ಅವನು ಮರೆಯಾದ ಕ್ಷಣ ಆತಂಕದಲ್ಲಿ ನನ್ನ ಮನ

Upayuktha
0


 

ಅವನೆಂದರೆ ಬಾಲ್ಯದಿಂದಲೂ ನನಗೇನೋ ಹುಚ್ಚು ಪ್ರೀತಿ. ನನ್ನೊಲವಿಗೆ ಹತ್ತಿರವಾಗಿ ಪದೇ ಪದೇ ನನ್ನನ್ನು ಅವನತ್ತ ಸೆಳೆಯುತ್ತಿದ್ದ.ಅವನ ಜೊತೆಗಿದ್ದ ನಂಟು ನಿಜಕ್ಕೂ ಅದ್ಬುತವಾದದ್ದು ಹಾಗೂ ಎಲ್ಲಾ ಸಂಬಂಧಕ್ಕಿಂತ ಮಿಗಿಲಾದದ್ದು. ಅವನೊಡನೆ  ಕಳೆದ ಕ್ಷಣ ಮರೆಯಲಾಗದ ಬಾಲ್ಯದ ನೆನಪುಗಳ ಸಾಲುಗಳನ್ನು ಸೃಷ್ಟಿಸಿದೆ. ಎಲ್ಲರಿಗಿಂತ ಅಚ್ಚು ಮೆಚ್ಚಾಗಿದ್ದ ಎಂದರೆ ತಪ್ಪಾಗಲಾರದು. ನನ್ನ ಅವನ ಭೇಟಿಯು ಮುಸ್ಸಂಜೆಯ ಹೊತ್ತಿಗೆ ಆಗುತಿತ್ತು ಮತ್ತು ಮಾತನಾಡಲು ಆರಂಭಿಸಿದರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ, ನನ್ನ ಬಾಲ್ಯದ ಒಂದು ಉತ್ತಮ ಗೆಳೆಯನಾಗಿದ್ದ ಎನ್ನುವುದದಂತೂ ನಿಜ. ನನ್ನ ಕಣ್ಣುಗಳಿಗೆ ಮೊದಲು ಕಾಣಿಸಿದ ದಿನ ನನ್ನಲ್ಲಿ ಅವನ ಬಗ್ಗೆ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.


ಅವ ಯಾರು, ಎಲ್ಲಿರಬಹುದು, ಅವನೇಕೆ ನನ್ನ ಹುಡುಕಿಕೊಂಡು ಬರುತ್ತಿದ್ದಾನೆ, ಇಂತಹ ಹುಚ್ಚು ಪ್ರಶ್ನೆಗಳು ನನ್ನ ಮನದಲ್ಲಿ ಹುಟ್ಟಲಾರಾಂಬಿಸಿತು. ಸದಾ ಅವನ ಗುಂಗಿನಲ್ಲಿ ಮುಳುಗಿ ಹೋಗುತ್ತಿದ್ದ ನನಗೆ ಲೋಕದ ಪರಿವೆ ಇರುತ್ತಿರಲಿಲ್ಲ. ಅವನು ನನ್ನೊಳಗೆ ಅದೆಷ್ಟೋ ಬೆರೆತು ಹೋಗಿದ್ದಾನೆ ನಾ ಕಾಣೆ. ಮುಸ್ಸಂಜೆಯಾಗುತ್ತ ಸೂರ್ಯನು ಕಡಲಿಗೆ ಹತ್ತಿರ ವಾಗುತ್ತಿರುವ ಸಮಯ, ಬಾನಲ್ಲಿ ಹರಡಿದ ಕೆಂಬಣ್ಣ ಮಾಸಿ, ದಟ್ಟ ಕತ್ತಲು ಸಮೀಪ ಆಗುತ್ತಿರುವ ಗಳಿಗೆ, ಹಕ್ಕಿಗಳು ತಮ್ಮ ಗೂಡು ಸೇರುವ ಹೊತ್ತು. ಮೋಡದ ಮರೆಯ ಹಾಲ್ಗಡಲಿನಿಂದ ಬೆಳ್ಳಿಯ ತಟ್ಟೆ ತೇಲಿ ಬಂದಂತೆ ನನ್ನವನ ಆಗಮನ. ಅವನ ಮುಗುಳು ನಗೆಗೆ ಪ್ರಕೃತಿ ದೇವತೆ ನಾಚಿ ಹೋಗುತ್ತಿದ್ದಳು. ಹೂ, ಬಳ್ಳಿಗಳು ಅವನನ್ನು ಬೆಳ್ಳಿಯ ಆಭರಣಗಳಾಗಿ ಸ್ವಾಗತಿಸುತ್ತಿತ್ತು.


