ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಪ್ರಯುಕ್ತ ತನ್ನಿಮಿತ್ತ ಲೇಖನ
ಶ್ರೀ ರಾಮಕೃಷ್ಣ ಪರಮಹಂಸರು ಭಾರತವೇ ಏಕೆ ಇಡೀ ವಿಶ್ವವೇ ಕಂಡ ಆಧ್ಯಾತ್ಮಿಕ ಜ್ಞಾನದ ಮೇರು ಶಿಖರ. ಬಾಹ್ಯ ಜಗತ್ತಿಗೆ ಸಂಸಾರಿಯಾಗಿದ್ದರೂ ಅಂತರಂಗದಲ್ಲಿ ಸರ್ವ ಸಂಗ ಪರಿತ್ಯಾಗಿಯಾಗಿದ್ದವರು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ''ಶ್ರೀ ರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಕೋಟ್ಯಾಂತರ ಭಾರತೀಯರ ಎರಡು ಸಾವಿರ ವರ್ಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಗಳ ತ್ರಿವೇಣಿ ಸಂಗಮ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನವೇ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ'.
ರಾಮಕೃಷ್ಣ ಪರಮಹಂಸರು ಒಣ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ. ದೊಡ್ಡ ವಾಗ್ಮಿಗಳಾಗಿರಲಿಲ್ಲ. ಉಪನ್ಯಾಸ ಕೊಡುವುದಕ್ಕೆ ಅವರು ಎಲ್ಲೂ ಹೊರಗೆ ಹೋಗಲಿಲ್ಲ. ಆದರೆ ಅವರೆಲ್ಲರಿಗೂ ಮೀರಿದ ಅಲೌಕಿಕ ಜ್ಞಾನ ಸಂಪತ್ತು ಅವರಲ್ಲಿತ್ತು. ತಮ್ಮ ಬಾಳಿನ ಬಹುತೇಕ ಸಮಯವನ್ನು ಅವರು ದಕ್ಷಿಣೇಶ್ವರ ದೇವಾಲಯದ ಆವರಣದಲ್ಲಿ ಕಳೆದರು. ದೈವ ಸಾಕ್ಷಾತ್ಕಾರ ಪಡೆದು ಜ್ಞಾನ ನಿಧಿಯಾದ ಅವರಲ್ಲಿ ಇಡೀ ಬದ್ಧ ಜೀವಿಗಳ ಉದ್ಧಾರಕ್ಕೆ ಬೇಕಾದ ಧರ್ಮಾಮೃತವೇ ಹುದುಗಿತ್ತು. ಈ ಪರಮ ಮಧುವನ್ನು ಹೀರಲು ಬಂದ ಸ್ವಾಮಿ ವಿವೇಕಾನಂದರೂ ಸೇರಿದಂತೆ ಶಿಷ್ಯಕೋಟಿಗಳೆಂಬ ದುಂಬಿಗಳು ಈ ಅಮೃತವನ್ನು ಹೀರಿ ತೃಪ್ತವಾದವು. ಅದನ್ನು ಪಂಡಿತ ಪಾಮರರೆಂಬ ಬೇಧವಿಲ್ಲದೆ ಉಳಿದವರೆಲ್ಲರಿಗೂ ಹಂಚಿ ಧನ್ಯವಾದವು. ಪಾಶ್ಚಾತ್ಯ ದೇಶಗಳಿಗೂ ಹಂಚಿ ತಾಯಿ ಭಾರತಿಗೆ ಮಾನ್ಯತೆ ತಂದವು.
