ಹಕ್ಕಿಗಳ ವಿಸ್ಮಯ ಲೋಕದಲ್ಲೊಂದು ಸುತ್ತು

Upayuktha
0

 

ಕಲ್ಮಡ್ಕ: ದಟ್ಟ ಕಾನನ, ಸುತ್ತಲೂ ಬೆಟ್ಟಗುಡ್ಡಗಳು. ಅಲ್ಲಲ್ಲಿ ಹರಿಯುವ ಹೊಳೆ-ಝರಿಗಳು, ಬಣ್ಣಬಣ್ಣದ ಕಾಡ ಹೂಗಳು, ಜೇನುಹುಳಗಳ ಝೇಂಕಾರ, ಹಕ್ಕಿಗಳ ಮಧುರಗಾನ; ಚಿಟ್ಟೆಗಳ ಸಿಂಗಾರ, ಹಾದಿಯುದ್ದಕ್ಕೂ ಅಡಿಕೆ, ತೆಂಗಿನ ತೋಟ, ಗೇರು, ಹಲಸು, ಮಾವು; ಕಣ್ಣಿನುದ್ದಕ್ಕೂ ಹಸಿರ ಇಳೆ, ನೀಲಾಕಾಶ... 'ಎಲ್ಲಿ ಭೂರಮೆ ದೇವಸನ್ನಿದಿ ಬಯಸಿ ಬಿಮ್ಮನೆ ಬಂದಳೋ' ಕವಿಸಾಲು ನೆನಪಿಸುವ ಪರಿಸರದ ಪುಟ್ಟ ಊರು ಕಲ್ಮಡ್ಕ.


ಅಂದು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತ ಹಕ್ಕಿಗಳ ಚಿಲಿಪಿಲಿ; ನೋಡಲು ಹಿಂಡು ಹಿಂಡಾಗಿ ಬಂದ ಮಕ್ಕಳ ದಂಡು. ಮಿಂಚುಳ್ಳಿ, ಮರಕುಟಿಕ, ಕೆಂಪುಹರಟೆಮಲ್ಲ, ಗೀಜಗ, ಗಿಳಿ, ಗೂಬೆ, ನೀಲಕಂಠ, ನವಿಲು ಹೀಗೆ ಗುರುತಿಸುತ್ತಾ ಕೌತುಕದಿಂದ ನೋಡಿ ಆನಂದಿಸಿದ ಮಕ್ಕಳು.


ಇದು, ಇಲ್ಲಿಯವರೇ ಆದ ಹಿರಿಯ ಪತ್ರಕರ್ತ  ಶಿವಸುಬ್ರಹ್ಮಣ್ಯ ಕಲ್ಮಡ್ಕ ಹಾಗೂ ಕೃಷಿಕ ರಾಧಾಕೃಷ್ಣ ಉಡುವೆಕೋಡಿ ಅವರ ಕ್ಯಾಮರಾ ಕಣ್ಣಿನಲ್ಲಿ ಸೆರೆಸಿಕ್ಕ ನಮೂನೆವಾರು ಹಕ್ಕಿಗಳ ಛಾಯಾಚಿತ್ರ ಪ್ರದರ್ಶನದ ಅಪರೂಪದ ದೃಶ್ಯ.



ಗ್ರಾಮೀಣ ಪ್ರದೇಶದ ಮಕ್ಕಳು ಆಸಕ್ತಿ ಬೆಳೆಸಿಕೊಂಡರೆ ಛಾಯಾಗ್ರಹಣ ಕ್ಷೇತ್ರದಲ್ಲಿ ಚಮತ್ಕಾರವೇ ನಡೆದೀತು. ಪಶ್ಚಿಮ ಘಟ್ಟದಲ್ಲಿ ಅಗಾಧವಾದ ಪಕ್ಷಿಸಂಕುಲವಿದ್ದು, ಹಳ್ಳಿಯ ಮಕ್ಕಳು ಆಸಕ್ತರಾಗಿ ಮುಂದುವರಿದರೆ ನಗರಪ್ರದೇಶದ ಹೆಸರಾಂತ ಫೋಟೋಗ್ರಾಫರ್ ನ್ನು ಮೀರಿಸುವ ಒಬ್ಬ ಉತ್ತಮ ಪಕ್ಷಿತಜ್ಞ ಮತ್ತು ಶ್ರೇಷ್ಠ ಛಾಯಾಗ್ರಾಹಕನ ಉದಯವಾದೀತು ಎನ್ನುವುದು  ಶಿವಸುಬ್ರಹ್ಮಣ್ಯ ಅವರ ಮನದ ಮಾತು.


