ಹುಡುಕಾಟದಲ್ಲೂ ಮಜವಿದೆ

Upayuktha
0

ದಿನ ಬೆಳಿಗ್ಗೆ ಕಾಲೇಜ್ ಒಂದರ ಫೆಸ್ಟ್ ಗೆ ಹೊರಡುವ ಸಿದ್ಧತೆ ನಡೆಯುತ್ತಿತ್ತು. ಫೆಸ್ಟ್ ಬಗ್ಗೆ ತಿಳಿದದ್ದೇ ತಡ ಎರಡು ವಾರಗಳ ಮುಂಚೆಯೇ ತರಗತಿಯಲ್ಲಿ ಅದರದ್ದೇ ಮಾತುಕತೆ. ಯಾರು ಯಾವ ಸ್ಪರ್ಧೆಗೆ ಭಾಗವಹಿಸುವುದು, ಎಷ್ಟು ಪ್ರವೇಶ ಶುಲ್ಕ, ಸ್ಪರ್ಧೆಯ ನಿಯಮಗಳೇನು ಎಂಬ ಬಗ್ಗೆ  ಕರೆಮಾಡಿ ತಿಳಿದುಕೊಂಡು ಇದ್ದ ಹಣವನ್ನೆಲ್ಲ ಸೇರಿಸಿ ಹೊರಡಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡೆವು. ರಸಪ್ರಶ್ನೆಗೆ ಜತೆಯಾಗುತ್ತೇನೆ ಎಂದಿದ್ದ ನನ್ನ ಗೆಳೆಯ ಸ್ಪರ್ಧೆಯ ಹಿಂದಿನ ದಿನ ನಾವು ಹೋಗುವುದು ಬೇಡ, ಸುಮ್ಮನೆ ಹಣ ವ್ಯರ್ಥ ಎನ್ನುವ ಮಾತುಗಳನ್ನಾಡಲು ಶುರು ಮಾಡಿದ್ದ. ಕೊನೆಗೂ ಅವನಿಗೆ ಐಸ್ ಕ್ರೀಮ್, ಜ್ಯೂಸ್ ಕೊಡಿಸಿ ಒಪ್ಪಿಸಿಯಾಗಿತ್ತು. ಹೊರಡುವ ಹಿಂದಿನ ದಿನವಂತೂ ಎಲ್ಲಾ ಗೋಜಲು- ಗೊಂದಲ. ಹೋಗುವವರೆಲ್ಲರಿಗೂ ಎಲ್ಲಿದೆ ಆ ಕಾಲೇಜ್, ಹೇಗೆ ಹೋಗುವುದು ಎನ್ನುವ ಸ್ಪಷ್ಟವಾದ ಚಿತ್ರಣ ಇರಲಿಲ್ಲ. ಕೊನೆಗೆ ಎಲ್ಲರೂ ಒಟ್ಟಿಗೆ ಸೇರಿ ಹೋಗುವುದು ಎಂದು ನಿರ್ಧರಿಸಿ ನಿದ್ರೆಗೆ ಜಾರಿದೆವು.


ಹುಡುಕಾಟದಲ್ಲಿ ಮಜವಿದೆ ಎನ್ನುವ ಶೀರ್ಷಿಕೆಯನ್ನಿಟ್ಟು ಇವನು ಏನು ಬರೆಯುತ್ತಿದ್ದಾನೆ ಅಂತ ಅಂದುಕೊಳ್ಬೇಡಿ. ನಿಜವಾದ ಕಥೆ ಆರಂಭವಾಗುವುದು ಇನ್ನು ಮುಂದೆ.


ಇಷ್ಟು ಬೇಗ ಯಾಕೆ ಏಳ್ಬೇಕು, ಅಲ್ಲಿಗೆ ಹೋಗ್ಲಿಕ್ಕೆ ಇಷ್ಟು ಬೇಗ ಹೊರಡ್ಬೇಕಾ ಎನ್ನುವ ಬಗ್ಗೆ  ಮಾತುಕತೆಗಳಾಗಿದ್ದರೂ, ಅಮ್ಮನನ್ನು ಸಮಾಧಾನ ಮಾಡಿ, ತಡವಾಗುವುದು ಬೇಡ ಎಂದು ಬೇಗನೆ ಹೊರಟು ವಿಟ್ಲಕ್ಕೆ 6:30ಕ್ಕೆ ತಲುಪಿದ್ದೆ. ನನ್ನ ಗೆಳೆಯ ಬೇಗ ಬರುತ್ತೇನೆ ಅಂದಿದ್ದವ 6:50 ಕ್ಕಾದರೂ ಬಂದು ತಲುಪಿದಾಗ, ಅಬ್ಬ, ಇವನು ಕೈ ಕೊಡದೆ ಬಂದುಬಿಟ್ಟ!  ಎಂಬ ಧೈರ್ಯ, ಸಮಾಧಾನ ಮನದಲ್ಲಿ ಮೂಡಿತ್ತು. ಬಸ್‌ ಪಾಸ್‌ ವ್ಯರ್ಥವಾಗಬಾರದು ಎಂಬ ಅವನ ಮಾತಿನಂತೆ, ಸರ್ಕಾರಿ ಬಸ್ ಲ್ಲಿಯೇ ಹೋಗುವುದು ಎಂದು ಒಪ್ಪಿ ಎಷ್ಟು ಹೊತ್ತು ಕಾದರೂ ಆ ಬಸ್ ಬರಲೇ ಇಲ್ಲ ಅಂದಾಗ ಇದ್ದ ಪ್ರೈವೇಟ್ ಬಸ್ ಹತ್ತಿದಾಕ್ಷಣ ಆ ಕೆಂಪು ಬಸ್ ಬಂದಿತ್ತು. ನಂತರ ಅವಸರದಿಂದ ಹತ್ತಿದ್ದ ನಾವು ಅಷ್ಟೇ ಅವಸರದಿಂದ ಇಳಿದೆವು. ಕೊನೆಗೂ 7:30ಕ್ಕೆ ಕಲ್ಲಡ್ಕ ತಲುಪಿದೆವು.