ಭಗವಂತನ ವಿಷಯ ತಿಳಿಸುವಾಗ ಶ್ರೀ ರಾಮಕೃಷ್ಣರು ಉಪಯೋಗಿಸುತ್ತಿದ್ದ ಭಾಷೆ 'ಸಾಕ್ಷಾತ್ಕಾರದ ಭಾಷೆ'. ಉಳಿದವರು ಭಗವಂತನ ಅಸ್ತಿತ್ವದ ಕುರಿತಾಗಿ ಶಾಸ್ತ್ರಗಳ ಭಾಷೆಯಿಂದ ವಿಶ್ಲೇಷಿಸಿದರೆ ರಾಮಕೃಷ್ಣರು ತಮ್ಮ ಸಾಕ್ಷಾತ್ಕಾರದ ಭಾಷೆಯಲ್ಲಿ ಹೇಳಿಬಿಡುತ್ತಾರೆ. ಉಳಿದವರು ಗಂಟೆಗಟ್ಟಲೆ ಪ್ರಯತ್ನಿಸಿದರೂ ಅರ್ಥಮಾಡಿಸಲು ಸಾಧ್ಯವಾಗದಿದ್ದನ್ನು ಅವರು ಒಂದೇ ಸಣ್ಣ ಕಥೆಯಿಂದ, ವಾಕ್ಯದಿಂದ ಅಥವಾ ಹಾಡಿನಿಂದ ಸ್ಪಷ್ಟವಾಗಿ ಅರ್ಥಮಾಡಿಸಿ ಬಿಡುತ್ತಿದ್ದರು. ಏಕೆಂದರೆ ಅವರು ಕೇವಲ ಒಣಪಂಡಿತರಲ್ಲ. ಭಗವಂತನನ್ನು ಮುಖಾಮುಖಿಯಾಗಿ ಕಂಡವರು, ಸಾಕ್ಷಾತ್ಕಾರಿಸಿಕೊಂಡವರು. ಮಣಗಟ್ಟಲೆ ಮಾತನಾಡುವ ಒಣ ಪಂಡಿತರನ್ನು ಅವರು ರಣಹದ್ದಿಗೆ ಹೋಲಿಸುತ್ತಿದ್ದರು."ರಣಹದ್ದುಗಳು ಬಹಳ ಎತ್ತರದಲ್ಲೇನೋ ಹಾರಾಡುತ್ತಿರುತ್ತವೆ. ಆದರೆ ಅದರ ದೃಷ್ಟಿ ಮಾತ್ರ ಕೆಳಗೆ ನೆಲದ ಮೇಲಿರುವ ಕೊಳೆತ ಶವದ ಮೇಲೆಯೇ. ಹಾಗೆಯೇ ಈ ಪಂಡಿತರು ಶಾಸ್ತ್ರ ತತ್ತ್ವಗಳ ದೊಡ್ಡದೊಡ್ಡ ಮಾತುಗಳನ್ನಾಡಿದರೂ ಅವರ ಗಮನವೆಲ್ಲ ಹೆಸರು ಕೀರ್ತಿ ಕಾಮ ಕಾಂಚನಗಳ ಕಡೆಗೆ"ಎನ್ನುತ್ತಿದ್ದರು.
ಶ್ರೀರಾಮ ಕೃಷ್ಣಪರಮಹಂಸರು ದಕ್ಷಿಣೇಶ್ವರದಲ್ಲಿದ್ದಾಗ ರಾಧಾಕೃಷ್ಣನ ದೇವಸ್ಥಾನದಲ್ಲಿ ಕಳುವಾಗುತ್ತದೆ. ಅವರ ಭಕ್ತನೂ, ಶಿಷ್ಯನೂ ಆದ ಮಥುರ" ಇವನೆಂಥಹ ದೇವರು,ತನ್ನ ಒಡವೆಗಳನ್ನು ತಾನೇ ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಆಗಲಿಲ್ಲವಲ್ಲ''ಎನ್ನುತ್ತಾನೆ.ಆಗ ಶ್ರೀರಾಮಕೃಷ್ಣರು ಭಗವಂತನ ಹಿರಿಮೆಯನ್ನು ಕುರಿತು "ನೋಡು,ಇವೆಲ್ಲ ನಿಮಗೆ ಬೆಲೆ ಬಾಳುವ ವಸ್ತುಗಳು. ಆದರೆ ದೇವರು ಇವನ್ನು ಲಕ್ಷಿಸುವನೇ? ಅವನ ಪತ್ನಿಯೇ ಲಕ್ಷ್ಮಿ, ಕುಬೇರ ಅವನ ಮನೆಯ ದ್ವಾರ ಕಾಯುವನು. ನಿನ್ನ ಕೆಲಸಕ್ಕೆ ಬಾರದ ಒಂದೆರಡು ನಗನಾಣ್ಯಗಳನ್ನು ಅವನ್ನು ರಕ್ಷಿಸಿಕೊಂಡು ಇರಬೇಕೆ ಅವನು"ಎಂದು ನುಡಿದು ಭಗವಂತನ ಹಿರಿಮೆ ಕುರಿತು ತಮ್ಮ ಸರಳ ಮಾತುಗಳಲ್ಲಿ ಅವನಿಗೆ ತಿಳಿ ಹೇಳುತ್ತಾರೆ.