ಎಲ್ಲಿಂದಲೋ ತಣ್ಣನೆಯ ತಂಗಾಳಿ ಸುಯ್ಯನೆ ಬೀಸಿ ಬಂದ ಅನುಭವ. ಇಂತಹ ಒಂದು ಅದ್ಬುತ ದೃಶ್ಯವು ಬಾಲ್ಯದಲ್ಲಿರುವಾಗ ನನಗೆ ವಿಶೇಷ ಮತ್ತು ಮನ ಮೋಹಕವಾಗಿತ್ತು. ವಿಶಾಲವಾದ  ಆಗಸದಲ್ಲಿ ಚೆಲ್ಲಿರುವ ನಕ್ಷತ್ರಗಳ ಮದ್ಯೆ  ಹೊಳೆತ್ತಿರುವ ಅವನ ಆ  ದುಂಡನೆಯ ಮುಖ, ಆತನಲ್ಲಿ ಇರುವ ಒಂದು ಸಣ್ಣ ಕಂದಕ ಆತನಿಗೆ ಧೃಷ್ಟಿ ಬೊಟ್ಟು ಇಟ್ಟಂತೆ ಲಕ್ಷಣವಾಗಿ ಕಾಣುತಿತ್ತು. ಅಂದು ಅದು ನನ್ನ ಕಣ್ಣುಗಳಿಗೆ ಮೊಲದ ರೂಪವನ್ನು ಕೊಟ್ಟಿತ್ತು. ಸುರಸುಂದರಿಯನ್ನು ನಾಚಿಸು ವಂತ ಆ ಸೌಂದರ್ಯಕ್ಕೆ ನಾನು ಮರುಳಾಗಿದ್ದೆ. ಆತನನ್ನು ನಾನು ನಿಂತು  ರೆಪ್ಪೆ ಮಿಟಿಕಿಸದೆ ನೋಡುತ್ತಿದ್ದೆ. ಅವನೊಂದಿಗಿನ ಒಡನಾಟದ ದಿನಗಳು ಮಾಸಿ ಹೋಗದೆ ಬಾಲ್ಯದ ನೆನಪಿನ ಬುತ್ತಿಯಲ್ಲಿ ಭದ್ರವಾಗಿದೆ.


ನನ್ನವನ್ನು ನೋಡುತ್ತಾ ನಾ ನನ್ನಲೇ ಕಳೆದು ಹೋಗುತ್ತಿದ್ದೆ, ಅಂತಹ ಮನಸೊಲುವಂತ ಮುಗ್ದ ವಯಸ್ಸು ನನ್ನದಾಗಿತ್ತು. ಬೆಳದಿಂಗಳಲ್ಲಿ ಅಂಗಳದಲ್ಲಿ ಅತ್ತ, ಇತ್ತ ಓಡುತ್ತ ಅವನೊಂದಿಗೆ ಆಟ ಆಡುತ್ತ ಕಾಲ ಕಳೆಯುತ್ತಿದ್ದೆ. ನನ್ನ ಹೆಜ್ಜೆ ಹೆಜ್ಜೆಯಲ್ಲೂ ನೆರಳಿನಂತೆ ಹಿಂಬಾಲಿಸುತ್ತ ನನ್ನೊಡನೆ ಬರುತ್ತಿದ್ದ. ಅವನಿಗಾಗಿ  ಕಾಯುವುದು ನನ್ನ ದಿನನಿತ್ಯ ದ ದಿನಚರಿಯಾಗಿ ಹೋಗಿತ್ತು. ಬಾನಂಗಳದಲ್ಲಿ  ಆತನನ್ನು ಕಾತರದ ಹುಡುಕಾಡುವುದು, ಎಂದರೆ ಏನೋ ಒಂದು ತರಹದ ಸಂತೋಷವನ್ನು ನನ್ನ ಪುಟ್ಟ ಮನಸಿನಲ್ಲಿ ಮೂಡಿಸುತಿತ್ತು. ಒಂದೊಮ್ಮೆ  ಮನೆಯ ಹಿಂಭಾಗದ ಮರ ಗಿಡಗಳ ನಡುವೆ  ಇಣುಕಿ ಕಣ್ಣ ಮುಚ್ಚಾಲೆ ಆಡುತಿದ್ದನು.  ಅವನ ಗಾತ್ರ  ಅಂದು ಎರಡು ಪಟ್ಟು ಹೆಚ್ಚಿದಂತೆ ಕಾಣುತಿತ್ತು. ಹೊಳಪು ಎಂದಿಗಿಂತ ಹೆಚ್ಚು ರೂಪವಂತನಾಗಿದ್ದ,  ಆ ದಿನ ನನ್ನ ಸನಿಹ ಬರುತ್ತಿದ್ದಾನೆ ಎಂದು ನನ್ನೊಳಗೆ ಅನಿಸತೊಡಗಿತ್ತು.


