ಕರಿನೆರಳಿನಲ್ಲಿ ನಮ್ಮ ಹಿರಿಯರು

Upayuktha
0

(ಸಾಂದರ್ಭಿಕ ಚಿತ್ರ)


ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ, ಅತಿಥಿದೇವೋ ಭವ ಎಂದು ಜಗತ್ತಿಗೇ ಸಾರಿದ ನಮ್ಮ ದೇಶದಲ್ಲಿ ಇಂದು ನಾಯಿಕೊಡೆಯಂತೆ ದಿನೇ ದಿನೇ ವೃಧ್ಧಾಶ್ರಮಗಳ ಸಂಖ್ಯೆ ವೃದ್ಧಿಸುತ್ತಿರುವುದು ಒಂದು ದುರಂತವೂ ಹೌದು. ಈ ಆಶ್ರಮಗಳು ವಾಸ್ತವವಾಗಿ ವಿದೇಶಿ ಸಂಸ್ಕೃತಿಯ ಪರಿಕಲ್ಪನೆ. ತಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ನೌಕರಿಗೆ ಸೇರಬೇಕೆಂದು ಹೆತ್ತವರು ಇಂದಿನ ದಿನಗಳಲ್ಲಿ ಬಯಸುವುದು ಸ್ವಭಾವಿಕವೇ. ಅಂತೆಯೇ ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಶ್ರೇಷ್ಠ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಿ ಅವರನ್ನು ವೈದ್ಯ, ಇಂಜಿನಿಯರ್‌, ಉಪನ್ಯಾಸಕ ಇಲ್ಲವೇ ಇತರ ಪ್ರತಿಷ್ಠಿತ ಹುದ್ದೆಗಳಲ್ಲಿ ಸೇರಿರುತ್ತಾರೆ. ಆದರೆ ಈ ಹೆಚ್ಚಿನ ಶಿಕ್ಷಣ ಕೊಡಿಸುವುದಕ್ಕೆ ಮಾಡಿದ ತ್ಯಾಗವೇ ತಿರುಗುಬಾಣದಂತೆ ಕೆಲಸ ಮಾಡಿ ಇಂದಿನ ಅನಾಹುತಗಳಿಗೆ ಎಡೆ ಮಾಡಿ ಕೊಡುತ್ತಿದೆಯೇ ಎಂಬುದನ್ನು ಚಿಂತನೆ ಮಾಡಬೇಕಾದ ಕಾಲ ಇದೀಗ ಬಂದಿದೆ ಅನಿಸುತ್ತದೆ.


ಒಬ್ಬ ಕೂಲಿ ಕೆಲಸ ಮಾಡುವ ಯುವಕನೊಬ್ಬ ತನ್ನ ಹೆತ್ತವರನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ಅವರ ಬಗ್ಗೆ ಪ್ರೀತಿ, ಗೌರವ, ಕಾಳಜಿ ವಹಿಸಿ ತನ್ನ ಶಕ್ತ್ಯಾನುಸಾರ ಅವರೆಲ್ಲ ಆಸೆಗಳನ್ನು ಪೂರೈಸುತ್ತಾನೆ. ಆದರೆ ಅದುವೇ ಪ್ರತಿಷ್ಠಿತ ಹುದ್ದೆಯಲ್ಲಿರುವ ಕೆಲವರು ತಮ್ಮ ಉನ್ನತಿಗೆ ಕಾರಣರಾದ ತನ್ನ ಹೆತ್ತವರನ್ನು ಆಶ್ರಮದ ಪಾಲು ಮಾಡಿ ತಾವು ವಿದೇಶದಲ್ಲೋ ದೊಡ್ಡ ನಗರದಲ್ಲೋ ನೆಲೆ ಕಂಡುಕೊಳ್ಳುತ್ತಾರೆ. ತನ್ನ ಹೆತ್ತವರು ಇದ್ದಾರೆಯೇ? ಇಲ್ಲವೇ ಎಂಬ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳಲಾರರು. ಅವರು ಎಷ್ಟು ಹಣ ಕೊಟ್ಟರು ತಾನೇ ಏನು ಪ್ರಯೋಜನ! ಮಗ ತಮ್ಮ ಜೊತೆಗಿದ್ದುಕೊಂಡು ತಮ್ಮ ಮೇಲೆ ತೋರುವ ನಿರ್ವ್ಯಾಜ ಪ್ರೀತಿಗೆ ಅದು ಸಾಟಿಯಾದೀತೇ? ಇದು ವೃದ್ಧ ತಂದೆ-ತಾಯಿಯಂದಿರ ಅಳಲು. ಆದರೆ ಅವರ ಮಕ್ಕಳ ನಿರ್ಲಕ್ಷ್ಯ ಪ್ರವೃತ್ತಿ ದಿನೇ ದಿನೇ ಜಾಸ್ತಿಯಾಗುತ್ತಿರುವುದು ಖಂಡಿತವಾಗಿ ಒಳ್ಳೆಯ ಲಕ್ಷಣವಲ್ಲ.


