ಬೆಂಗಳೂರು: ‘ಇಡೀ ಜಗತ್ತಿನ ವಿದ್ಯಮಾನಗಳು ಈಗ ಬಲಿಷ್ಠ ತಂತ್ರಜ್ಞಾನದ ಹಿಡಿತದಲ್ಲಿ ಜರುಗುತ್ತಿವೆ. ಅದರಿಂದ ಬಹಳ ಕಠಿಣವಾದ ತಂತ್ರಜ್ಞಾನದ ಸೂಕ್ತ ಕಲಿಕೆ ಇಂದಿನ ಅನಿವಾರ್ಯತೆಗಳಲ್ಲೊಂದು. ಆದರೆ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ವಿಷಯಗಳ ಭಾರದಿಂದ ನಲುಗುವುದೇ ಹೆಚ್ಚು. ಹೀಗಾಗಿ ವಿದ್ಯಾಸಂಸ್ಥೆಗಳು, ವಿದ್ಯಾರ್ಥಿಗಳು ಕಠಿಣವಾದ ಕಲಿಕೆಯ ಪ್ರಕ್ರಿಯೆಗೆ ಹೊಂದಿಕೊಂಡು ಸಾಮರ್ಥ್ಯದಿಂದ ಮುನ್ನಡೆಯುವಂತೆ ಮಾಡಬೇಕು. ನಮ್ಮ ಮಕ್ಕಳು ಸಾರಸ್ವತ ಸಾಗರದಲ್ಲಿ ಒತ್ತಡಗಳಿಂದ ಮುಳುಗಬಾರದು, ಬದಲಿಗೆ ಸಂಭ್ರಮದಿಂದ ತೇಲುವಂತಾಗಬೇಕು. ಈ ಅಕಾಡೆಮಿಕ್ ತೇಲುವಿಕೆಗೆ ನೆರವಾಗುವುವು ಇಂತಹ ಅಂತರಾಷ್ಟ್ರೀಯ ಸಮ್ಮೇಳನಗಳು. ಈ ಸಮ್ಮೇಳನಗಳಲ್ಲಿ ವಿದ್ಯಾರ್ಥಿಗಳು ಕೇಳಿ ಕಲಿಯುತ್ತಾರೆ ಹಾಗೂ ನೋಡಿ ಅರಿಯುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದರಾದ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಲಘು ಉದ್ಯೋಗ ಭಾರತಿ ಹಾಗೂ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮಗಳ ಸಹಯೋಗದಲ್ಲಿ ಆಯೋಜಿಸಿರುವ ‘ಎಮರ್ಜಿಂಗ್ ರಿಸರ್ಚ್ ಇನ್ ಕಂಪ್ಯೂಟಿಂಗ್, ಇನ್ಫಾರ್‍ಮೇಶನ್, ಕಮ್ಯೂನಿಕೇಶನ್ ಆ್ಯಂಡ್ ಎಪ್ಪ್ಲಿಕೇಶನ್ಸ್ (ಎರ್ಸಿಕಾ)’ ಎಂಟನೇ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಪ್ರಸ್ತುತ ಸಂದರ್ಭದಲ್ಲಿ ಉದ್ಯಮಗಳು ಹಾಗೂ ಉತ್ಪಾದನಾ ಘಟಕಗಳು ಡಿಜಿಟಲ್ ತಂತ್ರಜ್ಞಾನದ ಪ್ರಾದುರ್ಭಾವದ ಕಾರಣಕ್ಕಾಗಿ ಹೊಚ್ಚ ಹೊಸ ಕೈಗರಿಕಾ ಕ್ರಾಂತಿಗೆ ಸಜ್ಜಾಗಿವೆ. ಕೃತಕ ಬುದ್ದಿಮತ್ತೆ ಹಾಗೂ ರೋಬೋಟಿಕ್ ತಂತ್ರಜ್ಞಾನಗಳು ಕ್ರಮೇಣ ಉತ್ಪಾದನೆಯಲ್ಲಿ ಪ್ರಧಾನ ಪಾತ್ರ ವಹಿಸಲಿವೆ. ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಈ ಹೊಸ ಕ್ರಾಂತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸೃಷ್ಟಿಗೊಳ್ಳಲಿರುವ ಹೊಸ ರೀತಿಯ ಲಕ್ಷಗಟ್ಟಲೆ ಉದ್ಯೋಗಗಳಿಗೆ ಅವರು ಅರ್ಹರಾಗುತ್ತಾರೆ ಅಥವ ಹೊಸ ಸ್ಟಾರ್ಟ್-ಅಪ್ ಸ್ಥಾಪಿಸಿ ಉದ್ಯಮಿಗಳಾಗುತ್ತಾರೆ’ಎಂದರು.