ಹುಣ್ಣಿಮೆಯ ರಾತ್ರಿ ಆತನಿಗೆ ವಿಶೇಷ ದಿನವಾಗಿತ್ತು. ಹೀಗೆ ದಿನವು ಅವನನ್ನು ನೋಡುವುದು, ಅವನಲ್ಲಿ ಮಾತಾಡುವುದು, ಆಟ ಆಡುವುದು ಅಭ್ಯಾಸವಾಗಿ ಹೋಗಿತ್ತು. ನನ್ನ ಜೊತೆಗೆ ಇದ್ದರೆ ಅಂತೂ ಕಡು ಕತ್ತಲೆಯಲ್ಲೂ ಭಯವಾಗುತ್ತಿರಲಿಲ್ಲ. ಹೀಗೆ ದಿನವೂ ಅವನೊಂದಿಗೆ ಕಾಲ ಕಳೆಯುತ್ತಿದ್ದೆ. ಅದೊಂದು ದಿನ ಹೊರಗಡೆ ಬಿಕೋ ಎನ್ನುವಂತೆ ಕತ್ತಲು ಕವಿದಿತ್ತು, ಏನೋ ಭಯ ಸೃಷ್ಟಿಸುವಂತ ಕಗ್ಗತ್ತಲು ಆವರಿಸಿತ್ತು, ಮರ ಗಿಡಗಳು ಕತ್ತಲು ತನ್ನ ಗರ್ಭದೊಳಗೆ ಬಚ್ಚಿಟ್ಟಿರುವಂತೆ. ಆದರೆ ನನಗೆ ಅವನನ್ನು ನೋಡಲು ಏನೋ ಒಂದು ತವಕ. ಮನಸು ಅವನಿಗಾಗಿ ಹವಣಿಸುತ್ತಿತ್ತು, ಪದೇ ಪದೇ ಕಿಟಕಿಯ ಪರದೆ ಸರಿಸಿ ಬಂದಿರುವನೇ ಎಂದು ನೋಡುವ ಕಾತರ. ಅಂದು ಏನೋ ಮನಸಿಗೆ ಏನೋ ಬೇಸರವಾಗಿ ಮೌನಿಯಾದೆ. ನನ್ನ ಕಣ್ಣುಗಳಿಂದ ಕಣ್ಮರೆಯಾದರೆ ಏನನ್ನೋ ಕಳೆದು ಕೊಂಡಂತೆ ಅನಿಸುತ್ತಿತ್ತು


ನನ್ನ ಮನ ಅಂದು ವಿಲ ವಿಲನೆ ಒದ್ದಾಡಿತು. ಕಾರಣ ಅವನ ಆಗಮನಕ್ಕೆ ಕಾಯುವಿಕೆಯು ಅಂದು ನಿರಾಸೆಯನ್ನು ಉಂಟು ಮಾಡಿತ್ತು. ನಾನು ಕಾದು ಕಾದು ಸೋತು ಹೋದೆ, ನಾನೆಷ್ಟೇ ಕಾದರೂ ಆತ ಆ ದಿನ ಕಣ್ಣಿಗೆ ಕಾಣದೆ ಮರೆಯಾಗಿದ್ದನ್ನು, ಅವನನ್ನು ಕಾಣದಿದ್ದರಿಂದ ನನ್ನ ಮನ ಕ್ಷಣದಲ್ಲೇ ಕುಸಿಯಿತು. ಅಳು ಉಮ್ಮಲಿಸಿ ಬಂದಿತ್ತು. ಅಂದಿನ ದಿನ ಊಟ ಸೇರದೆ ಹೋಯಿತು, ಹುಮ್ಮಸ್ಸು ತುಂಬಿದ ಮುಖದಲ್ಲಿ ಬೇಸರದ ಛಾಯೆ ಎದ್ದು ಕಾಣುತಿತ್ತು. ನನಗರಿವಿಲ್ಲದಂತೆ ಕಣ್ಣೀರ ಹನಿ ಜಾರತೊಡಗಿತು. ಪದೇ ಪದೇ ಅವನಿಗಾಗಿ ಹಂಬಲಿಸುತ್ತ ಮೆಲ್ಲಗೆ ಬಂದು ಅಮ್ಮನ ಮಡಿಲಿನಲ್ಲಿ ಅವನ ನೆನಪಿನಲ್ಲೇ ನಿದ್ರೆಗೆ ಜಾರಿದೆ. ಮರುದಿನ ನನ್ನ ಗೆಳತಿಯರಿಗೆ ಹಿಂದಿನ ದಿನ ನಡೆದ ವಿಚಾರ ವನ್ನು ಅವರ ಬಳಿ ಹೇಳಿಕೊಂಡಾಗ ತಿಳಿಯಿತು, ಹಿಂದಿನ ದಿನ ಅಮಾವಾಸ್ಯೆ ರಾತ್ರಿಯಾಗಿತ್ತೆಂದು.


-ವಿಜಯಲಕ್ಷ್ಮಿ. ಬಿ ಕೆಯ್ಯೂರು

ಪತ್ರಿಕೋದ್ಯಮ ವಿಭಾಗ.

ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top