ಹಿಂದಿನ ಕಾಲದಲ್ಲಿ ನಮ್ಮ ಯುವಕರು ಪಾರಂಪರಿಕ ಜೀವನ ಮೌಲ್ಯಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಗದ್ದೆ-ತೋಟಗಳ ಕೆಲಸದಲ್ಲಿ ವ್ಯಸ್ತವಾಗಬೇಕಾಗಿದ್ದ ಕೃಷಿ ಪ್ರಧಾನ, ಕೌಟುಂಬಿಕ ಜೀವನದಲ್ಲಿ ಸಂತೃಪ್ತಿ, ನೆಮ್ಮದಿಗಳಿದ್ದುವು. ಅವಿಭಕ್ತ ಕುಟುಂಬಗಳು ಮಾಮೂಲಾಗಿದ್ದ ಆ ದಿನಗಳಲ್ಲಿ ಗುರುಹಿರಿಯರ ಬಗೆಗಿನ ನಿಷ್ಠೆ, ಪ್ರೀತಿ, ಗೌರವಗಳನ್ನು ಪ್ರತ್ಯೇಕವಾಗಿ ಕಲಿಸಬೇಕಾದ ಅಗತ್ಯ ಬಹುಶಃ ಇದ್ದಿರಲಿಲ್ಲ. ತಮ್ಮ ಹಿರಿಯರ ನಡೆ-ನುಡಿ ಕಂಡುಕೊಂಡೇ ಇವು ಸಹಜವಾಗಿ ಮೈಗೂಡಿರುತ್ತಿದ್ದವು. ಇದಕ್ಕೆ ಅಪವಾದಗಳಿರುತ್ತಿದ್ದರೂ ಅದು ಬೇರೆಯೇ ವಿಚಾರ.


ಆದರೆ ಯಾವಾಗ ನಮ್ಮ ಮನೆ, ಮನ ಮತ್ತು ಸಾಮಾಜಿಕ ವ್ಯವಸ್ಥೆ ವಿದೇಶಿ ಸಂಸ್ಕೃತಿಗೆ ಮುಕ್ತವಾಗಿ ತೆರೆದುಕೊಂಡಿತೋ ಅಂದಿನಿಂದ ಕ್ರಮೇಣ ಒಟ್ಟಾರೆ ಚಿತ್ರಣವೇ ಬದಲಾಗತೊಡಗಿತು. ಇಂತಹ ಸಂದರ್ಭಗಳಲ್ಲಿಯೇ 'ಮುತ್ತು ಕೊಟ್ಟವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ' ಎಂಬಂಥ ಗಾದೆಗಳ ಸೃಷ್ಟಿಯಾಯಿತು. ಮಕ್ಕಳಷ್ಟೇ ತಂದೆ-ತಾಯಿಯಂದಿರನ್ನು ತೊರೆದು ನಗರಗಳಿಗೆ ವಲಸೆ ಹೋಗುತ್ತಾರಲ್ಲದೆ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ತೊರೆದು ಹೋಗುವುದಿದೆಯೇ?