ಇನ್ನೊಮ್ಮೆ ತಮ್ಮ ಶಿಷ್ಯರಿಗೆ ಹಣದ ಮದವನ್ನು ಕುರಿತು ಒಂದು ಸಣ್ಣ ಕಥೆ ಹೇಳುತ್ತಾರೆ. ಒಂದು ಕಪ್ಪೆಯ ಹತ್ತಿರ ಒಂದು ರೂಪಾಯಿ ಇದ್ದಿತು. ಅದನ್ನು ಅದು ರಂಧ್ರದಲ್ಲಿ ಬಚ್ಚಿಟ್ಟಿತು. ಒಂದು ದಿನ ಆನೆಯೊಂದು ಕಪ್ಪೆಯ ಗೂಡಿನ ಮೇಲೆ ಹೋಗುತ್ತಿತ್ತು. ಕಪ್ಪೆಗೆ ಕೋಪ ಬಂದು ಕಾಲನ್ನೆತ್ತಿ ಆನೆಯನ್ನು ಒದೆಯುವುದಕ್ಕೆ ಹೋಗಿ "ನನ್ನ ಗೂಡಿನ ಮೇಲೆ ಹೋಗುತ್ತೀಯಲ್ಲ. ನಿನಗೆಷ್ಟು ಧೈರ್ಯ "ಎಂದಿತು. ಹಣದ ಮದ ಎಷ್ಟಿರುತ್ತದೆ ಎಂಬುದನ್ನು ರಾಮಕೃಷ್ಣರು ಈ ಸಣ್ಣ ಕಥೆಯ ಮೂಲಕ ಎಷ್ಟು ಪರಿಣಾಮಕಾರಿಯಾಗಿ ತಿಳಿಸಿರುವರು ಎಂದು ಕಾಣಬಹುದು.
ನಂಬಿಕೆ ಶ್ರದ್ಧೆಗಳ ಶಕ್ತಿಯನ್ನು ಕುರಿತು ಒಮ್ಮೆ ತಮ್ಮ ಶಿಷ್ಯರಿಗೆ ಹೀಗೆ ದೃಷ್ಟಾಂತ ಕಥೆ ಹೇಳುತ್ತಾರೆ. "ನೀವು ಶ್ರದ್ಧೆಯ ಅದ್ಭುತವಾದ ಶಕ್ತಿಯ ವಿಷಯವನ್ನು ಕೇಳಿರಬೇಕು. ಪುರಾಣದಲ್ಲಿ ಸಾಕ್ಷಾತ್ ಭಗವಂತನಾದ ಶ್ರೀರಾಮ ಸಿಂಹಳ ದೇಶಕ್ಕೆ ಹೋಗಲು ಸೇತುವೆ ಕಟ್ಟಬೇಕಾಯಿತು. ಆದರೆ ಹನುಮಂತ ಒಂದೇ ನೆಗೆತದಲ್ಲಿ ಅಲ್ಲಿಗೆ ಹೋದನು. ಅವನು ರಾಮನಾಮದಲ್ಲಿ ಅಚಲ ನಂಬಿಕೆ ಶ್ರದ್ಧೆ ಹೊಂದಿದ್ದನು" ಎಂದು ಹೇಳುವ ಮೂಲಕ ತಮ್ಮ ಶಿಷ್ಯರಿಗೆ ನಂಬಿಕೆ, ಶ್ರದ್ಧೆಗಳ ಮಹತ್ವವನ್ನು ಬಹಳ ಸುಂದರವಾಗಿ ತಿಳಿಸಿಕೊಡುತ್ತಾರೆ.
