ಕಿಟ್ಟಣ್ಣನ ನೈಟ್ ಶಿಫ್ಟ್

Upayuktha
0

ಟ್ಟ ಬೇಸಿಗೆ. ಸೂರ್ಯ ಸದಾ ಬಿಸಿಲು ಕಾರುತ್ತಲೇ ಇರುವ, ಸ್ವಲ್ಪವೂ ಕರುಣೆ ತೋರದೆ. ಕಿಟ್ಟಣ್ಣ ತೋಟಕ್ಕೆ ಹೋದವ ಉಸ್ಸಪ್ಪಾ... ಎನ್ನುತ್ತಾ ಬಂದು ಚಾವಡಿಯಲ್ಲಿ ಮಲಗಿದ.


ಬೇಸಿಗೆಯೆಂದರೆ ತೋಟಕ್ಕೆ ನೀರು ಹಾಕುವ ಗೌಜಿ.  ಒಂದೇ ಸರ್ತಿ ಇಡೀ ತೋಟಕ್ಕೆ ನೀರುಣಿಸಲು ಸಾಧ್ಯವಿಲ್ಲ. ಬೋರ್ವೆಲ್ ನೀರಾದ್ದರಿಂದ ಒಮ್ಮೆಗೆ ಇನ್ನೂರು ಗಿಡಕ್ಕಷ್ಟೇ ಹಾಕಲು ಸಾಧ್ಯ. ಮೂರು ನಾಕು ಶಿಫ್ಟ್ ಲ್ಲಿ ನೀರು ಹಾಕಬೇಕಾಗುತ್ತದೆ. ಹಗಲೇ ಎಲ್ಲಾ ಶಿಫ್ಟ್ ಲ್ಲಿ ನೀರು ಹಾಕಲು ಸಾಧ್ಯವಿಲ್ಲ. ‌ನೀರು ಇದ್ದರೂ ಕೆಲವೊಮ್ಮೆ ವಿದ್ಯುತ್ ಕೈ ಕೊಡುತ್ತದೆ. ನಿರಂತರವಾಗಿ ನೀರು ಹಾಕಿದರೆ ಬೋರ್ವೆಲ್ ನಲ್ಲಿ ನೀರು ಕಮ್ಮಿಯಾಗುತ್ತದೆ. ಬೋರ್ವೆಲ್ ಗಾಳಿ ಎಳೆಯುತ್ತದೆ.  ಹಾಗಾಗಿ ಗ್ಯಾಪ್ ಕೊಟ್ಟು ಪಂಪ್ ಸ್ಟಾರ್ಟ್ ಮಾಡ ಬೇಕಾಗುತ್ತದೆ. ಹಗಲಾದರೋ ತಲಾ ಎರಡು ಗಂಟೆಯಂತೆ ಮೂರು ಶಿಫ್ಟ್ ಹಾಕಿದರೆ ನೈಟ್ ಶಿಫ್ಟ್ ಲ್ಲಿ ಎರಡು ಬ್ಯಾಚ್‌ ಹಾಕಬಹುದಷ್ಟೇ. ನೀರು ಹಾಕುವುದೆಂದರೆ ಕೃಷಿಕರಿಗೆ ಒಂದು ಯಜ್ಞವೇ ಸರಿ! ವರುಷವಿಡೀ ಮಕ್ಕಳಂತೆ ಸಲಹಿದ ತೋಟಕ್ಕೆ ಸಮಯಕ್ಕೆ ಸರಿಯಾಗಿ ನೀರುಣಿಸದಿದ್ದರೆ ಮಾಡಿದ ಪ್ರಯತ್ನವೆಲ್ಲ ನೀರಲ್ಲಿ ಮಾಡಿದ ಹೋಮ.


ಹಗಲಿನಲ್ಲಿ ನೀರು ಹಾಕುವುದಾದರೆ ಸುಲಭ. ಎಲ್ಲೆಲ್ಲಿ  ನೀರು ಬಿಡಬೇಕು, ಗೇಟ್ವಾಲ್ ಎಲ್ಲಿ ಕಟ್ಟಬೇಕು, ಎಲ್ಲಿ ಬಿಡಬೇಕು ಎಂಬುದು ಸಲೀಸು. ಹಗಲು ಬೆಳಕಿನಲ್ಲಾದರೆ ಸರಿಯಾಗಿ ಕಾಣುತ್ತದಲ್ಲವೇ? ಆದರೆ ನೈಟ್ ಶಿಫ್ಟ್ ಇದೆಯಲ್ಲಾ ಅದು ಕಬ್ಬಿಣದ ಕಡಲೆ. ಮಾತ್ರವಲ್ಲ   ತೋಟದ ಆಗುಹೋಗುಗಳೆಲ್ಲವೂ  ಕರತಲಾಮಲಕವಾಗಿದ್ದರೂ ಕೂಡ ರಾತ್ರಿಯ ಪ್ರಪಂಚವೇ ಬೇರೆ. ರಾತ್ರೆಯಲ್ಲಿನ ನಿಗೂಢ ಚಟುವಟಿಕೆಗಳು ಮನುಷ್ಯರಿಗೆ ಮಾತ್ರ ಸೀಮಿತವಾದುದಲ್ಲ. ಪ್ರಾಣಿಗಳಲ್ಲೂ ಇದೆ. ಕೆಲವಂತೂ ರಾತ್ರಿಯ ವೇಳೆಯಲ್ಲೇ ಚಟುವಟಿಕೆಯಲ್ಲಿರುವ ಪ್ರಾಣೆಗಳು. ನಮ್ಮ ಊರ ಕಡೆಯಂತೂ ಕಾಡು ಹಂದಿಗಳು, ಒಂಟಿ ಆನೆಗಳು, ಕಡವೆಗಳು, ಮುಳ್ಳು ಹಂದಿಗಳು, ಹಾವುಗಳು..ಓಹ್! ಒಂದಾ ಎರಡಾ.. ಹಲವು ಹಾನಿಗಳು. ಅವುಗಳಲ್ಲಿ ಹಂದಿ, ಒಂಟಿ ಆನೆಗಳಂತೂ ಬಹಳ ಅಪಾಯಕಾರಿ. ಅವುಗಳು ನಿಶ್ಯಬ್ದ ವಾಗಿದ್ದರೆ ಕತ್ತಲಲ್ಲಿ ಕಾಣಿಸುವುದೂ ಇಲ್ಲ. ಹತ್ತಿರ ಬಂದಾಗಲೇ ಗೋಚರವಾಗುವುದು. ಒಂಟಿಯಾಗಿ ತಿರುಗುವ ಆನೆ, ಹಂದಿ, ಕಡವೆಗಳೆಲ್ಲಾ ಬಹಳ ಅಪಾಯಕಾರಿಗಳು.


