ಅಮ್ಮ ಕೊಡುವ ಪ್ರೀತಿಯ ಕೈತುತ್ತಿಗೆ ಸರಿಸಾಟಿಯಾದ್ದದ್ದು ಯಾವುದೂ ಇಲ್ಲ. ಅಮ್ಮ ಮಾಡುವ ಅಡುಗೆ, ತಿಂಡಿ, ತಿನಿಸು, ಇವುಗಳಲ್ಲಿರುವ ಪ್ರೀತಿ,ವಾತ್ಸಲ್ಯ, ಕಾಳಜಿ ಗೊತ್ತಾಗುವ ವೇಳೆಗೆ ಅದನ್ನು ತೊರೆಯುವ ಸಂದರ್ಭ.
22 ವರ್ಷಗಳ ನಂತರ ಈ ಕಾಳಜಿ, ಪ್ರೀತಿ ತೊರೆದು ಬರುವಂತಹ ಅನಿವಾರ್ಯತೆ ಇತ್ತು. ಹಾಸ್ಟೆಲು, ಪಿಜಿಯ ಮೆಸ್ ಗಳ ಅಡುಗೆ ತಿಂದು ಬೇಜಾರಾಗಿದ್ದ ನನಗೆ, ಬಂದು ಕೇವಲ ಮೂರೇ ಮೂರು ತಿಂಗಳಲ್ಲಿ ಅಮ್ಮ ಮಾಡಿದ ಅಡುಗೆ ತಿನ್ನಲು ಬಾಯಿ ಹಪಹಪಿಸುತ್ತಿತ್ತು. ಪ್ರತಿಸಾರಿ ಊರಿಗೆ ಹೋದಾಗಲೂ ಏನೆಲ್ಲಾ ಅಡುಗೆ ಮಾಡಿಸಿಕೊಂಡು ತಿನ್ನಬಹುದೋ ಜಾಮೂನು, ಗಿಣ್ಣು, ಶೇಂಗಾ ಹೋಳಿಗೆ, ಪಾಯಸ, ಅವಲಕ್ಕಿ ಇದನ್ನೆಲ್ಲಾ ತಿಂದು ಬರುತ್ತಿದ್ದೆ. ಆವಾಗಲೇ ಗೊತ್ತಾಗಿದ್ದು ಅಮ್ಮ ಮಾಡುವ ಅಡುಗೆಗೆ ಅವಳ ಪ್ರೀತಿಯೇ ಒಗ್ಗರಣೆ ಎಂದು. ಪ್ರತಿ ಸಾರಿ ಊರಿಗೆ ಹೋಗುವಾಗ ಇರುವ ಉತ್ಸಾಹ, ಹಾರಾಟ ಮರಳಿ ಬರುವಾಗ ಇರುತ್ತಿರಲಿಲ್ಲ. ಆದರೆ ಪ್ರತಿ ಸಾರಿ ಊರಿಂದ ಮರಳುವಾಗ ಅಮ್ಮ ಬಸ್ಸಿನಲ್ಲಿ ರಾತ್ರಿಯ ಊಟಕ್ಕೆಂದು ಚಪಾತಿಯಲ್ಲಿ ಶೇಂಗಾ ಚಟ್ನಿ ಹಾಕಿ ಸುತ್ತಿ ಕೊಡುತ್ತಾ ಇರುತ್ತಿದ್ದರು. ಅದನ್ನು ತಿನ್ನುವಾಗ ಇದನ್ನು ತಿನ್ನುವ ಭಾಗ್ಯ ಮತ್ತೆ ಯಾವಾಗ ಮರಳುತ್ತದೆಯೋ ಎಂದೆನಿಸಿ ಕಣ್ಣೀರು ಬರುತ್ತಿತ್ತು. ಅಮ್ಮ ಚಪಾತಿಯನ್ನು ಶೇಂಗಾ ಚಟ್ನಿಯ ಜೊತೆ ಸುತ್ತಿರುವುದೋ ಅಥವಾ ಅವಳ ಪ್ರೀತಿಯಲ್ಲಿಯೋ ಎಂದು ಗೊತ್ತಾಗುತ್ತಲೇ ಇರಲಿಲ್ಲ.
- ಪ್ರಿಯದರ್ಶಿನಿ ಮೂಜಗೊಂಡ
ಆಳ್ವಾಸ್ ಕ್ಯಾಂಪಸ್, ಮೂಡುಬಿದಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