ಮನಃ ಪ್ರಸಾದ: ಸೌಮ್ಯತ್ತ್ವಂ
ಮೌನಮಾತ್ಮವಿನಿಗ್ರಹ: |
ಭಾವಸಂಶುದ್ಧಿರಿತ್ಯೇತತ್ತಪೋ
ಮಾನಸಮುಚ್ಯತೇ || 17- 16||
ಮನಸ್ಸಿನ ಪ್ರಸನ್ನತೆ, ಶಾಂತ ಭಾವ, ಭಗವಚ್ಚಿoತನದ ಸ್ವಭಾವ, ಮನಸ್ಸಿನ ನಿಗ್ರಹ, ಅಂತಃಕರಣದ ಭಾವಗಳ ಪೂರ್ಣ ಪವಿತ್ರತೆ ಇವುಗಳು ಮನಸ್ಸಿನ ತಪಸ್ಸು ಎಂದು ಹೇಳಲ್ಪಡುತ್ತವೆ. ಇದುವೇ ಮಾನಸಿಕ ತಪಸ್ಸಿನ ಲಕ್ಷಣಗಳು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಮನಸ್ಸು ಚಂಚಲ. ಅದು ಸದಾ ಅತ್ತಿತ್ತ ಚಲಿಸುತ್ತಲೇ ಇರುತ್ತದೆ. ಎಲ್ಲೆಲ್ಲೋ ಅಲೆದಾಡುತ್ತಿರುತ್ತದೆ. ಅದನ್ನು ಹಿಡಿದಿಡುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ದೇವರೆಡೆಗೆ ಗಮನ ಬರಿಸುವಂತೆ ಮಾಡುವ ಗುಣವೂ ಮನಸ್ಸಿಗೆ ಬರಬೇಕು. ಮನಸ್ಸು ಯಾವತ್ತೂ ಮಗುವಿನ ತರಹ ಇರುತ್ತದೆ. ಅದನ್ನು ಹಾಗೆಯೇ ಕಾಪಿಡುವ ಬುದ್ಧಿ ಸದಾ ಜಾಗ್ರತವಾಗಿರಬೇಕು. ಆಗಲೇ ಪ್ರಸನ್ನತೆ ಮನೆ ಮಾಡುತ್ತದೆ. ಯಾರೊಂದಿಗೂ ಕಲಹ ಬಯಸದೇ ಸದಾ ನೆಮ್ಮದಿ ಭಾವವನ್ನು ಸ್ಥಿತಪ್ರಜ್ಞವಾಗಿಸುತ್ತದೆ.
ಹೂವು ಹಾಸಿತ್ತು. ಅಂದರೆ ಅಲ್ಲಿ ಮೃದುತ್ವ ನೆಲೆಯೂರುತ್ತದೆ. ಏನಪ್ಪಾ ವಿಶೇಷ ಅಂತ ಆಚೆ ಈಚೆ ನೋಡಿದರೆ ಮಕ್ಕಳೆಲ್ಲ ಕುಣಿದು ಕುಪ್ಪಳಿಸುತ್ತಿದ್ದರು. ಹೂವುಗಳೂ ಕುಣಿದು ಸುಸ್ತಾಗಿ ನೆಲದಲ್ಲಿ ಅಂಗಾತ ಬಿದ್ದಂತೆ ಕಂಡು ಬರುತ್ತಿದ್ದವು. ಹಾಸುಗಲ್ಲಿನ ಮೇಲೆ ಹಸಿರು ಪಾಚಿ ತನ್ನ ಬಣ್ಣವನ್ನೆಲ್ಲ ಕಳೆದುಕೊಂಡು ಕಲ್ಲಿನ ಭಾಗದಂತೆ ತೋರುತ್ತಿತ್ತು. ಆದರೆ ತನ್ನ ಹುರುಪನ್ನು ಇನ್ನೂ ಬಿಟ್ಟು ಕೊಟ್ಟಿರಲಿಲ್ಲ. ಜೀವನಕ್ಕೆ ಇಂತಹ ಅಂಶಗಳೇ ಹುರುಪನ್ನು ನೀಡಿ ಬದುಕಿನ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. ಆದರ್ಶವಾಗಿ ಮುಂದುವರಿಯುವಂತೆ ಹುಟ್ಟು ಬರಿಯ ನೆಪವಾಗಿ ಕಾಡಬಾರದು. ಸವಿಯಾದ ನೆನಪನ್ನು ಮತ್ತೆ ಮತ್ತೆ ಅದರಿಂದ ಪಡೆಯುತ್ತಾ ಮಲ್ಲಿಗೆಯ ಬಳ್ಳಿಯಂತೆ ಚಿಗುರೊಡೆದು ಹಬ್ಬಿ ಒಂದಷ್ಟು ದೂರ ಸುಗಂಧವನ್ನು ಪಸರಿಸುವಂತೆ ಒಳಿತು ಮಾಡುತ್ತಾ ದಾರಿಯನ್ನು ಮುಂದುವರಿಸಬೇಕು. ಏನೂ ಅರಿಯದ ಮುದ್ದು ಕಂದಮ್ಮಗಳಂತೆ ನಗುವನ್ನು ಹಚ್ಚಬೇಕು. ನಂದಾದೀಪದಂತೆ ಬೆಳಗಬೇಕು. ಮೌನದ ಮನೆಯಲ್ಲಿ ಮುಗುಳ್ನಗು ಹೊರಸೂಸುತ್ತಿರಬೇಕು.
