ಸ್ಟಾಪ್ ಟೊಬ್ಯಾಕೋ' ಮೊಬೈಲ್ ಆಪ್ ಬಿಡುಗಡೆ: ತಂಬಾಕು ಮುಕ್ತ ಸಮಾಜಕ್ಕಾಗಿ ಶ್ರಮಿಸಿ: ಡಿ. ರಂದೀಪ್

Upayuktha
0

ತಂಬಾಕು ಮುಕ್ತ ತಲೆಮಾರು- MAAM ನಿಂದ ಮಾಧ್ಯಮ ಕಾರ್ಯಾಗಾರ

ಮಾಯಾ ಮಾದಕ ಯಕ್ಷಗಾನ ಪ್ರದರ್ಶನ


ಬೆಂಗಳೂರು: ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ಅಡ್ಡಿಯಾಗಿರುವ ವಿತಂಡವಾದಿಗಳ ಸಂಖ್ಯೆ ದೊಡ್ಡದಿದೆ. ಇಂತಹವರನ್ನು ಮೀರಿ ಕಾರ್ಯ ಸಾಧಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ರಾಜ್ಯ ತಂಬಾಕು ನಿಯಂತ್ರಣ ಘಟಕ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಮಂಗಳಗಂಗೋತ್ರಿಯ ಸಹಯೋಗದಲ್ಲಿ 'ತಂಬಾಕು ಬಳಕೆಯಿಂದಾದ ಪರಿಣಾಮಗಳ ಬಗ್ಗೆ ಅಪರೂಪದ ಪ್ರಕರಣಗಳ ವಿಶ್ಲೇಷಣೆ, ಅನುಭವ ಕಥನ ಮತ್ತು ಸಂವಾದ' ಹಾಗೂ 'ತಂಬಾಕು ಮುಕ್ತ ತಲೆಮಾರು ಮತ್ತು ಮಾಧ್ಯಮ ಕಾರ್ಯಾಗಾರ'ದಲ್ಲಿ 'ಸ್ಟಾಪ್ ಟೊಬ್ಯಾಕೋ', 'ಮೊಬೈಲ್ ಆಪ್ ಬಿಡುಗಡೆ' ಮಾಡಿ ಮಾತನಾಡಿದ ಅವರು, 'ಧೂಮಪಾನ ತ್ಯಜಿಸುವಂತೆ ಸಲಹೆ ಮಾಡಿದರೆ ವಿತಂಡವಾದ ಮಾಡುತ್ತಾರೆ. ಸಿಹಿ ತಿಂದರೆ ಮಧುಮೇಹ ಬರುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ. ಹೀಗೆ ಒಂದಕ್ಕೊಂದು ತಾಳೆಯಾಗದ ವಿಚಾರಗಳ ಬಗ್ಗೆ ವಾದ ಮಾಡುವವರನ್ನು ಮೀರಿ ತಂಬಾಕು ಮುಕ್ತ ತಲೆಮಾರನ್ನು ನಿರ್ಮಿಸಿ ಬೇಕಿದೆ' ಎಂದರು.


ತಮ್ಮ ಜೊತೆ ಅಧ್ಯಯನ ಮಾಡುತ್ತಿದ್ದ, ಸಹೋದ್ಯೋಗಿಗಳಾಗಿದ್ದವರು ತಂಬಾಕು ಚಟದಿಂದ ಜೀವ ಕಳೆದುಕೊಂಡರು. ಇದು ತುಂಬಾ ನೋವಿನ ಸಂಗತಿ. ಯಾವುದೇ ಕುಟುಂಬದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಸೂಕ್ತ ಸಮಯದಲ್ಲಿ ಅಗತ್ಯ ಸಲಹೆಗಳನ್ನು ನೀಡುವ ಮೂಲಕ ತಂಬಾಕು ವ್ಯಸನಿಗಳಾಗುವುದನ್ನು ತಡೆಗಟ್ಟಬಹುದು. ಯುವ ಸಮೂಹ ತಂಬಾಕು ನಿಯಂತ್ರಣದ ರಾಯಭಾರಿಗಳಾಗಬೇಕು. ಒಬ್ಬ ವ್ಯಕ್ತಿ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಸಾಕಷ್ಟು ಜನರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಇಡೀ ಗ್ರಾಮಗಳೇ ತಂಬಾಕು ಮುಕ್ತಗೊಳ್ಳುತ್ತಿರುವುದು ನಿಜಕ್ಕೂ ಮಹತ್ವದ ಬೆಳವಣಿಗೆ. ತಂಬಾಕು ಮುಕ್ತ ಗ್ರಾಮ ಅಭಿಯಾನದಲ್ಲಿ ತೊಡಗಿರುವ ಆರೋಗ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಡಿ. ರಂದೀಪ್ ಹೇಳಿದರು.