ನೀವು ಯಾಕೆ ಸ್ವತಃ ನಿಮ್ಮಾಸೆಗಳನ್ನು ಈಡೇರಿಸಿಕೊಳ್ಳದೆ ಹೀಗೆ ಹಣ ಕೂಡಿಡುತ್ತೀರಾ? ಎಂಬ ಪ್ರಶ್ನೆಗೆ, ನಾವು ಬದುಕಿನಲ್ಲಿ ಈವರೆಗೆ ನೊಂದು ಬೆಂದಿದ್ದು ಸಾಕು. ನಮ್ಮ ಮಕ್ಕಳೂ ಆ ರೀತಿ ಕಷ್ಟ ಪಡುವುದು ಬೇಡ ಎಂಬುದು ಹೆತ್ತವರ ಅಯಾಚಿತ ಉತ್ತರವಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ನನ್ನ ಹೆತ್ತವರ ಆಸೆಗಳನ್ನು ಪೂರೈಸಿದ ಅನಂತರವಷ್ಟೇ ನನ್ನ ಬಯಕೆಗಳತ್ತ ಗಮನ ಹರಿಸುತ್ತೇನೆ ಎನ್ನುವುದು ಕಡಿಮೆ ಜನ. ಇನ್ನುಳಿದವರ ಉತ್ತರ ಬೇರೆ ಏನೋ, ಅವರು ಅಜ್ಞಾನದಿಂದಲೋ, ಸ್ವಾರ್ಥದಿಂದಲೋ ಅಂತೂ ಅವರ ಮನಸ್ಸು ಚಂಚಲವಾಗಿರುತ್ತದೆ. ಇದರಿಂದಲೇ ಇರಬಹುದು, ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಸಿಗಲಾರಳು ಎಂಬ ಮಾತಿದೆ. ಹಾಗೆಯೇ ಒಂದು ಉದಾಹರಣೆ: ತನ್ನ ವೃದ್ಧ ತಾಯಿಯನ್ನು ಯಾವುದೇ ಮಮತೆಗೆ ಆಸ್ಪದವಿಲ್ಲದೆ  ವೃದ್ಧಾಶ್ರಮಕ್ಕೆ ಸೇರಿಸಿದ ಯುವಕನೋರ್ವ ಅದಕ್ಕೆ ನೀಡಿದ ಕಾರಣವೇನು ಗೊತ್ತೇ? ಇವರು ನನ್ನ ಮನೆಯಲ್ಲಿ ಇರುತ್ತಿದ್ದರು, ಈಗ ನನಗೆ ಇವರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಚೆನ್ನಾಗಿರಲಿ ಎಂದು ತಂದು ಬಿಟ್ಟಿದ್ದೇನೆ. ಇವರ ಸಂಬಂಧದವರು ಯಾರೂ ಇಲ್ಲ! ಹಾಗೆಯೇ ಕೆಲ ದಿನಗಳು ಕಳೆದವು. ಒಂದು ದಿನ ಆ ವೃದ್ಧೆಯನ್ನು ಮಾತಿಗೆಳೆದಾಗ ಆಕೆ ಆಡಿದ ಮಾತುಗಳು ಆಶ್ಚರ್ಯ ಹುಟ್ಟಿಸುತ್ತದೆ. "ಅವನು ನನ್ನ ಸ್ವಂತ ಮಗನೇ ಹೌದು. ಅವನಿಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸವಿದೆ. ಅಂಥಾ ದೊಡ್ಡ ಹುದ್ದೆಯಲ್ಲಿರುವವನಿಗೆ ಈ ತಾಯಿಯನ್ನು ಅಮ್ಮಾ ಎಂದು ಒಪ್ಪಿಕೊಳ್ಳಲು ನಾಚಿಕೆ ಆಗುತ್ತಿದೆ!"


ಇನ್ನೊಂದು ಉದಾಹರಣೆ: ಒಬ್ಬ ತಾಯಿಗೆ ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಕೊನೆಗೆ ಆಶ್ರಮವೊಂದಕ್ಕೆ ಸೇರಲು ಬಂದ ಆ ತಾಯಿ ಹೇಳಿದುದಿಷ್ಟೇ- " ನನ್ನ ಇದ್ದೊಬ್ಬ ಮಗ ದುರದೃಷ್ಟವಶಾತ್‌ ತೀರಿಕೊಂಡಿದ್ದು ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿರುತ್ತೇನೆ. ನನ್ನನ್ನು ನೋಡಿಕೊಳ್ಳಲು ಯಾರು ಇಲ್ಲವಾದುದರಿಂದ ನಾನು ಇಲ್ಲಿಗೆ ಬಂದಿದ್ದೇನೆ" ಯಾಕೆ ಹೀಗಾಗುತ್ತಿದೆ? ತಾಯಂದಿರು ತಮ್ಮ ಮಕ್ಕಳನ್ನು ಹೆಣ್ಣು ಗಂಡೆಂಬ ಭೇದವಿಲ್ಲದೆ ಸಮಾನ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಆದರೂ ಎಷ್ಟೊ ಕಡೆ ಹೆಣ್ಣು ಮಕ್ಕಳು ತಂದೆ-ತಾಯಿ ತಮ್ಮ ಜವಾಬ್ದಾರಿಯೇ ಅಲ್ಲ ಎಂಬಂತಿರುತ್ತಾರೆ.


-ಮಾಧವಿ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top