ಕಂಪ್ಯೂಟಿಂಗ್, ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ತಂತ್ರಜ್ಞಾನ ಕ್ಷೇತ್ರಗಳ ಹೊಸ ಹೊಸ ಪ್ರಯೋಗ ಹಾಗೂ ಆವಿಷ್ಕಾರಗಳನ್ನು ಪರಸ್ಪರ ಅರಿಯಲು ಹಾಗೂ ವಿನಿಮಯ ಮಾಡಿಕೊಳ್ಳಲು ಎರ್ಸಿಕಾ ಎಂದೇ ಪ್ರಸಿದ್ಧವಾದ ಅಂತರಾಷ್ಟ್ರೀಯ ಸಮ್ಮೇಳನವನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ 2013ನೇ ಇಸವಿಯಿಂದ ಆಯೋಜಿಸುತ್ತಿದೆ. ಪ್ರಸ್ತುತ ಸಮ್ಮೇಳನ ‘ಎರ್ಸಿಕಾ’ದ ಎಂಟನೆಯ ಆವೃತ್ತಿ. ದೇಶ ವಿದೇಶಗಳಿಂದ ಆಗಮಿಸಿರುವ ಸಾವಿರಕ್ಕೂ ಮಿಕ್ಕಿದ ತಂತ್ರಜ್ಞರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ಅಮೆರಿಕಾದ ನಾರ್ಥ ಡಕೋಟ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದ ಶೈಕ್ಷಣಿಕ ಮುಖ್ಯಸ್ಥ ಪ್ರೊ. ಬ್ರಯನ್ ತಂಡೆ ಪ್ರಧಾನ ಭಾಷಣವನ್ನು ಪ್ರಸ್ತುತ ಪಡಿಸಿದರು. ಶ್ರೀಯುತರು ತಮ್ಮ ಭಾಷಣದಲ್ಲಿ, ‘ತಂತ್ರಜ್ಞಾನದ ಪ್ರಮುಖ ಲಾಭಗಳು ಕೃಷಿ ಹಾಗೂ ರಾಷ್ಟ್ರೀಯ ಭದ್ರತೆಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಅಮೆರಿಕಾ ಹಾಗೂ ಭಾರತ ಸಮಾನಮನಸ್ಕ ರಾಷ್ಟ್ರಗಳಾಗಿವೆ’ ಎಂದು ನುಡಿದರು.
ಪೇಸ್‍ಕಾಂ ಟೆಕ್ನಾಲಜಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ರಾಜೀವ್, ಅಮೇರಿಕಾದ ನಾರ್ಥ್ ಡಕೋಟಾ ಸ್ಟೇಟ್ ಯೂನಿವರ್ಸಿಟಿ- ಆಹಾರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಕಾಳಿದಾಸ್ ಶೆಟ್ಟಿ, ಕಾರ್ಪೋರೇಟ್ ತರಬೇತುದಾರ ಶ್ರೀ. ಕೆ. ಕರಣ್ ಕುಮಾರ್ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಟಾಟಾ ಎಲೆಕ್ಸಿ ಸಂಸ್ಥೆಯ ಶ್ರೀ ನಂಬಿ ಗಣೇಶ್, ಕಾಂಟಿನೆಂಟಲ್ ಇಂಡಿಯಾ ಸಂಸ್ಥೆಯ ಜೈದೇವ್ ವೆಂಕಟರಾಮನ್, ಇನ್ಸ್ಟಿಟ್ಯೂಟ್ ಆಫ್ ವೇಸ್ಟ್ ಮ್ಯಾನೇಜ್‍ಮೆಂಟ್‍ನ ಬಿನೀಶಾ ಪಯಟ್ಟಾಟಿ ಅವರು ವಿಶೇಷ ಆಹ್ವಾನಿತರಾಗಿ ಸಮ್ಮೇಳನದ ಚರ್ಚೆಗಳಲ್ಲಿ ಭಾಗವಹಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅವರು ಮಾತನಾಡಿ,‘ಡಿಜಿಟಲ್ ತಂತ್ರಜ್ಞಾನ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಪರಿಣಾಮಕಾರಿಯಾಗಿ ಬಳಕೆಯಾಗಬೇಕು. ಇಲ್ಲದಿದ್ದರೆ ಇವೆರಡರ ನಡುವೆ ಕಂದಕ ಏರ್ಪಡುತ್ತದೆ. ಅಷ್ಟೇ ಅಲ್ಲದೆ ಈ ತಂತ್ರಜ್ಞಾನದ ಲಭ್ಯತೆ ಭಾರತದ ಉದ್ದಗಲಗಳಲ್ಲೂ ದೊರಕುವಂತೆ ನಾವು ಶ್ರಮಿಸಬೇಕು. ಆಗ ಮಾತ್ರ ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ನಾವು ಪ್ರಸ್ತುತರಾಗುತ್ತೇವೆ' ಎಂದು ನುಡಿದರು.
ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಮಾತನಾಡಿ, ‘ಅಪಾರ ಪ್ರಮಾಣದ ದತ್ತಾಂಶವನ್ನು ನಾವು ಈ ಡಿಜಿಟಲ್ ಯುಗದಲ್ಲಿ ವಿಶ್ಲೇಷಿಸುತ್ತಿದ್ದೇವೆ. ಈ ದತ್ತಾಂಶದ ಸದುಪಯೋಗ ನಿಶ್ಚಿತ. ಆದರೆ ಈ ಪ್ರಕ್ರಿಯೆಯಲ್ಲಿ ನಮ್ಮಲ್ಲಿನ ನೈತಿಕತೆ ಪ್ರಧಾನ ಪಾತ್ರ ವಹಿಸಬೇಕು. ಇದು ‘ದತ್ತಾಂಶ ನೈತಿಕತೆ’ ಎಂದೇ ಇತ್ತೀಚೆಗೆ ಪ್ರಚಾರದಲ್ಲಿದೆ’ಎಂದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ ರೋಹಿತ್ ಪೂಂಜ, ಶಿಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಹಾಗೂ ಸಮ್ಮೇಳನದ ಸಂಯೋಜಕರಾದ ಪ್ರೊ. ಎನ್. ನಳಿನಿ ಹಾಗೂ ಪ್ರೊ. ಪ್ರಸಾದ್ ಎನ್.ಹೆಚ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