ಇಂದೇ ವೇಳೆ 'ತಂಬಾಕು ಮುಕ್ತ ಪೀಳಿಗೆ' ಸಂಬಂಧಿತ ಸಾಮಾಜಿಕ ಮಾಧ್ಯಮಗಳ ಪ್ರಚಾರ ಕಾರ್ಯಕ್ರಮಕ್ಕೆ ಪೋಸ್ಟರ್ ಬಿಡುಗಡೆ ಮೂಲಕ ಚಾಲನೆ ನೀಡಲಾಯಿತು.

ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಕಿರಣ್ ಕುಮಾರ್ ಮಾತನಾಡಿ, 'ಯುವಜನತೆ ಚಿಕ್ಕ ವಯಸ್ಸಿನಲ್ಲಿ ತಂಬಾಕು ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವಿಶೇಷವಾಗಿ 2007ರ ಆಸುಪಾಸಿನಲ್ಲಿ ಬೆಳೆದ ಮಕ್ಕಳನ್ನು ನಾವು ತಂಬಾಕು ಮುಕ್ತ ವಾತಾವರಣದಲ್ಲಿ ಬೆಳೆಸಬೇಕು. ತಂಬಾಕು ಚಟಕ್ಕೆ ಸಿಲುಕಿದ ನಂತರ ಶೇ 6 ರಷ್ಟು ಜನ ಮಾತ್ರ ತಂಬಾಕು ಬಳಕೆಯಿಂದ ಹೊರ ಬರುತ್ತಿದ್ದಾರೆ. ಉಳಿದವರನ್ನು ಈ ಚಟದಿಂದ ಹೊರ ತರುವುದು ತ್ರಾಸದಾಯಕವಾಗಿದೆ. ಆರೋಗ್ಯ ಇಲಾಖೆ ರಾಜ್ಯದಲ್ಲಿ ಇದೀಗ ತಂಬಾಕು ಮುಕ್ತ ಗ್ರಾಮಗಳನ್ನಾಗಿ ನಿರ್ಮಿಸುತ್ತಿದ್ದು, ಈ ಗ್ರಾಮಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ತಂಬಾಕು ನಿಯಂತ್ರಣಕ್ಕೆ ಕೋಟ್ಪಾ ಕಾಯ್ದೆ ಅತ್ಯಂತ ಬಲಿಷ್ಠವಾಗಿದೆ' ಎಂದು ಹೇಳಿದರು.


ತಂಬಾಕು ಮುಕ್ತ ಪೀಳಿಗೆ: ತಂಬಾಕು ಮುಕ್ತ ಪೀಳಿಗೆ ಎನ್ನುವ ವಿನೂತನ ಕಾರ್ಯಕ್ರಮವನ್ನು ದೇಶದಲ್ಲೆ ಮೊದಲು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ತಂಬಾಕು ಮುಕ್ತ ಗ್ರಾಮ ಮಾಡಲು ಶ್ರಮಿಸಿದ ಗ್ರಾಮ ಪಂಚಾಯತ್  ಅಧ್ಯಕ್ಷರು ಮತ್ತಿತರ ತಮ್ಮ ಅನುಭವಗಳನ್ನು ಹಂಚಿಕೊಂಡರು.


