ಉಜಿರೆ: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ಸಂಪನ್ನಗೊಂಡ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿತು.
ಸಂಜೆ ಸಮ್ಮೇಳನದ ಸಮಾರೋಪದ ಬಳಿಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಮುಂಚೂಣಿಯಲ್ಲಿ ಮಂಗಳೂರು ಮತ್ತು ಉಜಿರೆಯ ವಿಶೇಷಚೇತನ ಮಕ್ಕಳ ಶಾಲೆ ‘ಸಾನಿಧ್ಯ’ದ ಮಕ್ಕಳಿಂದ ನಾಲ್ಕು ಕಾರ್ಯಕ್ರಮಗಳು ನಡೆದವು.
ಮೊದಲಿಗೆ ಮೂಡಿಬಂದ ‘ಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನದಲ್ಲಿ ಮಕ್ಕಳು ನುರಿತ ಕಲಾವಿದರಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಪ್ರಸಂಗ ಪ್ರದರ್ಶಿಸಿ ಸೈ ಎನಿಸಿಕೊಂಡರು. ಬಳಿಕ ಮಂಗಳೂರಿನ ‘ಸಾನಿಧ್ಯ’ ಶಾಲಾ ವಿದ್ಯಾರ್ಥಿನಿ ಪೂಜಾ ಅವರ ಗಾಯನ, ಉಜಿರೆಯ ಶಾಲಾ ವಿದ್ಯಾರ್ಥಿನಿಗಳಿಂದ “ಘಲ್ಲು ಘಲ್ಲೆನುತಾವ್ ಗೆಜ್ಜೆ” ಹಾಡಿಗೆ ಸಾಮೂಹಿಕ ನೃತ್ಯ ನಡೆಯಿತು. ಬಳಿಕ, ಸುಮಾರು 50 ಕಡೆಗಳಲ್ಲಿ ಯಶಸ್ವಿ ಪ್ರದರ್ಶನಗೊಂಡ ಸೈನಿಕರ ಜೀವನಾಧಾರಿತ ವಿಶೇಷ ಕಾರ್ಯಕ್ರಮ ‘ಅಮರ್ ಜವಾನ್’ಗೆ ವೇದಿಕೆ ಸಾಕ್ಷಿಯಾಯಿತು. ಸಾನಿಧ್ಯದ ಸಂಸ್ಥಾಪಕ ನಿರ್ದೇಶಕ ಡಾ. ವಸಂತ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಪದ್ಯಾಣದ ವಿದುಷಿ ಪ್ರಣತಿ ಚೈತನ್ಯ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನಗೊಂಡಿತು. ಶ್ರೀಕೃಷ್ಣನ ಬಾಲಲೀಲೆ, ಶ್ರೀರಾಮ- ಶೂರ್ಪನಖಿಯರ ಸಂಭಾಷಣೆ, ರಾಮನ ಬಗೆಗೆ ಶಬರಿಯ ಭಕ್ತಿಪರಾಕಾಷ್ಠೆಯನ್ನು ನೃತ್ಯದ ಮೂಲಕ ಸಾದರಪಡಿಸಿ, ಸುಮಾರು 45 ನಿಮಿಷಗಳ ಕಾಲ ಕಲಾಪ್ರೇಮಿಗಳನ್ನು ರಂಜಿಸಿದರು. ಕೊನೆಯಲ್ಲಿ ‘ಸ ರಿ ಗ ಮ ಪ’ ಖ್ಯಾತಿಯ ರಜತ್ ಮಯ್ಯ ಅವರ ತಂಡದಿಂದ ಸುಮಧುರ ಗೀತೆಗಳ ಗಾಯನ ನಡೆಯಿತು.
ವರದಿ: ಭಾರತಿ ಹೆಗಡೆ ಚಿತ್ರಗಳು: ಶಶಿಧರ ನಾಯ್ಕ
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