ಸೇವಾ ಮನೋಭಾವ ಎಲ್ಲರಿಗೂ ಬರುವುದಿಲ್ಲ. ಬಂದರೂ ಒದಗುವುದಿಲ್ಲ. ಒದಗಿದರೂ ಒಳಮನಸ್ಸು ನಿಷ್ಕಲ್ಮಶವಾಗಿರಬೇಕೆಂದೇನೂ ಇಲ್ಲ. ಆದರೆ ಅತ್ಯುನ್ನತ ಪದವಿ ಪಡೆದು ಬೇಕಾದಷ್ಟು ಆದಾಯ ಗಳಿಸುವುದರ ಮಧ್ಯೆಯೂ ಸೇವೆಯಿಂದ ಜನರಿಗೆ ಇನ್ನಷ್ಟು ಭರವಸೆ ತುಂಬುವ ಕಾಯಕ ಮಾಡುವುದು, ಅಂತಹ ಮನಸ್ಸಾಗುವುದು ಬೆರಳೆಣಿಕೆಯ ಮಂದಿಗೆ ಮಾತ್ರ. ಹಾಗಾದಲ್ಲಿ ಸಹೃದಯವಂತ ನಗು ಮೊಗದ ದೇವರಂತೆ ಒದಗಿ ಬರುವವರು ಸಾಧಾರಣದಲ್ಲೂ ಅಸಾಧಾರಣರಾಗಿರುತ್ತಾರೆಂದರೆ ತಪ್ಪಾಗಲಾರದು. ಭಕ್ತರನ್ನೇ ದೇವರೆಂದು ಭಾವಿಸಿ ಅವರ ಸೇವೆ ಮಾಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಕಾದು ಕಾದು ಸುಸ್ತಾಗಿ ಹೋಗುವುದುಂಟು. ಕಾದ ನೆಲಕ್ಕೆ ಸ್ವಲ್ಪ ನೀರು ಬಿದ್ದರೂ ಸಾಕು ಮಾಯವಾಗಿ ಹೋಗಿಬಿಡುತ್ತದೆ. ಕಾದು ನೋಡುವ ಮನಸ್ಸು ಕೆಲವೊಮ್ಮೆ ಇತರರ ಒಳಿತನ್ನು ಗಣನೆಗೆ ತೆಗೆದುಕೊಳ್ಳದೆ ಕೆಡುಕುಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತದೆ. ಕಾದ ಕಾವಲಿಗೆ ಎಣ್ಣೆ ಹಾಕಿ ಹಿಟ್ಟು ಹಾಕಿದರೆ ರುಚಿಯಾದ ದೋಸೆ ತಯಾರಾಗುತ್ತದೆ. ಆದೇ ಕಾದ ಕಾವಲಿಗೆ ನೀರು ಹೊಯ್ದರೆ ಮಾಯವಾಗುತ್ತದೆ. ಅಂತಹ ಸ್ಥಿತಿಯ ಮನಸ್ಸು ಮನೆಗೆ ಬಂದ ನೆಂಟರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿದರೆ ಏನನ್ನೂ ಸಾಧಿಸಲಾಗದು. ಭೂಮಿ ಎಂಬ ಆಲಯ ಸರ್ವರ ಮನೆಯೇ ಹೌದು. ಬಾಡಿಗೆದಾರರೇ ಎಲ್ಲರೂ. ಒಂದು ರೀತಿಯಲ್ಲಿ ಯೋಚಿಸುವುದಾದರೆ ಯಾರೂ ಇಲ್ಲಿ ಶಾಶ್ವತರೇ ಅಲ್ಲ. ಅಂದ ಮೇಲೆ ಮತ್ತೊಬ್ಬರನ್ನು ಅಥವಾ ನೆಂಟರಿಷ್ಟರನ್ನು ಯಾಕೆ ಬಂದೆ ಅಥವಾ ಯಾಕೆ ಬರಲಿಲ್ಲ? ಎಂದು ಪ್ರಶ್ನೆ ಮಾಡುವ ಹಕ್ಕು ಇಲ್ಲ. ಈ ಜಗದೊಳಗೆ ಮಾನವ ಜನ್ಮ ಕೊಟ್ಟು ಭೂಮಿಗೆ ಇಳಿಸಿದವ ಆ ದೇವರು. ಅವನ ಆಣತಿಯಂತೆ ಇಲ್ಲಿ ಸಂಸ್ಕಾರ ಹೊಂದಿ ಪರಿಶುದ್ಧರಾದ ಬಳಿಕ ಬಂದ ದಾರಿಯನ್ನು ಮರೆಯದೆ ತೆರಳಲೇಬೇಕು. ದರ್ಪದಿಂದ ಎಲ್ಲರ ಮುಂದೆ ತನ್ನನ್ನು ತಾನು ಒಳ್ಳೆಯವನೆಂದು ಹೊಗಳಿಕೊಳ್ಳುತ್ತ ಬದುಕುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಆದರೆ ಅದು ಬರಿಯ ನಿಮಿತ್ತ ಮಾತ್ರ ಆಗಿರುವುದು.
