ನಿಟ್ಟೆಯಲ್ಲಿ ಕಾರ್ಯಾಗಾರ: 'ಉಪಬೆಳೆಗಳ ಆದಾಯ- ರೈತರ ಜೀವನಾಧಾರ'

Upayuktha
0


ನಿಟ್ಟೆ:
'ಹಳ್ಳಿಯ ಸರ್ವತೋಮುಖ ಬೆಳವಣಿಗೆಗೆ ಕೃಷಿಗೆ ಹೆಚ್ಚಿನ ಒತ್ತು ನೀಡುವುದು ಅತ್ಯಗತ್ಯ. ವಿವಿಧ ಬಗೆಯ ಕೃಷಿ ಹಾಗೂ ಅಪರೂಪದ ಬೆಳೆಗಳು ಮತ್ತು ಅವುಗಳಿಗಿರುವ ಬೇಡಿಕೆಯ ಬಗೆಗೆ ರೈತರು ತಿಳಿದುಕೊಳ್ಳುವುದು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ' ಎಂದು ಸಿ.ಎಸ್.ಐ.ಆರ್- ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ದಿನೇಶ್ ಅಭಿಪ್ರಾಯಪಟ್ಟರು.


ಸಿ.ಎಸ್.ಐ.ಆರ್- ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆಯ ಪ್ರಾಯೋಜಿತ ಯೋಜನೆಯಡಿಯಲ್ಲಿ ನಿಟ್ಟೆ ರೈತ ಉತ್ಪಾದಕ ಕಂಪೆನಿ (ಲಿ) ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ & ರಿಸರ್ಚ್ ನ ಸಹಭಾಗಿತ್ವದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು ಫೆ.೯ ರಂದು ಹಮ್ಮಿಕೊಂಡಿದ್ದ 'ಔಷಧೀಯ ಮತ್ತು ಸುಗಂಧ ಸಸ್ಯಗಳ ಕೃಷಿ' ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕೃಷಿಕರು ಬಂಜರುಭೂಮಿಯಲ್ಲೂ ಬೆಳೆಯಬಹುದಾದ ಹಲವಾರು ಬೆಲೆಬಾಳುವ ತರಹೇವಾರು ಗಿಡಮರಗಳ ಬಗೆಗೆ ತಿಳಿದು ಕೃಷಿಯಲ್ಲಿ ತೊಡಗಬೇಕು. ಇದಕ್ಕೆ ಬೇಕಿರುವ ಸಲಹೆ ಹಾಗೂ ಗಿಡಗಳನ್ನು ಒದಗಿಸಲು ಸಿ.ಎಸ್.ಐ.ಆರ್-ಸಿ.ಐ.ಎಂ.ಎ.ಪಿ ಸಿದ್ದವಿದೆ' ಎಂದರು.


ನಿಟ್ಟೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಶ್ರೀ ಅಶೋಕ್ ಅಡ್ಯಂತಾಯ ಅವರು 'ನಿಟ್ಟೆ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸಹಾಯದೊಂದಿಗೆ ಆರಂಭಿಸಿರುವ ನಿಟ್ಟೆ ರೈತ ಉತ್ಪಾದಕ ಕಂಪೆನಿಯು ಸದಸ್ಯತ್ವ ಪಡೆದಿರುವ ಎಲ್ಲಾ ರೈತರ ಏಳಿಗೆಯನ್ನು ಆಶಿಸುತ್ತದೆ. ರೈತರ ಆದಾಯ ದ್ವಿಗುಣಗೊಳಿಸುವ ಹಲವಾರು ಯೋಜನೆಗಳಿಗೆ ಬೇಕಾದ ವಿವಿಧ ಸವಲತ್ತನ್ನು ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿಟ್ಟೆ ಎಫ್.ಪಿ.ಒ ಸದಾ ಸಿದ್ದ' ಎಂದರು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇನ್ನೋರ್ವ ಅತಿಥಿ ಮೈಸೂರಿನ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಸತ್ಯನಾರಾಯಣ ಭಟ್ ಅವರು 'ಸಿ.ಎಸ್.ಐ.ಆರ್- ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆಯ ವಿವಿಧ ಯೋಜನೆಗಳು ರೈತರ ಏಳಿಗೆಗೆ ಸಹಕಾರಿ. ವಿವಿಧ ಔಷಧೀಯ ಮತ್ತು ಸುಗಂಧ ಸಸ್ಯಗಳ ಪ್ರಯೋಜನಗಳನ್ನು ಅರಿತುಕೊಳ್ಳುವುದು ಅತ್ಯಗತ್ಯ. ಇಂದು ಕಾರ್ಪೋರೇಟ್ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದು ತಮ್ಮ ತಮ್ಮ ಹಳ್ಳಿಗಳಲ್ಲಿ ಕೃಷಿ ಕಾರ್ಯಗಳನ್ನು ನಡೆಸುವವರ ಸಂಖ್ಯೆ ಹೆಚ್ಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಎಲ್ಲರಲ್ಲೂ ಕೃಷಿಯ ಬಗೆಗೆ ಒಲವು ಮೂಡಿದರೆ ದೇಶದ ಅಭಿವೃದ್ದಿ ಸಾಧ್ಯ' ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಹಾಗೂ ಆಧುನಿಕ ಕೃಷಿ ಪದ್ದತಿಗಳಿಂದ ಹೆಚ್ಚಿನ ಬೆಳೆಬೆಳೆಯಲು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ದಿಗೆ ವಿದ್ಯಾರ್ಥಿಗಳು ಹಲವಾರು ಪ್ರಾಜೆಕ್ಟ್ ಗಳನ್ನು ಕೈಗೊಂಡಿರುವರು. ವಿವಿಧ ಗುಣಗಳನ್ನೊಳಗೊಂಡ ಸಸ್ಯಗಳು ಇಂದು ಆಹಾರದಲ್ಲಿ ಬಳಕೆಯಾಗುತ್ತಿದ್ದು ಆರೋಗ್ಯವೃದ್ದಿಯಲ್ಲೂ ಸಹಕಾರಿಯಾಗಿದೆ' ಎಂದರು.


ವೇದಿಕೆಯಲ್ಲಿ ಸಿ.ಎಸ್.ಐ.ಆರ್- ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆಯ ಸೀನಿಯರ್ ವಿಜ್ಞಾನಿಗಳಾದ ಡಾ. ಚನ್ನಯ್ಯ ಹಿರೇಮಠ್, ಡಾ. ಯೋಗೇಂದ್ರ, ಪ್ರಿಂಸಿಪಲ್ ಟೆಕ್ನಿಕಲ್ ಆಫೀಸರ್ ಭಾಸ್ಕರನ್, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ & ರಿಸರ್ಚ್ ನ ಪ್ರೊ.ಡಾ.ಸ್ಮಿತಾ ಹೆಗ್ಡೆ ಹಾಗೂ ನಿಟ್ಟೆ ತಾಂತ್ರಿಕ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಡಾ.ಉಜ್ವಲ್ ಉಪಸ್ಥಿತರಿದ್ದರು.


ನಿಟ್ಟೆ ತಾಂತ್ರಿಕ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ.ಅನಿಲ್ ಕುಮಾರ್ ಹೆಚ್.ಎಸ್. ಕಾರ್ಯಕ್ರಮವನ್ನು ಸಂಯೋಜಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top