ಹೈನುಗಾರಿಕೆ, ಮೀನುಗಾರಿಕೆ, ವ್ಯವಸಾಯ ದೇಶದ ಪ್ರಮುಖ ಉದ್ಯೋಗಗಳಾಗಲಿ: ಜಿ. ರಾಮಕೃಷ್ಣ ಆಚಾರ್ಯ

Upayuktha
0

ದ.ಕ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ- 3ನೇ ದಿನ- ಗೋಷ್ಠಿ 2


ಉಜಿರೆ: ಆತ್ಮನಿರ್ಭರ ಭಾರತದ ಕನಸು ನನಸಾಗಬೇಕಾದರೆ ಹೈನುಗಾರಿಕೆ, ಮೀನುಗಾರಿಕೆ, ವ್ಯವಸಾಯ ಇವೆಲ್ಲವೂ ಪ್ರಮುಖ ಉದ್ಯೋಗಗಳಾಗಬೇಕು. ಇದರಿಂದ ಗ್ರಾಮೀಣ ಭಾರತದ ಆರ್ಥಿಕ ಸುದೃಢತೆಯೊಂದಿಗೆ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ಮೂಡುಬಿದಿರೆಯ ಎಸ್.ಕೆ.ಎಫ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ. ರಾಮಕೃಷ್ಣ ಆಚಾರ್ಯ ಅಭಿಪ್ರಾಯಪಟ್ಟರು.


ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಅವರು ‘ಆತ್ಮ ನಿರ್ಭರ’ ಕುರಿತ ಗೋಷ್ಠಿಯಲ್ಲಿ ‘ಉದ್ಯಮ’ದ ಕುರಿತು ಮಾತನಾಡಿದರು.


ಸ್ವೋದ್ಯೋಗಿಗಳು ತಮ್ಮ ಉದ್ಯೋಗದ ಬಗೆಗಿನ ಆಸಕ್ತಿ ಹಾಗೂ ನಿಷ್ಠೆಯನ್ನು ಕೈಬಿಡಬಾರದು. ಉದ್ಯೋಗ ಯಶಸ್ವಿಯಾಗ ಬೇಕಾದರೆ ಸುದೀರ್ಘ ಕಾಲದ ನೋಟವನ್ನು ಹೊಂದಿರಬೇಕು. ಎಂದಿಗೂ ಬದಲಾವಣೆಯನ್ನು ಗಮನಿಸುತ್ತಾ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಅವರು ಕಿವಿಮಾತು ಹೇಳಿದರು.


“ಕೃಷಿಯನ್ನು ತೊರೆದು ಪಟ್ಟಣಕ್ಕೆ ಹೋಗುವ ಯುವಜನರನ್ನು ಮರಳಿ ಕೃಷಿಯತ್ತ ಮುಖ ಮಾಡಿಸುವ ಧ್ಯೇಯದೊಂದಿಗೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸತತ 14 ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಕ್ಕಾಗಿ ಇಂದು ಅದರ ಫಲ ನನಗೆ ದೊರೆತಿದೆ. ವೃತ್ತಿ ಮೇಲಿನ ಅದಮ್ಯ ಛಲ ಹಾಗೂ ಕೆಲಸದ ಮೇಲಿನ ನಿಷ್ಠೆಯಿಂದ ಏನು ಬೇಕಾದರೂ ಸಾಧಿಸಬಹುದು” ಎಂದು ಅವರು ತಿಳಿಸಿದರು.


‘ಕೃಷಿ ಸಂಸ್ಕೃತಿ’

‘ಕೃಷಿ ಸಂಸ್ಕೃತಿ’ ಎಂಬ ವಿಷಯದ ಕುರಿತು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕೆ. ಮೋನಪ್ಪ ಕರ್ಕೇರ ಅವರು ಮಾತನಾಡಿದರು.

ರೈತರನ್ನು ದೇಶದ ಬೆನ್ನೆಲುಬು ಎಂದು ಕರೆದರೂ ಇಂದಿನ ಕಾಲದಲ್ಲಿ ರೈತನಿಗೆ ಪ್ರಾಮುಖ್ಯ ಇಲ್ಲದಂತಾಗಿದೆ. ಮೊದಮೊದಲು 70 ಪ್ರತಿಶತ ರೈತರಿದ್ದರು. ಕಾಲಕಳೆದಂತೆ 40 ಪ್ರತಿಶತಕ್ಕೆ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ 20 ಪ್ರತಿಶತ ಜನ ಬೇರೆ ಉದ್ಯೋಗ ದೊರಕಿದರೆ ಕೃಷಿ ಬಿಟ್ಟು ಲಾಭದಾಯಕ ಕೆಲಸಗಳಿಗೆ ತೆರಳುತ್ತಾರೆ ಎಂದು ಅವರು ವಿಷಾದಿಸಿದರು.  