ಅಲ್ಲಿಗೆ ತಲುಪಿದ ಮೇಲೆ ಮತ್ತೆ ಕಾಯುವ ಕೆಲಸ. ಅಂತೂ ಎಲ್ಲರೂ ಒಬ್ಬೊಬ್ಬರಾಗಿ ಬಂದು ಸೇರಿದರು. ಇನ್ನೊಂದಷ್ಟು ಮಂದಿ ಮುಂದೆ ಸಿಗಲಿದ್ದರು. ನಮ್ಮ ಪಯಣ ಮುಂದುವರಿಯಿತು. ಬಿ. ಸಿ. ರೋಡ್ ತಲುಪುವುದರೊಳಗೆ ಎಲ್ಲರೂ ಗೂಗಲ್ ಮ್ಯಾಪ್ ನೋಡಲು ಸುರು ಮಾಡಿದ್ದೆವು. ದೇವರೇ ನಮ್ಮನೊಮ್ಮೆ ಅಲ್ಲಿಗೆ ಸರಿಯಾದ ಸಮಯಕ್ಕೆ  ತಲುಪಿಸಿಬಿಡು ಎಂದು ಮನದಲ್ಲೇ  ಪ್ರಾರ್ಥಿಸುತ್ತಿದ್ದೆವು. ನಮ್ಮ ಗುಂಪಿನ ಕೆಲವರು, ನೀವು ಕಂಕನಾಡಿಯಲ್ಲಿ ಇಳಿಯಿರಿ. ನಾವು ಅಲ್ಲಿ ಇರುತ್ತೇವೆ ಎಂದು ಕರೆ ಮಾಡಿ ತಿಳಿಸಿದರು. ಕಂಕನಾಡಿ ಹತ್ತಿರ ಬಂದಾಗ ನಾವು ಸರ್ಕಲಲ್ಲಿ ಇದ್ದೇವೆ ಎಂದು ತಿಳಿಸಿದ್ದರು. ಒಬ್ಬರು ಹಿರಿಯರ ಮಾತು ಕೇಳಿ ನಾವು ಇಳಿಯಬೇಕಾಗಿದ್ದ ಸರ್ಕಲ್ ಬಿಟ್ಟು ಇನ್ನೊಂದು ಸರ್ಕಲ್ ನಲ್ಲಿ ಇಳಿದೆವು. ಮತ್ತೆ ಹುಡುಕಾಟ ಆರಂಭವಾಗಿತ್ತು. ಹೇಗೋ ಕೊನೆಗೆ ಅವರಿರುವ ಜಾಗ ಹುಡುಕಿ ಎಲ್ಲರೂ ಒಟ್ಟಾಗಿ ಆ ಫೆಸ್ಟ್ ನಡೆಯುವ ಕಾಲೇಜು ತಲುಪಿದೆವು. 6 ಗಂಟೆಗೆ ಮನೆಬಿಟ್ಟಿದ್ದ ನನಗೆ ಕಾಯುವುದು, ಹುಡುಕುವುದು ಎಂಬ ಕೆಲಸ ಇಲ್ಲಿಗೆ ಕೊನೆಗೊಂಡಿತು ಅಂದುಕೊಂಡೆ.