ಒಮ್ಮೆ ಕಿಟ್ಟಣ್ಣನ ಯೌವನದಲ್ಲಿ ಆದ ಘಟನೆಯ ಗುರುತು ಅವನ ಕೈಯಲ್ಲಿ ಇಂದಿಗೂ ನೋಡಬಹುದು. ಕಾಲೇಜು ಮುಗಿಸಿ ಮನೆಯಲ್ಲಿ ಕೃಷಿ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡ ಸಂದರ್ಭ. ಅಡಿಕೆ ತೋಟಕ್ಕೆ ಅಂದಷ್ಟೇ ಗೊಬ್ಬರ ಹಾಕಿದ್ದು. ಮಳೆ ಬರುವ ಒಂದಿನಿತು ಸೂಚನೆಯೂ ಇರಲಿಲ್ಲ‌. ಆ ದಿನ ಗಿಡಗಳಿಗೆ ನೀರು ಉಣಿಸದಿದ್ದರೆ ಅಷ್ಟು ಖರ್ಚು ಮಾಡಿ ಹಾಕಿದ ಗೊಬ್ಬರ ವೇಸ್ಟ್ ಆದಂತೆಯೇ ಸರಿ. ಸಾವಿರಾರು ರೂಪಾಯಿ ನಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ರಾತ್ರೆಯಾದರೂ ಸರಿ ನೀರು ಹಾಕುವುದೇ ಎಂದು ಒಂದು ಶಿಫ್ಟ್ ನೀರು ಹಾಕಿ ಮನೆಗೆ ಬಂದು ಊಟ ಮಾಡಿ ಕಂಪ್ಯೂಟರ್ ಆನ್ ಮಾಡಿ ಅಂದಿನ ಆಗುಹೋಗುಗಳನ್ನು ನೋಡಿಕೊಂಡು ಹೊತ್ತು ಕಳೆಯ ತೊಡಗಿದ್ದ. ರಾತ್ರೆ ಹನ್ನೆರಡು ಗಂಟೆಗೆ ಇನ್ನೊಂದು ಶಿಫ್ಟ್ ಹಾಕಿ ಮಲಗುವುದೆಂದು ಅವನ ಯೋಜನೆಯಾಗಿತ್ತು. ಹಾಗೆ ಹನ್ನೆರಡಾಗುತ್ತಲೇ ಹೆಡ್ ಲೈಟು, ಕೈಯಲ್ಲಿ ಇನ್ನೊಂದು ಲೈಟು ಹಿಡಿದು ತೋಟದತ್ತ ತೆರಳಿದ. ಬಾಯಲ್ಲಿ ಅಜ್ಜಿ ಹೇಳಿ ಕೊಟ್ಟ ರಾಮನಾಮ. ಇನ್ನೇನು ಪಂಪ್ ಶೆಡ್ ಹತ್ತಿರ ತಲುಪಿದ ಅನ್ನುವಾಗ ಯಾರೋ  ಸರಿದಂತಾಯಿತು. ಏನು ಎತ್ತ ಎಂದು ನೋಡಬೇಕಾದರೆ ಇವನ ಕೈ ಸವರಿಕೊಂಡು ಏನೋ ಓಡಿದಂತಾಯಿತು. ಅದು ಸವರಿದ್ದೋ ಅಥವಾ ಉಗುರಲ್ಲಿ ಆಕ್ರಮಣ ಮಾಡಲು ಯತ್ನಿಸಿದ್ದೋ ಗೊತ್ತಾಗಲಿಲ್ಲ. ಎದ್ದೆನೋ ಬಿದ್ದೆನೋ ಎಂದು ಓಡೋಡಿ ಮನೆ ಸೇರಿದ. ಅವನ ನೈಟ್ ಶಿಫ್ಟ್ ಭ್ರಾಂತೆಲ್ಲಾ ಅಂದಿಗೇ ಬಿಟ್ಡಿತು. ತನ್ನನ್ನು  ಅಜ್ಜಿ ಹೇಳಿ ಕೊಟ್ಟ ರಾಮನಾಮವೇ ಅಂದು ಬಚಾವ್ ಮಾಡಿದ್ದು ಎಂಬ ದೃಢವಾದ ನಂಬಿಕೆ ಕಿಟ್ಟಣ್ಣಂದು. ಈ ಹಗ್ಗ ಜಗ್ಗಾಟದಲ್ಲಿ ಭಗವಂತನ ಕೃಪೆ ಇದ್ದರೆ ಮಾತ್ರ ಗೆಲುವು.


-ಅಶ್ವಿನಿಮೂರ್ತಿ ಅಯ್ಯನಕಟ್ಟೆ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top