ಎಸ್‌ಡಿಎಂ ವಿದ್ಯಾರ್ಥಿಗಳ 'ಗತವೈಭವ’ ಸಾಕ್ಷ್ಯಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ‘ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ’

Upayuktha
0

 ಕಾಸರಗೋಡು ಕೈಮಗ್ಗದ ಸೀರೆಗಳನ್ನು ಕುರಿತಾದ ಸಾಕ್ಷ್ಯಚಿತ್ರ



ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಕಾಸರಗೋಡಿನ ಕೈಮಗ್ಗದ ಸೀರೆಗಳ ಕುರಿತಾದ 'ಗತವೈಭವ' ಸಾಕ್ಷ್ಯಚಿತ್ರವು ಬೆಂಗಳೂರಿನಲ್ಲಿ ನಡೆದ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ’ (Best Documentary Award) ಪಡೆದುಕೊಂಡಿದೆ. 


‘ಸುಚಿತ್ರ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ’ಯಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ ಹಾಗೂ ‘ಭಾರತೀಯ ಚಿತ್ರ ಸಾಧನ’ ಜಂಟಿ ಸಹಯೋಗದಲ್ಲಿ ಫೆ.11, 12ರಂದು ನಡೆದ ಈ ಚಿತ್ರೋತ್ಸವದಲ್ಲಿ ಒಟ್ಟು 10 ದೇಶಗಳ ವಿವಿಧ 150 ಚಿತ್ರಗಳು ಹವ್ಯಾಸಿ ಮತ್ತು ವೃತ್ತಿಪರ ವಿಭಾಗಗಳಡಿ ಭಾಗವಹಿಸಿದ್ದು, ಆ ಪೈಕಿ ಸಾಕ್ಷ್ಯಚಿತ್ರ (ಹವ್ಯಾಸಿ) ವಿಭಾಗದಲ್ಲಿ 'ಗತವೈಭವ'ಕ್ಕೆ ಪ್ರಶಸ್ತಿ ಒಲಿದಿದೆ. 


ಭಾರತೀಯ ಕೈಮಗ್ಗದ ದೈತ್ಯ ಪರಂಪರೆಯ ಎಳೆಯಾದ, ಅಳಿವಿನಂಚಿನಲ್ಲಿರುವ ‘ಕಾಸರಗೋಡು ಸೀರೆ’ಯ ಇತಿಹಾಸವನ್ನು ಅಭ್ಯಸಿಸಿ, ನೇಕಾರರ ಜೊತೆಗಿದ್ದು, ಅವರ ದಿನಚರಿ ಅರಿತು ನಿರ್ಮಿಸಲಾದ ಈ ಸಾಕ್ಷ್ಯಚಿತ್ರದಲ್ಲಿ ಕಾಸರಗೋಡು ಸೀರೆಯೇ ತನ್ನ ‘ಗತವೈಭವ’ವನ್ನು ಹೇಳುವಂತೆ ಚಿತ್ರಿಸಲಾಗಿತ್ತು.  


ಸಾಕ್ಷ್ಯಚಿತ್ರವನ್ನು ವಿದ್ಯಾರ್ಥಿಗಳಾದ ರಾಮ್ ಮೋಹನ್ ಭಟ್ ಎಚ್. (ಸಾಹಿತ್ಯ, ನಿರ್ದೇಶನ) ಹಾಗೂ ಸಂಪತ್ ಕುಮಾರ್ ರೈ (ಛಾಯಾಗ್ರಹಣ) ಹೊರತಂದಿದ್ದು, ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋದ ಡೈರೆಕ್ಟರ್-ವಿಡಿಯೋ ಪ್ರೊಡಕ್ಷನ್ಸ್ ರಕ್ಷಿತ್ ರೈ ಸಂಕಲನದಲ್ಲಿ ಸಹಕರಿಸಿದ್ದಾರೆ. ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಪ್ರಾಧ್ಯಾಪಕಿ ಶ್ರುತಿ ಜೈನ್ ಕಾಸರಗೋಡು ಸೀರೆಯ ರೂಪಕವಾಗಿ ಕಾಣಿಸಿಕೊಂಡು, ಹಿನ್ನೆಲೆ ಧ್ವನಿ ನೀಡಿದ್ದಾರೆ.


ಫೆ.12ರಂದು ಚಿತ್ರೋತ್ಸವದ ಕೊನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋದ ಡೈರೆಕ್ಟರ್-ವಿಡಿಯೋ ಪ್ರೊಡಕ್ಷನ್ಸ್ ರಕ್ಷಿತ್ ರೈ, ವಿದ್ಯಾರ್ಥಿಗಳಾದ ರಾಮ್ ಮೋಹನ್ ಭಟ್ ಎಚ್. ಹಾಗೂ ಸಂಪತ್ ಕುಮಾರ್ ರೈ ಪ್ರಶಸ್ತಿ ಸ್ವೀಕರಿಸಿದರು.


ಅತ್ಯುತ್ತಮ ಸಂಗೀತ ಪ್ರಶಸ್ತಿ 

‘ಬೃಹನ್ನಳೆ’ ಚಿತ್ರಕ್ಕೆ ನೀಡಿದ ಹಿನ್ನೆಲೆ ಸಂಗೀತಕ್ಕಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಬಿ.ವೋಕ್. (ಡಿಜಿಟಲ್ ಮೀಡಿಯಾ & ಫಿಲಂ ಮೇಕಿಂಗ್) ವಿಭಾಗದ ವಿದ್ಯಾರ್ಥಿ ಆಂಟನಿ ಪಿ.ಜೆ. ಅವರಿಗೆ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಸಂಗೀತ ಪ್ರಶಸ್ತಿ’ (Best Music Award) (ಹವ್ಯಾಸಿ ವಿಭಾಗ) ಲಭಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top