ಕಾಲೇಜ್ ತಲುಪಿದಾಗ ನಿಮ್ಮ ಸ್ಪರ್ಧೆ ಆರಂಭವಾಗಿದೆ ಎಂಬ ಮಾಹಿತಿ ದೊರಕಿದಾಗ ಗಾಭರಿಯಿಂದ ಓಡುತ್ತಾ ಹೋದೆವು. ಕೊನೆಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕೈತಪ್ಪಿ ಹೋಗಲಿಲ್ಲವಲ್ಲ ಎಂಬ ನಿಟ್ಟುಸಿರು. ಸುಮಾರು 4 ಗಂಟೆ ಹೊತ್ತು ತಿರುಗಾಟ ಮಾಡಿ ಇಲ್ಲಿಗೆ ಬಂದಾಗಿತ್ತು, 20 ನಿಮಿಷದಲ್ಲಿ ಸ್ಪರ್ಧೆ ಮುಗಿದುಹೋಗಿತ್ತು.


ಸ್ಪರ್ಧೆ ಬಗ್ಗೆ ನಿರಾಸಕ್ತಿಯಿಂದಿದ್ದ ಗೆಳೆಯನೊಬ್ಬ ಅಚ್ಚರಿ ಎಂಬಂತೆ ಲೂಡೋ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ನೃತ್ಯ ಸ್ಪರ್ಧೆಯಲ್ಲಿದ್ದ ನಮ್ಮ ಗೆಳತಿಯ ನೃತ್ಯವನ್ನು ನೋಡಿ ಇನ್ನೇನು ಮನೆಗೆ ಹೊರಡಲು ಅಣಿಯಾಗಿದ್ದಾಗ ನಮ್ಮೊಂದಿಗಿದ್ದ ಕೆಲವರು ಟ್ರೆಶರ್ ಹಂಟ್ ಆಟಕ್ಕೆ ಹೆಸರು ನೀಡುತ್ತಾರೆ. ನೀಡಿದ್ದ ಎಲ್ಲ ಸವಾಲುಗಳನ್ನು ಎದುರಿಸಿ ಕೊನೆಯ ಸುತ್ತಿಗೆ ಆಯ್ಕೆಯಾಗುತ್ತಾರೆ. ಅವರಿಗಿದ್ದ ಟಾಸ್ಕ್ ಗೆ ಸಹಾಯ ಮಾಡೋಣ ಎಂದು ನಿರ್ಧರಿಸಿ ಅವರೊಂದಿಗೆ ಕಾಲೇಜ್ ಸುತ್ತಮುತ್ತ ಹುಡುಕಲು ಆರಂಭಿಸಿದೆವು. ಆರರಿಂದ ಏಳು ಜನ ಎಷ್ಟು ಹುಡುಕಿದರೂ 'ಅದು' ನಮ್ಮ ಕಣ್ಣಿಗೆ ಕಾಣಲಿಲ್ಲ. ಒಂದು ಕಡೆ ಆಯಾಸ, ಇನ್ನೊಂದು ಕಡೆ ಹಸಿವು. ಕೊನೆಯ ಪ್ರಯತ್ನವಾಗಿ ಅಲ್ಲಿದ್ದ ಎತ್ತರದ ಬಾಸ್ಕೆಟ್ ಬಾಲ್ ಕಂಬದ ಮೇಲ್ಗಡೆ ನೋಡೋಣ ಎಂದು ಹರಸಾಹಸ ಮಾಡಿ, ಅಲ್ಲಿ ಒಂದು ಸುಳಿವು ಸಿಕ್ಕಿದಾಗ ಆದ ಖುಷಿಗಂತೂ ಪಾರವೇ ಇರಲಿಲ್ಲ. ಮುಂದಿನ ಎಲ್ಲ ಸವಾಲುಗಳನ್ನು ಎದುರಿಸಿ ಸುಸ್ತಾಗಿ ಒಂದೆಡೆ ಕುಳಿತಿದ್ದಾಗ  ನಮ್ಮ ತಂಡಕ್ಕೆ ಎರಡನೇ ಸ್ಥಾನ ಎಂದು ಘೋಷಣೆಯಾಯಿತು. ನಮ್ಮ ಒಗ್ಗಟ್ಟಿನಿಂದಾಗಿ ಈ ಬಹುಮಾನ ದೊರಕಿದೆ ಎಂದು ಮನವರಿಕೆಯಾಗಿ ಏನೋ ಒಂದು ಖುಷಿ ಅನ್ನಿಸಿತ್ತು. ಮಧ್ಯಾಹ್ನದವರೆಗೆ ಎಲ್ಲೆಲ್ಲೋ ಇದ್ದ ನಾವು ಕೊನೆಗೆ  ಒಟ್ಟಿಗೆ ಆಡಿದ್ದು ಎಲ್ಲಿಲ್ಲದ ಸಂತೋಷವನ್ನು ನೀಡಿತ್ತು.


ಆದ್ದರಿಂದಲೇ ಅನ್ನಿಸಿದ್ದು-  ಹುಡುಕಾಟದಲ್ಲೂ ಮಜವಿದೆ ಎಂದು!


-ಜೈದೀಪ್ ಅಮೈ

ತೃತೀಯ ಬಿಎಸ್ಸಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ








Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top