಅವರು ಸರ್ವರನ್ನೂ ಸ್ವಾಗತಿಸಿ, ‘ಕೈಗಾರಿಕೆಗಳು ಹಾಗೂ ಉದ್ಯಮಗಳ ಪ್ರತಿಭಾನ್ವಿತರು ಭಾಗವಹಿಸುವ ಈ ಕ್ವಿಜ್‌ ವಿದ್ಯಾರ್ಥಿಗಳಿಗೆ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯಿಸುತ್ತದೆ’, ಎಂದು ನುಡಿದು ಕ್ವಿಜ್‌ನ ನಿಯಮಗಳನ್ನು ವಿವರಿಸಿದರು.


ಸಮಾರಂಭದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ, ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಕ್ವಿಜ್‌ ಮಾಸ್ಟರ್ ಪ್ರೊ. ಶ್ರೀಧರ್ ಎಚ್.ಆರ್, ನಿಟ್ಟೆ ಸಂಸ್ಥೆಯ ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್ ಹಾಗೂ 150ಕ್ಕೂ ಅಧಿಕ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top