ನಗುವನ ಹಳ್ಳಿ ಗ್ರಾಮ ಪಂಚಾಯತ್ ಪ್ರತಿನಿಧಿ ಶೈಲಜಾ ತಮ್ಮ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡರು. ತಂಬಾಕು ಬೆಳೆಯುವ ರೈತರು ತಾವು ತಂಬಾಕು ಬೆಳೆ ತ್ಯಜಿಸಿ, ಪರ್ಯಾಯ ಬೆಳೆಗಳನ್ನು ಬೆಳಯುವ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಿರುವುದಾಗಿ ಹೇಳಿದರು. ಇದೇ ಸಂಧರ್ಭದಲ್ಲಿ ಮಾಯಾ ಮಾದಕ ಯಕ್ಷಗಾನ ತಂಡದ ಕಲಾವಿದರು ಯಕ್ಷಗಾನ ಪ್ರಸ್ತುತಪಡಿಸಿದರು.

ಯಕ್ಷಗಾನ ಗುರುಗಳಾದ ಶ್ರೀನಿವಾಸ  ಸಾಸ್ತಾನ ಅವರು ರಚಿಸಿ‌ ನಿರ್ದೇಶಿಸದ 'ಮಾಯಾ ಮಾದಕ" ಯಕ್ಷಗಾನ ಕರ್ನಾಟಕ ಮಹಿಳಾ ಯಕ್ಷಗಾನ ಪ್ರದರ್ಶನದಲ್ಲಿ ತ‌ಂಡದ ಕಲಾವಿದರಾದ ಗೌರಿ ಕೆ. ಸಾಸ್ತಾನ, ಡಾ. ಅನ್ನಪೂರ್ಣ ಕಟೀಲು, ಆಶಾ ರಾಘವೇಂದ್ರ, ಸುಮಾ‌ ಅನಿಲ್ ಕುಮಾರ್, ಶರ್ವಾಣಿ ಹೆಗಡೆ, ರಮ್ಯಶ್ರೀ, ಧೃತಿ ಅಮ್ಮೆಂಬಳ ಅಭಿನಯಿಸಿದರು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವಡ ಭಾಗವತಿಕೆ,  ಸುಬ್ರಹ್ಮಣ್ಯ ಸಾಸ್ತಾನ ಅವರ ಚೆಂಡೆ, ಉಮೇಶ್ ಅವರ ಮೃದಂಗ ‌ಗಮನಸೆಳೆಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪ ನಿರ್ದೇಶಕರಾದ ಡಾ. ರಜನಿ ಪಿ. ಹಾಗೂ ಆರೋಗ್ಯ ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಸೆಲ್ವರಾಜನ್, ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಮತ್ತಿತರರು ಉಪಸ್ಥಿತರಿದ್ದರು. ದಿ ಯೂನಿಯನ್ ವ್ಯವಸ್ಥಾಪಕ ಪ್ರಭಾಕರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

 

ತಂಬಾಕು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ಜನ ಜಾಗೃತಿಯೊಂದೇ ಮದ್ದು. ಈ ನಿಟ್ಟಿನಲ್ಲಿ 'ತಂಬಾಕು ಮುಕ್ತ ತಲೆಮಾರು ಮತ್ತು ಮಾಧ್ಯಮ ಕಾರ್ಯಾಗಾರ' ಆಯೋಜಿಸಿರುವುದು ಅತ್ಯಂತ ಸ್ತುತ್ಯರ್ಹ. 'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಆಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು, ಇದನ್ನು ಪ್ರತಿಯೊಬ್ಬರೂ ಡೌನ್ ಲೋಡ್ ಮಾಡಿಕೊಂಡು ತಂಬಾಕು ಮುಕ್ತ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕಾರ್ಯಾಗಾರಕ್ಕೆ ಶುಭ ಕೋರಿದರು.

ಒಂದು ತಿಂಗಳ ಅವಧಿಯಲ್ಲಿ MAAM ಸಂಘಟನೆ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಆಯೋಜಿಸಿದ್ದ ಎರಡನೇ ಕಾರ್ಯಕ್ರಮ ಇದಾಗಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top