ರಾಮಕೃಷ್ಣ ಪರಮಹಂಸರು ಅಹಂಕಾರವೆಂಬುದು ಎಷ್ಟು ಕೆಟ್ಟದ್ದು ಎಂದು ವಿವರಿಸುತ್ತಾ "ಗುರುವಿನಲ್ಲಿ ಅಗಾಧವಾದ ಭಕ್ತಿಯಿದ್ದ ಶಿಷ್ಯನೊಬ್ಬ ಗುರುವಿನ ನಾಮ ಸ್ಮರಣೆಯ ಸಹಾಯದಿಂದಲೇ ನದಿಯ ಮೇಲೆ ನಡೆದುಕೊಂಡು ಹೋದ. ಗುರು ಇದನ್ನು ನೋಡಿ, "ಏನು ನನ್ನ ಹೆಸರಿನಲ್ಲಿ ಇಷ್ಟೊಂದು ಶಕ್ತಿ ಇದೆಯೆ ? ಹಾಗಾದರೆ ನನ್ನ ಮಹಿಮೆ ಎಷ್ಟು, ನಾನೆಷ್ಟು ಬಲಶಾಲಿ" ಎಂದು ಭಾವಿಸಿದ. ಮಾರನೆ ದಿನ ಗುರು ಕೂಡ "ನಾನು, ನಾನು" ಎನ್ನುತ್ತ ನದಿಯ ಮೇಲೆ ಹೋಗಲು ಯತ್ನಿಸಿದ. ಕಾಲಿಟ್ಟ ತಕ್ಷಣವೇ ನೀರಿನಲ್ಲಿ ಮುಳುಗಿದ. ಪಾಪ, ಅವನಿಗೆ ನೀರಿನಲ್ಲಿ ಈಜುವುದಕ್ಕೂ ಬರುತ್ತಿರಲಿಲ್ಲ. ನಂಬಿಕೆಯಿಂದ ಅದ್ಭುತವನ್ನು ಸಾಧಿಸಬಹುದು. ಆದರೆ ದುರಹಂಕಾರದಿಂದ ಅವನು ನಾಶವಾಗುತ್ತಾನೆ. ಅಹಂಕಾರದ ಭಾರ ಸಂಸಾರದ ನೀರಿನಲ್ಲಿ ಮುಳುಗುವಂತೆ ಮಾಡುತ್ತದೆ" ಎನ್ನುತ್ತಾರೆ.
ಇನ್ನೊಮ್ಮೆ ತಮ್ಮ ಪ್ರವಚನ ಕೇಳಲು ಬರುತ್ತಿದ್ದ ಭಕ್ತರಿಗೆ ಭಗವಂತನ ಬಗ್ಗೆ ಉತ್ಕಟ ಭಕ್ತಿ ಹೇಗಿರಬೇಕೆಂಬದನ್ನು ಒಂದು ಕಾಗೆಯ ಕಥೆಯ ಮೂಲಕ ತಿಳಿಸುತ್ತಾರೆ.ಒಮ್ಮೆ ರಾಮ ಲಕ್ಷ್ಮಣರು ಪಂಪಾ ಸರೋವರಕ್ಕೆ ಬಂದರು.ಅಲ್ಲಿ ಒಂದು ಕಾಗೆ ನೀರು ಕುಡಿಯಲು ತವಕಿಸುತ್ತಿತ್ತು. ಆದರೆ ಸರೋವರದ ಅಂಚಿಗೆ ಎಷ್ಟು ಸಲ ಹೋದರೂ ನೀರನ್ನು ಕುಡಿಯುತ್ತಿರಲಿಲ್ಲ. ಲಕ್ಷ್ಮಣ ರಾಮನಿಗೆ ಕಾರಣ ಕೇಳಿದ. ಅದಕ್ಕೆ ರಾಮ ''ಸಹೋದರನೇ, ಆ ಕಾಗೆ ಭಗವಂತನ ಪರಮಭಕ್ತ.ಹಗಲು ರಾತ್ರಿ ಅದು ಭಗವಂತನ ಹೆಸರನ್ನು ಜಪಿಸುತ್ತಿರುವುದು. ಅದರ ಗಂಟಲು ನೀರಿಲ್ಲದೆ ಒಣಗಿ ಹೋಗಿದ್ದರೂ ನೀರನ್ನು ಕುಡಿಯುತ್ತಿಲ್ಲ. ಏಕೆಂದರೆ ಕುಡಿಯುವಾಗ ಭಗವನ್ನಾಮ ಸ್ಮರಣೆ ನಿಂತುಹೋಗುವುದಲ್ಲ ಎಂದು". ಶ್ರೀರಾಮಕೃಷ್ಣ ಪರಮಹಂಸರು ಭಕ್ತನಾದವನಿಗೆ ಭಗವಂತನ ಮೇಲೆ ಎಷ್ಟು ಉತ್ಕಟ ಭಕ್ತಿ ಇರಬೇಕೆಂದು ಈ ಕಥೆಯ ಮೂಲಕ ವರ್ಣಿಸಿರುವ ಪರಿ ಅನನ್ಯ.