ಪುರುಸೊತ್ತು ಇಲ್ಲದಿರುವಷ್ಟು ಕೆಲಸವನ್ನು ಈ ಮನಸ್ಸಿಗೆ ಕೊಟ್ಟು ಸಾಧನೆಯ ಉನ್ನತಿಗೆ ಪರಿಶ್ರಮಿಸಬೇಕು. ಆಗ ಎಂದಿಗೂ ಕೆಟ್ಟದರ ಆಗಮನವಾಗಲಾರದು. ಹಾಗೂ ಯಾವುದೇ ಕಾರ್ಯವನ್ನು ಮಾಡುವುದಷ್ಟೇ ಮುಖ್ಯವಾಗಬೇಕು. ಒಳಿತಿನ ಕುರಿತು ಚಿಂತಿಸುವುದು, ಅಥವಾ ಸಂಭವನೀಯತೆಯನ್ನು ಯೋಚಿಸುತ್ತ ಕಾಲ ಹರಣ ಮಾಡುತ್ತಾ ಮುಂದುವರಿಯಬಾರದು. ಈ ಪ್ರಯಾಣವೆಂಬುದು ಅನಿರೀಕ್ಷಿತವಾದರೂ ಅಪೇಕ್ಷೆಯನ್ನು ಇಟ್ಟುಕೊಂಡು ಬದುಕುವುದು ಮನುಷ್ಯನ ಸಹಜ ಗುಣ. ಆದರೆ ಅಪೇಕ್ಷೆಯ ಮಟ್ಟವು ಸೀಮಿತವಾಗಿರಬೇಕು. ಹದವಾಗಿ ಹಿತವಾಗಿ ಮಿತವಾಗಿ ಬರೇ ನಿಮಿತ್ತ ಮಾತ್ರ ಎಂಬಂತೆ ಬದುಕು ಸಾಗಿಸಿ ಸದ್ದಿಲ್ಲದೇ ತೆರಳುವುದು ಎಲ್ಲರ ಪಾಲಿನ ಋಣವೇ ಆಗಿದೆ.
ಭಾಷೆಗಳ ಬಳಕೆಯಿಂದ ಮನುಷ್ಯರಲ್ಲಿ ದ್ವಿಭಾವಗಳು ಉತ್ಪನ್ನವಾಗುತ್ತವೆ. ಹಲವು ಭಾವಗಳು ಏಕ ಮನಸ್ಸು ಬೆಳೆಸಿಕೊಳ್ಳುತ್ತ ದೇಹಕ್ಕೆ, ದೇಶಕ್ಕೆ, ಲೋಕ ಸುಖಕ್ಕೋಸ್ಕರ ಪ್ರಯತ್ನಿಸುವುದು ಸಾಧ್ಯವಾಗುವ ಮಾತು. ಅದನ್ನು ಬೆಳೆಸಿಕೊಳ್ಳುವುದು ಅವರವರ ಮನೋಧರ್ಮಕ್ಕೆ ಬಿಟ್ಟಿದ್ದೇ ಆದರೂ ಸತ್ಫಲ ನೀಡುವಂತೆ ಪ್ರಯತ್ನಿಸುವುದು ಎಲ್ಲರ ಒಳಿತಿಗೆ ಮೂಲವಾಗುವುದು. ಲೋಕದ ಹಿತವನ್ನು ಬಯಸುತ್ತಾ ಎಲ್ಲರೊಳಗೊಂದಾಗುತ್ತಾ ಬಾಳಿದರೆ ಸಾರ್ಥಕತೆಯ ಭಾವ ಒದಗುತ್ತದೆ. ಕೆಲವೊಮ್ಮೆ ಮನಸ್ಸು ಏನೋ ಆಲೋಚಿಸಿದರೂ ಕಾರ್ಯ ಅದರಂತೆ ಸಾಗದೆ ಬೇರೆ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ. ಅನಿವಾರ್ಯತೆ ಮನುಷ್ಯನಿಗೆ ಏನನ್ನು ಬೇಕಾದರೂ ಮಾಡಿಸುವ ತಾಕತ್ತು ಹೊಂದಿದೆ. ಮನಸ್ಸಿನ ನಿಗ್ರಹದಿಂದ ಅಸಾಧಾರಣವಾದುದನ್ನು ಸಾಧಿಸಲು ಸಾಧ್ಯವಿದೆ. ಧ್ಯಾನವೊಂದು ಸಾಕು, ಜ್ಞಾನ ಸಿದ್ಧಿಸುವುದು.
-ಮಲ್ಲಿಕಾ.ಜೆ ರೈ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