ಕೃಷಿ ವರಮಾನವನ್ನು ಹೆಚ್ಚಿಸಬೇಕಾದರೆ ಪರಂಪರಾಗತವಾಗಿ ಬಂದ ಗೋ ಆಧಾರಿತ ಸಾವಯವ ಕೃಷಿಯನ್ನು ಮಾಡಬೇಕು ಎಂದು ಪ್ರತಿಪಾದಿಸಿದ ಅವರು, “ಭೂಮಿಯನ್ನು ತಾಯಿಯೆಂದು ಕರೆಯುವ ನಾವು ಇಂದಿನ ಕಾಲದಲ್ಲಿ ‘ಭೂಮಿಯೂ ತಾಯಿಯೇ?’ ಎಂದು ಪ್ರಶ್ನಿಸುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.ಇವೆಲ್ಲವೂ ಜಾಗತೀಕರಣದ ಪ್ರಭಾವ” ಎಂದರು.


ಆಧುನಿಕ ಕೃಷಿ ಮಾಡಬೇಕು, ಆಧುನಿಕ ಗೊಬ್ಬರ ಹಾಕಬೇಕು, ಆಧುನಿಕ ಕೀಟನಾಶಕ ಬಳಸಬೇಕು ಎಂಬ ಮನೋಭಾವದಿಂದ ಹೊರದೇಶದ ಹಲವು ಕೃಷಿ ಉತ್ಪನ್ನಗಳು ನಮ್ಮ ದೇಶಕ್ಕೆ ಬಂದು, ಸಾವಯವ ಗೊಬ್ಬರ ಬಳಕೆ ಕಡಿಮೆಯಾಯಿತು. ಹೀಗಾದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡಲು ಸಾಧ್ಯವಿಲ್ಲ. ಕೇವಲ ಹಣ ಉಳಿದು ಆಹಾರ ಇಲ್ಲದಂತಾಗುತ್ತದೆ ಎಂದು ಅವರು ಎಚ್ಚರಿಸಿದರು.


ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಆತ್ಮನಿರ್ಭರತೆಯ ಸಂಕೇತವಾಗಿ ಕೃಷಿ ಸಂಸ್ಕೃತಿ ಗೋಚರಿಸುತ್ತದೆ. ಕೃಷಿ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಕೃಷಿಯಿಂದಲೇ ಜನಪದ ಸಾಹಿತ್ಯ ಹುಟ್ಟಿದೆ. ಕೃಷಿ ಸಂವೇದನೆ ಇರುವ ಕಥೆ, ಕಾದಂಬರಿ, ಸಿನೆಮಾಗಳು ಜನಮಾನಸವನ್ನು ಪರಿಣಾಮಕಾರಿಯಾಗಿ ಮುಟ್ಟಿವೆ ಎಂದರು.


ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ್ ಜೋಷಿ ಅವರನ್ನು ಸಮ್ಮಾನಿಸಲಾಯಿತು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್, ರುಡ್ ಸೆಟ್ ಸಂಸ್ಥೆ ಉಜಿರೆಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿಸೆಂಟ್ ಪಾಯಸ್ ಉಪಸ್ಥಿತರಿದ್ದರು.

ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ  ಸ್ವಾಗತಿಸಿ, ದಕ್ಷಿಣ ಕನ್ನಡ ಕ.ಸಾ.ಪ. ಕಾರ್ಯಕಾರಿಣಿ ಸದಸ್ಯ ಪೂವಪ್ಪ ನೇರಳೆಕಟ್ಟೆ ವಂದಿಸಿದರು. ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಡಾ. ರಾಜೇಶ್ ಬಿ. ಕಾರ್ಯಕ್ರಮ ನಿರೂಪಿಸಿದರು.


ವರದಿ: ಪೂಜಾ ವಿ. ಹಂದ್ರಾಳ, ಚೆಲುವಮ್ಮ, ಲಿಖಿತಾ ಹೆಗಡೆ, ಕೌಶಿಕ್ ಹೆಗಡೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ.

ಚಿತ್ರ: ಶಶಿಧರ ನಾಯ್ಕ, ಕೌಶಿಕ್ ಹೆಗಡೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top