ಪಕ್ಷಿಸಂಕುಲ ತುಂಬ ಶಕ್ತಿಯುತವಾದದ್ದು. ಶಿಸ್ತುಬದ್ಧ ಸ್ವತಂತ್ರ ಜೀವನ, ಅದ್ಭುತವಾದ ಬದುಕುವ ಕಲೆ ಅವುಗಳದ್ದು. ಅತಿರೇಕದ ಲಕ್ಷಣ ಅವಕ್ಕಿಲ್ಲ. ನಮ್ಮಂತೆ ಹೊಟ್ಟೆಬಾಕರಲ್ಲ. ಅವುಗಳ ಮುಂದೆ ನಾವು ತೀರಾ ಕುಬ್ಜರು. ಮನುಷ್ಯ-ಪಕ್ಷಿಗಳ ನಡುವಿನ ಸಂಘರ್ಷದ ಜಿಜ್ಞಾಸೆ ಬಗ್ಗೆ ತಮ್ಮದು ವಿಭಿನ್ನ ನಿಲುವು ಎನ್ನುತ್ತಾರವರು.


ಹಳ್ಳಿಗಳಲ್ಲಿ ಕಾಡು ಹಣ್ಣುಗಳು ಹೇರಳವಾಗಿದೆ, ಹಕ್ಕಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿವೆ. ವಲಸೆ ಹಕ್ಕಿಗಳೂ ಕಾಣಸಿಗುತ್ತವೆ. ಹಕ್ಕಿ ವೀಕ್ಷಣೆ, ಫೋಟೋಗ್ರಫಿಗೆ ಇಲ್ಲಿ ವಿಫುಲ ಅವಕಾಶ ಇದೆ. ಕರಾವಳಿಯಲ್ಲಿ ಎತ್ತರದ ಮರಗಳಿರುವುದರಿಂದ ತಾಳ್ಮೆ ತುಂಬಾ ಮುಖ್ಯ. ಹಕ್ಕಿಗಳಿಗಾಗಿ ಕಾಯುವುದು, ಹುಡುಕುವುದು ಅನಿವಾರ್ಯ. ಆದರೆ ಬಯಲು ಪ್ರದೇಶದಲ್ಲಿ ಮಾಡುವಂತೆ ಅಡಗು ತಾಣ ನಿರ್ಮಿಸಿ ಕೃತಕ ರೀತಿಯಿಂದ ಛಾಯಾಗ್ರಹಣ ಮಾಡುವ ಅಗತ್ಯ ಇರುವುದಿಲ್ಲ, ನೈಸರ್ಗಿಕವಾಗಿಯೇ ಆ ವ್ಯವಸ್ಥೆ ಇಲ್ಲಿದೆ ಎಂಬುದು ಛಾಯಾಗ್ರಾಹಕ ಉಡುವೆಕೋಡಿ ರಾಧಾಕೃಷ್ಣ ಅವರ ಅಭಿಪ್ರಾಯ. ಇಂತಹ ಪರಿಸರವನ್ನು ಉಳಿಸಿಕೊಂಡು ಪಕ್ಷಿ ಸಂಕುಲವನ್ನು ಕಾಪಾಡುವುದು ಇಂದಿನ ಅನಿವಾರ್ಯತೆ ಎಂಬ ಕಳಕಳಿಯ ಮಾತನ್ನೂ ಸೇರಿಸುತ್ತಾರವರು.


ಈ ಪ್ರದರ್ಶನವು ನೋಡಲು ಬಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸಿ ಪ್ರಭಾವ ಬೀರಿದ್ದಾದಲ್ಲಿ ಮುಂದೆ ಒಬ್ಬ ಉತ್ತಮ ಫೋಟೋಗ್ರಾಫರ್ ನ್ನು ಕಾಣಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಾಯ ಓಣ್ಯಡ್ಕ ಇವರು.


ಈ ಇಬ್ಬರೂ ವನ್ಯಜೀವಿ ಛಾಯಾಗ್ರಾಹಕರು ಸುಳ್ಯ ತಾಲೂಕಿನ ಕಲ್ಮಡ್ಕದ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದವರೇ. ತಾವು ಕಲಿತ ಶಾಲೆಯಲ್ಲಿ ಈ ಪ್ರದರ್ಶನ ನಡೆದದ್ದು ಅವರಿಗೆ ಖುಷಿಯ ವಿಷಯ, ತಮ್ಮೂರಿನವರು ಇಂಥ ಅದ್ಭುತ ಛಾಯಾಗ್ರಾಹಕರು ಎಂಬುದು ಊರವರ ಹೆಮ್ಮೆ.


ಸುಮಾರು 100 ಕ್ಕಿಂತಲೂ ಹೆಚ್ಚು ಮಕ್ಕಳು, ಪೋಷಕರು ಭೇಟಿ ನೀಡಿ ಚಿತ್ರಗಳನ್ನು ನೋಡಿ ಆನಂದಿಸಿದ್ದು ಇಂತಹ ಒಂದು ಪ್ರದರ್ಶನ ಏರ್ಪಡಿಸಿದವರು ಮತ್ತು ಸಹಕಾರ ನೀಡಿದ ಸ್ಥಳೀಯರು, ಶಾಲಾಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಂಘ, ಅಧ್ಯಾಪಕ ವೃಂದದಲ್ಲಿ ಧನ್ಯತಾಭಾವ ಮೂಡಿಸಿದೆ.


-ಉಪಯುಕ್ತ ನ್ಯೂಸ್ ಟೀಂ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top