ಶ್ರೀರಾಮಕೃಷ್ಣರ ಶಿಕ್ಷಣ ವಿಧಾನ ನಿಜಕ್ಕೂ ಬಹಳ ವಿಶಿಷ್ಟವಾದದ್ದು. ತಮ್ಮ ಶಿಷ್ಯರಿಗೆ ಆಧ್ಯಾತ್ಮಿಕ ವಿಚಾರಗಳ ವಿಚಾರವಾಗಿ ತರ್ಕ ಮಾಡಲು ಅವಕಾಶ ಮಾಡಿಕೊಟ್ಟು ಅವರ ಚರ್ಚೆಯನ್ನು ಮೌನವಾಗಿ ಆಲಿಸುತ್ತಿದ್ದರು.ಆದರೆ ಅವರಿಗೆ ಗಂಟೆಗಟ್ಟಲೆ ತರ್ಕಮಾಡಿಯೂ ತಿಳಿಯಲಾಗದ ವಿಚಾರವನ್ನು ಅವರು ಕೇವಲ ತಮ್ಮ ಒಂದೇ ಮಾತಿನಲ್ಲಿ,ಇಲ್ಲವೇ ಒಂದು ಹಾಡಿನ ಮೂಲಕ ಅಥವಾ ಯಾವುದೋ ದೃಷ್ಟಾಂತ ಕಥೆಗಳ ಮೂಲಕ, ಅಥವಾ ತಮ್ಮ ನೋಟ ಮಾತ್ರದಿಂದಲೇ ತಿಳಿಸಿಕೊಟ್ಟುಬಿಡುತ್ತಿದ್ದರು. ದೈನಂದಿನ ಜೀವನದ ಉಪಮಾನಗಳ ಮೂಲಕ ಪಂಡಿತ ಪಾಮರರಿಬ್ಬರಿಗೂ ಅತಿ ಸೂಕ್ಷ್ಮವಾದ ಆಧ್ಯಾತ್ಮಿಕ ಸತ್ಯಗಳನ್ನು ವಿವರಿಸುತ್ತಿದ್ದರು. ತಿಳಿಹಾಸ್ಯ ಅವರ ಮಾತಿನಲ್ಲಿ ಮಿಳಿತಗೊಂಡು ಮಾತುಕತೆಗಳನ್ನು ಅತ್ಯಂತ ಸ್ವಾರಸ್ಯಕರವಾಗಿಸುತ್ತಿದ್ದವು. ಶಿಷ್ಯರ ಮಟ್ಟವನ್ನು ಗ್ರಹಿಸಿ ಅವರಿಗೆ ಅರ್ಥವಾಗುವಂತೆಯೇ ಗಹನ ತತ್ತ್ವಗಳನ್ನು ತಿಳಿಸಿಕೊಡುತ್ತಿದ್ದರು. ಅವರ ಸರಳ ವ್ಯಕ್ತಿತ್ವ, ಅನುಭವಜನ್ಯ ಮಾತುಗಳು, ಮಾತಿನ ಮಧ್ಯದ ಹಾಸ್ಯ ಚಟಾಕಿಗಳು ಎಂತಹವರನ್ನೂ ಸೆಳೆದು ಬಿಡುತ್ತಿತ್ತು. ಹೀಗಾಗಿಯೇ ಅಂದು ಪ್ರಸಿದ್ಧರಾಗಿದ್ದ ಅನೇಕ ವಿದ್ವಾಂಸರು ರಾಮಕೃಷ್ಣರ ಪದತಲದಲ್ಲಿ ಮುಗ್ಧವಿದ್ಯಾರ್ಥಿಗಳಂತೆ ಕುಳಿತು ಅವರ ಮಾತುಗಳನ್ನು ಆಲಿಸುತ್ತಿದ್ದರು. ರಾಮಕೃಷ್ಣ ಪರಮಹಂಸರು ತಾವು ಅತ್ಯುನ್ನತ ಆಧ್ಯಾತ್ಮಿಕ ಜ್ಞಾನ ಪಡೆದದ್ದು ಮಾತ್ರವಲ್ಲದೆ ಅದನ್ನು ತಮ್ಮ ಅದ್ಭುತ ಮಾತಿನ ಮೋಡಿಯಿಂದ ಅಷ್ಟೇ ಸಮರ್ಥವಾಗಿ ತಮ್ಮ ಶಿಷ್ಯಕೋಟಿಗೆ ಧಾರೆ ಎರೆದದ್ದೂ ವಿಶೇಷವೇ.
- ಎಸ್.ಎಲ್. ವರಲಕ್ಷ್ಮೀಮಂಜುನಾಥ್. ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